ಎಗ್ಗಿಲ್ಲದೆ ನಡೆಯುತ್ತಿರುವ ನಾಟಿಕೋಳಿ ವ್ಯಾಪಾರ

ತುರುವೇಕೆರೆ

       ಪಟ್ಟಣದ ಪ್ರತಿಷ್ಠಿತ ಸಸ್ಯಾಹಾರಿ ರಾಘವೇಂದ್ರ ಹೋಟೆಲ್ ಮುಂಭಾಗದಲ್ಲೇ ನಾಟಿಕೋಳಿ ವ್ಯಾಪಾರ ಎಗ್ಗಿಲ್ಲದೆ ನಡೆಯುತ್ತಿದ್ದು ನಾಗರೀಕರು ಮುಜುಗರಪಡುವಂತಾಗಿದೆ.

        ಇತ್ತೀಚೆಗೆ ಮೈಸೂರಿನಲ್ಲಿ ತುರುವೇಕೆರೆ ನಾಟಿಕೋಳಿಗಳಿಗೆ ಡಿಮ್ಯಾಂಡ್ ಜಾಸ್ತಿಯಿರುವುದರಿಂದ ಮೈಸೂರಿನಿಂದ ಹೆಚ್ಚು ಹೆಚ್ಚು ವ್ಯಾಪಾರಿಗಳು ಕೋಳಿಗಳನ್ನು ಕೊಳ್ಳಲು ತುರುವೇಕೆರೆ ಪಟ್ಟಣಕ್ಕೆ ಬರುತ್ತಿದ್ದಾರೆ. ಪ್ರತಿ ಸೋಮವಾರ ಪಟ್ಟಣದಲ್ಲಿ ಸಂತೆ ನಡೆಯುವುದರಿಂದ ಪ್ರತಿ ಸೋಮವಾರ ಮೈಸೂರಿನಿಂದ ವ್ಯಾಪಾರಿಗಳು ಬೆಳಿಗ್ಗೆನೆ ಹಾಜರಿರುತ್ತಾರೆ. ಇಲ್ಲಿ ಕೊಳ್ಳುವ ನಾಟಿ ಕೋಳಿಗಳು ಮೈಸೂರಿನಲ್ಲಿ ಹೆಚ್ಚು ಬೆಲೆಗೆ ಮಾರಾಟವಾಗುತ್ತವೆ.

        ಇಲ್ಲಿ ರೈತನಿಂದ ಕೆ.ಜಿ.ಗೆ 125 ರಿಂದ 150 ರೂ.ಗೆ ಕೊಂಡು ಮೈಸೂರಿನಲ್ಲಿ ಕೆ.ಜಿ.ಗೆ 250 ರಿಂದ 300 ರೂ.ವರೆಗೆ ದುಪ್ಪಟ್ಟು ಮಾರಾಟ ಮಾಡುತ್ತಾರೆ. ರೈತರು ಮಾರಲು ತಂದ ನಾಟಿಕೋಳಿಗಳನ್ನು ತೂಕಕ್ಕೂ ಹಾಕದೆ ಕೈಯ್ಯಲ್ಲೇ ಅಂದಾಜು ಮಾಡಿ ರೈತರಿಗೆ ಯಾಮಾರಿಸುತ್ತಾರೆ. ಸರಿಯಾದ ಬೆಲೆ ನೀಡದೆ ಸಾಕಿ ಸಲುಹಿದ ಬಡರೈತನಿಗೆ ಅನ್ಯಾಯ ಮಾಡುತ್ತಿದ್ದಾರೆ.

