ಚಿತ್ರದುರ್ಗ:
ಇಂಜಿನಿಯರಿಂಗ್ ಅಂತಹ ಉನ್ನತ ಶಿಕ್ಷಣ ಪಡೆದು ಕೈಗಾರಿಕೆ, ಕಂಪೆನಿಗಳಲ್ಲಿ ಉದ್ಯೋಗ ಪಡೆದು ಹಣ ಸಂಪಾದನೆ ಮಾಡುವುದು ಶಿಕ್ಷಣದ ಉದ್ದೇಶವಾಗಬಾರದು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಎಂ.ಸಿ.ಶೋಭಾ ಅಭಿಪ್ರಾಯ ಪಟ್ಟರು
ನಗರದ ಎಸ್‍ಆರ್‍ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಯುವ ತರಂಗ-2018”ರ “ಸಾಂಸ್ಕತಿಕ ವಹಾ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಸಾಂಸ್ಕತಿಕ ಹಬ್ಬದ ಜೊತೆಗೆ ಪರೀಕ್ಷಾ ತಯಾರಿ ಬಗ್ಗೆ ಗಮನ ನೀಡಬೇಕು. ಪರೀಕ್ಷೆ ಎನ್ನುವ ಭಯ ಬೇಡ, ಓದಿನ ಜೊತೆಗೆ ಆರೋಗ್ಯದ ಕಡೆ ಗಮನ ಹರಿಸಿ. ಪೌಷ್ಠಿಕ ಆಹಾರವನ್ನು ತೆಗೆದುಕೊಳ್ಳದೆ ರಸ್ತೆ ಬೀದಿಗಳಲ್ಲಿ ತಿನ್ನುವುದು ಇತ್ತೀಚಿನ ದಿನಗಳಲ್ಲಿ ಫ್ಯಾಷನ್ ಆಗಿರುವುದು ಅತ್ಯಂತ ವಿಷಾದನಿಯ ಸಂಗತಿ ಎಂದು ಅಭಿಪ್ರಾಯಪಟ್ಟರು.
ಓದಿ ಉತ್ತಮ ಅಂಕಗಳನ್ನು ಪಡೆದು ಫ್ಯಾಕ್ಟರಿಯಲ್ಲಿ ಇಂಜಿನಿಯರ್ ಆಗಿ ಹಣವನ್ನು ಸಂಪಾದನೆ ಮಾಡುವುದೇ ಶಿಕ್ಷಣದ ಉದ್ದೇಶವಾಗಬಾರದು. ಸಮಾಜ ಸೇವೆಗೆ ನಿಮ್ಮ ಉತ್ತಮ ಶಿಕ್ಷಣ ಸಹಕಾರಿಯಾಗಲಿ ಎಂದು ಅಭಿಪ್ರಾಯಪಟ್ಟರು. ಪಿಯು ಹಂತ ಹದಿಹರಿಯದ ವಯಸ್ಸು ಈ ವಯಸ್ಸಿನಲ್ಲಿ ಒಳಿತು ಕೆಡಕುಗಳನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತ ಎಂದು ತಿಳಿ ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಚಿಂತಕ ಜೆ. ಯಾದವರೆಡ್ಡಿ ಮಾತನಾಡಿ ಎಸ್ ಆರ್ ಎಸ್ ಶಿಕ್ಷಣ ಸಂಸ್ಥೆಯ ಪಿಯು ವಿಭಾಗವನ್ನು 2009ರಲ್ಲಿ ಆರಂಭಿಸಲು ಉದ್ಘಾಟಕನಾಗಿ ಬಂದಿದ್ದ ನೆನಪು ಇಂದಿಗೂ ಉಳಿದಿದೆ. 2009ರಲ್ಲಿ ಪಿಯು ಕಾಲೇಜು ಆರಂಭವಾದಾಗ ಎಂಬತ್ತು ವಿದ್ಯಾರ್ಥಿಗಳು ಇದ್ದರು. ಈಗ ಸಾವಿರ ವಿದ್ಯಾರ್ಥಿಗಳ ಸಂಖ್ಯೆಯನ್ನು ದಾಟಿದೆ ಎಂಬುದು ಹರ್ಷದಾಯಕ ಸಂಗತಿ ಎಂದರು
ಎಸ್ ಆರ್ ಎಸ್ ಹೇಗೆ ಇಷ್ಟೊಂದು ಕಡಿಮೆ ಸಮಯದಲ್ಲಿ ಬೆಳೆಯಿತು ಎಂದರೆ ಎಸ್ ಆರ್ ಎಸ್ ನಲ್ಲಿ ದೇಹ ಮತ್ತು ಆತ್ಮ ಎರಡು ಇವೆ. ಹಾಗಾಗಿ ರಾಜ್ಯಮಟ್ಟದಲ್ಲಿ ದಾಖಲೆಯ ಫಲಿತಾಂಶದೊಂದಿಗೆ ಗೌರವವನ್ನು ಉಳಿಸಿಕೊಂಡಿದೆ. ಕೆಲವು ಕಡೆ ಬೃಹದಾಕಾರದ ಕಟ್ಟಡಗಳಿದ್ದು, ಹಣವನ್ನು ಸಂಪಾದನೆ ಮಾಡುವುದು ಅವುಗಳ ಮುಖ್ಯ ಗುರಿಯಾಗಿವೆ. ಹಾಗಾಗಿ ಅಂತಹ ಸಂಸ್ಥೆಗಳಲ್ಲಿ ದೇಹ ಇದೆ ಆತ್ಮವಿಲ್ಲ. ವಿದ್ಯಾರ್ಥಿಗಳು ಅಂಕಗಳನ್ನು ಪಡೆಯುವ ಯಂತ್ರಗಳಾಗದೆ ಸಮಾಜಮುಖಿ ಚಿಂತನೆ, ಸಾಮಾಜಿಕ ಜ್ಞಾನ ಮುಖ್ಯ ಎಂದು ಹೇಳಿದರು.
