ಟಿವಿ-ಮೊಬೈಲ್ ಹಾವಳಿಯಿಂದ ನಾಟಕ ಮರೆ

ದಾವಣಗೆರೆ:

     ತಂತ್ರಜ್ಞಾನದ ಭರಾಟೆಯಲ್ಲಿ ಟಿವಿ ಮತ್ತು ಮೊಬೈಲ್ ಹಾವಳಿಯಿಂದ ನಾಟಕ ಕಲೆ ಮರೆಯಾಗಿತ್ತಿದೆ ಎಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ವಿಷಾಧ ವ್ಯಕ್ತಪಡಿಸಿದರು.

     ನಗರದ ಪದ್ಮಶ್ರೀ ಚಿಂದೋಡಿ ಲೀಲಾ ರಂಗಮಂದಿರದಲ್ಲಿ ಭಾನುವಾರ ಸಂಜೆ ಬೆಂಗಳೂರಿನ ಕರ್ನಾಟಕ ನಾಟಕ ಅಕಾಡೆಮಿ, ದಾವಣಗೆರೆ ಪ್ರತಿಮಾ ಸಭಾ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ತಿಂಗಳ ನಾಟಕ ಯೋಜನೆಯಲ್ಲಿ ಭದ್ರಾವತಿಯ ಶಾಂತಲಾ ಕಲಾ ವೇದಿಕೆಯ ಕಲಾವಿದರಿಂದ ನಡೆದ ‘ಊರ್ಮಿಳಾ’ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

      ಇತ್ತೀಚಿನ ದಿನಗಳಲ್ಲಿ ದೂರದರ್ಶನ ಹಾಗೂ ಮೊಬೈಲ್ ಹಾವಳಿಗಳಿಂದ ನಾಟಕಗಳು ಕಣ್ಮರೆಯಾಗುತ್ತಿವೆ. ಹೀಗಾಗಿ ಪ್ರಸ್ತುತ ಕೆಲವೇ ಕೆಲವು ನಾಟಕ ಕಂಪನಿಗಳು ಮಾತ್ರ ಅಸ್ತಿತ್ವ ಕಂಡುಕೊಂಡಿವೆ. ಆದ್ದರಿಂದ ಪ್ರತಿಯೊಬ್ಬರು ನಾಟಕಗಳನ್ನು ನೋಡುವ ಮೂಲಕ ರಂಗಭೂಮಿಗೆ ಪ್ರೋತ್ಸಾಹ ನೀಡಿ, ನಾಟಕಗಳ ವೈಭವ ಮರಕಳಿಸುವಂತೆ ಮಾಡಬೇಕೆಂದು ಕಿವಿಮಾತು ಹೇಳಿದರು.

       ಹಿಂದೆ ನಾಟಕ, ಬಯಲಾಟಗಳನ್ನು ಜನರು ರಾತ್ರಿವಿಡೀ ನೋಡುತ್ತಿದ್ದರು. ಆಗ ನಾಟಕ ಕೇವಲ ಮನರಂಜನೆ ಮಾತ್ರ ಆಗಿರಲಿಲ್ಲ. ಬದುಕಿನ ಪಾಠ ಕಲಿಸುವ ಕಲೆಯೂ ಸಹ ಆಗಿತ್ತು. ಆದ್ದರಿಂದ ನಾಟಕಕ್ಕೆ ಶಕ್ತಿ ಇದೆ. ರಂಗಭೂಮಿ ದೇಶದ ಭವಿಷ್ಯವನ್ನೇ ಬದಲಿಸಿದ ಉದಾಹರಣೆಗಳು ನಮ್ಮ ಮುಂದೆ ಸಾಕಷ್ಟಿವೆ ಎಂದು ಹೇಳಿದರು.

       ಪ್ರೇಕ್ಷಕರ ಕೊರತೆಯಿಂದ ಕೆಲವೇ ಕಂಪನಿಗಳು ಇಂದಿಗೂ ತಮ್ಮ ಕಾಯಕವನ್ನು ಮುಂದುವರೆಸಿವೆ. ಹೀಗಾಗಿ ಅಳಿದುಳಿದಿರುವ ಆ ಕಂಪನಿಗಳಿಗಾದರೂ ಪ್ರತಿಯೊಬ್ಬರೂ ಪ್ರೋತ್ಸಾಹ ನೀಡಬೇಕಾಗಿದೆ. ನಾಟಕಗಳನ್ನು ಪ್ರೋತ್ಸಾಹಿಸಿದರೆ ಕಲಾವಿದರನ್ನು ಪ್ರೋತ್ಸಾಹ ಮಾಡಿದಂತೆ ಆಗಲಿದೆ ಎಂಬುದನ್ನು ಅರಿಯಬೇಕೆಂದು ಹೇಳಿದರು.

