ದಾವಣಗೆರೆ :
ದಾವಣಗೆರೆ :
ಸಂತೆ, ಜಾತ್ರೆ, ಮದ್ಯದ ಅಂಗಡಿಗಳನ್ನೇ ಗುರಿಯಾಗಿಸಿಕೊಂಡು ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಜಾಲವನ್ನು ಭೇದಿಸಿರುವ ಹರಪನಹಳ್ಳಿ ವೃತ್ತದ ಪೊಲೀಸರು, 11 ಜನರನ್ನು ಬಂಧಿಸಿ ಅವರಿಂದ 3,66,200 ರೂ. ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದರು.
ಮಂಗಳವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಹಲುವಾಗಲು ಗ್ರಾಮದ ನಿವಾಸಿಗಳಾದ ಹನುಮಂತಪ್ಪ(24 ವರ್ಷ), ಅರಸನಾಳು ಹಾಲೇಶ್ (32 ವರ್ಷ), ಮಡಿವಾಳರ ಮಂಜಪ್ಪ(28 ವರ್ಷ), ಸಂತೋಷ (27 ವರ್ಷ), ಚಂದ್ರಪ್ಪ(29 ವರ್ಷ), ಅರಸನಾಳು ಗ್ರಾಮದ ನಿವಾಸಿಗಳಾದ ಉದಯ(34 ವರ್ಷ), ಸಂತೋಷ (20 ವರ್ಷ) ಹಾಗೂ ನೀಲಗುಂದ ಗ್ರಾಮದ ನಿವಾಸಿಗಳಾದ ಕೃಷ್ಣಪ್ಪ (47 ವರ್ಷ), ನಿಂಗಪ್ಪ (59 ವರ್ಷ), ವೆಂಕಟೇಶ್ (33 ವರ್ಷ) ಮತ್ತು ಪುಟ್ಟಪ್ಪ (75 ವರ್ಷ) ಬಂಧಿತ ಆರೋಪಿಗಳಾಗಿದ್ದು, ಈ ಖೋಟಾ ನೋಟು ಜಾಲದಲ್ಲಿದ್ದ ಇನ್ನೋರ್ವ ಆರೋಪಿ ಮತ್ತೂರು ಗ್ರಾಮದ ನಾಗನಗೌಡ ತಲೆ ಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಬಲೆ ಬೀಸಲಾಗಿದೆ ಎಂದು ಮಾಹಿತಿ ನೀಡಿದರು.
ಎಕ್ಸ್ ಎಲ್ ಬಾಂಡ್ ಪೇಪರ್‍ನಲ್ಲಿ ಕಲರ್ ಪ್ರಿಂಟರ್ ಮೂಲಕ ಕಲರ್ ಜೆರಾಕ್ಸ್ ಮಾಡಿ, ಕಟ್ಟರ್ ಮತ್ತು ಸ್ಕೇಲ್ ಸಹಾಯದಿಂದ ಕಟ್ ಮಾಡಿ, ಜೆಲ್ ಪೆನ್ ಬಳಿಸಿ ಯಾರಿಗೂ ಅನುಮಾನ ಬರದ ರೀತಿಯಲ್ಲಿ 100 ರೂ, 500 ರೂ ಹಾಗೂ 2000 ರೂ. ಮುಖ ಬೆಲೆಯ ಖೋಟಾ ನೋಟುಗಳನ್ನು ತಯಾರಿಸಿ ಸಂತೆ, ಜಾತ್ರೆ, ಮದ್ಯದ ಅಂಗಡಿ ಹಾಗೂ ವೃದ್ಧರನ್ನೇ ಗುರಿಯಾಗಿಸಿಕೊಂಡು ನೋಟು ಚಲಾವಣೆ ಮಾಡುತ್ತಿರುವುದನ್ನು ಬಂಧಿತ ಆರೋಪಿಗಳು ವಿಚಾರಣೆಯ ವೇಳೆಯಲ್ಲಿ ಒಪ್ಪಿಕೊಂಡಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಜನವರಿ 26ರಂದು ಲೋಲೇಶ್ವರ ಗ್ರಾಮದಲ್ಲಿ ನಡೆಯುತ್ತಿದ್ದ ಲೋಲೇಶ್ವರ ಜಾತ್ರೆಯ ಸಂದರ್ಭದಲ್ಲಿ ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಹನುಮಂತಪ್ಪನನ್ನು