ತುಮಕೂರು
ಇವತ್ತಿನ ಶೈಕ್ಷಣಿಕ ಬೆಳವಣಿಗೆ, ಅದರ ಮಹತ್ವ, ಸಮಸ್ಯೆ, ಸವಾಲುಗಳ ಬಗ್ಗೆ ತಿಳಿಸುವ ಹಾಗೂ ಇಂತಹ ಪರಿಸ್ಥಿತಿಯಲ್ಲಿ ಮಕ್ಕಳು ಮತ್ತು ಪೋಷಕರ ಯಾವ ಮಾದರಿ ಶಿಕ್ಷಣಕ್ಕಾಗಿ ಯಾವ ಶಿಕ್ಷಣ ಸಂಸ್ಥೆ ಆಯ್ಕೆ ಮಾಡಿಕೊಳ್ಳಬಹುದು ಎಂಬೆಲ್ಲಾ ಮಾಹಿತಿ ನೀಡುವಂತಹ ಬೃಹತ್ ಶೈಕ್ಷಣಿಕೆ ಮೇಳ ನಗರದ ಅಮಾನಿಕೆರೆಯ ಗಾಜಿನ ಮನೆಯಲ್ಲಿ ನಡೆಯಿತು.
ಸಂಜೀವಿನಿ ಫೌಂಡೇಷನ್ ಜೊತೆಗೆ ಪ್ರಜಾಪ್ರಗತಿ ದಿನ ಪತ್ರಿಕೆ ಹಾಗೂ ಪ್ರಗತಿ ಟಿವಿ ಸಹಯೋಗದಲ್ಲಿ ಇಡೀ ದಿನ ನಡೆದ ಎಜುಕೇಷನ್ ಎಕ್ಸ್‍ಪೊ-2019 ಶೈಕ್ಷಣಿಕ ಮೇಳದಲ್ಲಿ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಅಗತ್ಯ ಮಾಹಿತಿ ನೀಡಿ, ಅವರಲ್ಲಿದ್ದ ಗೊಂದಲ ನಿವಾರಿಸುವ ಪ್ರಯತ್ನ ಮಾಡಿದವು.
ಬೆಳಿಗ್ಗೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಂಶಿಕೃಷ್ಣ ಶೈಕ್ಷಣಿಕ ಮೇಳ ಉದ್ಘಾಟಿಸಿ, ಈಗ ಶಿಕ್ಷಣ ಮತ್ತು ಆರೋಗ್ಯ ಎಲ್ಲರಿಗೂ ಪ್ರಮುಖ ಆದ್ಯತೆಯಾಗಿದೆ. ಈ ಸ್ಥಿತಿಯಲ್ಲಿ ತಮ್ಮ ಮಕ್ಕಳಿಗೆ ಯಾವ ರೀತಿಯ ಶಿಕ್ಷಣ ನೀಡಬೇಕು, ಇದಕ್ಕೆ ಸೂಕ್ತ ಶಾಲೆ ಅಥವಾ ಕಾಲೇಜು ಯಾವುದು ಎಂಬ ಆಯ್ಕೆಯಲ್ಲಿ ಪೊಷಕರು ಸಹಜವಾಗಿ ಗೊಂದಲಕ್ಕೀಡಾಗುತ್ತಾರೆ, ಅಂತಹವರಿಗೆ ಒಂದೇ ಸೂರಿನಡಿ ಎಲ್ಲಾ ಮಾಹಿತಿ ಒದಗಿಸುವಲ್ಲಿ ಈ ಶೈಕ್ಷಣಿಕ ಮೇಳ ಸಹಕಾರಿಯಾಗಲಿದೆ ಎಂದರು.
ಶಿಕ್ಷಣ ಹಾಗೂ ಆರೋಗ್ಯ ಸೇವೆ ಒದಗಿಸುವಲ್ಲಿ ಸರ್ಕಾರದಷ್ಟೇ ಖಾಸಗಿ ಸಂಸ್ಥೆಗಳು ಈಗ ಶ್ರಮವಹಿಸುತ್ತಿವೆ. ಶಿಕ್ಷಣ ಸಂಸ್ಥೆಗಳು ಉತ್ತಮ ಶಿಕ್ಷಣ ಕೊಡುವ ನಿಟ್ಟಿನಲ್ಲಿ ಕಾಳಜಿ ವಹಿಸಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ ವಿಚಾರ. ಅಂತಹ ಸಂಸ್ಥೆಗಳನ್ನು ಒಂದೆಡೆ ಸೇರಿಸಿ, ವಿದ್ಯಾರ್ಥಿಗಳು, ಪೋಷಕರಿಗೆ ಮಾಹಿತಿಯ ನೆರವು ನೀಡುತ್ತಿರುವ ಈ ಮೇಳ ಸಾರ್ಥಕವಾಗಲಿದೆ ಎಂದರು.
