ಚಿತ್ರದುರ್ಗ:
ತಂದೆ-ತಾಯಿ, ಗುರು ಹಿರಿಯರನ್ನು ಗೌರವಿಸುವ ಸಂಸ್ಕಾರ ಕಲಿಯದಿದ್ದರೆ ಎಷ್ಟೆ ಪದವಿ ಎಂತಹ ದೊಡ್ಡ ಹುದ್ದೆಗಳನ್ನು ಅಲಂಕರಿಸಿದರೂ ಪ್ರಯೋಜನವಿಲ್ಲ ಎಂದು ಶಾರದಾ ರಾಮಕೃಷ್ಣ ಆಶ್ರಮದ ಬ್ರಹ್ಮನಿಷ್ಟಾನಂದಸ್ವಾಮೀಜಿ ವಿದ್ಯಾರ್ಥಿಗಳನ್ನು ಜಾಗೃತಿಗೊಳಿಸಿದರು.
ಜಿಲ್ಲಾಡಳಿತ, ಜಿ.ಪಂ., ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಸರ್ಕಾರಿ ಕಲಾ ಕಾಲೇಜಿನಲ್ಲಿ ಶುಕ್ರವಾರ ನಡೆದ ಸ್ವಾಮಿವಿವೇಕಾನಂದರ ಜಯಂತಿ ಹಾಗೂ ಯುವ ಸಮ್ಮೇಳನದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸ್ವಾಮಿವಿವೇಕಾನಂದರು ಎತ್ತರಕ್ಕೆ ಏರಿ ಜಗತ್ತು ತನ್ನ ಕಡೆ ನೋಡುವಷ್ಟರ ಮಟ್ಟಿಗೆ ಬೆಳೆದರೆಂದರೆ ಅದಕ್ಕೆ ಅವರ ತಂದೆ ತಾಯಿ ಮತ್ತು ಗುರುಗಳಿಗೆ ನೀಡುತ್ತಿದ್ದ ಗೌರವವೆ ಕಾರಣವಾಗಿತ್ತು. ರಾಮಕೃಷ್ಣಪರಮಹಂಸರು ಸ್ವಾಮಿವಿವೇಕಾನಂದರಂತ ಅಪಾರ ಶಿಷ್ಯಂದಿರನ್ನು ತಯಾರು ಮಾಡಿದರು.
ಭಾರತ ಮಾತೆಯನ್ನು ಮೇಲೆ ಎತ್ತಿದ್ದೇನೆ. ಅದನ್ನು ಕಾಪಾಡಿಕೊಂಡು ಹೋಗುವ ಜವಾಬ್ದಾರಿ ಯುವಕರ ಮೇಲಿದೆ. ನಮ್ಮ ದೇಶದ ಯುವ ಪೀಳಿಗೆ ಮೇಲೆ ಅವರಿಗೆ ಅಷ್ಟೊಂದು ನಂಬಿಕೆಯಿತ್ತು.ಸೆ.11 1893 ರಲ್ಲಿ ಸ್ವಾಮಿವಿವೇಕಾನಂದರು ಅಮೇರಿಕಾದ ಚಿಕಾಗೋದಲ್ಲಿ ಭಾಷಣ ಮಾಡಿ ಭಾರತದ ಶಕ್ತಿ ಏನೆಂಬುದನ್ನು ಜಗತ್ತಿಗೆ ತೋರಿಸಿಕೊಟ್ಟರು. 28 ವರ್ಷಕ್ಕೆ ವಿವೇಕಾನಂದರು ಅಮೇರಿಕಾ ಗೆದ್ದರು. ಸನ್ಯಾಸಿ ಜೀವನ ಸುಲಭವಲ್ಲ. ಆದ ಮೇಲೆ ಕಷ್ಟವಾಗುವುದಿಲ್ಲ. ಸ್ವಾಮಿವಿವೇಕಾನಂದರ ಪುಸ್ತಕ ಓದಿದರೆ ಸನ್ಯಾನಿಸಗಳಾಗುತ್ತೇವೆಂಬ ತಪ್ಪು ಕಲ್ಪನೆ ತಲೆಯಲ್ಲಿದ್ದರೆ ತೆಗೆದು ಹಾಕಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಸಾಮಾನ್ಯರ ಕೈಯಿಂದ ಅಸಮಾನ್ಯ ಕೆಲಸವಾಗುತ್ತದೆ ಎಂಬುದನ್ನು ಇಡೀ ಜಗತ್ತಿಗೆ ತೋರಿಸಿಕೊಟ್ಟ ಸ್ವಾಮಿ ವಿವೇಕಾನಂದರಲ್ಲಿ ದೇಶಭಕ್ತಿಯಿತ್ತು. ಆದರೆ ಇಂದಿನ ಯುವ ಪೀಳಿಗೆಯಲ್ಲಿ ದೇಶಭಕ್ತಿ ಕಡಿಮೆಯಾಗುತ್ತಿದೆ. ಮೊಬೈಲ್, ವಾಟ್ಸ್‍ಪ್, ಫೇಸ್‍ಬುಕ್‍ಗಳ ಮೇಲೆ ವ್ಯಾಮೋಹ ಜಾಸ್ತಿಯಾಗಿದೆ. ದಿನಕ್ಕೆ ಯಾರು ನಾಲ್ಕು ಗಂಟೆಗಳ ಕಾಲ ಮೊಬೈಲ್‍ನಲ್ಲಿ ಮಾತನಾಡುತ್ತಾರೋ ಅಂತಹವರು ಬ್ರೈನ್‍ಟೂಮರ್‍ಗೆ ತುತ್ತಾಗಬೇಕಾಗುತ್ತದೆ.