        ಯಡಿಯೂರು-ತಿಪಟೂರು ರಸ್ತೆ ಪಟ್ಟಣದ ಮಧ್ಯ ಭಾಗದಲ್ಲಿ ಹಾದುಹೋಗಿದ್ದು ತಾಲ್ಲೂಕು ಕಛೇರಿ ಎದಿರು ರಾಘವೇಂದ್ರ ಹೋಟೆಲ್ ಮುಂಭಾಗವೇ ಇವರು ಕೊಳ್ಳುವ ಕೋಳಿ ವ್ಯಾಪಾರ ಕೇಂದ್ರ. ಪಟ್ಟಣದಲ್ಲಿ ಏಕ ಮಾತ್ರ ಸಸ್ಯಾಹಾರಿ ಹೋಟೆಲ್ ಇದಾಗಿದ್ದು ಪ್ರತಿದಿನ ನೂರಾರು ಜನ ಹೋಟೆಲ್‍ಗೆ ಭೇಟಿ ನೀಡುತ್ತಾರೆ. ಪ್ರತಿ ಸೋಮವಾರ ಬೆಳಿಗ್ಗೆ 6 ಗಂಟೆಯಿಂದ 11 ಗಂಟೆಯವರೆವಿಗೆ ಇವರ ಕೂಗಾಟ ನೂಕಾಟ ತಪ್ಪಿದ್ದಲ್ಲ.

        ಹೋಟೆಲ್ ಮುಂದೆಯೇ ಕೋಳಿ ವ್ಯಾಪಾರ ಎಗ್ಗಿಲ್ಲದೆ ನಡೆಯುತ್ತಿದ್ದರೂ ಹೋಟೆಲ್ ಮಾಲೀಕ ನಿಸ್ಸಹಾಯಕ. ಪಟ್ಟಣದ ಸಂತೆ ಬೀದಿಯಲ್ಲಿ ಕೋಳಿ ವ್ಯಾಪಾರಕ್ಕೆಂದೆ ಸ್ಥಳ ನಿಗದಿ ಮಾಡಿದ್ದರೂ ಸಹಾ ಇವರು ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಬೆಳಿಗ್ಗೆ 6 ಗಂಟೆಗೆಲ್ಲ ಜಮಾಯಿಸಿ ರೈತರಿಂದ ಕೋಳಿ ಖರೀದಿಸಿ ಕೋಳಿಗಳ ಕಾಲುಗಳನ್ನು ಕಟ್ಟಿ ನೆಲದ ಮೇಲೆ ಬೇಕಾಬಿಟ್ಟಿ ಬಿಸಾಡಿರುತ್ತಾರೆ. ಹೋಟೆಲ್‍ನಲ್ಲಿ ತಿಂಡಿ ತಿನ್ನುವ ಗ್ರಾಹಕರು ಕೋಳಿಗಳ ಚೀತ್ಕಾರವನ್ನು ಆಸ್ವಾದಿಸುತ್ತಲೇ ಆಹಾರ ಸೇವಿಸುವಂತ ಪರಿ.

          ಈಗಾಗಲೇ ಅನೇಕ ನಾಗರೀಕರು ಈ ಸ್ಥಳದಲ್ಲಿ ಕೋಳಿ ವ್ಯಾಪಾರ ಮಾಡಬಾರದೆಂದು ರೈತಸಂಘದ ಅಧ್ಯಕ್ಷ ಶ್ರೀನಿವಾಸ್, ಸಮಾಜ ಸೇವಕ ರವಿಕುಮಾರ್ ಸೇರಿದಂತೆ ಅನೇಕ ನಾಗರೀಕರು ಕೋಳಿ ವ್ಯಾಪಾರಿಗಳ ಮೇಲೆ ಗಲಾಟೆ ಮಾಡಿದರೂ ಯಾವುದೇ ಪ್ರಯೋಜನವಾಗದೆ ಎಗ್ಗಿಲ್ಲದೆ ನಡೆಯುತ್ತಿದೆ.

           ಮಾರುತಿ ವಾಹನಗಳಲ್ಲಿ ಬರುವ ಇವರು ಹೋಟೆಲ್ ಮುಂಭಾಗ ಕಾರನ್ನು ನಿಲ್ಲಿಸಿ ಹಳ್ಳಿಗಾಡಿನಿಂದ ಬೈಕುಗಳಲ್ಲಿ ಬರುವ ರೈತರುಗಳನ್ನು ದೂರದಿಂದಲೇ ಗುರ್ತಿಸಿ ಓಡೋಡಿ ಅವರು ಬೈಕು ನಿಲ್ಲಿಸುವ ಮೊದಲೇ ಅವರ ಬಳಿಯಿರುವ ಕೋಳಿಗಳನ್ನು ಕಸಿದುಕೊಳ್ಳುತ್ತಾರೆ.