ತುಮಕೂರು ವಿವಿ ಉಪ ಕುಲಪತಿ ಪ್ರೊ. ವೈ ಎಸ್ ಸಿದ್ದೇಗೌಡರು ಮಾತನಾಡಿ, ತಂದೆ ತಾಯಿ ಮಕ್ಕಳು ಒಟ್ಟಿಗೆ ಕುಳಿತು ಮಕ್ಕಳ ಶೀಕ್ಷಣಿಕ ಭವಿಷ್ಯ ನಿರ್ಧಾರ ಮಾಡಲು ಈ ಮೇಳ ಸಹಕಾರಿಯಾಗಿದೆ. ಪೋಷಕರು ಇದರ ಪ್ರಯೋಜನ ಪಡೆಯಬೇಕು. ಎಂದರು.ಪ್ರತಿ ಶಾಲೆ, ಕಾಲೇಜುಗಳು ಮೇಳದಲ್ಲಿ ಭಾಗವಹಿಸಿ, ತಮ್ಮ ಸಂಸ್ಥೆಯ ಶೈಕ್ಷಣಿಕ ವಾತಾವರಣ, ಸೌಕರ್ಯ, ಶಿಕ್ಷಣ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಲೂ ಒಳ್ಳೆಯ ವೇದಿಕೆ ಕಲ್ಪಿಸಲಾಗಿದೆ ಎಂದು ಹೇಳಿದ ಉಪಕುಲಪತಿಗಳು, ವರ್ಷ ವರ್ಷವೂ ಇಂತಹ ಮೇಳ ಆಯೋಜನೆಗೊಂಡು ಸಾರ್ವಜನಿಕರಿಗೆ ಸಹಾಯವಾಗಲಿ ಎಂದು ಆಶಿಸಿದರು.
ಪ್ರಜಾಪತ್ರಿಕೆ ಸಂಪಾದಕರಾದ ಎಸ್ ನಾಗಣ್ಣನವರು ಸಮಾರಂಭದಲ್ಲಿ ಮಾತನಾಡಿ, ಪ್ರತಿ ಶಾಲೆ, ಕಾಲೇಜುಗಳೂ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಸಜ್ಜಾಗಬೇಕಿದೆ, ಅದಕ್ಕಾಗಿ ಸಂಸ್ಥೆಗಳು ಅಂತಹ ಸಿದ್ದತೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಇಂತಹ ಮೇಳದಿಂದ ಶಿಕ್ಷಣ ಸಂಸ್ಥೆಗಳೂ ಪರಸ್ಪರ ತಾವು ಇತರ ಸಂಸ್ಥೆಗಳಿಗಿಂತಾ ಎಷ್ಟು ಭಿನ್ನ, ಗುಣ ಮಟ್ಟದ ಶಿಕ್ಷಣ ನೀಡಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ವಿಚಾರ ವಿನಿಮಯ ಮಾಡಿಕೊಳ್ಳಲೂ ಪ್ರಯೋಜನವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಅನೇಕ ಶಿಕ್ಷಣ ಸಂಸ್ಥೆಗಳು ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡುತ್ತಿವೆ, ಪ್ರತಿಷ್ಠಿತ ಕಂಪನಿಗಳು ಪ್ರತಿ ವರ್ಷ ಇಂತಹ ಕಾಲೇಜುಗಳಲ್ಲಿ ಕ್ಯಾಂಪಸ್ ಸಂದರ್ಶನ ನಡೆಸಿ ಪ್ರತಿಭಾವಂತರನ್ನು ಆಯ್ಕೆ ಮಾಡಿಕೊಳ್ಳುತ್ತವೆ ಎಂದರು.ಪ್ರಾಥಮಿಕ ಶಿಕ್ಷಣ ಮಕ್ಕಳಿಗೆ ಶ್ರೇಷ್ಠ ಬೂನಾದಿ, ಅಲ್ಲಿ ಕಲಿಯುವ ಭಾಷೆ ಕೂಡಾ ಮುಂದೆ ಮಕ್ಕಳಿಗೆ ನೆರವಿಗೆ ಬರುತ್ತದೆ. ಭಾಷೆಯೂ ಮಖ್ಯ, ಭಾಷೆ ಇದ್ದರೆ ಮಾತ್ರ ತಂತ್ರಜ್ಞಾನ ಬರುತ್ತದೆ ಎಂದು ಹೇಳಿ, ಶಿಕ್ಷಣ ವ್ಯವಸ್ಥೆ ಪ್ರಗತಿದಾಯಕವಾಗಿರಲಿ ಎಂದು ಆಶಿಸಿದರು.
ಮಹಾನಗರ ಪಾಲಿಕೆ ಆಯುಕ್ತ ಟಿ ಭೂಪಾಲ್ ಮಾತನಾಡಿ, ಒಳ್ಳೆಯ ಶಿಕ್ಷಣ ಯಶಸ್ಸಿನ ಕೀಲಿ ಇದ್ದಂತೆ, ಯಾವುದೇ ಸಾಧನೆಗೆ ಶಿಕ್ಷಣ ಪ್ರಮುಖವಾಗುತ್ತದೆ, ಹೀಗಾಗಿ, ಇಂದು ಶಿಕ್ಷಣಕ್ಕೆ ಹೆಚ್ಚು ಮಹತ್ವ ಬಂದಿದೆ ಎಂದರು.ಈ ಮೇಳ ಸದುಪಯೋಗವಾಗಲಿ ಆ ಮೂಲಕ ಮಕ್ಕಳ ಬೆಳವಣಿಗೆಗೆ, ನಗರದ ಅಭಿವೃದ್ಧಿಗೆ ನೆರವಾಗಲಿ ಎಂದು ಹೇಳಿದರು.ಸಂಜೀವಿನಿ ಫೌಂಡೇಷನ್ ಅಧ್ಯಕ್ಷ ಅರುಣ್‍ಕುಮಾರ್, ಪ್ರಜಾಪ್ರಗತಿ ಸಹ ಸಂಪಾದಕ ಟಿ ಎನ್ ಮಧುಕರ್, ಪ್ರಗತಿ ಟಿವಿ ಸಿಇಓ ಶಿಲ್ಪಾ ಸಂಜಯ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಎಜುಕೇಷನ್ ಎಕ್ಸ್‍ಪೋನಲ್ಲಿ ಭಾಗವಹಿಸಿದ ಶಿಕ್ಷಣ ಸಂಸ್ಥೆಗಳು
ಕಾರ್ಡಿಯಲ್ ಇಂಟರ್‍ನ್ಯಾಷನಲ್ ಶಾಲೆ, ಮಾಸ್ಟರ್ಸ್ ಪಿಯು ಕಾಲೇಜು, ಜ್ಞಾನಸರೋವರ ಇಂಟರ್‍ನ್ಯಾಷನಲ್ ರೆಸಿಡೆನ್ಸಿಯಲ್ ಶಾಲೆ, ಜೈನ್ ಪಬ್ಲಿಕ್ ಸ್ಕೂಲ್ ಅಂಡ್ ಪಿಯು ಕಾಲೇಜು, ರೆಡ್‍ಬ್ರೈಡ್ ಇಂಟರ್‍ನ್ಯಾಷನಲ್ ಅಕಾಡೆಮಿ, ನಾರಾಯಣ ಎಜುಕೇಷನಲ್ ಇನ್ಸ್‍ಟಿಟ್ಯೂಷನ್ಸ್, ಶಹೀನಾ ಪಿಯು ಕಾಲೇಜು, ವರಿನ್ ಇಂಟರ್‍ನ್ಯಾಷನಲ್ ರೆಸಿಡೆನ್ಸಿಯಲ್ ಶಾಲೆ, ಸ್ಕೈಬರ್ಡ್ ಆವಿಯೇಷನ್, ಸುಪ್ರೀಂ ಇಂಟರ್‍ನ್ಯಾಷನಲ್ ಸ್ಕೂಲ್, ಸ್ಕಾಲಾಸ್ಟಿಕ್ ಓವರ್‍ಸೀಸ್, ಕುಣಿಗಲ್ ವಾಲಿ ಇಂಟರ್‍ನ್ಯಾಷನಲ್ ಸ್ಕೂಲ್, ಬೇಸ್ ವಿದ್ಯಾನಿಕೇತನ್ ಪಿಯು ಕಾಲೇಜು, ಶ್ರೀ ರೇಣುಕಾ ವಿದ್ಯಾಪೀಠ, ಅನನ್ಯ ಇಂಟರ್‍ನ್ಯಾಷನಲ್ ರೆಸಿಡೆನ್ಸಿಯಲ್ ಸ್ಕೂಲ್, ರಸ್ ಎಜುಕೇಷನ್ ಸ್ಟಡಿ ಎಂಬಿಬಿಎಸ್ ಇನ್ ರಷ್ಯಾ, ಬ್ರೇಡ್‍ಫೋರ್ಡ್ ಆವಿಯೇಷನ್ ಅಕಾಡೆಮಿ, ಅರೆನಾ ಆನಿಮೇಷನ್, ಜ್ಞಾನೋದಯ ಪಬ್ಲಿಕ್ ಸ್ಕೂಲ್,ಅಮೃತಾ ಅಕಾಡೆಮಿ, ಮ್ಯಾಜಿಕ್ ಬ್ರಿಕ್ಸ್ ಟಾಯ್ಸ್, ಆರ್ಯಭಾರತಿ ಪಾಲಿಟೆಕ್ನಿಕ್, ಸರ್ವೊದಯ ಪಿಯು ಕಾಲೇಜು, ಮಹೇಶ್ ಪಿಯು ಕಾಲೇಜು, ಕೆಂಪೇಗೌಡ ರೆಸಿಡೆನ್ಸಿಯಲ್ ಕಾಲೇಜು, ಆಸ್ಟಿನ್ ಕಿಡ್ಸ್, ಶೇಷಾದ್ರಿಪುರಂ ಎಜುಕೇಷನ್ ಟ್ರಸ್ಟ್