ತುಮಕೂರು
ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ 22 ನೇ ವಾರ್ಡ್‍ನ ಉಪಚುನಾವಣೆಯು ಮೇ 29 ರಂದು ನಡೆಯಲಿದ್ದು, ಈ ಬಗೆಗಿನ ಪ್ರಕ್ರಿಯೆಗಳು ಮೇ 9 ರಿಂದ ಆರಂಭಗೊಂಡಿದೆ.
ಮೇ 9 ರಂದು ಚುನಾವಣಾಧಿಕಾರಿಗಳು ಚುನಾವಣಾ ನೋಟೀಸನ್ನು ಪ್ರಕಟಿಸಿದ್ದಾರೆ. ಮೇ 16 ನಾಮಪತ್ರ ಸಲ್ಲಿಕೆಗೆ ಕೊನೆಯದಿನವಾಗಿದೆ. ಸಾರ್ವತ್ರಿಕ ರಜಾ ದಿನ ಹೊರತುಪಡಿಸಿ ಉಳಿದ ದಿನಗಳಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯೊಳಗೆ ನಾಮಪತ್ರದ ನಮೂನೆಗಳನ್ನು ಪಾಲಿಕೆ ಕಚೇರಿಯಲ್ಲಿರುವ ಚುನಾವಣಾಧಿಕಾರಿಗಳ ಕಚೇರಿಯಿಂದ ಪಡೆಯ ಬಹುದು ಹಾಗೂ ಇದೇ ವೇಳೆಯಲ್ಲಿ ನಾಮಪತ್ರಗಳನ್ನು ಸಲ್ಲಿಸಬಹುದು.
ಮೇ 17 ರಂದು ಬೆಳಗ್ಗೆ 11 ಗಂಟೆಯಿಂದ ನಾಮಪತ್ರಗಳ ಪರಿಶೀಲನೆ ನಡೆಯುವುದು. ಮೇ 20 ರಂದು ಮಧ್ಯಾಹ್ನ 3 ಗಂಟೆಯೊಳಗೆ ಉಮೇದುವಾರಿಕೆಯನ್ನು ಹಿಂಪಡೆಯಲು ಅವಕಾಶವಿರುತ್ತದೆ. ಮತದಾನ ಅವಶ್ಯವಿದ್ದರೆ ಮೇ 29 ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯುವುದು. ಮರುಮತದಾನ ಇದ್ದಲ್ಲಿ ಮೇ 30 ರಂದು ನಡೆಯುವುದು. ಮೇ 31 ರಂದು ಮತ ಎಣಿಕೆ ಕಾರ್ಯ ಬೆಳಗ್ಗೆ 8 ಗಂಟೆಯಿಂದ ಆರಂಭವಾಗಲಿದ್ದು, ಅಂದೇ ಫಲಿತಾಂಶ ಪ್ರಕಟವಾಗುವುದು.
ಈ ಹಿಂದೆ 22 ನೇ ವಾರ್ಡ್‍ನಿಂದ ಚುನಾಯಿತರಾಗಿದ್ದ ಮಾಜಿ ಮೇಯರ್ ಎಚ್.ರವಿಕುಮಾರ್ (ಜೆಡಿಎಸ್) ಅವರ ಮರಣದಿಂದ ತೆರವಾಗಿರುವ ಸ್ಥಾನಕ್ಕೆ ಈ ಚುನಾವಣೆ ನಡೆಯುತ್ತಿದೆ. ವಾರ್ಡ್ ಮೀಸಲಾತಿಯು “ಸಾಮಾನ್ಯ ವರ್ಗ” (ಜನರಲ್)ಕ್ಕೆ ಮೀಸಲಾಗಿದೆ. ಬಟವಾಡಿ, ದೇವರಾಯಪಟ್ಟಣ, ವಾಲ್ಮೀಕಿ ನಗರ ಹಾಗೂ ಸುತ್ತಲಿನ ಪ್ರದೇಶಗಳನ್ನು ಈ ವಾರ್ಡ್ ಹೊಂದಿದೆ. ಈ ಉಪಚುನಾವಣೆಗೆ ಸಂಬಂಧಿಸಿದಂತೆ ದೂರು ನಿಯಂತ್ರಣ ಕೊಠಡಿ (ಸ್ಥಿರ ದೂರವಾಣಿ- 0816-2272200) ಸ್ಥಾಪಿಸಲಾಗಿದೆ.
ಅಭ್ಯರ್ಥಿಯು ನಾಮಪತ್ರ ಸಲ್ಲಿಸುವಾಗ ಠೇವಣಿ ಹಣ ಪಾವತಿಸಬೇಕು. ಠೇವಣಿ ಮೊತ್ತ 5000 ರೂ. ಅಥವಾ ಅಭ್ಯರ್ಥಿಯು ಹಿಂದುಳಿದ ವರ್ಗ, ಅನುಸೂಚಿತ ಜಥಿ, ಪಂಗಡಗಳಿಗೆ ಸೇರಿದ್ದರೆ 2500 ರೂ. ಪಾವತಿ ಮಾಡಬೇಕು. 20 ರೂ.ಗಳ ಛಾಪಾ ಕಾಗದಲ್ಲಿ ಪ್ರಮಾಣಪತ್ರ ನೀಡಬೇಕು. ನೋಂದಾಯಿತ ಪಕ್ಷದಿಂದ ಸ್ಪರ್ಧಿಸಿದ್ದರೆ ಒಬ್ಬರು ಸೂಚಕರು, ಪಕ್ಷೇತರರಾಗಿ ಸ್ಪರ್ಧಿಸಿದ್ದರೆ ಆರು ಜನ ಸೂಚಕರು ಇರಬೇಕು. ಸೂಚಕರು 22 ನೇ ವಾರ್ಡ್ ಮತದಾರರಾಗಿರಬೇಕು. ಮಾನ್ಯತೆ ಪಡೆದ ರಾಷ್ಟ್ರೀಯ/ರಾಜ್ಯ ಪಕ್ಷದಿಂದ ಸ್ಪರ್ಧಿಸಿದರೆ “ನಮೂನೆ-ಬಿ” ಸಲ್ಲಿಸಬೇಕು. ಮಾನ್ಯತೆ ಪಡೆಯದ ನೋಂದಾಯಿತ ಪಕ್ಷದಿಂದ ಸ್ಪರ್ಧಿಸಿದರೆ “ನಮೂನೆ-ಡಿ” ಸಲ್ಲಿಸಬೇಕು. ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದಲ್ಲಿ ಚಿಹ್ನೆಯನ್ನು ನಮೂದಿಸಬೇಕು ಎಂಬ ಸೂಚನೆಗಳನ್ನು ನೀಡಲಾಗಿದೆ.
ಪಾಲಿಕೆ ಕಚೇರಿಯಲ್ಲಿ
ತುಮಕೂರು ಮಹಾನಗರ ಪಾಲಿಕೆಯ ಕಚೇರಿಯ ಒಂದು ಕೊಠಡಿಯಲ್ಲೇ ಇದೀಗ ಚುನಾವಣಾಧಿಕಾರಿಗಳ ಕಚೇರಿ ತೆರೆಯಲಾಗಿದೆ. ಪಾಲಿಕೆಯ ಆವರಣದಲ್ಲಿ ಪೊಲೀಸ್ ಭದ್ರತೆ ಹಾಕಲಾಗಿದೆ. ಬ್ಯಾರಿಕೇಡ್‍ಗಳನ್ನು ಇಟ್ಟು ಜನ-ವಾಹನ ಸಂಚಾರ ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗಿದೆ. ಆ ವಾರ್ಡ್ ವ್ಯಾಪ್ತಿಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ.
