ನಕಲಿ ಹ್ಯಾಂಡ್ ಸ್ಯಾನಿಟೈಸರ್ ವಶ…!

ಬೆಂಗಳೂರು

     ಕೊರೊನಾ ವೈರಸ್ ಭೀತಿಯ ಹಿನ್ನಲೆಯಲ್ಲಿ ಬೇಡಿಕೆ ಹೆಚ್ಚಾಗಿರುವ ಹ್ಯಾಂಡ್ ಸ್ಯಾನಿಟೈಸರ್, ಹ್ಯಾಂಡರಬ್‍ಗಳನ್ನು ನಕಲಿಯಾಗಿ ಸಿದ್ದಪಡಿಸಿ ಮಾರಾಟಮಾಡುತ್ತಿದ್ದ ಜಾಲವನ್ನು ಬೇಧಿಸಿರುವ ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ದ ಪೊಲೀಸರು 56 ಲಕ್ಷ ಮೌಲ್ಯದ ನಕಲಿ ಹ್ಯಾಂಡ್ ಸ್ಯಾನಿಟೈಸರ್, ಹ್ಯಾಂಡರಬ್‍ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

     ನಕಲಿ ಹ್ಯಾಂಡ್ ಸ್ಯಾನಿಟೈಸರ್ ಮತ್ತು ಹ್ಯಾಂಡ್ ರಬ್‍ಗಳನ್ನು ಸಿದ್ಧಪಡಿಸಿ ಮಾರಾಟ ಮಾಡುತ್ತಿದ್ದ ಕಸ್ತೂರಬಾ ನಗರದ ರಾಜು (43), ಚಾಮರಾಜಪೇಟೆಯ ಎಸ್‍ಎಲ್‍ವಿ ರೆಸಿಡೆನ್ಸಿಯ ಚಂದನ್ (64)ನನ್ನು ಬಂಧಿಸಿ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್‍ರಾವ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

     ನ್ಯೂ ತರಗು ಪೇಟೆಯ 3ನೇ ಮುಖ್ಯರಸ್ತೆಯ ಜ್ಯೋತಿ ಕೆಮಿಕಲ್ಸ್ ಹಾಗೂ ಕಸ್ತೂರಬಾ ನಗರದ 3ನೇ ಕ್ರಾಸ್‍ನ ಸ್ವಾತಿ ಅಂಡ್ ಕೋ ಗೋಡೌನ್‍ಗಳ ಮೇಲೆ ದಾಳಿ ನಡೆಸಿ, 56 ಲಕ್ಷ ರೂ. ಮೌಲ್ಯದ 100, 120, 200 ಹಾಗೂ 500 ಎಂಎಲ್‍ನ 8,500 ಬಾಟಲ್‍ಗಳು, 4,500ನ ಖಾಲಿ ಪ್ಲಾಸ್ಟಿಕ್ ಬಾಟಲ್‍ಗಳು, 35 ಲೀ.ನ ಆಲ್ಕೋಹಾಲಿದ್ದ 8 ಕ್ಯಾನ್‍ಗಳು, ನಾಲ್ಕೂವರೆ ಸಾವಿರ ಸ್ಟಿಕ್ಕರ್‍ಗಳೂ ಸೇರಿ 56 ಲಕ್ಷದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

     ಆರೋಪಿಗಳು 50 ಲೀ.ನ ಆಲ್ಕೋಹಾಲ್‍ಗೆ ಒಂದೂವರೆ ಸ್ಪೂನ್‍ನಷ್ಟು ಬ್ರಿಲಿಯಂಟ್ ಬ್ಲೂ ಕಲರ್‍ನ್ನು ಹಾಗೂ ಒಂದು ಸ್ಪೂನ್‍ ನಷ್ಟು ಸುಗಂಧದ್ರವ್ಯವನ್ನು ಮಿಶ್ರಮಾಡಿ 50 ಲೀ. ನಕಲಿ ಹ್ಯಾಂಡ್ ಸ್ಯಾನಿಟೈಸರ್ ಮತ್ತು ಹ್ಯಾಂಡ್ ರಬ್‍ಗಳನ್ನು ತಯಾರಿಸುತ್ತಿದ್ದರು. ಅದನ್ನು 100, 200 ಹಾಗೂ 500 ಎಂಎಲ್ ಪ್ಲಾಸ್ಟಿಕ್ ಬಾಟಲ್‍ಗಳಲ್ಲಿ ತುಂಬಿಸಿ 170, 325 ಹಾಗೂ 620 ರೂ.ಗಳ ದರದಲ್ಲಿ ಕಂಪನಿಯ ಸ್ಟಿಕರ್‍ಗಳನ್ನು ಹಾಕಿ ಮಾರಾಟ ಮಾಡುತ್ತಿದ್ದರು.

