ತುಮಕೂರು

ವಿಶೇಷ ವರದಿ:ಆರ್.ಎಸ್.ಅಯ್ಯರ್
ಸ್ಥಳೀಯವಾಗಿ ಬಹುತೇಕ ನಿರ್ಮೂಲನೆ ಆಗಿದೆಯೆಂದೇ ದಾಖಲಿಸಲಾಗಿರುವ `ಆನೆಕಾಲು ರೋಗ’ (ಮನುಷ್ಯನ ಕಾಲುಗಳು ಆನೆಗಳ ಕಾಲಿನಂತೆ ದೊಡ್ಡದಾಗಿ ಬೆಳೆಯುವ ಕಾಯಿಲೆ)ದ 130 ಪ್ರಕರಣಗಳು ಈ ವರ್ಷ ತುಮಕೂರು ಜಿಲ್ಲೆಯಲ್ಲಿ ಪತ್ತೆಯಾಗಿವೆಯೆಂಬ ಕಳವಳಕಾರಿ ಸಂಗತಿ ಇದೀಗ ಬೆಳಕಿಗೆ ಬಂದಿದೆ. ಇವಿಷ್ಟೂ ಪ್ರಕರಣಗಳು ಹೊರ ಜಿಲ್ಲೆ ಮತ್ತು ಹೊರ ರಾಜ್ಯದಿಂದ ತುಮಕೂರು ಜಿಲ್ಲೆಗೆ ಬಂದಿರುವ ವಲಸೆ ಕಾರ್ಮಿಕರಲ್ಲಿ ಕಂಡುಬಂದಿವೆಯೆಂಬುದು ಮತ್ತೊಂದು ಆತಂಕಕ್ಕೆ ಎಡೆಮಾಡಿದೆ.
ತುಮಕೂರು ನಗರ ಸೇರಿದಂತೆ ತುಮಕೂರು ಜಿಲ್ಲಾದ್ಯಂತ ದೊಡ್ಡ ಪ್ರಮಾಣದ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಎತ್ತಿನ ಹೊಳೆ ಯೋಜನೆ, ರೈಲ್ವೆ ಹಳಿ ಯೋಜನೆ, ಸೋಲಾರ್ ಯೋಜನೆ, ಸ್ಮಾರ್ಟ್‍ಸಿಟಿ ಯೋಜನೆ ಸೇರಿದಂತೆ ಸರ್ಕಾರಿ ಇಲಾಖೆಗಳ ಹಾಗೂ ಖಾಸಗಿ ಕಂಪನಿಗಳಿಂದ ಅನೇಕ ಕಾಮಗಾರಿಗಳು ವಿವಿಧ ಹಂತದ ಪ್ರಕ್ರಿಯೆಯಲ್ಲಿವೆ.
ಇವುಗಳಿಗಾಗಿ ಆಯಾ ಕಂಪನಿಗಳವರು ಅಥವಾ ಗುತ್ತಿಗೆದಾರರು ವಿವಿಧೆಡೆಗಳಿಂದ ಅಸಂಖ್ಯಾತ ಕಾರ್ಮಿಕರನ್ನು ಕರೆತಂದಿದ್ದಾರೆ. ಕರ್ನಾಟಕದ ಇತರೆ ಜಿಲ್ಲೆಗಳವರು ಹಾಗೂ ವಿವಿಧ ರಾಜ್ಯಗಳವರು ಈ ಕಾರ್ಮಿಕರ ಗುಂಪಿನಲ್ಲಿದ್ದಾರೆ. ಈ ರೀತಿ ಎಲ್ಲೆಲ್ಲಿಂದಲೋ ವಲಸೆ ಬಂದಿರುವ ಇಂತಹ ಕಾರ್ಮಿಕರಲ್ಲೇ ಆನೆಕಾಲು ರೋಗ ಪತ್ತೆಯಾಗಿದೆಯೆಂಬುದು ಗಮನಾರ್ಹ ಸಂಗತಿಯಾಗಿದೆಯಲ್ಲದೆ, ಸೊಳ್ಳೆಗಳ ಮೂಲಕ ಇದು ಇತರರಿಗೂ ಹರಡಬಹುದೆಂಬುದೇ ಆತಂಕ ಅಧಿಕವಾಗಲು ಕಾರಣವಾಗಿದೆ.
ತುಮಕೂರಿನಲ್ಲೇ ಅಧಿಕ
ಅಂಕಿ ಅಂಶಗಳನ್ನು ಪರಿಶೀಲಿಸಿದಾಗ, ತುಮಕೂರು ಜಿಲ್ಲೆಯಲ್ಲಿ ಶಿರಾ ತಾಲ್ಲೂಕನ್ನು ಹೊರತುಪಡಿಸಿ ಉಳಿದ 9 ತಾಲ್ಲೂಕುಗಳಲ್ಲಿ 2019 ರ ಜನವರಿಯಿಂದ ಅಕ್ಟೋಬರ್ ಅಂತ್ಯದವರೆಗೆ ಪತ್ತೆಯಾಗಿರುವ 130 ಪ್ರಕರಣಗಳ ಪೈಕಿ, ತುಮಕೂರು ತಾಲ್ಲೂಕಿನಲ್ಲೇ ಅತ್ಯಧಿಕ ಸಂಖ್ಯೆಯ ಪ್ರಕರಣಗಳು ಕಾಣಿಸಿವೆ.
ವಿವರ ತಾಲ್ಲೂಕುವಾರು ಈ ಕೆಳಕಂಡಂತೆ ಇದೆ:-
ತುಮಕೂರು-40, ಕೊರಟಗೆರೆ-1, ಮಧುಗಿರಿ-10, ಪಾವಗಡ-37, ಗುಬ್ಬಿ-17, ಕುಣಿಗಲ್-6, ತಿಪಟೂರು-11, ಚಿಕ್ಕನಾಯಕನಹಳ್ಳಿ-3, ತುರುವೇಕೆರೆ-5 ಹೀಗೆ 9 ತಾಲ್ಲೂಕುಗಳಿಂದ ಒಟ್ಟು 130 ಪ್ರಕರಣಗಳು ಬೆಳಕಿಗೆ ಬಂದಿವೆ. ಶಿರಾ ತಾಲ್ಲೂಕಿನಲ್ಲಿ ಯಾವುದೇ ಪ್ರಕರಣಗಳು ದಾಖಲಾಗಿಲ್ಲ.
ಬಿಹಾರಿಗಳೇ ಅತಿಹೆಚ್ಚು
ಇನ್ನು ಈ ಪತ್ತೆಯಾಗಿರುವ 130 ಪ್ರಕರಣಗಳಲ್ಲಿ ಬಿಹಾರಿಗಳೇ ಅಧಿಕಸಂಖ್ಯೆಯಲ್ಲಿರುವುದು ಮತ್ತೊಂದು ಗಮನಾರ್ಹ ವಿಷಯವಾಗಿದೆ. ಹೊರರಾಜ್ಯ ಹಾಗೂ ಹೊರಜಿಲ್ಲೆಯ ರೋಗಿಗಳ ಸಂಖ್ಯೆಯ ವಿವರ ಹೀಗಿದೆ:- ಬಿಹಾರ- 39, ಜಾರ್ಖಂಡ್-17, ಉತ್ತರಪ್ರದೇಶ-17, ಪಶ್ಚಿಮ ಬಂಗಾಳ-17, ಮಧ್ಯಪ್ರದೇಶ-7, ಪಂಜಾಬ್-1, ಛತ್ತೀಸ್‍ಗಡ-3, ಒರಿಸ್ಸಾ-12, ಆಂಧ್ರಪ್ರದೇಶ-2, ಕರ್ನಾಟಕ ರಾಜ್ಯದ ರಾಯಚೂರು ಜಿಲ್ಲೆ-2, ಗುಲ್ಬರ್ಗ ಜಿಲ್ಲೆ-2, ವಿಜಯಪುರ ಜಿಲ್ಲೆ-3, ಜಮಖಂಡಿ ಜಿಲ್ಲೆ-4, ಯಾದಗಿರಿ ಜಿಲ್ಲೆ-1, ಬೀದರ್ ಜಿಲ್ಲೆ-3.
