ಕುಣಿಗಲ್
ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಅಸಮರ್ಪಕವಾಗಿ ನಿರ್ಮಿಸಿರುವ ಚರಂಡಿ ಹಾಗೂ ಕೊಳೆ ಎದ್ದಿರುವ ಕಲ್ಲು ಎಡವಿ ವ್ಯಕ್ತಿಯೊಬ್ಬ ಕೆಳಗೆ ಮುಗ್ಗರಿಸಿ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ.
ಸೋಮವಾರ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಕಡೆಗೆ ಅಂಚೆ ಕಚೇರಿ ಕಡೆಯಿಂದ ಬಂದ ವ್ಯಕ್ತಿ ಜನ ಸಂದಣೆ ಇರುವ ಪ್ರದೇಶದಲ್ಲಿಯೇ ಏಕಾಏಕಿ ಕಲ್ಲು ಎಡವಿ ಮುಗ್ಗರಿಸಿ ಬಿದ್ದಿದ್ದಾನೆ. ಇದನ್ನು ಕಂಡರೂ ಕಾಣದಂತೆ ಕೆಲವು ಜನ ಕೆಳಗೆ ಬಿದ್ದ ವ್ಯಕ್ತಿಯನ್ನು ಮೇಲೆತ್ತದೆ ಅಯ್ಯೋ ಕುಡಿದು ಬಿದ್ದಿದ್ದಾನೆ ಎಂದು ಸುಮ್ಮನಾಗಿದ್ದಾರೆ.
ಬಿದ್ದು ಕೆಲ ನಿಮಿಷಗಳಾದರೂ ಮೇಲೆ ಏಳದೆ ಹೋದಾಗ ಅಯ್ಯೋ ಪ್ರಾಣವೇ ಹೋಗಿದೆ ಎಂದು ಮಾತನಾಡಿಕೊಳ್ಳುತ್ತ ನಮಗೇಕೆ ಬೇಕು ಎಂಬ ರೀತಿಯಲ್ಲಿ ಅಲ್ಲಿದ್ದ ಜನ ಅಸಡ್ಡೆ ತೋರುತ್ತ ಹತ್ತಿರಕ್ಕೂ ಹೋಗದೆ ದೂರಸರಿದು ಪೊಲೀಸರಿಗೆ ಸುದ್ದಿ ತಿಳಿಸಿದ ಪರಿಣಾಮ ಪೊಲೀಸರು ಬಂದು ಬಿದ್ದಿದ್ದ ವ್ಯಕ್ತಿಯ ಬಳಿ ಇದ್ದ ಚೀಟಿ ನೋಡಿ ಪತ್ತೆ ಮಾಡಿದಾಗ ಕುರುಡಿಹಳ್ಳಿಯ ವೆಂಕಟಾಚಾರಿ (55) ಎಂದು ಪತ್ತೆಯಾಗಿದೆ.
ನಂತರ ಅವರ ಸಂಬಂಧಿಕರನ್ನ ಕರೆಸಿ ವಿಚಾರಿಸಿದಾಗ ಅವರ ಕಡೆಯವರು ಈತನಿಗೆ ಕೆಲ ವರ್ಷಗಳಿಂದ ಹೃದಯದ ಸಮಸ್ಯೆ ಇತ್ತು, ವೈದ್ಯರ ಬಳಿ ತೋರಿಸಲು ಹಣಕಾಸಿನ ತೊಂದರೆ ಇದ್ದ ಪರಿಣಾಮ ಹಾಗೆ ಜೀವನ ಮಾಡಿಕೊಂಡು ಬರುತ್ತಿದ್ದರು. ಈತನಿಗೆ ನಾಲ್ಕು ಜನ ಹೆಣ್ಣುಮಕ್ಕಳಿದ್ದು ಅವರ ವಿವಾಹವು ಆಗಿದೆ. ಹೆಂಡತಿಯಿಂದ ದೂರವಾದ ಈತ ಗಾರೆಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಎಂದು ತಿಳಿದು ಬಂದಿದ್ದು ಸಂಬಂಧಿಕರು ಪೊಲೀಸರ ನೆರವಿನೊಂದಿಗೆ ಮುಂದಿನ ಕ್ರಮ ಕೈಗೊಂಡರು.
ಹಿರಿಯ ನಾಗರೀಕರ ಖಂಡನೆ :
ಈ ಖಾಸಗಿ ಬಸ್ ನಿಲ್ದಾಣದ ಪುನರ್ ನಿರ್ಮಾಣದ ಕನಸು ಕಳೆದ 14 ವರ್ಷದಿಂದ ಹಾಗೆಯೆ ಉಳಿದಿದೆ, ನೀಲಿ ನಕ್ಷೆ ಧೂಳಿಡಿದು ಹಾಳಾಗಿದೆ. ಇಲ್ಲಿ ವೃದ್ದರು ಸೇರಿದಂತೆ ಅಂಗವಿಕಲರು, ಸಾರ್ವಜನಿಕರು, ಸಂಚರಿಸುವುದೆ ದುಃಖಕರ ಸಂಗತಿಯಾಗಿದೆ. ಇಂತಹ ನಿಲ್ದಾಣದಲ್ಲಿ ನಿತ್ಯ ಕೂಲಿಗೆ ಬರುತ್ತಿದ್ದವನು ಅನಿವಾರ್ಯವಾಗಿ ಎಡವಿ ಬಿದ್ದರೂ ಸಹ ಅಲ್ಲಿ ನೋಡುತ್ತಿದ್ದವರು ಮೇಲೆತ್ತುವ ಕೆಲಸ ಮಾಡದೆ ಹೋಗಿದ್ದು ಮತ್ತಷ್ಟು ಬೇಸರ ತಂದಿದೆ ಎಂದು ಖಂಡನೆ ವ್ಯಕ್ತಪಡಿಸಿರುವ ನಾಗರೀಕರು ಮನುಷ್ಯ ಎಂತಹವನೇ ಆಗಲಿ ಇಂತಹ ಘಟನೆಗಳು ಸಂಭವಿಸಿದರೆ ಜೀವ ಉಳಿಸುವ ಪ್ರಯತ್ನಕ್ಕೆ ಜನರು ಮುಂದಾಗದಿರುವುದು ವಿಪರ್ಯಾಸ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/04/29-Kuni-1.gif)