     ರಟ್ಟಿನ ಬಾಕ್ಸ್‍ಗಳಲ್ಲಿ ಮಾರುಕಟ್ಟೆಗೆ ಪ್ಯಾಕಿಂಗ್ ಮಾಡಲು ಕಳುಹಿಸುತ್ತಿದ್ದ ಇದರ ಬೆಲೆ 1 ಲೀ.ಗೆ 80 ರೂ.ಗಳಾಗಿದ್ದು, ಮಾರುಕಟ್ಟೆಯಲ್ಲಿ 10 ಪಟ್ಟು ದುಬಾರಿ ಲಾಭಕ್ಕೆ ಮಾರಾಟ ಮಾಡಿ ವಂಚನೆ ನಡೆಸುತ್ತಿದ್ದರು ಎಂದು ತಿಳಿಸಿದರು.

ಆರೋಗ್ಯಕ್ಕೆ ಹಾನಿಕಾರಕ

    ಆರೋಪಿಗಳು ಸಿದ್ಧಪಡಿಸಿದ ನಕಲಿ ಹ್ಯಾಂಡ್ ಸ್ಯಾನಿಟೈಸರ್ ಮತ್ತು ಹ್ಯಾಂಡ್ ರಬ್‍ಗಳನ್ನು ಬಳಸುವುದು ಆರೋಗ್ಯಕ್ಕೆ ಹಾನಿಕಾರಕ ಎಂಬುದು ಪರಿಶೀಲನೆಯಲ್ಲಿ ಕಂಡು ಬಂದಿದೆ. ಇವುಗಳನ್ನು ಮಾರಾಟ ಮಾಡಿದ ಮೆಡಿಕಲ್ ಸ್ಟೋರ್‍ಗಳು, ಕಿರಾಣಿ ಅಂಗಡಿಗಳ ಮಾಹಿತಿ ಪಡೆದುಕೊಳ್ಳಲಾಗಿದೆ ಎಂದು ಹೇಳಿದರು.

    ಕಳೆದ ಒಂದು ವಾರದಿಂದ ಆರೋಪಿಗಳು ಈ ದಂಧೆಯಲ್ಲಿ ತೊಡಗಿದ್ದು, ಗದಗ, ಬಳ್ಳಾರಿ ಇನ್ನಿತರ ನಗರಗಳಿಗೆ ನಕಲಿ ಹ್ಯಾಂಡ್ ಸ್ಯಾನಿಟೈಸರ್ ಮತ್ತು ಹ್ಯಾಂಡ್ ರಬ್‍ಗಳನ್ನು ಕಳುಹಿಸಿರುವ ಮಾಹಿತಿ ಇದ್ದು, ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ. ನಕಲಿ ವಸ್ತುಗಳಿಗೆ ವೈಜ್ಞಾನಿಕ ಅಂಶಗಳನ್ನು ಅಳವಡಿಸಿಲ್ಲ ಎಂದು ತಿಳಿಸಿದರು.

ಅಂಗಡಿಗಳಿಗೆ ಮನವಿ

    ಆರೋಪಿಗಳಿಂದ ನಕಲಿ ಹ್ಯಾಂಡ್ ಸ್ಯಾನಿಟೈಸರ್ ಮತ್ತು ಹ್ಯಾಂಡ್ ರಬ್‍ಗಳನ್ನು ಖರೀದಿಸಿರುವ ಅಂಗಡಿ ಹಾಗೂ ಮೆಡಿಕಲ್ ಸ್ಟೋರ್‍ಗಳ ಮಾಲೀಕರು ಕೂಡಲೇ ಸಾರ್ವಜನಿಕರಿಗೆ ಮಾರಾಟ ಮಾಡುವುದನ್ನು ನಿಲ್ಲಿಸಬೇಕು ಎಂದು ಅವರು ಮನವಿ ಮಾಡಿದರು.ಬಂಧಿತ ಆರೋಪಿಗಳ ವಿರುದ್ಧ ವಿವಿ ಪುರಂ ಹಾಗೂ ಚಾಮರಾಜಪೇಟೆಯಲ್ಲಿ ಕಲಂ 420 ಐಪಿಸಿ ಇನ್ನಿತರ ಕಾಯ್ದೆಗಳನ್ವಯ ಪ್ರಕರಣ ದಾಖಲಿಸಿ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.ಸಿಸಿಬಿಯ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಡಿಸಿಪಿಗಳಾದ ಕುಲ್‍ದೀಪ್ ಕುಮಾರ್‍ಜೈನ್, ರವಿಕುಮಾರ್ ಅವರಿದ್ದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link