ಕೇವಲ ಪರೀಕ್ಷೆಯಲ್ಲಿ ಫೇಲ್ ಆದರೆ ಆತ್ಮಹತ್ಯೆ ಮಾಡಿಕೊಳ್ಳುವಂತ ಹೇಡಿತನಕ್ಕೆ ಮಾತ್ರ ಕೈಹಾಕಬೇಡಿ. ಸಾಧನೆ ಮಾಡಲು ಶಿಕ್ಷಣವೊಂದೆ ಮುಖ್ಯವಲ್ಲ. ಚಿಕ್ಕಂದಿನಲ್ಲಿ ಮನೆ ಮನೆಗೆ ಪತ್ರಿಕೆ ಹಂಚುತ್ತಿದ್ದ ಬಾಲಕ ಅಬ್ದುಲ್ ಕಲಾಂ ಜಗತ್ತಿನ ಐದು ವಿಜ್ಞಾನಿಗಳಲ್ಲಿ ಒಬ್ಬರಾಗಿ ಕೊನೆಗೆ ದೇಶದ ಅತ್ಯುನ್ನತ ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಿದರು. ಟೀಮಾರುತ್ತಿದ್ದ ಹುಡುಗ ಮೋದಿ ದೇಶದ ಪ್ರಧಾನಿಯಾಗಿದ್ದಾರೆ.
ಅಂಗವಿಕಲೆ ಅರುಣಿಮಸಿಂಗ್ ಕೈಲಾಗುವುದಿಲ್ಲ ಎಂದು ಸುಮ್ಮನೆ ಕುಳಿತಿದ್ದರೆ ಹಿಮಾಲಯ ಹತ್ತುತ್ತಿರಲಿಲ್ಲ. ಚಿತ್ರದುರ್ಗ ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಮಂಜುಶ್ರಿಗೆ ಎಡಗಾಲು ಪಾದವೇ ಇಲ್ಲ. ಐ.ಎ.ಎಸ್.ಪಾಸ್ ಮಾಡಿ ಈಗ ಮಂಡ್ಯ ಜಿಲ್ಲಾಧಿಕಾರಿಯಾಗಿದ್ದಾರೆ. ನಾಲ್ಕಾರು ಮನೆಯಲ್ಲಿ ಪಾತ್ರೆ ತೊಳೆಯುತ್ತಿದ್ದ ಮೇಡಂ ಕ್ಯೂರಿ, ಬರಾಕ್‍ಒಬಾಮ, ಅಬ್ರಾಹಂಲಿಂಕನ್ ಇವರುಗಳು ಸಾಧನೆ ಮಾಡಿ ಅಧಿಕಾರವೇರಿದರು ನಿಮ್ಮ ಕೈಯಲ್ಲಿ ಏಕೆ ಸಾಧನೆ ಮಾಡಲು ಆಗುವುದಿಲ್ಲ. ಎಲ್ಲದಕ್ಕೂ ದೃಢವಾದ ಮನಸ್ಸು ಬೇಕು ಎಂದು ವಿದ್ಯಾರ್ಥಿಗಳನ್ನು ಬಡಿದೆಬ್ಬಿಸಿದರು.ಸರ್ಕಾರಿ ಕಲಾ ಕಾಲೇಜು ಪ್ರಾಂಶುಪಾಲರಾದ ಪ್ರೊ.ಟಿ.ಎಲ್.ಸುಧಾಕರ್ ಅಧ್ಯಕ್ಷತೆ ವಹಿಸಿದ್ದರು.
ಯುವಜನ ಸೇವಾಧಿಕಾರಿ ಕೆ.ನಾಗರಾಜ್, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಹೆಚ್.ಗುಡ್ಡದೇಶ್ವರಪ್ಪ, ಪ್ರೊ.ಎಲ್.ನಾಗರಾಜ್, ಪ್ರೊ.ರಂಗಸ್ವಾಮಿ, ಡಾ.ಹೆಚ್.ಬಸವರಾಜ್, ಎಂ.ಟಿ.ಸಾಧಿಕ್ ಇನ್ನು ಮುಂತಾದವರು ವೇದಿಕೆಯಲ್ಲಿದ್ದರು.ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಪ್ರೊ.ಎಲ್.ನಾಗರಾಜಪ್ಪ ಸ್ವಾಗತಿಸಿದರು. ಡಾ.ಹೆಚ್.ಬಸವರಾಜ್ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