ಇತ್ತೀಚೆಗೆ ನಗರದಲ್ಲಿ 4 ಪ್ರಕರಣಗಳು ಪತ್ತೆ
ಇದೇ ಅಕ್ಟೋಬರ್ ತಿಂಗಳಿನಲ್ಲಿ ತುಮಕೂರು ನಗರದ ಹೊರವಲಯದ ಅಂತರಸನಹಳ್ಳಿ ಮತ್ತು ಸತ್ಯಮಂಗಲ ಕೈಗಾರಿಕಾ ಪ್ರದೇಶದ 145 ಕಾರ್ಮಿಕರ ಆರೋಗ್ಯ ತಪಾಸಣೆ ವೇಳೆಯಲ್ಲಿ ನಾಲ್ವರಲ್ಲಿ ಆನೆಕಾಲು ರೋಗ ಇರುವುದು ದೃಢಪಟ್ಟಿದೆ. ಉತ್ತರಪ್ರದೇಶಕ್ಕೆ ಸೇರಿದ 30 ವರ್ಷ ವಯಸ್ಸಿನ ರೈಸ್‍ಮಿಲ್ ಕಾರ್ಮಿಕ, ಬಿಹಾರದ 28 ವರ್ಷ ವಯಸ್ಸಿನ ರೈಸ್‍ಮಿಲ್ ಕಾರ್ಮಿಕ, ಬಿಹಾರ ಮೂಲದ 40 ವರ್ಷ ವಯಸ್ಸಿನ ಕಾರ್ಖಾನೆಯೊಂದರ ಕಾರ್ಮಿಕ, ಒರಿಸ್ಸಾದ 30 ವರ್ಷ ವಯಸ್ಸಿನ ಗ್ರಾನೈಟ್ ಕಾರ್ಮಿಕನಲ್ಲಿ ಈ ರೋಗ ಪತ್ತೆಯಾಗಿದೆ. ತುಮಕೂರಿನ ಶಿರಾಗೇಟ್‍ನಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಅಕ್ಟೋಬರ್ 15 ಮತ್ತು 16 ರಂದು ನಡೆಸಿದ ರಕ್ತಲೇಪನ ಪರೀಕ್ಷೆಯಲ್ಲಿ ಈ ರೋಗವಿರುವುದು ಪತ್ತೆಯಾಗಿದೆ. ಅಕ್ಟೋಬರ್ 21 ರಿಂದ ಈ ರೋಗಿಗಳಿಗೆ ತೀವ್ರ ಚಿಕಿತ್ಸೆ ಪ್ರಾರಂಭಿಸಲಾಗಿದೆ.
ಪಾಲಿಕೆ ಸದಸ್ಯ ಆಗ್ರಹ
ಅಂತರಸನಹಳ್ಳಿಯು ತುಮಕೂರು ಮಹಾನಗರ ಪಾಲಿಕೆಯ 2 ನೇ ವಾರ್ಡ್ ವ್ಯಾಪ್ತಿಗೆ ಒಳಪಡುತ್ತದೆ. ಈ ಹಿನ್ನೆಲೆಯಲ್ಲಿ ಆ ವಾರ್ಡ್‍ನ ಪಾಲಿಕೆ ಸದಸ್ಯ ಎಸ್.ಮಂಜುನಾಥ್ (ಬಿಜೆಪಿ) ಈ ಸಮಸ್ಯೆಯ ಬಗ್ಗೆ ಬೆಳಕುಚೆಲ್ಲಿದ್ದಾರಲ್ಲದೆ, ಇದರ ಪರಿಹಾರಕ್ಕಾಗಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. “ನಮ್ಮ ವಾರ್ಡ್‍ನಲ್ಲಿ ಇಂತಹ ಯಾವುದೇ ರೋಗ ಇರಲಿಲ್ಲ. ಇದೇ ಮೊದಲ ಬಾರಿಗೆ ಆನೆಕಾಲು ರೋಗ ಇರುವುದು ಪತ್ತೆಯಾಗಿದೆ.
