ಶಿಕ್ಷಣ ಸಂಸ್ಕಾರ ಕಲಿಸಿ ಕೊಡಬೇಕು : ಸಾಣೇಹಳ್ಳಿಶ್ರೀ

ಸಾಣೇಹಳ್ಳಿ

     ಸಮಾಜಕ್ಕೆ ಏನನ್ನು ಕೊಡದಿದ್ದರೂ ಪರವಾಗಿಲ್ಲ; ತಮ್ಮ ತಂದೆ-ತಾಯಿಗಳನ್ನು ಅಗೌರವದಿಂದ ನೋಡಿಕೊಳ್ಳದಿದ್ದರೆ ಸಾಕು ಎನ್ನುವ ದುಃಸ್ಥಿತಿಗೆ ಇಂದು ಸಮಾಜ ಬಂದಿದೆ. ತಂದೆ-ತಾಯಿಗಳನ್ನು, ಹಿರಿಯರನ್ನು ಗೌರವಿಸದ ಶಿಕ್ಷಣ ನಮಗೆ ಬೇಡ. ಶಿಕ್ಷಣ ನಮ್ಮನ್ನು ಸುಸಂಸ್ಕತರನ್ನಾಗಿ ಮಾಡಬೇಕು ಎಂದು ಶ್ರೀ ಪಂಡಿತಾರಾಧ್ಯ ಶ್ರೀಗಳು ತಿಳಿಸಿದರು.

      ಇಲ್ಲಿನ ಶ್ರೀ ಶಿವಕುಮಾರ ಸ್ವಾಮಿಜಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಶ್ರೀ ಗುರುಪಾದೇಶ್ವರ ಪ್ರೌಢಶಾಲೆಗಳ ವಿದ್ಯಾರ್ಥಿ ಸಂಘಗಳ ಸಮಾರೋಪ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಮರಕ್ಕಿಂತ ಹೆಚ್ಚು ಕಾಳಜಿವಹಿಸಿ ಬೆಳೆಸುವ ನಮ್ಮ ಮಕ್ಕಳು ಪ್ರತಿಯಾಗಿ ಸಮಾಜಕ್ಕೆ ಏನು ಕೊಡುತ್ತಿದ್ದಾರೆ ಎನ್ನುವುದನ್ನು ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಓದಿನ ಜೊತೆಗೆ ಸಮಾಜದ ಕಾಳಜಿಯೂ ಇರಬೇಕು. ಇಂದಿನ ವಿದ್ಯಾರ್ಥಿಗಳು ಓದಿನಲ್ಲಿ ತುಂಬ ಬುದ್ಧಿವಂತರು; ಆದರೆ ನೈತಿಕವಾಗಿ ಕುಸಿಯುತ್ತಿದ್ದಾರೆ. ಇಂದಿನ ಪೀಳಿಗೆಗೆ ಮೊಬೈಲ್ ಗೀಳು ಹಿಡಿದಿದೆ. ಮೊಬೈಲ್ ಒಳ್ಳೆಯದೇ; ಸರಿಯಾಗಿ ಬಳಕೆಯಾದರೆ ಎಂದು ಹೇಳಿದರು.

        ವಿದ್ಯಾರ್ಥಿಗಳು ಸುಸಂಸ್ಕತರಾಗಬೇಕಾದರೆ ಶಿಕ್ಷಕರೂ ಸುಸಂಸ್ಕತರಾಗಿರಬೇಕು. ಶಿಕ್ಷಕರು ಚೆನ್ನಾಗಿ ಪಾಠ ಮಾಡಿದರೆ ಸಾಲದು; ಅವರ ವ್ಯಕ್ತಿತ್ವವೂ ಗಟ್ಟಿಯಾಗಿರಬೇಕು. ವಿದ್ಯಾರ್ಥಿಗಳ ಜವಾಬ್ದಾರಿಯನ್ನು ಕೇವಲ ಶಿಕ್ಷಕರ ಮೇಲೆ ಹಾಕದೆ ಪೋಷಕರು ಕಾಲಕಾಲಕ್ಕೆ ಶಾಲೆಗೆ ಬಂದು ವಿಚಾರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಯಾವ ಮಕ್ಕಳೂ ದಡ್ಡರಲ್ಲ. ಭಗವಂತ ಎಲ್ಲರಿಗೂ ಒಂದೇ ರೀತಿಯ ಮೆದುಳನ್ನು ನೀಡಿದ್ದಾನೆ. ಆ ಮೆದುಳನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕಾದ ಜವಾಬ್ದಾರಿ ಆಯಾಯ ವ್ಯಕ್ತಿಗಳ ಮೇಲೆಯೇ ಇರುತ್ತದೆ. ಪ್ರಳಯಾಂತಕ ಮೆದುಳಾಗದೆ ಸಮಾಜಕ್ಕೆ ಬೆಳಕನ್ನು ನೀಡುವ ಬೆಳಕಾಗಬೇಕು.