        ಕರ್ನಾಟಕ ನಾಟಕ ಅಕಾಡಮಿ ಸದಸ್ಯೆ ಎಂ.ವಿ. ಪ್ರತಿಭಾ ಮಾತನಾಡಿ, ಬೆಂಗಳೂರಿನಲ್ಲಿ ಅಕಾಡೆಮಿಯು ತಿಂಗಳ ನಾಟಕ ಅಯೋಜನೆ ಮಾಡಿತ್ತು. ಆದರೆ, ಅದು ಕೇವಲ ಬೆಂಗಳೂರಿಗೆ ಮಾತ್ರ ಸೀಮಿತವಾಗಿದೆ ಎಂಬುದನ್ನು ಮನಗೊಂಡು ಜಿಲ್ಲಾ ಕೇಂದ್ರಗಳಲ್ಲಿ ನಾಟಕ ಪ್ರದರ್ಶನ ಆಯೋಜಿಸಿ ಅಕ್ಕಪಕ್ಕದ ಜಿಲ್ಲೆಗಳ ಕಲಾವಿದರಿಂದ ಪ್ರದರ್ಶನ ಕೊಡಿಸಬೇಕೆಂಬ ಉದ್ದೇಶದಿಂದ ಯೋಜನೆಯನ್ನು ಆರಂಭಿಸಲಾಗಿದೆ ಎಮದರು.

       ಪ್ರಸ್ತುತ ಎಲ್ಲರಿಗೂ ಆರೋಗ್ಯ ಬೇಕಾಗಿದ್ದು, ಅದು ರಂಗಭೂಮಿಯಿಂದ ಸಿಗಲಿದೆ. ರಂಗಭೂಮಿಯಿಂದ ಜೀವಪರ ಆಶಯಗಳನ್ನು ಕಂಡುಕೊಳ್ಳಬಹುದಾಗಿದೆ. ರಂಗಭೂಮಿಯಲ್ಲಿ ಜಾತಿ-ಧರ್ಮಗಳ ಎಲ್ಲೆ ಮೀರಿ ಬದುಕಲು ಸಾಧ್ಯ. ಆದ್ದರಿಂದ ರಂಗಭೂಮಿಗೆ ಮತ್ತಷ್ಟು ಮಹತ್ವ ನೀಡಬೇಕಾದ ಅವಶ್ಯಕತೆ ಇದೆ ಎಂದರು.

     ಈ ಸಂದರ್ಭದಲ್ಲಿ ಶಾಂತಲಾ ಕಲಾ ವೇದಿಕೆಯ ಮಹಿಳೆಯರು ರಾಷ್ಟ್ರಕವಿ ಕುವೆಂಪು ಅವರ ‘ಶ್ರೀ ರಾಮಾಯಣ ದರ್ಶನಂ’ ಮಹಾ ಕಾವ್ಯಾಧಾರಿತ ‘ಊರ್ಮಿಳಾ’ ನಾಟಕವನ್ನು ಪ್ರದರ್ಶಿಸಿದರು.

       ಪ್ರತಿಮಾ ಸಭಾ ಅಧ್ಯಕ್ಷ ಡಾ. ಎಂ.ಜಿ. ಈಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಹಾಲಪ್ಪ, ಪತ್ರಕರ್ತ ಎಂ.ಎಸ್. ವಿಕಾಸ್, ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಉಪನಿರ್ದೇಶಕ ಕುಮಾರ್ ಬೆಕ್ಕೇರಿ, ಶಾಂತಲಾ ಕಲಾ ವೇದಿಕೆ ಅಧ್ಯಕ್ಷೆ ಯಶೋಧ ಡಾ. ವೀರಭದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು. ಚಿದಾನಂದ ಪ್ರಾರ್ಥಿಸಿದರು. ಸಭಾದ ಪ್ರಧಾನ ಕಾರ್ಯದರ್ಶಿ ಬಾ.ಮ. ಬಸವರಾಜಯ್ಯ ಸ್ವಾಗತಿಸಿದರು. ಖಜಾಂಚಿ ಬಿ.ಎನ್. ಮಲ್ಲೇಶ್ ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link