ಚುನಾವಣಾ ಆಯೋಗ ಬಿಜೆಪಿ ಕೈಗೊಂಬೆ

ದಾವಣಗೆರೆ:

    ಚುನಾವಣಾ ಆಯೋಗವು ಆಡಳಿತ ಪಕ್ಷ ಬಿಜೆಪಿಯ ಕೈಗೊಂಬೆಯಂತೆ ಕಾರ್ಯನಿರ್ವಹಿಸುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

     ಜಿಲ್ಲೆಯ ಹರಿಹರ ಸಮೀಪದ ಕುಮಾರ ಪಟ್ಟಣದ ಬಿರ್ಲಾ ಗೆಸ್ಟ್‍ಹೌಸ್‍ನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಹೆಸರಲ್ಲಿ ಮತ ಕೇಳುವುದು ಅಪರಾಧ (ಅಫೆನ್ಸ್) ಆಗಿದೆ. ಆದರೆ, ಇತ್ತೀಚೆಗೆ ಯಡಿಯೂರಪ್ಪ ಜಾತಿ ಹೆಸರಲ್ಲಿ ಮತ ಕೇಳಿದ್ದರು. ಅಲ್ಲದೇ, ಉಪ ಚುನಾವಣೆ ನಡೆಯುತ್ತಿರುವ 15 ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಹಣ, ಅಧಿಕಾರದ ಆಮಿಷವೊಡ್ಡಿ ಚುನಾವಣೆ ನಡೆಸುತ್ತಿದೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರೂ, ಯಾವುದೇ ಕ್ರಮ ಕೈಗೊಳ್ಳದೇ ಆಡಳಿತ ಪಕ್ಷ ಬಿಜೆಪಿಯ ಕೈಗೊಂಬೆಯಂತೆ ವರ್ತಿಸುತ್ತಿದೆ ಎಂದು ದೂರಿದರು.

      ಚುನಾವಣಾ ಆಯೋಗ ಎಂಬುದು ಆಡಳಿತ ಪಕ್ಷದ ಕೈಗೊಂಬೆಯಂತೆ ನಡೆದುಕೊಳ್ಳುತ್ತಿದೆ. ಈಗಿನ ಮಹಾರಾಷ್ಟ್ರದ ಪರಿಸ್ಥಿತಿ ಒಂದು ರೀತಿ ಪ್ರಜಾಪ್ರಭುತ್ವವನ್ನೇ ಕಗ್ಗೊಲೆ ಮಾಡಿದಂತಾಗಿದ್ದು, ಇದನ್ನೆಲ್ಲಾ ಕೇಂದ್ರ ಸರ್ಕಾರವೇ ಖುದ್ದಾಗಿ ನಿಂತು ಮಾಡಿಸುತ್ತಿದೆ ಎಂದು ಆಪಾದಿಸಿದರು.

     ಯಾರೇ ಕಾನೂನಿನ ಮಿತಿ ಮೀರಿದರೂ ತಪ್ಪು. ಆದರೆ, ಚುನಾವಣಾ ಆಯೋಗಕ್ಕೆ ಬಿಜೆಪಿ ಚುನಾವಣೆಯಲ್ಲಿ ಅಕ್ರಮ ನಡೆಸುತ್ತಿರುವ ಬಗ್ಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದ ಅವರು, ಬಿಜೆಪಿಯವರು ಚುನಾವಣೆಗಾಗಿ ಕೋಟಿಗಟ್ಟಲೇ ಹಣವನ್ನು ಖರ್ಚು ಮಾಡುತ್ತಿದ್ದಾರೆ. ಯಡಿಯೂರಪ್ಪ ಹೋದ ಕಡೆಯಲ್ಲೆಲ್ಲಾ ತಮ್ಮ ಅಭ್ಯರ್ಥಿಗಳನ್ನು ಮಂತ್ರಿ ಮಾಡುತ್ತೇನೆಂದು ಹೇಳಿ ಬರುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

     ಉಪ ಚುನಾವಣೆಯ ಏಳು ಕ್ಷೇತ್ರಗಳಲ್ಲಿ ತಾವು ಪ್ರಚಾರ ಕೈಗೊಂಡಿದ್ದು, ಎಲ್ಲೆಡೆ ನಿರೀಕ್ಷೆ ಮೀರಿ ಬೆಂಬಲ ದೊರೆಯುತ್ತಿದೆ. ಜನರೂ ಕಾಂಗ್ರೆಸ್ ಪಕ್ಷದ ಪರವಾಗಿದ್ದಾರೆ ಎಂದ ಅವರು, ಬಿಜೆಪಿ ಹಾಗೂ ಜೆಡಿಎಸ್‍ನವರಿಗೆ ನಾನು ಅಂದ್ರೆ, ಭಯ ಇರಬೇಕು. ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುತ್ತದೆಂಬ ಭಯ ಆ ಎರಡೂ ಪಕ್ಷದವರಿಗೆ ಕಾಡುತ್ತಿದೆ ಎಂದರು.

    ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೋಳಿವಾಡ ಪರವಾಗಿ ನಾನು ಪ್ರಚಾರಕ್ಕೆ ಬಂದಿರಲಿಲ್ಲ. ಅದಕ್ಕೆ ಕೋಳಿವಾಡ ಸಹಜವಾಗಿಯೇ ಬೇಸರವಾಗಿದ್ದರು. ಅದೇ ಹಳೆಯ ವೀಡಿಯೋ ಇಟ್ಟುಕೊಂಡು ಈಗ ಬಿಜೆಪಿಯವರು ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ. ರಾಣೆಬೆನ್ನೂರು ಕ್ಷೇತ್ರದಲ್ಲಿ ನಿನ್ನೆ ಇಡೀ ದಿನ ಕಾಂಗ್ರೆಸ್ ಅಭ್ಯರ್ಥಿ ಕೋಳಿವಾಡ ಪರವಾಗಿ ಪ್ರಚಾರ ಕೈಗೊಂಡಿದ್ದೇನೆ. ನನ್ನ ಹಾಗೂ ಕೋಳಿವಾಡ ನಡುವೆ ಯಾವುದೇ ಅಸಮಾಧಾನವಾಗಲೀ, ಭಿನ್ನಾಭಿಪ್ರಾಯವಾಗಲೀ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap