ಎಲ್ಲ ಮಕ್ಕಳಿಗೂ ಶಿಕ್ಷಣ ಒದಗಿಸುವ ಉದ್ದೇಶದಿಂದ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಜಾರಿ

ಬೆಂಗಳೂರು

         ಎಲ್ಲ ಮಕ್ಕಳಿಗೂ ಶಿಕ್ಷಣ ಒದಗಿಸುವ ಉದ್ದೇಶದಿಂದ ಜಾರಿಗೆ ತಂದಿರುವ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (ಆರ್ ಟಿಇ) ಯಿಂದ ಲಾಭಕ್ಕಿಂತ, ಶೈಕ್ಷಣಿಕ ವ್ಯವಸ್ಥೆಗೆ ಹಾನಿಯೇ ಹೆಚ್ಚಾಗಿದೆ ಎಂದು ಸಾಮಾಜಿಕ ಶಿಕ್ಷಣ, ಸಾಕ್ಷರತೆ ಹಾಗೂ ಮಾನವ ಸಂಪನ್ಮೂಲ ಸಚಿವಾಲಯದ ಮಾಜಿ ಕಾರ್ಯದರ್ಶಿ ಅನಿಲ್ ಸ್ವರೂಪ್ ಅಭಿಪ್ರಾಯಪಟ್ಟಿದ್ದಾರೆ.

         ಕಿಡೋವೇಟರ್ಸ್ ಸಂಸ್ಥೆ ನಗರದಲ್ಲಿ ಇಂದು ಹಮ್ಮಿಕೊಂಡಿದ್ದ ಅನ್ ಕಾನ್ಫರೆನ್ಸ್ -ಭವಿಷ್ಯದ ಕಲಿಕೆ ಸಮಾವೇಶದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ರಿಟೀಷರು ಭಾರತಕ್ಕೆ ಬಂದು ಹೋದ ನಂತರ ನಮ್ಮ ದೇಶಕ್ಕೆ ಸಾಕಷ್ಟು ಹಾನಿಯಾಗಿದೆ ಎನ್ನಲಾಗುತ್ತಿದೆ. ಆದರೆ, ಈಗಿನ ಆರ್ ಟಿಇ ಕಾಯ್ದೆ ಅದಕ್ಕಿಂತ ಹೆಚ್ಚಿನ ಹಾನಿಯುಂಟುಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು.

          ಆರ್ ಟಿಇ ಕೇವಲ ಶಾಲೆಗಳಲ್ಲಿ ವಿದ್ಯಾರ್ಥಿಗಳ ಭರ್ತಿಗೆ ಉತ್ತೇಜಿಸುತ್ತಿದೆಯೇ ಹೊರತು, ಗುಣಾತ್ಮಕ ಶಿಕ್ಷಣಕ್ಕೆ ಮಹತ್ವ ನೀಡುತ್ತಿಲ್ಲ. ದೆಹಲಿಯಲ್ಲಿ ಕುಳಿತುಕೊಂಡು ಇಡೀ ದೇಶಕ್ಕೆ ಅನ್ವಯವಾಗುವಂತಹ ಒಂದೇ ನೀತಿ ಜಾರಿಗೆ ತರಲು ಸಾಧ್ಯವಿಲ್ಲ. ಪ್ರತಿ ರಾಜ್ಯದಲ್ಲೂ ಶೈಕ್ಷಣಿಕ ವ್ಯವಸ್ಥೆಗಳು ವಿಭಿನ್ನವಾಗಿರುತ್ತದೆ. ಆದ್ದರಿಂದ ಆರ್ ಟಿಇ ಮಕ್ಕಳಿಗೆ ನೆರವಾಗುವ ಬದಲು ಶಿಕ್ಷಣ ವ್ಯವಸ್ಥೆಯನ್ನೇ ಹಾಳು ಮಾಡಿದೆ ಎಂದರು.

          ಶಿಕ್ಷಣಕ್ಕೆ ಸಂಬಂಧಿಸಿದಂತೆ ಸಂದರ್ಭೋಚಿತವಾಗಿ ನಿರ್ಧಾರ ಕೈಗೊಳ್ಳಲು ಆಯಾ ರಾಜ್ಯಗಳಿಗೆ ಅವಕಾಶ ಕಲ್ಪಿಸಬೇಕು. ಅದಕ್ಕೆ ಅಗತ್ಯಬಿದ್ದಲ್ಲಿ ಕೇಂದ್ರ ಸರ್ಕಾರ ಸಲಹೆ ಸೂಚನೆಗಳನ್ನು ನೀಡಬೇಕು. ಎಲ್ಲ ನಿರ್ಧಾರಗಳನ್ನು ತಾವೇ ತೆಗೆದುಕೊಳ್ಳುವುದು ಕೇಂದ್ರ ಸರ್ಕಾರದ ಕೆಲಸವಲ್ಲ. ಆರ್ ಟಿಇ ಕೂಡ ಇಂತಹುದೇ ಒಂದು ತಪ್ಪು ನಿರ್ಧಾರ. ಇಲ್ಲಿಯವರೆಗೆ ಈ ಕಾಯ್ದೆಯಿಂದ ಯಾವುದೇ ಲಾಭವಾಗಿಲ್ಲ ಎಂದು ಕಿಡಿಕಾರಿದರು.

