ರೈತರ ಹೆಸರಿನಲ್ಲಿ ನಕಲಿ ಬಿಲ್:ಜಾಲ ಬೇಧಿಸಿದ ಕೃಷಿ ಇಲಾಖೆ

ಬೆಂಗಳೂರು

  ಇದೇ ಮೊದಲ ಬಾರಿಗೆ ರೈತರ ಹೆಸರಿನಲ್ಲಿ ನಕಲಿ ಬಿಲ್ ತಯಾರಿಸಿ ಸೊಸೈಟಿಗಳ ಜೊತೆ ಶಾಮೀಲಾಗಿ ಯೂರಿಯಾ ರಸಗೊಬ್ಬರ ಅಭಾವ ಸೃಷ್ಟಿ ಮಾಡುತ್ತಿದ್ದ ದೊಡ್ಡಜಾಲವೊಂದು ಪತ್ತೆಯಾಗಿದೆ.

   ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕೊಡಿಗಿನಬೆಲೆ ಗ್ರಾಮದ ಮರ್ಕೂರಿ ಪಾಲಿಮರ್ಸ್ ಸಂಸ್ಥೆ ಪ್ರಾಥಮಿಕ ಸಹಕಾರ ಸಂಘ ವೇಮಗಲ್ ಹೆಸರಿನಲ್ಲಿ ಇ-ವೇ ನಕಲಿ ಬಿಲ್ ತಯಾರಿಸಿ ರೈತರಿಗೆ ಸಬ್ಸಿಡಿ ರೂಪದಲ್ಲಿ ಕೃಷಿ ಇಲಾಖೆ ವಿತರಿಸುತ್ತಿದ್ದ ಯೂರಿಯಾ ರಸಗೊಬ್ಬರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.

   ಈ ಸಂಸ್ಥೆ ಗುತ್ತಿಗೆದಾರರನ್ನು ಬುಕ್ ಮಾಡಿಕೊಂಡು ನೈಟ್ರೋಜನ್ ಎಕ್ಸ್ಟ್ರಾಕ್ಟ್ ಮಾಡಿ ಕೆಮಿಕಲ್ ತಯಾರಿಸಿ ಮಾರಾಟ ಮಾಡುತ್ತಿತ್ತು.ಇದರಿಂದ ರೈತರಿಗೆ ಗೊಬ್ಬರದ ಅಭಾವ ಸೃಷ್ಟಿಯಾಗಿರುವುದು ಕಂಡುಬಂದಿದೆ.ಹೀಗೆ ಸಬ್ಸಿಡಿ ಯೂರಿಯಾ ರಸಗೊಬ್ಬರವನ್ನು ಕೃಷಿಯೇತರ ಚಟುವಟಿಕೆಗಳಿಗಾಗಿ ದುರುಪಯೋಗಪಡಿಸಿಕೊಳ್ಳುತ್ತಿದ್ದ ಮರ್ಕೂರಿ ಪಾಲಿಮರ್ಸ್ ಸಂಸ್ಥೆಯ ಮಾಲೀಕರು ಹಾಗೂ ಸಂಬಂಧಪಟ್ಟ ವ್ಯಕ್ತಿಗಳ ವಿರುದ್ಧ ಕೃಷಿ ಇಲಾಖೆ ದೂರು ದಾಖಲಿಸಿದೆ.

   ಅ.14 ರಂದು ಕೋಲಾರ ಜಿಲ್ಲೆಯ ಜಾಗೃತಕೋಶದ ಸಹಾಯಕ ನಿರ್ದೇಶಕ, ಜಾರಿದಳ ಜಂಟಿ ಕೃಷಿ ನಿರ್ದೇಶಕ ಹೆಚ್.ಕೆ.ರಾಮಕೃಷ್ಣ ನೇತೃತ್ವದಲ್ಲಿ ಕೊಡಗಿನಬೆಲೆ ಗ್ರಾಮದ ಮರ್ಕೂರಿ ಪಾಲಿಮರ್ಸ್ ಕಂಪೆನಿಯ ಗೋಡೌನ್ ಮೇಲೆ ದಾಳಿ ಮಾಡಿದಾಗ ಕಂಪೆನಿಗೆ ಸೇರಿದ ಲಾರಿ ಚಾಲಕ ಕೃಷಿ ಇಲಾಖೆಗೆ ಸೇರಿದ ಸುಮಾರು 440 ಯೂರಿಯಾ ಮೂಟೆಗಳನ್ನು ತನ್ನ ಮಾಲೀಕ ಕೃಷ್ಣಪ್ರಸಾದ್ ರೆಡ್ಡಿಯ ಸೂಚನೆ ಮೇರೆಗೆ ವೇಮಗಲ್‍ಗೆ ತೆಗೆದುಕೊಂಡು ಹೋಗದೇ ಮರ್ಕೂರಿ ಪಾಲಿಮರ್ ಗೋಡೌನ್ ಬಳಿ ದಾಸ್ತಾನು ಮಾಡಿದ್ದು ಪತ್ತೆಯಾಗಿದೆ. ಅಲ್ಲದೇ ಈ ಯೂರಿಯಾ ಮೂಟೆಗಳು ಪ್ರಾಥಮಿಕ ಸಹಕಾರ ಸಂಘ ವೇಮಗಲ್ ಹೆಸರಿನಲ್ಲಿ ಇ-ವೇ ನಕಲಿ ಬಿಲ್ ತಯಾರಿಸಿದ್ದು ಕಂಡು ಬಂದಿದೆ.

    ಸ್ಥಳದಲ್ಲಿ ವಿಚಕ್ಷಣಾ ದಳ ಸುಮಾರು 1,17,260/-ರೂ.ಮೌಲ್ಯದ ಯೂರಿಯಾ ಮೂಟೆಗಳನ್ನು ವಶಪಡಿಸಿಕೊಂಡಿದ್ದು , ಮಾಲೂರು ಪೊಲೀಸ್ ಠಾಣೆಯಲ್ಲಿ ಕಂಪೆನಿ ವಿರುದ್ಧ ಪ್ರಕರಣ ದಾಖಲಾಗಿದೆ. ಇದರ ಹಿಂದೆ ದೊಡ್ಡ ಜಾಲವೇ ಇದ್ದು, ಸೂಕ್ತ ತನಿಖೆ ನಡೆಸಿ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಆದೇಶಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap