ರಾಜ್ಯದಲ್ಲಿ ಚುನಾವಣೆ ಬಹುತೇಕ ಶಾಂತಿಯುತ

ಬೆಂಗಳೂರು

      ರಾಜ್ಯದ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಬಿರುಸಿನ ಹಾಗೂ ಶಾಂತಿಯುತ ಮತದಾನ ನಡೆಯಿತು.

        ಬೆಳಗ್ಗೆ 7 ರಿಂದ ಮತದಾನ ಪ್ರಕ್ರಿಯೆ ಆರಂಭಗೊಂಡು ಅಲ್ಲಲ್ಲಿ ಕೆಲವು ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ ಎಲ್ಲೆಡೆ ಮತದಾನ ಬಹುತೇಕ ಶಾಂತಿಯುತವಾಗಿತ್ತು.

      ಬೆಳಗ್ಗೆ ಮತದಾನ ಆರಂಭಗೊಂಡಾಗ ಮಂದಗತಿಯಲ್ಲಿ ಸಾಗಿತ್ತಾದರೂ ಮಧ್ಯಾಹ್ನದ ವೇಳೆಗೆ ಬಿರುಸು ಪಡೆಯಿತು. ವಿಧಾನಸಭೆಗೆ ಚುನಾವಣೆ ನಡೆದ ಕ್ಷೇತ್ರಗಳಲ್ಲಿ ಸ್ವಲ್ಪ ಮಟ್ಟಿಗೆ ಆರಂಭದಲ್ಲಿ ಮತದಾನ ಚುರುಕಾಗಿತ್ತು. ಆದರೆ ಲೋಕಸಭೆ ಕ್ಷೇತ್ರಗಳಲ್ಲಿ ಮಾತ್ರ ಬೆಳಗ್ಗೆಯಿಂದಲೇ ಮಂದಗತಿ ಮತದಾನ ನಡೆಯಿತು. ಈ ಕ್ಷೇತ್ರಗಳಲ್ಲಿ ಮತದಾನ ಮಾಡಲು ಮತದಾರರು ನಿರಾಸಕ್ತಿ ತೋರಿದ ಘಟನೆ ನಡೆಯಿತು. ಆದರೂ ಬಳಿಕ ಮತದಾನ ಬಿರುಸುಗೊಂಡು ಮತಗಟ್ಟೆಗಳಿಗೆ ಬಂದು ಮತದಾರರು ಮತದಾನ ಮಾಡಿದರು.

       ಇವಿಎಂ ಯಂತ್ರಗಳಲ್ಲಿ ದೋಷ, ಮತಪಟ್ಟಿಯಲ್ಲಿ ಹೆಸರುಗಳಿಲ್ಲದೆ ಪರದಾಟ, ಕೆಲವೆಡೆ ಸಣ್ಣಪುಟ್ಟ ಗಲಾಟೆ, ಪೊಲೀಸರು ಮತ್ತೆ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ, ಜಮಖಂಡಿಯಲ್ಲಿ ಮತಗಟ್ಟೆ ಬಳಿಯೇ ಕಾಂಗ್ರೆಸ್ ಕಾರ್ಯಕರ್ತರು ದುಂಡಾವರ್ತನೆಯಿಂದ ಮತ ಹಾಕುವಂತೆ ಒತ್ತಾಯ ಮಾಡಿದ್ದು, ಸೂಕ್ಷ್ಮ ಮತಗಟ್ಟೆಗಳಲ್ಲಿ ಅರೆಸೇನಾ ಪಡೆ ಬಳಕೆ, ರಾಮನಗರ ಕ್ಷೇತ್ರದ 277 ಬೂತ್‍ಗಳಲ್ಲೂ ಭಾರತೀಯ ಜನತಾ ಪಕ್ಷದ ಏಜೆಂಟ್‍ಗಳು ಇಲ್ಲದೇ ಇರುವ ದೃಶ್ಯಗಳು ಕಂಡು ಬಂತು.

      ಜಮಖಂಡಿ ವಿಧಾನಸಭಾ ಉಪಚುನಾವಣೆ ಮತದಾನದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಜಮಖಂಡಿಯ ತಾಲೂಕ ಪಂಚಾಯತ್ ಮತಗಟ್ಟೆಯಲ್ಲಿ ಪಕ್ಷದ ಶಾಲು ಹಾಕಿಕೊಂಡು ಪ್ರಚಾರ ಮಾಡಿದ ಪರಿಣಾಮ ನಗರ ಪೊಲೀಸ್ ಠಾಣೆಯಲ್ಲಿ ಅಧಿಕಾರಿಗಳು ಪ್ರಕರಣ ದಾಖಲು ಮಾಡಿದರು.

       ಇದೇ ವೇಳೆ ರಾಮನಗರ ಉಪಚುನಾವಣೆ ಸಮರದಲ್ಲಿ ಬಿಜೆಪಿ ಅಭ್ಯರ್ಥಿ ಎಲ್.ಚಂದ್ರಶೇಖರ್‍ರಿಂದ ಮತ್ತೊಂದು ಶಾಕ್ ಹೊರಬಿದ್ದಿತು. ಮುಖ್ಯವಾಗಿ ಕ್ಷೇತ್ರದ ಎಲ್ಲಾ ಮತಗಟ್ಟೆಗಳಲ್ಲೂ ಬಿಜೆಪಿ ಏಜೆಂಟ್‍ಗಳಿಗೆ ಚಂದ್ರಶೇಖರ್ ತಡೆ ಹಾಕಿದರು. ಅಲ್ಲದೆ, ಚಂದ್ರಶೇಖರ್ ಚುನಾವಣಾ ಏಜೆಂಟ್ ಆಗಿದ್ದ ಪದ್ಮನಾಭ್‍ರನ್ನು ಏಜೆಂಟ್ ಸ್ಥಾನದಿಂದ ತೆರವು ಮಾಡುವಂತೆ ಚುನಾವಣಾ ಅಧಿಕಾರಿ ಕೃಷ್ಣಮೂರ್ತಿಗೆ ಪತ್ರ ಬರೆದಿದ್ದರು. ಹೀಗಾಗಿ ಕ್ಷೇತ್ರದ ಯಾವ ಮತಗಟ್ಟೆಯಲ್ಲೂ ಬಿಜೆಪಿ ಏಜೆಂಟರ್‍ಗಳು ಇಲ್ಲದಿರುವುದು ಕಂಡು ಬಂತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link