ಜಗಳೂರಿನ ಎನ್‍ಕೆಎಂ ಪ್ರೌಢಶಾಲೆಯ ಕಾರ್ಯದರ್ಶಿ ಎನ್.ಎಂ. ಲೋಕೇಶ್ ಮಾತನಾಡಿ, 1990ರ ಆಸುಪಾಸಿನಲ್ಲಿ ಚಿತ್ರದುರ್ಗ ಜಿಲ್ಲೆ ಶಿಕ್ಷಣ ಕ್ಷೇತ್ರದಲ್ಲಿ ಅತ್ಯಂತ ಮುಂಚೂಣಿಯಲ್ಲಿತ್ತು. ನಂತರದ ದಿನಗಳಲ್ಲಿ ಕುಸಿತವನ್ನು ಕಾಣುತ್ತಾ ಬಂತು. ಈ ರೀತಿ ಕುಸಿತ ಕಂಡು ಬಂದಾಗ ಜಿಲ್ಲೆಯ ವಿದ್ಯಾರ್ಥಿಗಳು ಉತ್ತಮ ಕಾಲೇಜುಗಳನ್ನು ಹುಡುಕಿಕೊಂಡು ಹೊರ ಜಿಲ್ಲೆಗಳಿಗೆ ಹೋಗಲಾರಂಭಿಸಿದರು. ಅಂತಹ ಸಂದರ್ಭಕ್ಕೆ ಜಿಲ್ಲೆಯಲ್ಲಿ ಆರಂಭವಾದ ಉತ್ತಮ ಸಂಸ್ಥೆ ಎಸ್‍ಆರ್‍ಎಸ್ ಶಿಕ್ಷಣ ಸಂಸ್ಥೆ ಎಂದು ಹೇಳಿದರು
ಎಸ್‍ಆರ್‍ಎಸ್ ಶಿಕ್ಷಣ ಸಂಸ್ಥೆ ಜಿಲ್ಲೆಯಲ್ಲಿ ಮಾತ್ರವಲ್ಲ ಮದ್ಯಕರ್ನಾಟಕದಲ್ಲಿಯೇ ಹೆಚ್ಚು ಹೆಸರು ಮಾಡುತ್ತಿದೆ. ಇಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ. ಪ್ರತಿಭೆಗಳಿಗೆ ಇಲ್ಲಿ ಸಾಕಷ್ಟು ಪೂರಕ ವಾತಾವರಣ ಇದೆ. ಬರದ ಜಿಲ್ಲೆಯಲ್ಲಿ ಉತ್ತಮ ಸಂಸ್ಥೆಯನ್ನು ಕಟ್ಟಿದ ಲಿಂಗಾರೆಡ್ಡಿ ಅವರು ಉತ್ತಮ ಸಮಾಜಮುಖಿ ಚಿಂತಕರೂ ಹೌದು ಎಂದು ಬಣ್ಣಿಸಿದರು
ವಿದ್ಯಾರ್ಥಿಗಳು ಓದುವ ಓದು ತಂದೆ, ತಾಯಿ, ಬಂಧುಗಳು, ಹಿತೈಷಿಗಳ ಕನಸು ನನಸಾಗುವಂತಹ ಓದಾಗಬೇಕು. ಕಲಿಕೆಯ ಈ ಹಂತದಲ್ಲಿ ಕಾಲಾಹರಣ ಮಾಡದೆ ಬದುಕು ಕಟ್ಟಿಕೊಳ್ಳುವ ಕಡೆ ಚಿಂತನೆ ಮಾಡಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಮತಿ ಸುಜಾತ ಲಿಂಗಾರೆಡ್ಡಿ ಮಾತನಾಡಿ, ಎಸ್ ಆರ್ ಎಸ್ ಶಿಕ್ಷಣ ಸಂಸ್ಥೆಯು ವಿದ್ಯಾರ್ಥಿಗಳಿಗೆ ಪಠ್ಯದ ವಿಷಯಗಳನ್ನು ಬೋಧಿಸುವುದಕ್ಕೆ ಮಾತ್ರ ಸೀಮತಗೊಳಿಸುವುದು ಬೇಡ, ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಾಂಸ್ಕತಿಕ ವೇದಿಕೆಯು ಒಂದು ಮುಖ್ಯವಾದದು ಆದ್ದರಿಂದ ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಅವರಲ್ಲಿ ಅಡಗಿರುವ ಪ್ರತಿಭೆಯನ್ನು ಅನಾವರಣಗೊಳಿಸಿಕೊಳ್ಳಲು ಒಂದು ವೇದಿಕೆ ಬೇಕಾಗಿತ್ತು. ಅದಕ್ಕೆ ಈ ಯುವ ತರಂಗ ವೇದಿಕೆಯೆ ಸಾಕ್ಷಿ ಎಂದರು.
ಸಂಸ್ಥೆಯ ಉಪಾಧ್ಯಕ್ಷರಾದ ಬಿ ಎಲ್ ಅಮೋಘ್, ಆಡಳಿತಾಧಿಕಾರಿಗಳಾದ ಡಾ. ರವಿ ಟಿ. ಎಸ್., ಹಾಗೂ ಎಲ್ಲಾ ವಿಭಾಗಗಳ ಪ್ರಾಂಶುಪಾಲರು, ಅಧ್ಯಾಕರು, ಪೋಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
