ದಾವಣಗೆರೆ:
ದುರ್ಬಲರ ರಕ್ಷಣೆಯೇ ಸಂವಿಧಾನದ ಮೂಲ ಧ್ಯೇಯವಾಗಿದ್ದು, ದೇಶವು ಬಲವುಳ್ಳವರಿಗೆ ಮಾತ್ರ ಬದುಕುವ ಅಂಗಳವಾದಲ್ಲಿ ಸಂವಿಧಾನದ ಉದ್ದೇಶವೇ ವಿಫಲವಾಗಲಿದೆ ಎಂದು ಜಿಲ್ಲಾಧಿಕಾರಿ ಮಹಂತೇಶ್ ಬೀಳಗಿ ಸೂಚ್ಯವಾಗಿ ಎಚ್ಚರಿಸಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಜಿಲ್ಲಾಡಳಿತದ ವತಿಯಿಂದ ಏರ್ಪಡಿಸಿದ್ದ ‘ಗಣರಾಜ್ಯೋತ್ಸವ’ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಗಣರಾಜ್ಯೋತ್ಸವ ಸಂದೇಶ ನೀಡಿದ ಅವರು, ದೇಶದಲ್ಲಿ ಬಲವುಳ್ಳವರೇ ಬದುಕುವ ಅಪಾಯದಿಂದ ದೇಶವನ್ನು ನಿರಂತರವಾಗಿ ಪಾರು ಮಾಡಬೇಕಾದ ಕರ್ತವ್ಯ ದೇಶವನ್ನು ಆಳುವ ನಾಯಕತ್ವದ್ದಾಗಿದೆ ಎಂದು ಹೇಳಿದರು.
ಜಾತ್ಯತೀತ ಹಾಗೂ ಸಮಾನತೆಯ ಸಮಾಜ ನಿರ್ಮಾಣವೇ ಗಣರಾಜ್ಯದ ಪ್ರಮುಖ ಆಶಯವಾಗಿದೆ. ಆದರೆ, ಇದಕ್ಕೆ ಅನುಗುಣವಾಗಿ ದೇಶ ಪ್ರಗತಿ ಸಾಧಿಸುತ್ತಿದೆಯೇ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅವಶ್ಯಕತೆ ಇದೆ. ಸಂವಿಧಾನದ ಆಶಯಕ್ಕೆ ತಕ್ಕಂತೆ ಕೆಲಸ ಕಾರ್ಯಗಳನ್ನು ಕೈಗೊಳ್ಳಲು ಸೂಕ್ತ ಚಿಂತನೆ ನಡೆಸಬೇಕಾದ ಅಗತ್ಯತೆಯು ಇದೆ ಎಂದರು.
ಸಂವಿಧಾನ ಮತ್ತು ಅದರಲ್ಲಿನ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಕೆಲಸ ಕಾರ್ಯಗಳನ್ನು, ನಾಗರಿಕ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಡುವ ಮೂಲಕ ಭವ್ಯ ಭಾರತದ ಕನಸು ನನಸಾಗಿಸಬಹುದಾಗಿದೆ ಎಂದ ಅವರು, ಭಾರತ ಒಳ್ಳೆಯ ಸಂವಿಧಾನ ಹೊಂದಿದೆ ಎಂಬುದಾಗಿ ಕೆಲವರು ಹೇಳಿದರೆ, ಇನ್ನೂ ಕೆಲವರು ಸಂವಿಧಾನ ಸರಿಯಲ್ಲ ಎಂಬುದಾಗಿಯೂ ವಾದಿಸುವವರಿದ್ದಾರೆ. ಆದರೆ, ಇದು ಒಳ್ಳೆಯದೊ ಅಥವಾ ಕೆಟ್ಟದೊ ಎಂಬುದು ಸಂವಿಧಾನವನ್ನು ಆಚರಣೆಗೆ ತರುವವರ ಮೇಲೆ ನಿಂತಿದೆ ಎಂದು ಹೇಳಿದರು.
1947ರ ಆಗಸ್ಟ್ 15ರಂದು ಭಾರತೀಯರು ಬ್ರಿಟಿಷರ ದಾಸ್ಯದಿಂದ ಮುಕ್ತರಾದರೂ ದೇಶವು ಪ್ರಜಾಪ್ರಭುತ್ವ ವ್ಯವಸ್ಥೆಗೆ ಒಳಪಟ್ಟಿರಲಿಲ್ಲ. ಇದಕ್ಕೆ ಭಾರತ ತನ್ನದೆಯಾದ ಅಧಿಕೃತ ಸಂವಿಧಾನ ಹೊಂದಿರದ ಕಾರಣದಿಂದ ಸ್ವಾತಂತ್ರ್ಯ ನಂತರವೂ ದೇಶ 6ನೇ ಮೌಂಟ್ ಬ್ಯಾಟನ್‍ನ ಆಳ್ವಿಕೆಯಲ್ಲಿತ್ತು. ಆದರೆ, ಸುಮಾರು ಎರಡೂವರೆ ವರ್ಷಗಳ ನಂತರ ದೇಶದಲ್ಲಿ ಸಂವಿಧಾನ ಅಧಿಕೃತವಾಗಿ ಜಾರಿಯಾದ ನಂತರದಲ್ಲಿ ಭಾರತ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಸಾಲಿಗೆ ಸೇರಿತು ಎಂದು ವಿಶ್ಲೇಷಿಸಿದರು.
