ದುಗ್ಗಮ್ಮ ಜಾತ್ರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ

ದಾವಣಗೆರೆ:

      ನಗರ ದೇವತೆ ಶ್ರೀದುರ್ಗಾಂಭಿಕಾದೇವಿ ಜಾತ್ರಾ ಮಹೋತ್ಸವಕ್ಕೆ ಭಾನುವಾರದಿಂದ ವಿದ್ಯುಕ್ತ ಚಾಲನೆ ದೊರೆತಿದ್ದು, ಇನ್ನೊಂದು ವಾರದ ಕಾಲ ದೇವನಗರಿಯಲ್ಲಿ ಜಾತ್ರೆಯ ಸಡಗರ ಮನೆ ಮಾಡಿರಲಿದೆ.ಭಾನುವಾರ ಬೆಳಿಗ್ಗೆ ದೇವಸ್ಥಾನದ ಪ್ರಧಾನ ಅರ್ಚಕ ನಾಗರಾಜ ಜೋಯಿಷರ ನೇತೃತ್ವದ ಅರ್ಚಕರ ತಂಡವು ಶ್ರೀದುರ್ಗಾಂಭಿಕಾ ದೇವಿಗೆ ಪಂಚಾಮೃತ ಅಭಿಷೇಕ ನೆರವೇರಿಸಿ, ದೇವಿಗೆ ಕಂಕಣ ಧಾರಣೆ ನೆರವೇರಿಸುವ ಮೂಲಕ ಅಮ್ಮನ ಜಾತ್ರೆಗೆ ವಿದ್ಯುಕ್ತವಾಗಿ ಚಾಲನೆ ನೀಡಿತು.

    ಜಾತ್ರೆಯ ಹಿನ್ನೆಲೆಯಲ್ಲಿ ದೇವಿಗೆ ‘ಉಡಿಅಕ್ಕಿ’ ಸಮರ್ಪಿಸಲು ಭಕ್ತರ ದಂಡು ಭಾನುವಾರದಿಂದಲೇ ದೇವಸ್ಥಾನಕ್ಕೆ ಆಗಮಿಸುತ್ತಿದೆ. ದುಗ್ಗಮ್ಮನಿಗೆ ಉಡಿಅಕ್ಕಿ ಸಮರ್ಪಿಸಿ, ಹಣ್ಣು ಕಾಯಿ ಮಾಡಿಸಿ ದೇವಿಯ ದರುಶನ ಪಡೆದು ಭಕ್ತರು ಪುನೀತರಾದರು.
ಪಟ್ಟದ ಕೋಣದ ಸಾರು:

    ಶ್ರೀದುರ್ಗಾಂಭಿಕಾ ದೇವಿಗೆ ಬಿಟ್ಟಿರುವ ಪಟ್ಟದ ಕೋಣವನ್ನು ರಾತ್ರಿ 9 ಗಂಟೆಯಿಂದ ಇಲ್ಲಿನ ಗಾಂಧಿ ನಗರದ ಬಾಬುದಾರರ ಮನೆಗೆ ಕರೆದೊಯ್ದು ಕೋಣದ ತಲೆಗೆ ಎಣ್ಣೆ ಹಾಕಿಸಿ, ಪೂಜೆ ಮಾಡಿದ ನಂತರದಲ್ಲಿ ಸಾರು ಹಾಕುವ ಮೆರವಣಿಗೆ ಆರಂಭಿಸಲಾಯಿತು. ಬಳಿಕ ದುಗ್ಗಮ್ಮನ ದೇವಸ್ಥಾನಕ್ಕೆ ಕೋಣ ವನ್ನು ಮೆರವಣಿಗೆ ಮೂಲಕ ಕರೆ ತಂದು ಪೂಜೆ ಸಲ್ಲಿಸಿ ನಂತರ ಗೌಡ್ರು, ಶಾನುಭೋಗರು, ರೈತರು, ಬಣಕಾರರು ಸೇರಿದಂತೆ ಐದಾರು ಮನೆಗೆ ಕರೆದೊಯ್ದು ಸಾರು ಹಾಕುವ ಕಾರ್ಯವನ್ನು ಮುಗಿಸಿದರು.

