ಚಿತ್ರದುರ್ಗ :
ಜಿಲ್ಲೆಯಲ್ಲಿ ಆರ್ಥಿಕ ಗಣತಿ ಸಮೀಕ್ಷೆ ಡಿ. 23 ರಿಂದ ಪ್ರಾರಂಭವಾಗಿದ್ದು, ಗಣತಿ ಸಮೀಕ್ಷಾ ಕಾರ್ಯ ಯಾವುದೇ ಲೋಪ ದೋಷ ರಹಿತವಾಗಿ ಜರುಗಬೇಕು ಎಂದು ಅಪರ ಜಿಲ್ಲಾಧಿಕಾರಿ ಸಿ. ಸಂಗಪ್ಪ ಅವರು ಹೇಳಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ‘7 ನೇ ಆರ್ಥಿಕ ಗಣತಿ ಆ್ಯಪ್’ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಆರ್ಥಿಕ ಗಣತಿ ಸಮೀಕ್ಷಾ ಕಾರ್ಯ ಡಿ. 23 ರಿಂದ 2020 ರ ಏಪ್ರಿಲ್ 30 ರವರೆಗೆ ನಡೆಯಲಿದೆ. ಗಣತಿ ಸಮೀಕ್ಷೆಗೆ ಸಾಮಾನ್ಯ ಸೇವಾ ಕೇಂದ್ರದವರಿಗೆ ಈಗಾಗಲೆ ಸೂಕ್ತ ತರಬೇತಿ ನೀಡಲಾಗಿದೆ. ಆದರೂ ಮತ್ತೊಮ್ಮೆ ಗಣತಿದಾರರಿಗೆ ತರಬೇತಿ ನೀಡಲಾಗುವುದು. ಗಣತಿದಾರರು ನಿಷ್ಠೆಯಿಂದ ಗಣತಿ ಸೇವೆ ಸಲ್ಲಿಸಬೇಕು ಗಣತಿದಾರರು ಸಾರ್ವಜನಿಕರ ಬಳಿ ಸೌಜನ್ಯಯುತವಾಗಿ ವರ್ತಿಸಬೇಕು. ಆರ್ಥಿಕ ಸಮೀಕ್ಷೆ ಬಗ್ಗೆ ಅವರಲ್ಲಿ ಮಾಹಿತಿ ನೀಡಿ ಅರಿವು ಒದಗಿಸಬೇಕು. ಎಲ್ಲಾ ಸಾರ್ವಜನಿಕರು ಇದರಲ್ಲಿ ತೊಡಗುವಂತೆ ಮಾಡಬೇಕು ಎಂದು ಹೇಳಿದರು
ಜಿಲ್ಲೆಯ ಪ್ರತಿಯೊಂದು ಮನೆಯ ಆರ್ಥಿಕ ಗಣತಿ ಸಮೀಕ್ಷೆಯಲ್ಲಿ ಇರಬೇಕು. ಗಣತಿದಾರರು ಯಾವುದೇ ಮನೆಯ ಗಣತಿ ಬಿಟ್ಟು ಹೋಗದಂತೆ ಎಚ್ಚರ ವಹಿಸಬೇಕು. ಸರಿಯಾದ ಉತ್ತಮ ಗುಣಮಟ್ಟದ ಮಾಹಿತಿ ನೀಡುವತ್ತ ಗಣತಿದಾರರು ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ದಾಸರೆಡ್ಡಿ ಅವರು ಮಾತನಾಡಿ, ಆರ್ಥಿಕ ಗಣತಿಗೆ ಇಲಾಖೆಯು ನಡೆಸಿರುವ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅರ್ಹರನ್ನು ಗಣತಿ ಕಾರ್ಯಕ್ಕೆ ಆಯ್ಕೆ ಮಾಡಲಾಗಿದೆ. ಗಣತಿಗೆ ತೆರಳುವವರು ಗ್ರಾಮ ಮಟ್ಟದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಲೆಕ್ಕಾಧಿಕಾರಿ ಹಾಗೂ ಆಯಾ ಗ್ರಾಮದ ಮುಖಂಡರನ್ನು ಸಂಪರ್ಕಿಸಿ. ನಗರಪ್ರದೇಶಗಳಲ್ಲಿ ಪೌರಾಯುಕ್ತರನ್ನು ಸಂಪರ್ಕಿಸಿ ಅವರುಗಳ ಸಹಾಯದಿಂದ ಸಮೀಕ್ಷೆ ಕಾರ್ಯ ಯಶಸ್ವಿಗೊಳಿಸಬೇಕು.
