ಎಸ್‍ಎಸ್‍ಎಲ್‍ಸಿ ಫಲಿತಾಂಶ :ಚಿತ್ರದುರ್ಗ ಉತ್ತಮ ಸ್ಥಾನ ಅಲಂಕರಿಸಬೇಕು

ಚಿತ್ರದುರ್ಗ :

    ಜಿಲ್ಲೆಯು ಕಳೆದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಫಲಿತಾಂಶದಲ್ಲಿ 6 ನೇ ಸ್ಥಾನ ಪಡೆದಿರುವುದು ಹೆಮ್ಮೆಯ ವಿಷಯ. ಈ ಬಾರಿಯು ಕೂಡ ಚಿತ್ರದುರ್ಗ ಶೇ. 100 ರಷ್ಟು ಫಲಿತಾಂಶ ಪಡೆದು ರಾಜ್ಯದಲ್ಲಿ ಮೊದಲ ಸ್ಥಾನ ಅಲಂಕರಿಸಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಿ.ಎಂ ವಿಶಾಲಾಕ್ಷಿ ನಟರಾಜ್ ಶಿಕ್ಷಕರಿಗೆ ಹೇಳಿದರು.

    ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಸಮಾಜ ವಿಜ್ಞಾನ ಶಿಕ್ಷಕರ ಕ್ಲಬ್ ಇವರ ಸಹಯೋಗದಲ್ಲಿ ಬುಧವಾರ ತ.ರಾ.ಸು ರಂಗಮಂದಿರದಲ್ಲಿ ಆಯೋಜಿಸಿದ್ದ ‘ಜಿಲ್ಲಾ ಮಟ್ಟದ ಸಮಾಜ ವಿಜ್ಞಾನ ಕಾರ್ಯಗಾರ’ ಉದ್ಘಾಟಿಸಿ ಅವರು ಮಾತನಾಡಿದರು.

    ವಿದ್ಯಾರ್ಥಿಗಳು ಪ್ರತಿಯೊಂದು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಶಿಕ್ಷಕರು ತರಬೇತಿ ನೀಡಬೇಕು. ಶಿಕ್ಷಕರು ಮಕ್ಕಳ ಚಂಚಲ ಮನಸ್ಸನ್ನು ಒಂದೆಡೆ ಕೇಂದ್ರೀಕರಿಸಿ, ಅವರ ಏಕಾಗ್ರತೆಯನ್ನು ಹಿಡಿದಿಟ್ಟುಕೊಳ್ಳಬೇಕು. ಮಕ್ಕಳ ಜೊತೆಯಲ್ಲಿ ಮಕ್ಕಳಾಗಿ, ಅವರ ಮನೋಭಾವಕ್ಕೆ ತಕ್ಕುದಾಗಿ ಸರಳವಾಗಿ ಅರ್ಥವಾಗುವಂತೆ ಪಾಠ ಪ್ರವಚನಗಳನ್ನು ನೀಡಬೇಕು ಎಂದರುಜಿಲ್ಲೆಯು ಕಳೆದ ಬಾರಿ ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶದಲ್ಲಿ 6 ನೇ ಸ್ಥಾನಕ್ಕೆ ತೃಪ್ತಿ ಪಡೆದುಕೊಂಡಿದೆ. ಈ ಬಾರಿ ಶಿಕ್ಷಕರು ವಿದ್ಯಾರ್ಥಿಗಳ ಕಡೆ ಹೆಚ್ಚು ಗಮನಹರಿಸಿ, ಅವರಿಗೆ ಉತ್ತಮ ಮಾರ್ಗದರ್ಶನ ನೀಡಿ, ನಮ್ಮ ಜಿಲ್ಲೆಯನ್ನು ಪ್ರಥಮ ಸ್ಥಾನಕ್ಕೆ ಕೊಂಡ್ಯೊಯ್ಯುವುದರ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು ಎಂಬುದಾಗಿ ಜಿ.ಪಂ ಅಧ್ಯಕ್ಷೆ ಜಿ.ಎಂ ವಿಶಾಲಾಕ್ಷಿ ನಟರಾಜ್ ಶಿಕ್ಷಕರಿಗೆ ಕರೆ ನೀಡಿದರು.