ವಿದ್ಯುತ್ ದೀಪಾಲಂಕಾರದ ಮೆರಗು:

    ದೇವಸ್ಥಾನದ ಆವರಣದಲ್ಲಿ ಅಂದಾಜು 16.50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಅರಮನೆ ಶೈಲಿಯಲ್ಲಿ ತಲೆ ಎತ್ತಿರುವ ಸ್ವರ್ಣ ಮಹಾ ಮಂಟಪವು ಭಕ್ತರನ್ನು ಕೈ ಬೀಸಿ ಕರೆಯುತ್ತಿದ್ದರೆ, ಹಗೆದಿಬ್ಬ ವೃತ್ತದಿಂದ ದೇವಿಯ ದೇಗುಲದ ವರೆಗೆ ಹಾಗೂ ಎಸ್‍ಕೆಪಿ ರಸ್ತೆಯಲ್ಲಿರುವ ಗಣಪತಿ ದೇವಸ್ಥಾನದಿಂದ ಹಾಗೂ ಹೊಂಡದ ವೃತ್ತದಿಂದ ದೇವಸ್ಥಾನದ ವರೆಗೆ ಮೂರು ರಸ್ತೆಗಳಲ್ಲಿ 3 ಲಕ್ಷ ರೂ. ವೆಚ್ಚದಲ್ಲಿ ವಿದ್ಯುತ್ ದೀಪಾಲಂಕಾರ ಮಾಡಿರುವುದು ಜಾತ್ರೆಗೆ ವಿಶೇಷ ಮೆರಗು ನೀಡುತ್ತಿದೆ.

ಸ್ನಾನಕ್ಕಾಗಿ 125 ಶವರ್:

    ದೀಡು ನಮಸ್ಕಾರ, ಬೇವಿನ ಉಡುಗೆಯ ಮೂಲಕ ಹರಕೆ ತೀರಿಸುವ ಭಕ್ತರಿಗೆ ಕೊಡದಲ್ಲಿ ನೀರು ತುಂಬಿ ಮೈಯ ಮೇಲೆ ಹಾಕಲು ದೇವಸ್ಥಾನದ ಆವರಣದಲ್ಲಿ 25 ನಳಗಳ ಹಾಗೂ ಹರಿಕೆ ತೀರಿಸಿದ ಭಕ್ತರ ಸ್ನಾನಕ್ಕಾಗಿ ಪುರುಷ ಮತ್ತು ಮಹಿಳಾ ಭಕ್ತರಿಗೆ ಪ್ರತ್ಯೇಕವಾಗಿ 125 ಶವರ್‍ಗಳನ್ನು ಅಳವಡಿಸಲಾಗಿದೆ. ಅಲ್ಲದೆ, ಮಹಿಳಾ ಭಕ್ತರಿಗೆ ಬಟ್ಟೆ ಬದಲಿಸಲು ವ್ಯವಸ್ಥೆ ಮಾಡಲಾಗಿದೆ ಎನ್ನುತ್ತಾರೆ ದೇವಸ್ಥಾನದ ಧರ್ಮದರ್ಶಿ ಗೌಡ್ರ ಚನ್ನಬಸಪ್ಪ.

24 ಸಿಸಿ ಕ್ಯಾಮೇರಾ:

    ಜಾತ್ರೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ, ಕಳವು ನಡೆಯದಂತೆ ನಿಗಾ ಇಡಲಿಕ್ಕಾಗಿ ದೇವಸ್ಥಾನದ ಒಳಾಂಗಣ, ಆವರಣ ಸೇರಿದಂತೆ ಒಟ್ಟು 24 ಕಡೆಗಳಲ್ಲಿ ಸಿಸಿ ಟಿವಿ ಕ್ಯಾಮೇರಾ ಅಳವಡಿಸಲಾಗಿದೆ. ಅಲ್ಲದೆ, ಪೊಲೀಸ್ ಇಲಾಖೆ ಸೂಕ್ತ ಬಂದೋ ಬಸ್ತ್ ಮಾಡಿರುವುದಲ್ಲದೆ, ದೇವಸ್ಥಾನದ ಆವರಣದಲ್ಲಿ ಪೊಲೀಸ್ ಚೌಕಿಯನ್ನು ಸಹ ಸ್ಥಾಪಿಸಲಾಗಿದೆ.