ಸ್ವತಂತ್ರ ಭಾರತವು ಗಣರಾಜ್ಯದ ರೂಪ ತಳೆದು ನಿಲ್ಲಲು ಸುಮಾರು ಎರಡೂವರೆ ವರ್ಷಗಳ ಕಾಲಾವಕಾಶ ತೆಗೆದುಕೊಂಡಿತು. ಸಂವಿಧಾನ ರಚನೆಗಾಗಿ 1946ರ ಡಿಸೆಂಬರ್ 11ರಂದು ಡಾ.ಬಾಬು ರಾಜೇಂದ್ರ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ಸಂವಿಧಾನ ರಚನಾ ಸಮಿತಿಯನ್ನು ಹಾಗೂ 1847ರ ಆಗಸ್ಟ್ 29ರಂದು ಡಾ.ಬಿ.ಆರ್.ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿ ಸಂವಿಧಾನ ಕರಡು ಸಮಿತಿ ನೇಮಿಸಲಾಯಿತು ಬಳಿಕ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ತಂಡ ಹಲವು ದೇಶಗಳ ಸಂವಿಧಾನಗಳ ಅಧ್ಯಯನ ನಡೆಸಿ, ವೈವಿಧ್ಯತೆಯಿಂದ ಕೂಡಿರುವ ಭಾರತದ ನೆಲೆಗಟ್ಟಿಗೆ ಸರಿ ಹೊಂದುವಂತಹ ಸಂವಿಧಾನ ರಚನೆಗೆ ಪರಿಶ್ರಮಿಸಿ 1948ರ ಫೆಬ್ರವರಿಯಲ್ಲಿ ಕರಡು ಸಂವಿಧಾನವನ್ನು ಸಿದ್ಧಪಡಿಸಿತು ಎಂದು ಅವರು ಮಾಹಿತಿ ನೀಡಿದರು.
ಮಹಾತ್ಮ ಗಾಂಧಿಜೀ, ಜವಹಾರ್‍ಲಾಲ್ ನೆಹರು, ಸರ್ದಾರ್ ವಲ್ಲಭಬಾಯಿ ಪಟೇಲ್ ಹಾಗೂ ನೇತಾಜಿ ಸುಭಾಷ್‍ಚಂದ್ರ ಭೋಸ್‍ರಂತಹ ನಾಯಕರ ಹೋರಾಟ, ತ್ಯಾಗ ಮತ್ತು ಬಲಿದಾನದ ಫಲವಾಗಿ ಶತಮಾನಗಳ ಕಾಲ ಬ್ರಿಟಿಷರ ದಾಸ್ಯದಲ್ಲಿದ್ದ ಭಾರತ ಸ್ವತಂತ್ರಗೊಂಡು, ತನ್ನದೆಯಾದ ಸಂವಿಧಾನ ರಚಿಸಿಕೊಂಡು ಬಲಿಷ್ಠ ಪ್ರಜಾಪ್ರಭುತ್ವಕ್ಕೆ ಅಡಿಪಾಯ ಹಾಕಿತು. ಈ ಸಂವಿಧಾನ ರಚನೆಯಲ್ಲಿ ಟಿ.ಟಿ.ಕೃಷ್ಣಮಾಚಾರಿ, ಸರ್ದಾರ್ ವಲ್ಲಭಬಾಯ್ ಪಾಟೇಲ್, ಡಾ.ಬಿ.ಎನ್.ಆರ್.ರಾವ್, ಡಾ.ಬಿ.ಆರ್.ಅಂಬೇಡ್ಕರ್ ಸೇರಿದಂತೆ ಹನ್ಸ್ ಮೆಹತಾ, ಸುಚೇತಾ ಕೃಪಲಾನಿ, ವಿಜಯಲಕ್ಷ್ಮೀ ಪಂಡಿತ್, ರಾಜಕುಮಾರಿ ಅಮೃತ್‍ಕೌರ್ ಮತ್ತು ಸರೋಜಿನಿ ನಾಯ್ಡು ಅವರ ಪಾತ್ರ ಸ್ಮರಣೀಯವಾಗಿದ್ದು, ಅದರಲ್ಲೂ ಸಂವಿಧಾನದ ಪಿತಾಮಹಾ ಎಂದೇ ಕರೆಯಲ್ಪಡುವ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪಾತ್ರ ಅತ್ಯಂತ ವಿಶೇಷವಾಗಿದೆ ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಸಂಸದ ಜಿ.ಎಂ ಸಿದ್ದೇಶ್ವರ, ಶಾಸಕ ಎಸ್.ಎ.ರವೀಂದ್ರನಾಥ, ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಯಶೋಧಮ್ಮ ಮರಳಪ್ಪ, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಾಹಕಾಧಿಕಾರಿ ಪದ್ಮ ಬಸವಂತಪ್ಪ, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ದೂಡಾ ಆಯುಕ್ತ ಬಿ.ಟಿ.ಕುಮಾರಸ್ವಾಮಿ, ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದಗಲ್, ತಹಶೀಲ್ದಾರ್ ಸಂತೋಷ್‍ಕುಮಾರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
