ದಾವಣಗೆರೆ:
ತಳ ಸಮುದಾಯ ಹಾಗೂ ಶೋಷಿತರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ಸಂಘಟನೆಯ ಜಿಲ್ಲಾ ಸಂಚಾಲಕ ಕುಂದವಾಡ ಮಂಜುನಾಥ್ ತಿಳಿಸಿದ್ದಾರೆ.
ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊನ್ನಾಳಿಯ ಅಸಹಾಯಕ ಸಂತ್ರಸ್ತ ಮಹಿಳೆಗೆ ಬೆದರಿಕೆ ಹಾಕಿರುವ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದೇವೆ. ಸಂತ್ರಸ್ಥ ಮಹಿಳೆಯ ಪರವಾಗಿ ಹೋರಾಟ ಮಾಡಿದ್ದೇವೆ. ಅದಕ್ಕೆ ನಮ್ಮ ಸಂಘಟನೆಯ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಭ್ರಷ್ಟಾಚಾರ ವಿರೋಧಿ ವೇದಿಕೆ ಅಧ್ಯಕ್ಷ ಗುರುಪಾದಯ್ಯ ಮಠದ್ ಮತ್ತವರ ಸಹಚರರು ನಮ್ಮ ಹೋರಾಟ ಹಾಗೂ ಸಂಘಟನೆಯ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಮಹಿಳೆಯರ, ಶೋಷಿತರ, ನಿರ್ಗತಿಕರ, ಅಸಹಾಯಕರ ಪರವಾಗಿ ಹೋರಾಟ ಮಾಡುತ್ತಾ ಬಂದಿದೆ. ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗುರುಪಾದಯ್ಯ ಮಠದ್ ಮೇಲೆ ಬೆದರಿಕೆ ಕೇಸ್ ದಾಖಲಾಗಿದ್ದು, ತನಿಖೆ ನಡೆಯುತ್ತಿರುವ ಹಂತದಲ್ಲಿ ತಮ್ಮನ್ನು ಪ್ರಾಮಾಣಿಕರಂತೆ ಬಿಂಬಿಸಿಕೊಳ್ಳಲು ಪ್ರಯತ್ನಿಸಿದ್ದಾರೆಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಡಿಎಸ್ಸೆಸ್ ಮುಖಂಡರಾದ ಜಿಗಳಿ ಹಾಲೇಶ್, ರೇಷ್ಮಾ, ಪ್ರದೀಪ್, ಗೋಪನಾಳು ಚಂದ್ರಪ್ಪ, ಪರಮೇಶ್ ಮತ್ತಿತರರು ಹಾಜರಿದ್ದರು.