       ನಮ್ಮ ಶಿಕ್ಷಣ ವ್ಯವಸ್ಥೆ ಕೇವಲ ಬುದ್ಧಿವಂತರನ್ನಾಗಿ ಮಾಡುತ್ತಿದೆ. ಹಣಗಳಿಕೆಯೊಂದೇ ಶಿಕ್ಷಣದ ಗುರಿಯಾಗಿದೆ. ಹಣ ಎಂದಿಗೂ ನೆಮ್ಮದಿ ಕೊಡಲು ಸಾಧ್ಯವಿಲ್ಲ. ಮೊದಲ ಸ್ಥಾನ ಗುಣಕ್ಕೆ, ನಂತರದ ಸ್ಥಾನ ಹಣಕ್ಕೆ ನೀಡಬೇಕು. ಗುಣಿಯಾದವನು ಹಣವನ್ನು ಸದ್ಬಳಕೆ ಮಾಡಿದರೆ ದುರ್ಗುಣಿ ಅವಿವೇಕದ ಕಾರ್ಯಗಳಿಗೆ ಬಳಸುವನು. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ವಿವೇಕವನ್ನು ಕಲಿಸುವ ಕೆಲಸವನ್ನು ಶಿಕ್ಷಣ ಕ್ಷೇತ್ರ ಮಾಡಬೇಕಿದೆ. . ಸಾಂಸ್ಕತಿಕ ವ್ಯಕ್ತಿತ್ವ ವ್ಯಕ್ತಿಯನ್ನು ತಲೆಯೆತ್ತಿ ಬಾಳುವಂತೆ ಮಾಡುತ್ತದೆ. ಇಂಥ ಸಾಂಸ್ಕøತಿಕ ಮನಸ್ಸು ಪ್ರತಿಯೊಬ್ಬರಲ್ಲೂ ಬರಬೇಕು ಎಂದರು.

        ಸಮಾರೋಪ ನುಡಿ ನುಡಿದ ಕಡೂರು ದೀಕ್ಷಾ ವಿದ್ಯಾಮಂದಿರದ ಕಾರ್ಯದರ್ಶಿ ಎನ್ ಪಿ ಮಂಜುನಾಥ್ ಪ್ರಸನ್ನ ಈ ಸಂಸ್ಥೆಯಲ್ಲಿ ಜಾತಿ, ಧರ್ಮ, ಭಾಷೆಗಳ ತರತಮವಿಲ್ಲದೆ ಅನ್ನದಾಸೋಹ ಮತ್ತು ಅಕ್ಷರ ದಾಸೋಹ ನಿರಂತರವಾಗಿ ನಡೆಯುತ್ತಿದೆ. ಇದು ಇನ್ನಿತರೆ ಸಂಸ್ಥೆಗಳಿಗೆ ಮಾದರಿಯಾದುದು. ಇಂದು ಆಧುನಿಕ ತಂತ್ರಜ್ಞಾನದ ಫಲವಾಗಿ ವಿಶ್ವವೇ ಚಿಕ್ಕ ಹಳ್ಳಿಯಂತಾಗಿದೆ.

        ಅನ್ಯ ದೇಶದ ಜನರ ಜೊತೆ ಅತ್ಯಂತ ಸುಗಮವಾಗಿ ಗಂಟೆಗಟ್ಟಲೆ ಮಾತನಾಡುತ್ತಿದ್ದೇವೆ. ಆದರೆ ನಮ್ಮ ಪಕ್ಕದ ಮನೆಯ, ನಮ್ಮ ಹತ್ತಿರದ ಬಂಧುವಿನ ಜೊತೆ ಕನಿಷ್ಟ ಮಾನವೀಯತೆಯಿಂದಲೂ ವರ್ತಿಸದಿರುವುದು ದುರದೃಷ್ಟಕರ ಸಂಗತಿ. ಹಣ, ಕೀರ್ತಿ, ಪದವಿ, ಸಂಪತ್ತು, ಅಧಿಕಾರಗಳನ್ನು ಗಳಿಸಿಕೊಂಡಿದ್ದೇವೆ; ಆದರೆ ಮನೆಯಲ್ಲಿಯನ ತಂದೆ-ತಾಯಿ-ಅಜ್ಜ-ಅಜ್ಜಿ ಮುಂತಾದ ಮಾನವೀಯ ಸಂಬಂಧಗಳನ್ನೇ ಕಳೆದುಕೊಳ್ಳುತ್ತಿದ್ದೇವೆ.

        ತಂದೆ-ತಾಯಿಗಳ ಬಗೆಗಿನ ಗೌರವವನ್ನೇ ಕಳೆದುಕೊಳ್ಳುತ್ತಿದ್ದೇವೆ. ಇದು ಅತ್ಯಂತ ದುರಂತದ ಸಂಗತಿ. ಹೀಗಾಗದಂತೆ ಕಾಪಾಡಿಕೊಳ್ಳುವ ಹೊಣೆಗಾರಿಕೆ ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿಗಳು ಮತ್ತು ಪೋಷಕರ ಮೇಲಿದೆ ಎಂದರು.