ಗ್ರಾಮಸ್ಥರಾದ ದಫೇದಾರ್ ಮಲ್ಲಿಕಾರ್ಜುನ್, ಕುರುವೆತ್ತೆಪ್ಪ, ಸೋಮಶೇಖರ್ ಅವರುಗಳು ಹಿಡಿದುಕೊಂಡು ಠಾಣೆಗೆ ಬಂದು, ಹನುಮಂತಪ್ಪನನ್ನು ಒಪ್ಪಿಸಿ ದೂರಿ ನೀಡಿದ್ದ ಹಿನ್ನೆಲೆಯಲ್ಲಿ ಹರಪನಹಳ್ಳಿ ಡಿವೈಎಸ್‍ಪಿ ಮಲ್ಲೇಶ ದೊಡ್ಡಮನಿ ಮಾರ್ಗದರ್ಶನದಲ್ಲಿ ಸಿಪಿಐ ಕುಮಾರ್.ಕೆ ನೇತೃತ್ವದಲ್ಲಿ ಚಿಗಟೇರಿ ಪಿಎಸ್‍ಐಗಳಾದ ಪ್ರಕಾಶ್, ಲತಾ ವಿ. ತಾಳೇಕರ್, ಹರಪನಹಳ್ಳಿ ಪಿಎಸ್‍ಐ ಶ್ರೀಧರ್ ಹಾಗೂ ಸಿಬ್ಬಂದಿಗಳಾದ ಮಲ್ಲಿಕಾರ್ಜುನ ನಾಯ್ಕ, ಕೊಟ್ಟೂರೇಶ, ದೇವೇಂದ್ರಪ್ಪ, ಕುಮಾರ್, ಇಮಾಂ ಸಾಹೇಬ್, ಮನೋಹರ್ ಪಾಟೀಲ್, ರವಿ ದಾದಾಪುರ, ಮಹಾಂತೇಶ್ ಬಿಳಚೋಡು, ಚಂದ್ರು ಎಸ್.ಜಿ, ಅಜ್ಜಪ್ಪ, ರವಿಕುಮಾರ್, ಮತ್ತಿಹಳ್ಳಿ ಕೊಟ್ರೇಶ್, ಹಾಲೇಶ್ ಜಿ.ಎಂ, ನಾಗರಾಜ ಸುಣಗಾರ, ಗುರುರಾಜ, ಮಾರುತಿ ಬಿ, ಶಿವರಾಜ್ ಹೂಗಾರ್, ವಿಷ್ಣುವರ್ಧನ, ಚಾಲಕರಾದ ಹನುಮಂತಪ್ಪ, ವಿನೋದಕುಮಾರ್ ಅವರನ್ನೊಳಗೊಂಡ ವಿಶೇಷ ತಂಡ ರಚಿಸಲಾಗಿತ್ತು.
ಈ ತಂಡ ಕಾರ್ಯಾಚರಣೆ ನಡೆಸಿ, ಹನ್ನೊಂದು ಜನ ಅರೋಪಿಗಳನ್ನು ಬಂಧಿಸಿ, ಬಂಧಿತರಿಂದ 100 ರೂ, 500 ರೂ ಹಾಗೂ 2000 ರೂ. ಮುಖ ಬೆಲೆಯ 3,66,200 ರೂ. ಮೌಲ್ಯದ ನಕಲಿ ನೋಟುಗಳು, ಎರಡು ಕಲರ್ ಪ್ರಿಂಟರ್ ಯಂತ್ರಗಳು, ನೋಟು ತಯಾರಿಕೆಗೆ ಸಂಬಂಧಿಸಿದ ಜೆಲ್ ಪೆನ್ನು, ಟೇಪ್, ಸ್ಕೇಲ್, ಕಟ್ಟರ್, ಗೂಡ್ಸ್ ಆಟೋ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ವಿವರಿಸಿದರು.
ಇದೇ ಸಂದರ್ಭದಲ್ಲಿ ಆರೋಪಿಯನ್ನು ಹಿಡಿದುಕೊಟ್ಟ ಗ್ರಾಮಸ್ಥರಾದ ಮಲ್ಲಿಕಾರ್ಜುನ್, ಸೋಮಶೇಖರಪ್ಪ, ಕುರ್ವೆತೆಪ್ಪ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸನ್ಮಾನಿಸಿ, ಪ್ರಶಂಸನಾ ವಿತರಿಸಿದರು. ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕಾರ್ಯವನ್ನು ಪ್ರಶಂಸಿಸಿ ಬಹುಮಾನ ವಿತರಿಸಿದರು.
ಸುದ್ದಿಗೋಷ್ಠಿಯಲ್ಲಿ ಎಎಸ್ಪಿ ರಾಜೀವ್.ಎಂ ಮತ್ತಿತರರು ಹಾಜರಿದ್ದರು.
ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