ಬೆಂಗಳೂರು:
ಶೈಕ್ಷಣಿಕ ಪ್ರಗತಿಯಿಂದ ಮಾತ್ರ ಸುಶಿಕ್ಷಿತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಅಭಿಪ್ರಾಯ ಪಟ್ಟರು.
ನಗರದಲ್ಲಿ ಎನ್.ಆರ್. ಕಾಲೋನಿಯ ಶ್ರೀರಾಮಮಂದಿರದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮತ್ತು ಸಪ್ತಋಷಿ ಫೌಂಡೇಷನ್ ವತಿಯಿಂದ ಜಾತಿ, ಮತ ಬೇಧವಿಲ್ಲದೆ ಎಲ್ಲ ಸಮುದಾಯದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿ ಅವರು ಮಾತನಾಡುತ್ತಿದ್ದರು.
ಎಲ್ಲ ಸಮುದಾಯಗಳು ಶೈಕ್ಷಣಿಕವಾಗಿ ಪ್ರಗತಿ ಹೊಂದಿದಾಗ ಮಾತ್ರ ದೇಶದ ಪ್ರಗತಿ ಸಾಧ್ಯ. ಶಿಕ್ಷಣ ನೀಡುವ ಜೊತೆಗೆ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಬೇಕು. ಅಲ್ಲದೆ, ವ್ಯಕ್ತಿ ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎಂದು ಕಾಗೇರಿ ಸಲಹೆ ನೀಡಿದರು. ಈ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕೈಗೊಂಡಿರುವ ಈ ಸಮಾಜಮುಖಿ ಕಾರ್ಯಗಳನ್ನು ಕಾಗೇರಿ ಮುಕ್ತ ಕಂಠದಿಂದ ಪ್ರಶಂಸಿಸಿದರು.
ಅಖಿಲ ಕರ್ನಾಟಕ ಮಹಾಸಭೆ ಕಳೆದ 40 ವರ್ಷಗಳಿಂದಲೂ ವಿದ್ಯಾರ್ಥಿಗಳಿಗೆ ಪ್ರೋತ್ಸಾಹವನ್ನು ಕೊಡುತ್ತಾ ಬಂದಿದೆ, ಮಹಾಸಭೆ ಇತಿಹಾಸವನ್ನು ನೋಡಿದಾಗ ವಿದ್ಯಾರ್ಥಿಗಳಿಗೆ, ಬಡವರಿಗೆ, ಮಧ್ಯಮ ವರ್ಗದವರಿಗೆ ಪ್ರತಿಭಾವಂತರು ಶಿಕ್ಷಣಕ್ಕೆ ಯಾವುದೇ ರೀತಿಯ ಸಹಾಯವನ್ನು ಕೇಳಿದರೂ ನಾವಿದ್ದೇವೆ ನಿಮ್ಮ ಪ್ರೋತ್ಸಾಹಕ್ಕೆ ಎನ್ನುತ್ತಾ ಮಹಾಸಭೆ ಅಗತ್ಯ ಪ್ರೋತ್ಸಾಹ ನೀಡುತ್ತಿದೆ.
ಮಹಿಳಾ ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್ ಮಾಡಿದೆ, ಶಿಕ್ಷಣದ ನಂತರವೂ ಸಹ ಉದ್ಯೋಗಕ್ಕೆ ಸಂಬಂಧಿಸಿದಂತೆ ಸಲಹೆ ಸೂಚನೆಗಳನ್ನು ನೀಡುತ್ತಿದ್ದು, ಹೀಗೆ ಹತ್ತು ಹಲವು ರೀತಿಯಲ್ಲಿ ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ಮಹಾಸಭಾ ಕೆಲಸ ಮಾಡುತ್ತಿದೆ. ಪ್ರತಿಭಾ ಪುರಸ್ಕಾರ ಪಡೆದ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಜತೆಗೆ ಅವರ ಪಾಲಕರು ಮತ್ತು ಶಿಕ್ಷಕ ವರ್ಗವನ್ನು ಅಭಿನಂದಿಸುವುದಾಗಿ ಕಾಗೇರಿ ಇದೇ ವೇಳೆ ಹೇಳಿದರು.
