ತುಮಕೂರು
ಗುಬ್ಬಿ ತಾಲ್ಲೂಕು ನಿಟ್ಟೂರಿನಲ್ಲಿ ಅಕ್ರಮ ಚಟುವಟಿಕೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದರಿಂದ ಹೆಂಗಸರು, ಮಕ್ಕಳು ರಸ್ತೆಯಲ್ಲಿ ಓಡಾಡಲು ಸಾಧ್ಯವಾಗದಂತಹ ದುಸ್ಥಿತಿ ನಿರ್ಮಾಣವಾಗಿದೆ.
ಹೋಬಳಿ ಕೇಂದ್ರವಾಗಿರುವ ನಿಟ್ಟೂರಿನಲ್ಲಿ ಪೊಲೀಸರಿಲ್ಲದೆ ಇರುವುದೆ ಇಂತಹ ಅಕ್ರಮ ಚಟುವಟಿಕೆಗಳು ತಲೆ ಎತ್ತಲು ಕಾರಣವಾಗಿದೆ. ಜೂಜುಕೋರರ ಹಾಗೂ ಕುಡುಕರ ಹಾವಳಿಯಿಂದ ಸಾರ್ವಜನಿಕರು ಬೇಸತ್ತಿದ್ದಾರೆ. ಇಂತಹವರ ವಿರುದ್ಧ ಪೊಲೀಸರು ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು. ಇಲ್ಲದೆ ಹೋದರೆ ಇವರ ಹಾವಳಿ ಇನ್ನಷ್ಟು ಹೆಚ್ಚುವುದರ ಮೂಲಕ ಸಾರ್ವಜನಿಕರ ನೆಮ್ಮದಿಗೆ ಭಂಗ ಬರುತ್ತದೆ ಎಂಬುದು ಸಾರ್ವಜನಿಕರ ನೋವಿನ ಸಂಗತಿಯಾಗಿದೆ.
ಕೆಲವು ಭಾಗಗಳಲ್ಲಿ ಬೆಟ್ಟಿಂಗ್ ದಂಧೆಯೂ ನಡೆಯುತ್ತಿದೆ. ಯುವಕರು ದುಶ್ಚಟಗಳಿಗೆ ಬಲಿಯಾಗುವುದರ ಮೂಲಕ ತಮ್ಮ ಅಮೂಲ್ಯ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಮರ್ಯಾದಸ್ಥರಂತೂ ರಸ್ತೆಯಲ್ಲಿ ಓಡಾಡಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಅಕ್ರಮ ಚಟುವಟಿಕೆಗಳ ವಿರುದ್ಧ ಪೊಲೀಸ್ ವರಿಷ್ಠಾಧಿಕಾರಿಗಳು ಕೂಡಲೆ ಗಮನ ಹರಿಸುವುದರ ಮೂಲಕ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇಲ್ಲದೆ ಹೋದರೆ ಇನ್ನಷ್ಟು ಮಂದಿ ಇಂತಹ ಅಕ್ರಮ ಚಟುವಟಿಕೆಗಳಿಗೆ ಬಲಿಯಾಗುವುದರಲ್ಲಿ ಅನುಮಾನವಿಲ್ಲ ಎಂದು ಪೊಲೀಸ್ ವರಿಷ್ಠಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
