ಬೆಂಗಳೂರು
ಚುನಾವಣಾ ಆಯೋಗವೇ ನ್ಯಾಯಾಲಯದಲ್ಲಿ ಅನರ್ಹರು ಚುನಾವಣೆಗೆ ಸ್ಪರ್ಧಿಸಬಹುದು ಎಂದು ಸ್ವಯಂಪ್ರೇರಿತ ವಾಗಿ ಹೇಳಿಕೆ ಕೊಟ್ಟಿರುವುದನ್ನು ನೋಡಿದರೆ ಸ್ವತಂತ್ರ ಸ್ವಾಯತ್ತತೆ ಸಂಸ್ಥೆಯೊಂದು ವಿಫಲವಾಗಿರುವುದು ಸ್ಪಷ್ಟವಾಗುತ್ತದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ.
ಜೆ.ಪಿ.ಭವನದಲ್ಲಿ ಸುಪ್ರೀಂಕೋರ್ಟ್ ಆದೇಶ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಎರಡೂ ಕಡೆ ವಾದ ವಿವಾದ ಆಲಿಸಿ ನಂತರ ಉಪ ಚುನಾವಣೆಗೆ ತಡೆಯಾಜ್ಞೆ ನೀಡಿದೆ ಎಂಬುದು ತಮ್ಮ ಗಮನಕ್ಕೆ ಬಂದಿದೆ. ನ್ಯಾಯಾದೀಶರು ವಿಚಾರಣೆ ಮುಂದೆ ಹಾಕಿದ್ದಾರೆ.ಶಾಸಕರ ರಾಜೀನಾಮೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪ್ರಭಾವವೂ ಇದೆ.ಚುನಾವಣಾ ಆಯೋಗವೇ ಸ್ವಯಂಪ್ರೇರಿತವಾಗಿ ನ್ಯಾಯಾಲಯಕ್ಕೆ ಹೋಗಿ ಅನರ್ಹರು ಚುನಾವಣೆಗೆ ಸ್ಪರ್ಧಿಸಲು ಅಭ್ಯಂತರವಿಲ್ಲ ಎಂದು ಹೇಳಿದ ಮೇಲೆ ಯಾರು ಏನು ಮಾಡಲು ಸಾಧ್ಯ ಹೇಳಿ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.ಚುನಾವಣೆ ಆಯೋಗ ಸ್ವತಂತ್ರ ಸ್ವಾಯತ್ತ ಸಂಸ್ಥೆ.ಆದರೂ ಅನರ್ಹರ ಪರ ಹೇಳಿಕೆ ನೀಡಿದ್ದು ಸರಿಯಲ್ಲ ಎಂದರು.
ಕೋರ್ ಕಮಿಟಿ ಸಭೆ ನಡೆಸಿ ಅಭ್ಯರ್ಥಿಗಳ ಆಯ್ಕೆ ಚುನಾವಣೆ ನಡೆಸುವುದು ಹೇಗೆ? ಯಾವ ಯಾವ ಕ್ಷೇತ್ರದಲ್ಲಿ ಹೇಗೆ ಎಂಬಿತ್ಯಾದಿ ಚರ್ಚೆ ಮಾಡಲಾಗಿತ್ತು. ಆದರೆ ಸಭೆ ಬಳಿಕ ಸುಪ್ರೀಂ ಕೋರ್ಟ್ ತೀರ್ಪು ಬಂದಿದೆ. ಚುನಾವಣೆ ಮುಂದೂಡಿಕೆಯಾಗಿದೆ ನೋಡೋಣ ಮುಂದೆ ಎಂದು ದೇವೇಗೌಡ ತಿಳಿಸಿದರು.
ಪಕ್ಷ ಸಂಘಟನೆಗಾಗಿ ಮಾಜಿ ಸಚಿವರು, ಮಾಜಿ ಶಾಸಕರುಳ್ಳ ಹತ್ತು ಜನರ ಆರು ತಂಡ ರಚನೆ ಮಾಡಲಾಗುವುದು.ಎಲ್ಲಾ ಸಮುದಾಯಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ತಾಲೂಕು, ಜಿಲ್ಲಾ ಪದಾಧಿಕಾರಿಗಳ ಆಯ್ಕೆ ನಡೆಸಲಾವುದು ಎಂದರು.ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿ, ದೇಶದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಚುನಾವಣಾ ಆಯೋಗ ಸ್ವಯಂಪ್ರೇರಿತವಾಗಿ ಅನರ್ಹ ಶಾಸಕರ ಪರ ನ್ಯಾಯಾಲಯದಲ್ಲಿ ವಕಾಲತ್ತು ವಹಿಸಿದೆ.ಸುಪ್ರೀಂಕೋರ್ಟ್ ಆದೇಶದ ಬಗ್ಗೆ ಪ್ರಶ್ನಿಸುವುದಿಲ್ಲ.
ಆದರೆ ಚುನಾವಣಾ ಆಯೋಗದ ವಕೀಲರು ನಾವು ಚುನಾವಣೆ ಮುಂದೂಡಲು ಸಿದ್ಧರಿದ್ದೇವೆ ಎಂದಿರುವುದು ಸರಿಯಲ್ಲ.ಇದು ದೇಶದಲ್ಲಿನ ಸ್ವತಂತ್ರ ಸ್ವಾಯತ್ತತೆಯನ್ನು ನಾಶಮಾಡುವ ಪ್ರಯತ್ನ ಎಂದು ಬೇಸರ ವ್ಯಕ್ತಪಡಿಸಿದರು .ಇದೀಗ ಚುನಾವಣೆ ಆಯೋಗದ ಮೇಲೆ ಪ್ರಭಾವ ಬೀರಿದವರು ಯಾರು ಎಂಬ ಯಕ್ಷ ಪ್ರಶ್ನೆ ಶುರುವಾಗಿದೆ. ಬಿಜೆಪಿ ನಾಯಕರ ಈ ನಡವಳಿಕೆ ಪ್ರಶ್ನಾರ್ಹ.ನೆರೆ ಬಗ್ಗೆ ಚರ್ಚೆ ಮಾಡುವುದಕ್ಕೆ ಕೇಂದ್ರದ ಬಿಜೆಪಿ ನಾಯಕರನ್ನು ಭೇಟಿ ಮಾಡಲು ಯಡಿಯೂರಪ್ಪಗೆ ಪುರುಸೊತ್ತು ಇರುವುದಿಲ್ಲ.ಆದರೆ ಚುನಾವಣೆ ದಿನಾಂಕ ನಿಗದಿಯಾಗುತ್ತಿದ್ದಂತೆ ಆದ ಕೂಡಲೇ ಯಡಿಯೂರಪ್ಪ ದೆಹಲಿಗೆ ಹೋಗಲು ಸಮಯವಿದೆ ಎಂದು ಕುಟುಕಿದರು.
ಅನರ್ಹ ಶಾಸಕರಿಂದ ಹಲ್ಲೆಗೊಳಗಾಗುವ ಪರಿಸ್ಥಿತಿಯಲ್ಲಿ ಯಡಿಯೂರಪ್ಪ ಇದ್ದರು.ದೈಹಿಕವಾಗಿ ಹಲ್ಲೆ ಮಾಡಿಸಿಕೊಳ್ಳುವ ಹಂತಕ್ಕೂ ಅದು ತಲುಪಿತ್ತು.ಹೀಗಾಗಿ ತರಾತುರಿಯಲ್ಲಿ ದೆಹಲಿಗೆ ಹೋಗಿದ್ದಾರೆ. ಈ ಬಗ್ಗೆ ದೇಶದಲ್ಲಿ ಚರ್ಚೆಯಾಗಬೇಕು ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