ಎಲ್ಲಾ ಗ್ರಾಮಗಳಿಗೂ ಶುದ್ಧ ಕುಡಿಯುವ ನೀರು ಪೂರೈಸಲಾಗುತ್ತಿದೆ : ಎಂ.ಪಿ. ರೇಣುಕಾಚಾರ್ಯ

ಹೊನ್ನಾಳಿ:

      ತಾಲೂಕಿನ ಎಲ್ಲಾ ಗ್ರಾಮಗಳಿಗೂ ಶುದ್ಧ ಕುಡಿಯುವ ನೀರು ಪೂರೈಸಲಾಗುತ್ತಿದೆ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.

      ತಾಲೂಕಿನ ಸಾಸ್ವೆಹಳ್ಳಿ ಗ್ರಾಮದಲ್ಲಿ ಬುಧವಾರ ನೀರು ಸಂಗ್ರಹ ಮೇಲ್ತೊಟ್ಟಿ ಮತ್ತು ಆನೇಕಲ್ ಬಡಾವಣೆಯಲ್ಲಿ ಉರ್ದು ಶಾಲಾ ಕೊಠಡಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

     ತಾಲೂಕಿನಲ್ಲಿ ಈಗಾಗಲೇ ಬಹುಪಾಲು ಗ್ರಾಮಗಳಿಗೆ ಹೊನ್ನಾಳಿಯ ತುಂಗಭದ್ರಾ ನದಿಯಿಂದ ಬಹು ಗ್ರಾಮ ಯೋಜನೆಯಡಿ ಶುದ್ಧ ಕುಡಿಯುವ ನೀರು ಒದಗಿಸಲಾಗುತ್ತಿದೆ. ಪ್ರಸ್ತುತ ಕೇಂದ್ರ ಸರಕಾರದ ಗ್ರಾಮೀಣ ಕುಡಿಯುವ ನೀರು ಪೂರೈಕೆ ಯೋಜನೆಯಡಿ ಅಗತ್ಯವಿರುವ ಗ್ರಾಮಗಳಲ್ಲಿ ಲಕ್ಷಾಂತರ ವೆಚ್ಚದಡಿ ನೀರು ಸಂಗ್ರಹದ ಮೇಲ್ತೊಟ್ಟಿಗಳನ್ನು ಮಂಜೂರು ಮಾಡಿಸಲಾಗಿದ್ದು, ಕ್ಷೇತ್ರದ ಪ್ರತಿ ಗ್ರಾಮಗಳಿಗೂ ಅಗತ್ಯಕ್ಕೆ ತಕ್ಕಂತೆ ಶುದ್ಧ ಕುಡಿಯುವ ನೀರನ್ನು ಒದಗಿಸಲಾಗುತ್ತಿದೆ ಎಂದರು.

    ಈ ಹಿಂದಿನ ತಮ್ಮ ಶಾಸಕತ್ವದ ಅವಧಿಯಲ್ಲಿ ಗ್ರಾಮಗಳ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಪ್ರತಿ ಗ್ರಾಪಂಗೆ 20 ಲಕ್ಷ ರೂ., ತಾಪಂಗೆ 1 ಕೋಟಿ ರೂ., ಜಿಪಂಗಳಿಗೆ 2 ಕೋಟಿ ರೂ.ಗಳ ವಿಶೇಷ ಅನುದಾನ ನೀಡಲಾಗುತ್ತಿತ್ತು. ಈ ಹಿಂದೆ ಸಾಸ್ವೆಹಳ್ಳಿ ಗ್ರಾಮವನ್ನು ಸುವರ್ಣ ಗ್ರಾಮೋದಯ ಯೋಜನೆಯಡಿಯಲ್ಲಿ ಕೋಟ್ಯಂತರ ರೂ.ಗಳ ಅನುದಾನ ವಿನಿಯೋಗಿಸಿ ಗ್ರಾಮದಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳಾದ ಕಾಂಕ್ರೀಟ್ ರಸ್ತೆ, ಚರಂಡಿ, ಸಮುದಾಯ ಭವನ ಇತ್ಯಾದಿಗಳನ್ನು ನಿರ್ಮಿಸಿ ಮಾದರಿ ಗ್ರಾಮವನ್ನಾಗಿ ಅಭಿವೃದ್ಧಿಪಡಿಸಲಾಗಿತ್ತು ಎಂದು ತಿಳಿಸಿದರು. ಆದರೆ ಈಗಿನ ಸರಕಾರ ಬಡ ಜನತೆಗೆ ಅಗತ್ಯ ಸೌಲಭ್ಯಗಳನ್ನು ನೀಡದೇ ವ್ಯರ್ಥ ಕಾಲಹರಣ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

     ಪ್ರಸ್ತುತ ರಾಜ್ಯದಲ್ಲಿನ ಆಡಳಿತಾರೂಢ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ ಕೇವಲ ಅಧಿಕಾರ ಲಾಲಸೆಗಾಗಿ ಮುಸುಕಿನ ಗುದ್ದಾಟ ನಡೆಸುತ್ತಿದೆ. ಈವರೆಗೂ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬಿಡುಗಡೆ ಮಾಡದಿರುವ ಕಾರಣ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ. ಹೊನ್ನಾಳಿ ವಿಧಾನಸಭಾ ಕ್ಷೇತ್ರವನ್ನು ಬರಪೀಡಿತ ಪಟ್ಟಿಗೆ ಸೇರಿಸಿ ರೈತರ ಸಂಕಷ್ಟಕ್ಕೆ ಧಾವಿಸಬೇಕು ಎಂದು ಈಗಾಗಲೇ ಕಂದಾಯ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಕ್ಷೇತ್ರದ ಜನತೆಯ ಹಿತರಕ್ಷಣೆಯೇ ನನ್ನ ಆದ್ಯ ಕರ್ತವ್ಯವಾಗಿದೆ ಎಂದು ವಿವರಿಸಿದರು.

      ಜಿಪಂ ಉಪಾಧ್ಯಕ್ಷೆ ರಶ್ಮೀ ರಾಜಪ್ಪ, ಸದಸ್ಯ ಜಿ. ವೀರಶೇಖರಪ್ಪ, ತಾಪಂ ಅಧ್ಯಕ್ಷೆ ಸುಲೋಚನಮ್ಮ, ಎಪಿಎಂಸಿ ನಿರ್ದೇಶಕ ಜಿ.ವಿ. ರಾಜು, ಗ್ರಾಪಂ ಅಧ್ಯಕ್ಷೆ ರತ್ನಮ್ಮ, ಸದಸ್ಯರು, ಜಿಪಂ ಎಇಇ ಮಂಜುನಾಥ್ ಕಪಾಲಿ, ಗ್ರಾಮದ ಮುಖಂಡರು-ಗ್ರಾಮಸ್ಥರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link