ದರ್ಶನಕ್ಕೆ ಮೂರು ದಾರಿ:

    ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ದೇವಿಯ ದರುಶನಕ್ಕೆ ಗಣಪತಿ ದೇವಸ್ಥಾನದಿಂದ ಬ್ಯಾರಿಕೆಡ್ ನಿರ್ಮಿಸಿ ಧರ್ಮ ದರ್ಶನ, 50 ರೂ. ಟಿಕೆಟ್ ಪಡೆದು ದೇವಿಯ ದರ್ಶನ ಪಡೆಯಲು ಇಚ್ಛಿಸುವ ಭಕ್ತರಿಗೆ ಆಂಜನೇಯ ದೇವಸ್ಥಾನದಿಂದ ಬ್ಯಾರಿಕೇಡ್ ನಿರ್ಮಿಸಿ ತುರ್ತು ದರ್ಶನ ಹಾಗೂ ವಿಐಪಿಗಳ ದರ್ಶನಕ್ಕಾಗಿ ಪಾಸ್ ವ್ಯವಸ್ಥೆ ಮಾಡಲಾಗಿದೆ. ಹೀಗೆ ಮೂರು ವಿಧದಲ್ಲಿ ದೇವಿಯ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ತುರ್ತು ಚಿಕಿತ್ಸಾಲಯ:

   ಇನ್ನೂ ದೇವಸ್ಥಾನಕ್ಕೆ ಆಗಮಿಸುವ ಭಕ್ತರ ಆರೋಗ್ಯದಲ್ಲಿ ಏರುಪೇರು ಕಂಡು ಬಂದರೆ, ತುರ್ತು ಚಿಕಿತ್ಸೆ ನೀಡಲಿಕ್ಕಾಗಿ ತುರ್ತು ಚಿಕಿತ್ಸಾಲಯವನ್ನು ಸಹ ದೇವಸ್ಥಾನದ ಆವರಣದಲ್ಲಿ ಆರಂಭಿಸಲಾಗಿದ್ದು, ಇಲ್ಲಿ ಇಬ್ಬರು ವೈದ್ಯರು, ಒಬ್ಬ ನರ್ಸ್ ಹಾಗೂ ಒಬ್ಬ ವೈದ್ಯಕೀಯ ಸಹಾಯಕರು ಸೇರಿ ಒಟ್ಟು ನಾಲ್ವರು ಕಾರ್ಯನಿರ್ವಹಿಸಲಿದ್ದಾರೆ.

ಶೌಚಾಲಯಕ್ಕೆ ವ್ಯವಸ್ಥೆ:

   ಜಾತ್ರೆಗೆ ರಾಜ್ಯದ ಬೇರೆ, ಬೇರೆ ಜಿಲ್ಲೆಗಳು ಹಾಗೂ ಹೊರ ರಾಜ್ಯಗಳಿಂದ ಅಂದಾಜು ಹತ್ತು ಲಕ್ಷಕ್ಕೂ ಹೆಚ್ಚು ಜನ ಭಕ್ತರು ಆಗಿಸಲಿರುವ ಹಿನ್ನೆಲೆಯಲ್ಲಿ ದೇವಸ್ಥಾನದ ಸಮೀಪ ಎರಡು ಸಂಚಾರಿ ಶೌಚಾಲಯ ಮತ್ತು ವಿರಕ್ತ ಮಠ, ದೊಡ್ಡಪೇಟೆ. ನಗರ ಕುಟುಂಬ ಕಲ್ಯಾಣ ಕೇಂದ್ರ-1, ದೊಡ್ಡಪೇಟೆ. ಎಸ್. ವಿ. ಎಸ್ ಶಾಲೆ, ಕನ್ನಿಕಾ ಪರಮೇಶ್ವರಿ ದೇವಸ್ಥಾನ ಸಂಘ (ರಿ), ಮಾರ್ಕೇಂಡೇಶ್ವರ ಕಲ್ಯಾಣ ಮಂಟಪ, ನಾಮದೇವ ಸಿಂಪಿ ಕಲ್ಯಾಣ ಮಂಟಪದಲ್ಲಿ ಶೌಚಾಲಯಕ್ಕೆ ವ್ಯವಸ್ಥೆ ಮಾಡಲಾಗಿದೆ.

    ಜಾತ್ರೆಯ ಪ್ರಯುಕ್ತ ದೇವರಾಜ ಅರಸು ಬಡಾವಣೆಯಲ್ಲಿ ಶನಿವಾರದಿಂದ ಕುರಿ ಕಾಳಗ ಆರಂಭವಾಗಿದ್ದು, ಇದಕ್ಕೆ ಭಾನುವಾರ ತಡ ರಾತ್ರಿ ತೆರೆ ಬೀಳಲಿದೆ. ಇನ್ನೂ ಮಾ.3ರಿಂದ ನಗರದ ಪಿ.ಬಿ. ರಸ್ತೆಯಲ್ಲಿರುವ ಬೀರೇಶ್ವರ ಕುಸ್ತಿ ಅಖಾಡದಲ್ಲಿ ಮೂರು ದಿನಗಳ ಕಾಲ ಬಯಲು ಜಂಗಿ ಕುಸ್ತಿ ನಡೆಸಲು ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap