ದಾವಣಗೆರೆ:
‘ಜೀವವಿರೋಧಿ ಅಸ್ಪೃಶ್ಯತಾ ಆಚರಣೆ ಅಳಿಯದೆ, ಸ್ವಾತಂತ್ರ್ಯ-ಸಮಾನತೆ-ಸಹೋದರತ್ವ ಉಳಿಯದು, ಸ್ವಾತಂತ್ರ್ಯ ಸಂಭ್ರಮ ಎಲ್ಲಿಹುದು’ ಎಂಬುದಾಗಿ ಪ್ರಶ್ನಿಸಿ ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಕಾರ್ಯಕರ್ತರು ತೋಳಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ನಗರದಲ್ಲಿ ಗುರುವಾರ ಪ್ರತಿಭಟನಡೆ ನಡೆಸಿದರು.
ನಗರದ ಜಿಲ್ಲಾಡಳಿತ ಭವನದ ಎದುರು ಜಮಾಯಿಸಿದ ಡಿಎಸ್-4 ಕಾರ್ಯಕರ್ತರು ತಮ್ಮ ತೋಳಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು, ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಕ್ರೌರ್ಯ, ದೌರ್ಜನ್ಯಗಳನ್ನು ಖಂಡಸಿದಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿ ಜಿಲ್ಲಾಧ್ಯಕ್ಷ ಹೆಗ್ಗೆರೆ ರಂಗಪ್ಪ, ದೇಶಾದ್ಯಂತ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಬಹಜನರ ಮೇಲೆ ನಿರಂತರವಾಗಿ ನಡೆಯುತ್ತಿರುವ ಅಮಾನವೀಯ ಕ್ರೌರ್ಯ ಭಾರತೀಯ ಸಂಸ್ಕøತಿಯೇ?, ಎಲ್ಲೆಡೆ ಅಸ್ಪೃಶ್ಯತೆ ಆಚರಣೆ ಅವ್ಯಾಹತವಾಗಿ ನಡೆದಿರುವುದು ದುರಂತ. ಪುರೋಹಿತಶಾಹಿಯ ಕೋಮುವಾದಿ ನಿಲುವುಗಳು ಅಸ್ಪೃಶ್ಯರನ್ನು ದಟ್ಟ ದರಿದ್ರವನ್ನಾಗಿಸುತ್ತಾ ಸಮಾಜದ ಮುಖ್ಯವಾಹಿನಿಗೆ ಬರುವುದನ್ನು ನಿಬಧಂಧಿಸುತ್ತಿವೆ. ದೇವಾಲಯಗಳ ಪ್ರವೇಶ ನಿಷೇಧ, ಸಾರ್ವಜನಿಕ ಸೇವೆಗಳ ನಿರಾಕರಣೆ, ಅಸ್ಪೃಶ್ಯತಾ ನಿಷೇಧ ಕಾಯ್ದೆ ದುರ್ಬಲಗೊಳಿಸುವಿಕೆ, ಬಡ್ತಿ ಮೀಸಲಾತಿಗೆ ಪ್ರತಿರೋಧ, ಆಹಾರ ಪದ್ಧತಿಗೆ ನಿರ್ಬಂಧ ಹೀಗೆ ಮನು ಪ್ರಣೀತ ಶಾಸನಗಳಿಂದಾಗಿ ಅಸ್ಪೃಶ್ಯ ಸಮುದಾಯ ನಲುಗಿ ಹೋಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದಲ್ಲಿ ತಾಂಡವವಾಡುತ್ತಿರುವ ಇಂತಹ ಸಮಸ್ಯೆಗಳಿಂದ ಹೊರ ಬರಲಾಗದೇ ಅಭಿವೃದ್ಧಿ ಕನಸಿನ ಮಾತಾಗಿದೆ. ಅಸ್ಪೃಶ್ಯ ಮಹಿಳೆಯರ ಸ್ಥಿತಿ ಇನ್ನೂ ಕ್ರೂರವಾಗಿದೆ. ಪ್ರತಿನಿತ್ಯ ಒಂದಲ್ಲ ಒಂದು ಕಡೆ ಅತ್ಯಾಚಾರ, ಕೊಲೆಯಂತಹ ಪ್ರಕರಣ ವರದಿಯಾಗುತ್ತಲೇ ಇವೆ. ಸಂವಿಧಾನಬದ್ಧ ರಕ್ಷಣೆಯೇ ಮರೀಚಿಕೆಯಾಗಿದೆ. ವಿವಿಗಳಲ್ಲಿ ಇಂದಿಗೂ ಅಸ್ಪೃಶ್ಯತೆ ಆಚರಣೆ ಜೀವಂತವಾಗಿದೆ. 21ನೇ ಶತಮಾನದ ಡಿಜಿಟಲ್ ಯುಗದಲ್ಲೂ ಇಂತಹ ನೀಚ ವಿದ್ಯಾಮಾನಗಳು ಪ್ರಪಂಚದೆದುರು ನಮ್ಮ ದೇಶವನ್ನು ಹೀನಾಯ ಸ್ಥಿತಿಗೆ ತಳ್ಳುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ಗೋ ಮಾಂಸದ ನೆಪದಲ್ಲಿ ಆಹಾರ ಸಂಸ್ಕøತಿಯ ಭಯೋತ್ಪಾದನೆ, ಮತಾಂತರ ನೆಪದಲ್ಲಿ ಚರ್ಚ್ಗಳ ಮೇಲೆ ದಾಳಿ, ದೌರ್ಜನ್ಯದ ನೈತಿಕ ಪೊಲೀಸ್ಗಿರಿಯನ್ನು ಮಟ್ಟ ಹಾಕಲು ಕೇಂದ್ರ, ರಾಜ್ಯ ಕ್ರಮ ಕೈಗೊಳ್ಳಲಿ. ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಅಂಗೀಕರಿಸಿ, ಅನುಷ್ಟಾನಕ್ಕಾಗಿ ಕೇಂದ್ರಕ್ಕೆ ಶಿ-Áರಸ್ಸು ಮಾಡಬೇಕು. ಬಡ್ತಿ ಮೀಸಲಾತಿಯಿಂದ ವಂಚಿತ ಪರಿಶಿಷ್ಟ ಜಾತಿ-ವರ್ಗಗಳ ನೌಕರರಿಗೆ ನಿಯಮಾನುಸಾರ ಬಡ್ತಿ ನೀಡಬೇಕೆಂದು ಆಗ್ರಹಿಸಿದರು.
ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಎಎಚ್ಪಿ ಉಪ ಘಟಕದಲ್ಲಿ ದಾವಣಗೆರ ಪಾಲಿಕೆ ವ್ಯಾಪ್ತಿಯ 15 ಕೊಳಗೇರಿ ನಿವಾಸಿಗಳಿಗೆ ಗುತ್ತಿಗೆದಾರರ ಮೂಲಕ ನಿರ್ಮಿಸಲುದ್ದೇಶಿರುವ ಮನೆಗಳನ್ನು ನಗರ ಸ್ಥಳೀಯ ಸಂಸ್ಥೆ ಮೂಲಕ ಸ್ಲಂ ನಿವಾಸಿಗಳೇ ಕಟ್ಟಿಕೊಳ್ಳಲು ಅವಕಾಶ ನೀಡಬೇಕು. ರಾಜೀವ್ ಆವಾಸ್ನಡಿ ಜಿಲ್ಲೆಯಲ್ಲಿ ಮನೆ ಮಂಜೂರಾತಿ ಮತ್ತು ಕಾಮಗಾರಿ ಆದೇಶ ಪತ್ರದಲ್ಲಿ 319950 ರು. ನಿಗದಿಪಡಿಸಿ, ನಂತರ ಮನೆಗಳಿಗೆ ತಲಾ 53283 ರು. ಕಡಿತ ಮಾಡಿದ್ದು, ತಕ್ಷಣವೇ ಬಾಕಿ ಹಣ ಕೊಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಮಿತಿ ಮುಖಂಡರಾದ ಟಿ.ಬಸವರಾಜು, ಬೆಳ್ಳಿಗನೂಡು ಮೂರ್ತೆಪ್ಪ, ಕೆ.ಎಂ.ವಾಗೀಶಯ್ಯ, ಚನ್ನಗಿರಿ ಗೋವಿಂದರಾಜ, ಜಗಳೂರಿನ ತಾಯಿಟೋಣಿ ಬಾಬು, ರಾಜು ಅಣಬೂರು, ಯಲ್ಲಪ್ಪ, ಸಂತೋಷ ಎಂ.ನೋಟದವರ್, ಎಸ್.ಎಚ್.ಶಾಂತರಾಜ, ನಾಗಲಿಂಗಪ್ಪ ಜಗಳೂರು, ಕಬ್ಬಳ್ಳಿ ಬಸವರಾಜ, ಡಿ.ಡಿ.ಹನುಮಂತಪ್ಪ, ಎಲ್.ಜಯಪ್ಪ, ಕಾರಿಗನೂರು ನಾಗರಾಜ, ಸಿದ್ದಮ್ಮನಹಳ್ಳಿ ವೆಂಕಟೇಶ, ಸಿದ್ದೇಶ ಮಾದಾಪುರ, ತಲವಾಗಲು ಕರಿಯಪ್ಪ, ನಟರಾಜ ಕೋಗಲೂರು, ಬಿಜೋಗಟ್ಟೆ ಕುಮಾರ, ಹರಿಹರ ವಿನಾಯಕ ಮತ್ತಿತರರು ಭಾಗವಹಿಸಿದ್ದರು.
. ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
