ಚಿತ್ರದುರ್ಗ:
ಐತಿಹಾಸಿಕ ಚಿತ್ರದುರ್ಗದ ಏಳುಸುತ್ತಿನ ಕೋಟೆ ವಿಶ್ವ ಪ್ರವಾಸಿಗರ ಭೂಪಟದಲ್ಲಿ ಸೇರ್ಪಡೆಯಾಗಬೇಕು ಎಂದು ವೀರಶೈವ ಲಿಂಗಾಯಿತ ಪಂಚಮಸಾಲಿ ಜಗದ್ಗುರು ಪೀಠ ಹರಿಹರದ ಜಗದ್ಗುರು ವಚನಾನಂದಸ್ವಾಮಿ ಜನಪ್ರತಿನಿಧಿಗಳನ್ನು ಒತ್ತಾಯಿಸಿದರು.ಯೋಗ ಶಿಕ್ಷಣ ತರಬೇತಿಗಾಗಿ ಎಂಟು ರಾಷ್ಟ್ರಗಳಿಂದ ಆಗಮಿಸಿರುವ ಯೋಗ ಸಾಧಕರೊಂದಿಗೆ ಬುಧವಾರ ಚಿತ್ರದುರ್ಗಕ್ಕೆ ಆಗಮಿಸಿ ಕೋಟೆ ಹಾಗೂ ಚಂದ್ರವಳ್ಳಿಯನ್ನು ವೀಕ್ಷಿಸಿದ ನಂತರ ಕಬೀರಾನಂದಾಶ್ರಮಕ್ಕೆ ಭೇಟಿ ನೀಡಿ ಶಿವಲಿಂಗಾನಂದಸ್ವಾಮಿಗಳಿಂದ ಆಶೀರ್ವಾದ ಪಡೆದು ಮಾತನಾಡಿದರು
ಚಿತ್ರದುರ್ಗದ ಏಳುಸುತ್ತಿನ ಕೋಟೆ ಮತ್ತು ಚಂದ್ರವಳ್ಳಿಗೆ ತನ್ನದೆ ಆದ ಐತಿಹಾಸಿಕ ಪರಂಪರೆಯಿದೆ. ಆದರೂ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ವಿಫಲವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಶೇಷ ಆಸಕ್ತಿ ವಹಿಸಿ ಕೋಟೆಯನ್ನು ವಿಶ್ವ ಪ್ರವಾಸಿಗರ ಭೂಪಟದಲ್ಲಿ ಸೇರ್ಪಡೆಗೊಳಿಸಬೇಕು. ಅದಕ್ಕಾಗಿ ಸ್ಥಳೀಯ ಶಾಸಕರು, ಸಂಸದರು, ಜಿಲ್ಲಾ ಉಸ್ತುವಾರಿ ಮಂತ್ರಿಗಳು ಸರ್ಕಾರದ ಮೇಲೆ ಒತ್ತಡ ಹೇರಬೇಕು. ಆಗ ಜಗತ್ತಿನ ಎಲ್ಲರನ್ನು ಸೆಳೆದುಕೊಂಡು ಹಂಪಿ ಮಾದರಿಯಲ್ಲಿ ಬೆಳೆಯಬಹುದು ಎಂದು ಹೇಳಿದರು.
ಹಿಂದಿನ ಕಾಲದಲ್ಲಿ ಋಷಿಮುನಿಗಳು ಯೋಗವನ್ನು ಅಭ್ಯಾಸ ಮಾಡುತ್ತಿದ್ದರು. ಯೋಗಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಜಗತ್ತಿನ 177 ರಾಷ್ಟ್ರಗಳಲ್ಲಿ ಯೋಗಕ್ಕೆ ಮಹತ್ವವಿದೆ. ಆದ್ದರಿಂದ ಯೋಗಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಸಿಕ್ಕಿದೆ. ವೈಜ್ಞಾನಿಕ ಯುಗದಲ್ಲಿ ಎಲ್ಲರೂ ಐಷಾರಾಮಿ ಜೀವನವನ್ನು ಬಯಸುತ್ತಿರುವುದರಿಂದ ಮಾನವ ಒಂದಲ್ಲ ಒಂದು ರೀತಿಯ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾನೆ. ವ್ಯಾದಿ ದೇಹವನ್ನು ಕಾಡಿದಾಗ ವೈದ್ಯರ ಬಳಿ ಹೋಗುವ ಬದಲು ದಿನನಿತ್ಯ ಒಂದು ಗಂಟೆಯಾದರೂ ಯೋಗ ಮಾಡುವುದರಿಂದ ಕಾಯಿಲೆಯಿಂದ ದೂರವಿದ್ದು, ಆರೋಗ್ಯವಂತರಾಗಿರಬಹುದು ಎಂದರು.
ಅರ್ಜೆಂಟೈನಾ, ಅಮೇರಿಕಾ, ಇಂಗ್ಲೆಂಡ್, ಪಿನ್‍ಲ್ಯಾಂಡ್, ನೆದರ್‍ಲ್ಯಾಂಡ್, ಬಾಲಿಂಗ್, ಇಂಡೋನೇಷಿಯಾ, ಮಲೇಷಿಯಾದಿಂದ ಯೋಗ ತರಬೇತಿಗಾಗಿ ಆಗಮಿಸಿರುವವರು ವಚನಾನಂದಸ್ವಾಮಿ ಜೊತೆಗಿದ್ದರು.ಅರ್ಜೆಂಟೈನಾದ ವಿಕ್ಟರ್ ಟ್ರೂವಿಯಾನೋ, ಗಂಗಾಪುರ ಸಿದ್ದಾರೂಢ ಆಶ್ರಮದ ಮರುಳಶಂಕರಮಹಾಸ್ವಾಮಿ ಈ ಸಂದರ್ಭದಲ್ಲಿ ಹಾಜರಿದ್ದರು.