ವಿದ್ಯುತ್ ಲೈನ್ ರಿಪೇರಿ : ಕಾರ್ಮಿಕನಿಗೆ ತೀವ್ರ ಗಾಯ

ತುರುವೇಕೆರೆ

   ವಿದ್ಯುತ್ ಕಂಬದಲ್ಲಿ ಲೈನ್ ರಿಪೇರಿ ಮಾಡುವಾಗ ವಿದ್ಯುತ್ ಪ್ರವಹಿಸಿ ಕೂಲಿ ಕಾರ್ಮಿಕನೊಬ್ಬ ತೀವ್ರ ಗಾಯಗೊಂಡು ಆಸ್ಪತ್ರೆ ಸೇರಿರುವ ಘಟನೆ ಮಾ.10 ರಂದು ನಡೆದಿದೆ.

   ಗಾಯಗೊಂಡ ಕಾರ್ಮಿಕ ತಾಲ್ಲೂಕಿನ ದೊಡ್ಡೇನಹಳ್ಳಿ ಗೊಲ್ಲರಹಟ್ಟಿ ಗ್ರಾಮದ ಕುಮಾರಯ್ಯನ ಮಗ ದಯಾನಂದಮೂರ್ತಿ. ಕಾರ್ಮಿಕ ದಯಾನಂದಮೂರ್ತಿ ಕಳೆದ ಮೂರು ವರ್ಷಗಳಿಂದ ಕರಡಿಗೆರೆಯ ವಿದ್ಯುತ್ ಗುತ್ತಿಗೆದಾರ ಪುಟ್ಟರಾಜ್ ಬಳಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದನು.

   ಮಾಚ್.10 ರಂದು ಮಾವಿನಕೆರೆ ಹತ್ತಿರ ಸಮಯ 4 ಗಂಟೆ 30 ನಿಮಿಷದಲ್ಲಿ ವಿದ್ಯುತ್ ಕೆಲಸ ಮಾಡಿಸಲಾಗುತ್ತಿತ್ತು. ಸಂಬಂಧಪಟ್ಟ ಇಲಾಖೆಯ ಕಂಟ್ರ್ಯಾಕ್ಟರ್ ಮತ್ತು ಲೈನ್‍ಮನ್ ಎಲ್‍ಸಿ ತೆಗೆದುಕೊಂಡು ದಯಾನಂದಮೂರ್ತಿಯನ್ನು ಕಂಬಕ್ಕೆ ಹತ್ತಿಸಿದ್ದಾರೆ. ಹೀಗೆ ಕೆಲಸ ಮಾಡುವಾಗ ಇದ್ದಕ್ಕಿದ್ದ ಹಾಗೆ ವಿದ್ಯುತ್ ಹರಿದು ಯುವಕನಿಗೆ ತನ್ನ ಬಲ ಭಾಗದ ಬೆನ್ನು ಸುಟ್ಟು ಕಂಬದಿಂದ ನೆಲಕ್ಕೆ ಬಿದ್ದಿದ್ದಾನೆ. ಬಿದ್ದ ರಭಸಕ್ಕೆ ತಲೆಗೆ ತೀವ್ರ ಪೆಟ್ಟು ಸಹ ಆಗಿದೆ.

   ತಕ್ಷಣ ಗಾಯಗೊಂಡ ದಯಾನಂದಮೂರ್ತಿಯನ್ನು ಮಾಯಸಂದ್ರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನನ್ನ ಮಗನ ಈ ಸ್ಥಿತಿಗೆ ಗುತ್ತಿಗೆದಾರ ಹಾಗು ಇಲಾಖೆಯ ಸಂಬಂಧಪಟ್ಟವರು ಕಾರಣರಾಗಿದ್ದು ನನ್ನ ಮಗನ ಚಿಕಿತ್ಸೆಗೆ ಪರಿಹಾರ ನೀಡಬೇಕೆಂದು ಗಾಯಾಳುವಿನ ತಾಯಿ ಗೌರಮ್ಮ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪರಿಹಾರಕ್ಕೆ ಆಗ್ರಹ:

    ಗೌರಮ್ಮನ ಜೀವನಕ್ಕೆ ಆಧಾರಸ್ತಂಭವಾಗಬೇಕಿದ್ದ ದಯಾನಂದಮೂರ್ತಿ ಈಗ ಚಿಕಿತ್ಸೆಗೆ ಹಣವಿಲ್ಲದೆ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾನೆ. ಈ ಘಟನೆಗೆ ಗುತ್ತಿಗೆದಾರ ಹಾಗೂ ಇಲಾಖೆಯ ಅಧಿಕಾರಿಗಳು ನೇರ ಹೊಣೆಗಾರರಾಗಿದ್ದಾರೆ. ಕೂಡಲೆ ಇವರ ಚಿಕಿತ್ಸೆಗೆ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ಹೋರಾಟ ಮಾಡಲಾಗುವುದು ಎಂದು ಬೆಸ್ಕಾಂ ಮಾಜಿ ನಿರ್ದೇಶಕ ಬಿ.ಎಸ್.ವಸಂತ್‍ಕುಮಾರ್ ಎಚ್ಚರಿಸಿದ್ದಾರೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