ಮತದಾರ ಪಟ್ಟಿ ಸೇರ್ಪಡೆಗೆ ನ.20ರವರೆಗೂ ಕಾಲಾವಕಾಶ

ಕೊರಟಗೆರೆ

        ಮುಂಬರುವ 2019 ರ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮತದಾರರ ಪಟ್ಟಿ ಸಿದ್ದಪಡಿಸಲಾಗುತ್ತಿದ್ದು, 18 ವರ್ಷ ಮೇಲ್ಪಟ್ಟ ಅರ್ಹ ಯುವ ಮತದಾರರ ಸೇರ್ಪಡೆ ಸೇರಿದಂತೆ ಇನ್ನಿತರ ತಿದ್ದುಪಡಿಗೆ ನ.20 ರವರೆಗೂ ಕಾಲಾವಕಾಶವಿದ್ದು ಇದರ ಸದುಪಯೋಗಪಡಿಸಿಕೊಳ್ಳುವಂತೆ ತಹಸೀಲ್ದಾರ್ ನಾಗರಾಜು ತಿಳಿಸಿದ್ದಾರೆ.

        ಪಟ್ಟಣದ ತಹಸೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ ನೀಡಿ ಮುಂದಿನ ಲೋಕಸಭಾಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಪಟ್ಟಿ ಸಿದ್ದಪಡಿಸಲು 18 ವರ್ಷ ಮೇಲ್ಪಟ್ಟಿರುವವರ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೆ ಅವಕಾಶದೊಂದಿಗೆ ವಿಳಾಸ ಬದಲಾವಣೆ, ತಿದ್ದುಪಡಿ ಸೇರಿದಂತೆ ಇನ್ನಿತರೆ ಮತದಾರರ ಚೀಟಿಯಲ್ಲಿನ ತಪ್ಪುಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗ ನ.20 ರವರೆಗೂ ಕಾಲಾವಕಾಶ ನೀಡಿದ್ದು, ಪ್ರತಿ ಮತಗಟ್ಟೆಯಲ್ಲಿ ಮತಗಟ್ಟೆ ಅಧಿಕಾರಿಗಳನ್ನು ನೇಮಕ ಮಾಡಿದ್ದು 18 ವರ್ಷ ಮೇಲ್ಪಟ್ಟ ಯುವ ಮತದಾರರು ಸೇರ್ಪಡೆಗೆ ನಮೂನೆ ನಂ.6 ರನ್ನು ಭರ್ತಿ ಮಾಡಿ ಆಧಾರ್ ಕಾರ್ಡ್ ಜೆರಾಕ್ಸ್, ಇತ್ತೀಚಿನ ಪಾಸ್‍ಪೋರ್ಟ್ ಅಳತೆಯ ಭಾವಚಿತ್ರ, 18 ವರ್ಷ ಮೇಲ್ಪಟ ಬಗ್ಗೆ ಶಾಲಾ ದೃಢೀಕರಣ ದಾಖಲೆ ಪತ್ರ ಅಥವಾ ಅನಕ್ಷರಸ್ಥರಾಗಿದ್ದರೆ ತಾಲ್ಲೂಕು ವೈದ್ಯಾಧಿಕಾರಿಗಳಿಂದ ವಯಸ್ಸಿನ ದೃಢೀಕರಣ ಪತ್ರ, ಕುಟುಂಬದವರ ಚುನಾವಣಾ ಗುರುತಿನ ಚೀಟಿ ಜೆರಾಕ್ಸ್ ಪ್ರತಿಯೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ಸಂಬಂಧಿಸಿದ ಮತಗಟ್ಟೆ ಅಧಿಕಾರಿಗೆ ಸಲ್ಲಿಸುವಂತೆ ತಿಳಿಸಿದರು.

         ತಿದ್ದುಪಡಿಗೆ ಅವಕಾಶ: ಮತಪಟ್ಟಿಯಲ್ಲಿ ಹೆಸರು, ವಯಸ್ಸು, ಜನ್ಮದಿನಾಂಕ, ಸಂಬಂಧಿಯ ಹೆಸರು, ಭಾವಚಿತ್ರ ಬದಲಾವಣೆ ಸೇರಿದಂತೆ ಇನ್ನಿತರ ತಪ್ಪುಗಳಿದ್ದರೆ ಅದಕ್ಕೆ ಸೂಕ್ತ ದಾಖಲೆ ನೀಡುವುದರೊಂದಿಗೆ ತಿದ್ದುಪಡಿಗೆ ಅವಕಾಶವಿದೆ ಹಾಗೂ ಮರಣ, ಎರಡುಕಡೆ ಸೇರ್ಪಡೆ, ಮದುವೆಯಾಗಿ ಹೋಗಿದ್ದರೆ, ಶಾಶ್ವತ ವಲಸೆ ಹೋಗಿದ್ದರೆ, ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕಲು ನ.20 ರವರೆಗೂ ಕಾಲಾವಕಾಶವಿದೆ. ಸಾರ್ವಜನಿಕರು ಇದರ ಸದುಪಯೋಗಪಡೆದುಕೊಳ್ಳಬೇಕೆಂದು ತಿಳಿಸಿದರು.

          ಈ ಸಂದರ್ಭದಲ್ಲಿ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಶಿವಪ್ರಕಾಶ್, ಕಂದಾಯಾಧಿಕಾರಿ ನರಸಿಂಹಮೂರ್ತಿ, ಭಾನುಪ್ರಕಾಶ್ ಸೇರಿದಂತೆ ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

 

Recent Articles

spot_img

Related Stories

Share via
Copy link
Powered by Social Snap