ಏಕಾಗ್ರತೆ ಮತ್ತು ಛಲವನ್ನು ರೂಢಿಸಿಕೊಂಡಿದ್ದರಿಂದ ನಿಮಗೆ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಹೇಳಿದ ಅವರು, ಇಂದಿನ ದಿನಗಳಲ್ಲಿ ಮೊಬೈಲ್ ಬಿಟ್ಟಿರಲು ಸಾಧ್ಯವೇ ಇಲ್ಲ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಆ ಮೊಬೈಲ್, ಟಿವಿಗಳನ್ನು ಬಿಟ್ಟು ಛಲದಿಂದ ಈ ಸಾಧನೆ ಮಾಡಿರುವುದು ಪ್ರಶಂಸನಾರ್ಹ, ಇಂದು ವಿಜ್ಞಾನಕ್ಕೆ ಹೆಚ್ಚು ಪ್ರಾಮುಖ್ಯತೆ ಇದೆ ಅದೇ ಕಾರಣಕ್ಕೆ ತಾವು ಶಿಕ್ಷಣ ಸಚಿವರಾಗಿದ್ದ ಸಂದರ್ಭದಲ್ಲಿ ಹೆಚ್ಚಿನ ವಿಜ್ಞಾನ ಕಾಲೇಜುಗಳನ್ನು ತೆರೆಯಲಾಗಿತ್ತು ಎಂದರು.
ವಿಜ್ಞಾನಕ್ಕೆ ನಮ್ಮ ಪೂರ್ವಜರು ಹೆಚ್ಚಿನ ಆದ್ಯತೆ ನೀಡಿದ್ದರು, ನಮ್ಮ ಋಷಿಮುನಿಗಳು, ತಪಸ್ವಿಗಳು ಸಾಧನೆಯನ್ನು ಮಾಡಿದ್ದಾರೆ ಎಂದು ನಾವು ಅಭಿಮಾನಿಸುತ್ತೇವೆ, ಅಂತಹದ್ದರ ಹಿಂದೆ ವಿಜ್ಞಾನವೇ ಇದೆ. ಖಗೋಳ ಶಾಸ್ತ್ರ, ಆಯುರ್ವೇಧ, ಯೋಗ, ಇವೆಲ್ಲಾ ಮೂಲ ವಿಜ್ಞಾನವೇ ಆಗಿದೆ. ಭಾರತದ ಉಕ್ಕು, ಕಬ್ಬಿಣ, ಬಟ್ಟೆ ಇವೆಲ್ಲವೂ ಸರ್ವ ಶ್ರೇಷ್ಠವೇ ಆಗಿತ್ತು. ಬ್ರೀಟೀಷರ ಗುಲಾಮಿತನದ ಆಳ್ವಿಕೆ ವೇಳೆ ಈ ಶಿಕ್ಷಣ ಪದ್ಧತಿ ಜಾರಿಗೆ ಬಂದಿದ್ದು, ನಾವು ಮೂಲ ವಿಜ್ಞಾನವನ್ನೇ ಮರೆತು ಮುಂದುವರಿದಿರುವ ಪರಿಣಾಮ ಇಂದು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ.
ಈ ನಿಟ್ಟಿನಲ್ಲಿ ಶಿಕ್ಷಣ ತಜ್ಞ ನಾಗರಾಜ್ ಅವರು ಮಾಡುತ್ತಿರುವ ಕೆಲಸ ಶ್ಲಾಘನೀಯ ಎಂದು ಕಾಗೇರಿ ಅವರು ಹೇಳಿದರು.ಸಮಾರಂಭದಲ್ಲಿ ಬಸವನಗುಡಿ ಕ್ಷೇತ್ರದ ಶಾಸಕ ರವಿಸುಬ್ರಹ್ಮಣ್ಯ, ಶಿಕ್ಷಣ ತಜ್ಞ ಡಾ.ಹೆಚ್.ಎಸ್. ನಾಗರಾಜ್, ಎಕೆಬಿಎಂಎಸ್ ಅಧ್ಯಕ್ಷ ಕೆ.ಎನ್ ವೆಂಕಟನಾರಾಯಣ್, ಹಿರಿಯ ಪದಾಧಿಕಾರಿಗಳಾದ ಆರ್.ಲಕ್ಷ್ಮಿಕಾಂತ್, ಮಾಲಿನಿ, ಖಜಾಂಚಿ ಕೆ. ರಾಮಕೃಷ್ಣ, ಕಾರ್ಯದರ್ಶಿ ಕೆ.ರಾಮ್ ಪ್ರಸಾದ್, ಹಲವು ಪ್ರಮುಖರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