ಈ ಹಿಂದೆ ಶಾಲಾ ಶಿಕ್ಷರನ್ನು ಆರ್ಥಿಕ ಗಣತಿಗೆ ನಿಯೋಜಿಸಲಾಗುತ್ತಿತ್ತು, ಇದೇ ಮೊದಲ ಬಾರಿಗೆ ಸಾಮಾನ್ಯ ಸೇವಾ ಕೇಂದ್ರದವರನ್ನು ಗಣತಿ ಕಾರ್ಯದ ಹೊಣೆ ವಹಿಸಲಾಗಿದೆ ಎಂದರು
ಗಣತಿದಾರರು ಸಮೀಕ್ಷಾ ಕಾರ್ಯವನ್ನು ಪ್ರಾಮಾಣಿಕತೆಯಿಂದ ಮಾಡಬೇಕು. ಆರ್ಥಿಕ ಗಣತಿ ಆ್ಯಪ್‍ನಲ್ಲಿ ಮನೆಯ ಸದಸ್ಯರು, ಹೆಣ್ಣು, ಗಂಡು ಸಂಖ್ಯೆ, ಉದ್ಯೋಗ, ಕೈಗೊಂಡಿರುವ ಆರ್ಥಿಕ ಚಟುವಟಿಕೆ, ಬಂಡವಾಳ, ಕಾರ್ಮಿಕರ ಸಂಖ್ಯೆ, ಪ್ಯಾನ್ ಸಂಖ್ಯೆ ಮುಂತಾದ ಅಂಶಗಳು ಒಳಗೊಂಡಿರುತ್ತದೆ. ಮೊದಲ ಹಂತದ ಮೇಲ್ವಿಚಾರಣೆ ಕಾರ್ಯವನ್ನು ಸಾಮಾನ್ಯ ಸೇವಾ ಕೇಂದ್ರಗಳ ಸಿಬ್ಬಂದಿಗಳು ಕೈಗೊಂಡರೆ, ಎರಡನೆ ಹಂತದ ಮೇಲ್ವಿಚಾರಣೆ ಭಾರತ ಸರ್ಕಾರದ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಅಧಿಕಾರಿಗಳು, ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆ ಅಧಿಕಾರಿ ಹಾಗೂ ಕೈಗಾರಿಕೆ ಇಲಾಖೆ ಅಧಿಕಾರಿಗಳು ನಡೆಸುವರು.
ಆರ್ಥಿಕ ಗಣತಿ ಸಮೀಕ್ಷೆಯು ಭಾರತ ಸರ್ಕಾರದಿಂದ ಆಯೋಜಿಸಿರುವ ಕಾರ್ಯವಾಗಿದ್ದು ಏಪ್ರಿಲ್ 30 ರವರೆಗೆ ಗಣತಿ ಕಾರ್ಯ ಮುಂದುವರೆಯಲಿದೆ. ಇದರಲ್ಲಿ ಯಾವುದೇ ಲೋಪದೋಷಗಳು ಇರುವುದಿಲ್ಲ. ಈ ಕಾರ್ಯ ಪಾರದರ್ಶಕವಾಗಿದ್ದು, ಮಾಹಿತಿ ಸೋರಿಕೆಯ ಆತಂಕ ಇರುವುದಿಲ್ಲ. ಹಾಗಾಗಿ ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಬೇಕು ಎಂದರು. ಜಿಲ್ಲಾ ಸಾಮಾನ್ಯ ಸೇವಾ ಕೇಂದ್ರದ ವ್ಯವಸ್ಥಾಪಕರುಗಳಾದ ಎ.ಎನ್ ಶರತ್, ಎನ್.ವಿ ಶ್ರೀನಿವಾಸ್ ಸೇರಿದಂತೆ ಸಾಮಾನ್ಯ ಸೇವಾ ಕೇಂದ್ರದ ಗ್ರಾಮ ಮಟ್ಟದ ಉದ್ದಿಮೆದಾರರು (ಸಿಎಸ್‍ಸಿ- ವಿಎಲ್‍ಇ) ಉಪಸ್ಥಿತರಿದ್ದರು.