ಕುಡಿದ ಅಮಲಿನಲ್ಲಿ ಶಾಲೆಯ ಮೇಲೇರಿ ಮಲಗಿದ ಕುಡುಕ ..!

ಹುಳಿಯಾರು

   ಹುಳಿಯಾರು ಸಮೀಪದ ಕೆಂಕೆರೆ ಗ್ರಾಮದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಇಲ್ಲಿನ ವಿಎಸ್‍ಎಸ್‍ಎನ್ ಅಧ್ಯಕ್ಷ ಕೆ.ಸಿ.ಶಿವಕುಮಾರ್ ಅವರು ಒತ್ತಾಯಿಸಿದ್ದಾರೆ.

   ಕೆಂಕೆರೆ ಕೆಲವು ಪೆಟ್ಟಿಗೆ ಅಂಗಡಿಗಳು ಅಕ್ರಮ ಮದ್ಯ ಮಾರಾಟ ಕೇಂದ್ರಗಳಾಗಿದ್ದು ಬಹಿರಂಗವಾಗಿ ಎಗ್ಗಿಲ್ಲದೆ ಮದ್ಯ ಮಾರಾಟ ಮಾಡಲಾಗುತ್ತಿದೆ. ಅಮಾಯಕ ಯುವಕರು, ಕೂಲಿ ಕಾರ್ಮಿಕರು ಮದ್ಯದ ವ್ಯಾಮೋಹಕ್ಕೆ ಬಲಿಯಾಗುತ್ತಿದ್ದು, ಸಾವಿರಾರು ಕುಟುಂಬ¬ಗಳು ಸಂಕಷ್ಟ ಅನುಭವಿಸುತ್ತಿವೆ. ಅಲ್ಲದೆ ಮದ್ಯದ ಅಮಲಿನಲ್ಲಿ ಪರಸ್ಪರ ಕಚ್ಚಾಟ, ಜಗಳ ನಿರಂತರವಾಗಿದ್ದು, ಶಾಂತಿ ಕದಡುತ್ತಿರುವುದು ಇತ್ತೀಚೆಗೆ ಸಾಮಾನ್ಯವಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

  ಮದ್ಯ ಕುಡಿದ ಅಮಲಿನಲ್ಲಿ ವಾಹನ ಚಲಾಯಿಸುವಂತಿಲ್ಲ. ಸಂಚಾರಿ ಪೊಲೀಸರ ಕೈಗೆ ಸಿಕ್ಕಿಬಿದ್ದರೆ ಚಾಲನಾ ಪರವಾನಗಿ ಜತೆಗೆ ದಂಡ ಕಟ್ಟಿಟ್ಟ ಬುತ್ತಿ. ಇದರಿಂದ ಅನೇಕ ಮದ್ಯ ವ್ಯಸನಿಗಳು ಗ್ರಾಮಗಳಲ್ಲೆ ಸಿಗುವ ಮದ್ಯವನ್ನು ಅನಿವಾರ್ಯವಾಗಿ ಸೇವಿಸುತ್ತಾರೆ. ಗ್ರಾಮಗಳಲ್ಲಿ ಸದಾ ಮದ್ಯ ಸಿಗುವುದರಿಂದ ಕುಡಿತವನ್ನು ಚಟವನ್ನಾಗಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

     ಇತ್ತಿಚೆಗಷ್ಟೆ ಮದ್ಯದ ಅಮಲಿನಲ್ಲಿ ಸರ್ಕಾರಿ ಶಾಲೆಯ ಹೆಂಚಿನ ಮೇಲೆ ಹತ್ತಿ ಮಲಗಿದ್ದ ಕುಡುಕನನ್ನು ಕೆಳಗಿಳಿಸಲು ಊರಿನ ಜನ, ಶಿಕ್ಷಕರು ಹರಸಾಹಸ ಮಾಡಬೇಕಾಯಿತು. ಅಲ್ಲದೆ ಶಾಲಾ ಸಮೀಪದಲ್ಲೇ ಮದ್ಯ ಮಾರಾಟ ಮಾಡುತ್ತಿರುವುದರಿಂದ ಕುಡುಕರ ಉಪಟಲವನ್ನು ಶಾಲಾ ಮಕ್ಕಳು ಸಹಿಸಿಕೊಳ್ಳಬೇಕಿದೆ. ಇದು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದರು.

      ಮದ್ಯ ಮಾರಾಟಗಾರರು ರಾಜಾರೋಷವಾಗಿ ವಿವಿಧ ಕಂಪೆನಿಗಳ ಮದ್ಯವನ್ನು ಗ್ರಾಮೀಣ ಭಾಗಕ್ಕೆ ನೇರವಾಗಿ ಪೂರೈಸುತ್ತಿದ್ದಾರೆ. ಆದರೂ, ಅಧಿಕಾರಿಗಳು ಮಾತ್ರ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ. ಇನ್ನಾದರೂ ಎಚ್ಚೆತ್ತುಕೊಂಡು ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ ಊರಿನಲ್ಲಿ ನೆಮ್ಮದಿಯ ವಾತಾವರಣ ನಿರ್ಮಾಣ ಮಾಡುವಂತೆ ಮನವಿ ಮಾಡಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link