ಆದರೆ ಇದು ಇಲ್ಲಿಗೆ ವಲಸೆ ಬಂದಿರುವ ಕಾರ್ಮಿಕರಲ್ಲಿ ಮಾತ್ರ ಕಂಡುಬಂದಿದೆ. ಆದರೆ ಈ ರೋಗವು ಎಲ್ಲರಿಗೂ ಹರಡುವ ಆತಂತ ಇರುವುದರಿಂದ ಈ ಬಗ್ಗೆ ಇಲ್ಲಿನ ಎಲ್ಲ ಕಾರ್ಖಾನೆಗಳವರು ಜಾಗ್ರತರಾಗಬೇಕು. ಕಾರ್ಮಿಕರನ್ನು ಕರೆತಂದಿರುವ ಗುತ್ತಿಗೆದಾರರೂ ಎಚ್ಚೆತ್ತುಕೊಳ್ಳಬೇಕು. ವಲಸೆ ಬಂದಿರುವ ಕಾರ್ಮಿಕರೆಲ್ಲರಿಗೂ ನಿಯಮಿತವಾಗಿ ಆರೋಗ್ಯ ತಪಾಸಣೆಯನ್ನು ಕಡ್ಡಾಯವಾಗಿ ಮಾಡಿಸಬೇಕು. ಅದೇ ರೀತಿ ಆರೋಗ್ಯ ಇಲಾಖೆಯೂ ವಿಶೇಷ ಗಮನ ಹರಿಸಿ, ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸಬೇಕು. ಸ್ಥಳೀಯರಿಗೆ ಈ ರೋಗ ಬಾರದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸುತ್ತಿದ್ದಾರೆ.
“ಅಂತರಸನಹಳ್ಳಿಯ ಬಳಿ ಎ.ಪಿ.ಎಂ.ಸಿ. ಗೆ ಸೇರಿದ ತರಕಾರಿ ಮಾರುಕಟ್ಟೆ ಇದೆ. ಈ ಮಾರುಕಟ್ಟೆಯ ಒಳಗೆ ನೈರ್ಮಲ್ಯ ಕಾಪಾಡುವುದು ಎ.ಪಿ.ಎಂ.ಸಿ. ಜವಾಬ್ದಾರಿ. ಈಗ ಇಂತಹ ರೋಗಗಳು ಕಾಣಿಸುತ್ತಿರುವ ಹಿನ್ನೆಲೆಯಲ್ಲಿ ಎ.ಪಿ.ಎಂ.ಸಿ.ಯು ತಕ್ಷಣವೇ ಇಡೀ ಮಾರುಕಟ್ಟೆ ಆವರಣವನ್ನು ಶುಚಿಯಾಗಿಟ್ಟುಕೊಳ್ಳಬೇಕು. ಇನ್ನು 2 ನೇ ವಾರ್ಡ್‍ನಲ್ಲಿ ಸೊಳ್ಳೆ ನಿಯಂತ್ರಣಕ್ಕೆ ಪಾಲಿಕೆಯು ತನ್ನ ಪಾಲಿನ ಕ್ರಮ ಕೈಗೊಳ್ಳುವುದು” ಎಂದೂ ಮಂಜುನಾಥ್ ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