         ನಂತರ ಕೋಳಿ ಆಗಿದೆ ಈಗಿದೆ ಹೆಚ್ಚು ತೂಕವಿಲ್ಲ ಎಂದೆಲ್ಲಾ ಜರಿದು ಮಾರಾಟಗಾರನೊಂದಿಗೆ ಚೌಕಾಸಿಗೆ ನಿಲ್ಲುತ್ತಾರೆ. ರೈತನಿಗೆ ತಕ್ಕ ಬೆಲೆ ಸಿಗದಿದ್ದಾಗ ಕೋಳಿ ವಾಪಸ್ ಕೊಡಿ ಎಂದರೂ ವ್ಯಾಪಾರಿಗಳು ಜಗ್ಗದೆ ಚೌಕಾಸಿ ಮಾಡಿ ಅಷ್ಟೋ ಇಷ್ಟೋ ಕೊಟ್ಟು ಸಾಗಹಾಕುತ್ತಾರೆ. ಕೊನೆಗೆ ರೈತ ವಿಧಿಯಿಲ್ಲದೆ ಅವರು ಕೊಟ್ಟ ಹಣ ಪಡೆದು ಅದರಲ್ಲೇ ತೃಪ್ತಿಪಟ್ಟುಕೊಳ್ಳುವಂತ ಸ್ಥಿತಿ.

        ಕೆಲವು ಕೋಳಿ ಕೊಳ್ಳುವ ವ್ಯಾಪಾರಿಗಳು ಸ್ಥಳೀಯ ದಲ್ಲಾಳಿಗಳಿಗೆ ಕಮೀಷನ್ ಆಸೆ ತೋರಿಸಿರುವುದರಿಂದ ಕೆಲವು ವಯೋವೃದ್ಧರು ಕಮೀಷನ್ ಆಸೆಗೆ ದೂರದಿಂದಲೇ ಕೋಳಿ ಮಾರಲು ಬರುವವರನ್ನು ರಸ್ತೆ ಮಧ್ಯೆ ಅಡ್ಡಹಾಕಿ ಕೋಳಿ ಕಸಿದುಕೊಂಡು ವ್ಯಾಪಾರಿ ಬಳಿಗೆ ಕರೆತರುವುದುಂಟು.

         ಕಮೀಷನ್ ಆಸೆಗೆ ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನು ಗಮನಿಸದೆ ಕಮೀಷನ್ ಆಸೆಗೋಸ್ಕರ ಏನನ್ನೂ ಲೆಕ್ಕಿಸದೆ ಮುನ್ನುಗ್ಗುವುದರಿಂದ ಈ ಸಂದರ್ಭದಲ್ಲಿ ಏನಾದರೂ ಅನಾಹುತವಾದರೆ ಯಾರು ಹೊಣೆ. ಈಗಾಗಲೆ ಅನೇಕ ಸಣ್ಣ ಪುಟ್ಟ ಅಪಘಾತಗಳಾಗಿರುವುದುಂಟು. ಇದರ ಬಗ್ಗೆ ಪಟ್ಟಣ ಪಂಚಾಯಿತಿ ಯಾವುದೇ ಕ್ರಮ ಕೈಗೊಂಡಂತೆ ಕಾಣುತ್ತಿಲ್ಲ. ಇನ್ನಾದರೂ ಸಂಬಂಧಪಟ್ಟವರು ಇದರ ಬಗ್ಗೆ ಸೂಕ್ತಕ್ರಮ ಕೈಗೊಂಡು ಕೋಳಿ ವ್ಯಾಪಾರಿಗಳ ಮಾರಾಟ ಸ್ಥಳಾಂತರಿಸಿ ನಾಗರೀಕರಿಗೆ ಅನುವು ಮಾಡಿಕೊಟ್ಟು ಮುಂದೊದಗಬಹುದಾದ ಅನಾಹುತ ತಪ್ಪಿಸಲಿ ಎಂಬುದು ನಾಗರೀಕರ ಒತ್ತಾಸೆಯಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap