ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ:ತಾಲೂಕು ಶಾಖೆಗೆ ಜೂ.13ರಂದು ಚುನಾವಣೆ

ದಾವಣಗೆರೆ:

    ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ದಾವಣಗೆರೆ ತಾಲೂಕು ಶಾಖೆಗೆ ಜೂನ್ 13ರಂದು ಚುನಾವಣೆ ನಡೆಯಲಿದೆ ಎಂದು ಸಂಘದ ಜಿಲ್ಲಾ ಶಾಖೆಯ ಪ್ರಭಾರಿ ಅಧ್ಯಕ್ಷ ಸಿ.ಪರಶುರಾಮಪ್ಪ ತಿಳಿಸಿದ್ದಾರೆ.

      ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ದಾವಣಗೆರೆ ಜಿಲ್ಲಾ ಶಾಖೆಗೆ 2019-2024ರ ಅವಧಿಗೆ ಚುನಾವಣೆ ನಡೆಸಲು, ರಾಜ್ಯ ಸಂಘದ ಚುನಾವಣಾಧಿಕಾರಿಯಾಗಿರುವ, ಬೆಂಗಳೂರಿನ ಸಹಕಾರ ಸಂಘಗಳ ಉಪ ನಿಬಂಧಕ ಅಶ್ವತ್ಥನಾರಾಯಣ ಸಂಘದ ಬೈಲಾದ ನಿಯಮಾವಳಿ ಪ್ರಕಾರ ಸಾರ್ವತ್ರಿಕ ಚುನಾವಣೆ ಅಧಿಸೂಚನೆ ಹೊರಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಘದ ದಾವಣಗೆರೆ ತಾಲೂಕು ಶಾಖೆಗೆ ಜೂನ್ 13ರಂದು ಚುನಾವಣೆ ನಿಗದಿಪಡಿಸಲಾಗಿದೆ ಎಂದು ಹೇಳಿದರು.

ಚುನಾವಣಾ ವೇಳಾಪಟ್ಟಿ:

      ನಗರದ ಎಸ್.ನಿಜಲಿಂಗಪ್ಪ ಬಡಾವಣೆಯ ಸರ್ಕಾರಿ ನೌಕರರ ಸಮುದಾಯ ಭವನದ ದಿ|| ಮೇರಿ ದೇವಾಸಿಯ ಸಭಾಂಗಣದಲ್ಲಿ ಮೇ 25ರಿಂದ ಜೂನ್ 3ರ ಸಂಜೆ ನಾಲ್ಕು ಗಂಟೆಯ ವರೆಗೆ ನಾಮಪತ್ರ ವಿತರಣೆ ಮಾಡಲಾಗುವುದು. ಜೂ.3ರ ಸಂಜೆ 5 ಗಂಟೆಯ ವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ. ಅಂದೇ ಸಂಜೆ 5 ಗಂಟೆಯ ಬಳಿಕ ನಾಮಪತ್ರ ಪರಿಶೀಲನೆ ನಡೆಯಲಿದ್ದು, ನಂತರದಲ್ಲಿ ಅರ್ಹ ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗುವುದು.

       ನಾಮಪತ್ರ ವಾಪಾಸ್ ಪಡೆಯಲು ಜೂ.4ರ 5 ಗಂಟೆಯ ವರೆಗೆ ಅವಕಾಶ ಕಲ್ಪಿಸಲಾಗಿದೆ. ಕೊನೆಯಲ್ಲಿ ಕಣದಲ್ಲಿ ಉಳಿದಿರುವ ಅಭ್ಯರ್ಥಿಗಳಿಗೆ ಜೂ.13ರಂದು ಬೆಳಿಗ್ಗೆ 11 ಗಂಟೆಯಿಂದ ಸಂಜೆ ನಾಲ್ಕು ಗಂಟೆಯ ವರೆಗೆ ನಗರದ ಸೀತಮ್ಮ ಕಾಲೇಜಿನಲ್ಲಿ ಮತದಾನ ನಡೆಸಲಾಗುವುದು. ಅಂದು ಸಂಜೆ 4.30ರ ನಂತರ ಮತ ಎಣಿಕೆ ನಡೆಯಲಿದ್ದು, ಬಳಿಕ ಅಂದೇ ಫಲಿತಾಂಶ ಪ್ರಕಟಿಸಲಾಗುವುದು ಎಂದು ಮಾಹಿತಿ ನೀಡಿದರು.

        2019ರ ಫೆಬ್ರವರಿ 28ರ ವರೆಗೆ ನೌಕರರ ಸಂಘದ ಸದಸ್ಯತ್ವವನ್ನು ನೋಂದಾಯಿಸಿರುವ ಎಲ್ಲಾ ಸರ್ಕಾರಿ ನೌಕರರು ಚುನಾವಣೆಯಲ್ಲಿ ಸ್ಪರ್ಧಿಸಲು ಹಾಗೂ ಮತ ಚಲಾಯಿಸಲು ಅರ್ಹರಿರಲಿದ್ದಾರೆ. ತಾಲೂಕು ಶಾಖೆಗೆ ವಿವಿಧ ಇಲಾಖೆಗಳನ್ನು ಒಳಗೊಂಡಂತೆ ಒಟ್ಟು 53 ನಿರ್ದೇಶಕರ ಸ್ಥಾನಗಳು ಹಂಚಿಕೆಯಾಗಿದ್ದು, ದಾವಣಗೆರೆ ತಾಲೂಕಿನಲ್ಲಿ ಒಟ್ಟು 4,570 ಜನ ಅರ್ಹ ಮತದಾರ ನೌಕರರಿದ್ದಾರೆ. ಚುನಾವಣಾಧಿಕಾರಿಯನ್ನಾಗಿ ಜಿಲ್ಲಾಧಿಕಾರಿಗಳ ಕಚೇರಿಯ ಶಿರಸ್ತೇದಾರ ರಾಮಸ್ವಾಮಿ ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಉಪವಿಭಾಗಾಧಿಕಾರಿಗಳ ಕಚೇರಿಯ ಉಪ್ಪೇಂದ್ರ ಅವರು ಕಾರ್ಯನಿರ್ವಹಿಸಲಿದ್ದಾರೆಂದು ಅವರು ವಿವರಿಸಿದರು.

        ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ದಾವಣಗೆರೆ ತಾಲೂಕು ಶಾಖೆಯಂತೆ ಜಿಲ್ಲೆಯ ಎಲ್ಲ ತಾಲೂಕು ಶಾಖೆಗಳಿಗೆ ಚುನಾವಣೆ ನಡೆದ ನಂತರದಲ್ಲಿ ಜಿಲ್ಲಾ ಶಾಖೆಯ ಅಧ್ಯಕ್ಷರು, ಖಜಾಂಚಿ ಮತ್ತು ರಾಜ್ಯ ಪರಿಷತ್ ಸದಸ್ಯರ ಆಯ್ಕೆಗೆ ಜುಲೈ 1ರಿಂದ 11ರ ವರೆಗೆ ಚುನಾವಣಾ ಪ್ರಕ್ರಿಯೆಗಳು ನಡೆಯಲಿವೆ. ಈ ಮೂರು ಸ್ಥಾನಗಳ ಆಯ್ಕೆಗೆ ದಾವಣಗೆರೆ ತಾಲೂಕು ಶಾಖೆಗೆ ಆಯ್ಕೆಯಾದ 53 ನಿರ್ದೇಶಕರು ಹಾಗೂ ಇನ್ನುಳಿದ ಐದು ತಾಲೂಕು ಶಾಖೆಗಳ ಅಧ್ಯಕ್ಷರು ಸೇರಿ ಒಟ್ಟು 58 ನೌಕರರು ಮತದಾನ ಮಾಡಲಿದ್ದಾರೆಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾ ಶಾಖೆಯ ಪ್ರಭಾರಿ ಪ್ರಧಾನ ಕಾರ್ಯದರ್ಶಿ ಬಿ.ಆರ್.ತಿಪ್ಪೇಸ್ವಾಮಿ, ಸಿ.ತಿಪ್ಪೇಸ್ವಾಮಿ, ಬಿ.ಮಂಜುನಾಥ್, ತಿಪ್ಪೇಸ್ವಾಮಿ, ನಿರಂಜನ್, ಪಾಲಪ್ಪ ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link