         ಕ್ರಿಯಾಯೋಜನೆ ರೂಪಿಸಬೇಕು: ಶೈಕ್ಷಣಿಕ ಕ್ಷೇತ್ರದಲ್ಲಿ ಇಡೀ ದೇಶಕ್ಕೆ ಅನ್ವಯವಾಗುವಂತೆ ಒಂದೇ ನೀತಿ ಜಾರಿಗೆ ತರಲು ಸಾಧ್ಯವಿಲ್ಲ. ಶಿಕ್ಷಣಕ್ಕೆ ಬೇಕಿರುವುದು ನೀತಿಗಳಲ್ಲ, ಕ್ರಿಯಾಯೋಜನೆಗಳು. ಆದರೆ, ಮಾಧ್ಯಮ ಹಾಗೂ ಜನರು ಕ್ರಿಯಾಯೋಜನೆ ಹಾಗೂ ಕಾರ್ಯಗಳಿಗೆ ಮಹತ್ವ ನೀಡುವ ಬದಲಿಗೆ ನೀತಿಗಳಿಗೆ ಪ್ರಚಾರ ನೀಡುತ್ತವೆ. ಆದ್ದರಿಂದ ಕೇವಲ ನೀತಿಗಳಷ್ಟೇ ರೂಪುಗೊಳ್ಳುತ್ತವೆ, ಅನುಷ್ಠಾನಗೊಳ್ಳುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

        ದೇಶದಲ್ಲಿ ಕರ್ನಾಟಕ ಹಾಗೂ ರಾಜಸ್ತಾನ ರಾಜ್ಯಗಳು ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿವೆ. ಕಳೆದ ವರ್ಷದ ರಾಷ್ಟ್ರೀಯ ಸರ್ವೆಯಲ್ಲಿ ಕೊನೆಯ ಸ್ಥಾನ ಗಳಿಸಿದ್ದ ರಾಜಸ್ತಾನ, ಕಳೆದೊಂದು ವರ್ಷದಲ್ಲಿ ಇತರ ರಾಜ್ಯಗಳನ್ನು ಹಿಂದಿಕ್ಕಿ ಮುಂದೆ ಸಾಗಿದೆ. ಇದಕ್ಕೆ ಆಯಾ ರಾಜ್ಯಕ್ಕೆ ಹೊಂದಿಕೆಯಾಗುವ ಕ್ರಿಯಾಯೋಜನೆಗಳೇ ಕಾರಣ ಎಂದರು.

         ನಾನು 24 ರಾಜ್ಯಗಳಿಗೆ ಪ್ರವಾಸ ಮಾಡಿದ್ದು, ಎಲ್ಲೆಡೆ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡುತ್ತಿರುವರು ಇದ್ದಾರೆ. ಅವರನ್ನು ಗುರುತಿಸಿ, ಒಂದುಗೂಡಿಸಿ ಪರಿಣಾಮಕಾರಿ ಯೋಜನೆಯನ್ನು ಜಾರಿಗೆ ತರಬೇಕು. ಕರ್ನಾಟಕ ರಾಜ್ಯದಲ್ಲಿ ಅಕ್ಷರ ಫೌಂಡೇಷನ್ ಇಂತಹುದೇ ಕೆಲಸಗಳನ್ನು ಮಾಡುತ್ತಿದೆ. ಈಗ ಒಡಿಸ್ಸಾದಲ್ಲೂ ಇದೇ ಫೌಂಡೇಷನ್ ಮಾದರಿಯಲ್ಲಿ ಶಿಕ್ಷಣದ ಪ್ರಗತಿಗೆ ಯೋಜನೆಗಳನ್ನು ರೂಪಿಸಲಾಗಿದೆ ಎಂದರು.

         ಸಮ್ಮೇಳನದಲ್ಲಿ ಕಿಡೋವೇಟರ್ಸ್ ಸಂಸ್ಥಾಪಕಿ ಹಾಗೂ ಸಿಇಒ ಪ್ರಿಯದೀಪ್ ಸಿನ್ಹ, ಸ್ವೀಡನ್ ನ ಕುನ್ ಸ್ಕಪ್ಸಕೋಲನ್ ನ ಅಧ್ಯಕ್ಷರು ಹಾಗೂ ಸಿಇಒ ಸೆಸಿಲಿಯಾ ಕಾರ್ನೆಫೆಲ್ಡ್ ಪಾಲ್ಗೊಂಡಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link