       ಹೊಸದುರ್ಗ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಂ ಪರಮೇಶ್ವರಪ್ಪ ಮಾತನಾಡಿ ಮಕ್ಕಳಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ಶಾಲಾ ವಾರ್ಷಿಕೋತ್ಸವ ಒಂದು ವೇದಿಕೆಯನ್ನು ರೂಪಿಸಿಕೊಡುತ್ತಿದೆ. ಕಲಿಕೆ ಕೇವಲ ಅಕ್ಷರಜ್ಞಾನವಷ್ಟೇ ಅಲ್ಲ; ಸಾಂಸ್ಕøತಿಕ ಕಲಿಕೆಯೂ ಬಹಳ ಮುಖ್ಯ. ಪೋಷಕರು ಕೇವಲ ಮಕ್ಕಳಿಂದ ಹಣಗಳಿಸುವ ನಿರೀಕ್ಷೆಗಳನ್ನು ಮಾತ್ರ ಇಟ್ಟುಕೊಳ್ಳದೆ ಅವರ ಸೃಜನಾತ್ಮಕ ಶಕ್ತಿಯನ್ನು ಗುರುತಿಸಿ ಅದಕ್ಕೆ ತಕ್ಕಂತಹ ವಾತಾವರಣವನ್ನು ನಿರ್ಮಿಸುವ ಅವಶ್ಯಕತೆ ಇದೆ. ಪೋಷಕರ ಆಸೆಗಳನ್ನು ಮಕ್ಕಳ ಮೇಲೆ ಒತ್ತಾಯಪೂರ್ವಕವಾಗಿ ಹೇರಬಾರದು. ಅಬ್ದುಲ್ ಕಲಾಮ್, ರಾಧಾಕೃಷ್ಣನ್, ಎಡಿಸನ್‍ರಂತಹ ವ್ಯಕ್ತಿಗಳು ನಮಗೆ ಆದರ್ಶಪ್ರಾಯವಾಗಬೇಕು.

       ಸಮೂಹ ಮಾಧ್ಯಮಗಳು ಇಂದು ಸಕ್ರಿಯವಾಗಿದ್ದರೂ ಅವುಗಳನ್ನು ತಪ್ಪಾಗಿ ಬಳಕೆ ಮಾಡಿಕೊಳ್ಳುತ್ತಿರುವುದು ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ಪೋಷಕರು ಅತ್ಯಂತ ಎಚ್ಚರಿಕೆಯಿಂದ ವರ್ತಿಸಬೇಕು. ಶಿಕ್ಷಣ ಕೇವಲ ಉದ್ಯೋಗಕ್ಕಾಗಿ ಅಲ್ಲ; ಆತ್ಮೋನ್ನತಿಗೆ ಇರುವಂಥದ್ದು. ಶಿಕ್ಷಣಕ್ಕೆ ಎಂದೂ ರಜೆಯಿರುವುದಿಲ್ಲ; ವಿರಾಮ ಮಾತ್ರ ಇರುತ್ತದೆ. ಮನುಷ್ಯರಾದ ನಾವು ಪರೋಪಕಾರ ಮತ್ತು ಸಮಾಜಮುಖಿ ಚಿಂತನೆಗಳನ್ನು ಮಾಡಿ ಅದಕ್ಕನುಗುಣವಾದ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕಾದ ತುರ್ತು ಅಗತ್ಯವಿದೆ ಎಂದರು.

       ಶ್ರೀ ಶಿವಕುಮಾರ ಸ್ವಾಮೀಜಿ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಡಿ ವಿ ಗಂಗಾಧರಪ್ಪ ಮಾತನಾಡಿ ಇಲ್ಲಿ ಓದಿದ ವಿದ್ಯಾರ್ಥಿಗಳಿಗೆ ಮುಂದೆ ಏನೆಲ್ಲ ಆಗುವ ಅವಕಾಶವಿದೆ. ವಿದ್ಯಾರ್ಥಿಗಳು ಖಾಲಿ ಚೀಲವಿದ್ದಂತೆ ಅದರಲ್ಲಿ ಏನು ತುಂಬಬೇಕೆನ್ನುವ ವಿವೇಕ ಶಿಕ್ಷಕರಿಗೆ ಇರಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ವಿಶೇಷ ಪ್ರತಿಭೆ ಇದ್ದೇ ಇರುತ್ತದೆ. ಅದನ್ನು ಗುರುತಿಸುವ ಗುಣ ಶಿಕ್ಷಕರಿಗೆ ಇರಬೇಕು. ಪೂಜ್ಯರು ಕ್ರಿಯಾಶೀಲರಾಗಿರುವಂತೆ ನಾವೂ ಕ್ರಿಯಾಶೀಲರಾಗಿ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದರು.
ಹೊಸದುರ್ಗ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿ ಕೆ ಸಿ ಶಶಿಧರ, ಶ್ರೀ ಗುರುಪಾದೇಶ್ವರ ಪ್ರೌಢಶಾಲೆಯ ಸ್ಥಳೀಯ ಸಲಹಾ ಸಮಿತಿಯ ಉಪಾಧ್ಯಕ್ಷ ಕೆ ಎನ್ ಯೋಗೇಶಪ್ಪ  ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link