    ಜಿಲ್ಲಾಧಿಕಾರಿ ಆರ್. ವಿನೋತ್ ಪ್ರಿಯಾ ವಿವಿಧ ಭೌಗೋಳಿಕ ನಕ್ಷೆ ಬಿಡುಗಡೆಗೊಳಿಸಿ ಮಾತನಾಡಿ, ಕಳೆದ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಚಿತ್ರದುರ್ಗ 14 ನೇ ಸ್ಥಾನದಿಂದ 6 ನೇ ಸ್ಥಾನಕ್ಕೇರಿರುವುದು ಸಂತಸದ ಸಂಗತಿ. ಶೇ. 100 ರಷ್ಟು ಮಕ್ಕಳು ಉತ್ತೀರ್ಣರಾಗುವುದರ ಜೊತೆಗೆ ಒಳ್ಳೆಯ ಅಂಕಗಳನ್ನು ಗಳಿಸುವಂತಾಗಬೇಕು ಎಂದು ಹೇಳಿದರು ಪರೀಕ್ಷೆ ಪಾರದರ್ಶಕವಾಗಿರಬೇಕು.

    ಶಿಕ್ಷಕರು ಯಾವುದೇ ರೀತಿಯ ನಕಲು ನಡೆಯದಂತೆ ಎಚ್ಚರ ವಹಿಸಬೇಕು. ವಿದ್ಯಾರ್ಥಿಗಳು ತಮ್ಮ ಜ್ಞಾನ ಬಲದಿಂದ ಪರೀಕ್ಷೆ ಬರೆದು ಉತ್ತಮ ಅಂಕಗಳಿಸುವಂತಾಗಬೇಕು. ಇಂದಿನ ದಿನಮಾನದಲ್ಲಿ ಹತ್ತನೇ ತರಗತಿ ಪರೀಕ್ಷೆ ಪದ್ಧತಿ ಬದಲಾಗಿದೆ, ಆ ಕುರಿತ ಸಂಪೂರ್ಣ ಮಾಹಿತಿ ವಿದ್ಯಾರ್ಥಿಗಳಿಗೆ ನೀಡಬೇಕು. ಒಬ್ಬ ವಿದ್ಯಾರ್ಥಿ ಎಲ್ಲಾ ವಿಷಯಗಳಲ್ಲಿ ಉತ್ತೀರ್ಣರಾಗಿ ಯಾವುದೇ ಒಂದು ವಿಷಯದಲ್ಲಿ ಅನುತ್ತೀರ್ಣರಾದರೇ ಅದು ಆಯಾ ವಿಷಯದ ಶಿಕ್ಷಕರ ಹೊಣೆಯೇ ಹೊರೆತು, ವಿದ್ಯಾರ್ಥಿಯ ತಪ್ಪಲ್ಲ ಎಂದು ಅಭಿಪ್ರಾಯ ಪಟ್ಟರು
ಶಿಕ್ಷಕರು ತಮ್ಮ ಅಧ್ಯಯನ ವಿಷಯದಲ್ಲಿ ಅಪಾರ ಜ್ಞಾನ ಹೊಂದಿರಬೇಕು. ಮಕ್ಕಳು ಕೇಳುವ ಪ್ರಶ್ನೆಗೆ ಸರಳ ರೀತಿಯಲ್ಲಿ ಉತ್ತರಿಸಿ, ಗೊಂದಲವಿಲ್ಲದ ಹಾಗೆ ಪಾಠ ಪ್ರವಚನ ನೀಡಿದರೆ ಮಕ್ಕಳು ಅನುತ್ತೀರ್ಣರಾಗುವ ಬಗ್ಗೆ ಚಿಂತಿಸುವ ಅಗತ್ಯ ಇರುವುದಿಲ್ಲ. ಶಿಕ್ಷಕರು ಅತ್ಯುತ್ತಮ, ಉತ್ತಮ ಮತ್ತು ಕಡಿಮೆ ಕಲಿಕಾ ಮಟ್ಟದ ಜ್ಞಾನವಿರುವ ವಿದ್ಯಾರ್ಥಿಗಳನ್ನು ಸಮಾನ ದೃಷ್ಟಿಯಿಂದ ಕಾಣಬೇಕು. ಎಲ್ಲರನ್ನು ಪ್ರೋತ್ಸಾಹಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು

     ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ. ರವಿಶಂಕರ್‍ರೆಡ್ಡಿ ‘ಸವಿಸಂಪತ್ತು’ ಕಿರುಹೊತ್ತಿಗೆ ಬಿಡುಗಡೆಗೊಳಿಸಿ ಮಾತನಾಡಿ, ಇದು ಸ್ಪರ್ಧಾತ್ಮಕ ಯುಗ, ಶಿಕ್ಷಕರು ಮಕ್ಕಳನ್ನು ಸ್ಪರ್ಧೆಗೆ ತಯಾರು ಮಾಡಬೇಕು. ಅವರ ಬುದ್ಧಿಶಕ್ತಿಗೆ ಅನುಗುಣವಾಗಿ ಪಾಠಗಳು ನಡೆಯಬೇಕು. ಶಿಕ್ಷಕರಾದವರು ಮಕ್ಕಳ ವೈಫಲ್ಯಕ್ಕನುಗುಣವಾಗಿ ಪಾಠ ಮಾಡಿದರೆ, ಅವರ ಹಿಂಜರಿಕೆ ಸ್ವಭಾವ ದೂರವಾಗಿ ಆತ್ಮಸ್ಥೈರ್ಯ ಮೂಡಲು ಸಹಕಾರಿಯಾಗುತ್ತದೆ. ಹತ್ತನೆ ತರಗತಿ ಪರೀಕ್ಷೆಗೆ ಇನ್ನೂ ಸಮಯಾವಕಾಶವಿದೆ ಅದನ್ನು ಸಮರ್ಪಕವಾಗಿ ಬಳಸಿಕೊಂಡು, ಉತ್ತಮ ಫಲಿತಾಂಶ ತರುವ ನಿಟ್ಟಿನಲ್ಲಿ ಸಾಗಬೇಕು ಎಂದರು ಶಿಕ್ಷಕರ ಜ್ಞಾನ ಕಡಿಮೆಯಿದ್ದರೆ, ವಿದ್ಯಾರ್ಥಿಗಳ ಫಲಿತಾಂಶವು ಕಡಿಮೆಯಾಗುತ್ತದೆ. ಉತ್ತಮ ಫಲಿತಾಂಶ, ಉತ್ತಮ ಶಿಕ್ಷಕರನ್ನು ಅವಲಂಬಿಸಿರುತ್ತದೆ.

     ಶಿಕ್ಷಕರು ವಿದ್ಯಾರ್ಥಿಗಳಿಗೆ ಒಂದೊಂದು ವಿಷಯದಲ್ಲಿ 6 ಪ್ರಶ್ನೆ ಪತ್ರಿಕೆಗಳನ್ನು ತಯಾರಿಸಿ, ನಿರಂತರ ಪರೀಕ್ಷೆ ನಡೆಸಬೇಕು. ರಸ ಪ್ರಶ್ನೆ ಕಾರ್ಯಕ್ರಮ, ತೆರೆದ ಪುಸ್ತಕ ಪರೀಕ್ಷೆ ಹಾಗೂ ಪ್ರತಿಯೊಂದು ಹೋಬಳಿ ಮಟ್ಟದಲ್ಲಿ ಸಂಪನ್ಮೂಲ ಶಿಕ್ಷಕರಿಂದ ಸಂವಾದ ಕಾರ್ಯಕ್ರಮಗಳನ್ನು ಏರ್ಪಡಿಸುವುದರ ಮೂಲಕ ಅವರಿಗೆ ಪರೀಕ್ಷೆ ಭಯ ಹೋಗಲಾಡಿಸಬೇಕು ಎಂದು ಸಲಹೆ ನೀಡಿದರು

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap