ಎನ್‍ಕೌಂಟರ್ ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ..!

ದಾವಣಗೆರೆ:

     ಹೈದ್ರಾಬಾದ್‍ನ ಪಶುವೈದ್ಯೆ ಅತ್ಯಾಚಾರ, ಹತ್ಯೆ ಪ್ರಕರಣ ನಾಲ್ವರು ಆರೋಪಿಗಳನ್ನು ಪೊಲೀಸರು ಎನ್‍ಕೌಂಟರ್ ಮಾಡಿರುವ ಘಟನೆ ಸ್ಪಷ್ಟ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಡಿ.ವೈ.ಬಸಾಪುರ ತಿಳಿಸಿದ್ದರು.

      ನಗರದ ಆರ್.ಎಲ್.ಕಾನೂನು ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಿದ್ದ ಅಂತರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೊನ್ನೆ ಹೈದರಾಬಾದ್‍ನಲ್ಲಿ ನಾಲ್ವರು ಆರೋಪಿಗಳನ್ನು ಪೊಲೀಸರು ಎನ್‍ಕೌಂಟರ್ ಮಾಡಿ ಹೊಡೆದುರುಳಿಸಿರುವ ಘಟನೆಯು ಸ್ಪಷ್ಟ ಮಾನವ ಹಕ್ಕಿನ ಉಲ್ಲಂಘನೆ ಆಗಿದೆ ಎಂದು ಹೇಳಿದರು.

     ಎನ್‍ಕೌಂಟರ್‍ನಲ್ಲಿ ಆರೋಪಿಗಳನ್ನು ಕೊಂದಿರುವ ಪೊಲೀಸರ ಕ್ರಮವನ್ನು ಅನೇಕರು ಹೊಗಳಿದರು, ಸಮರ್ಥಿಸಿಕೊಂಡರು. ಆದರೆ, ಅದು ಕಾನೂನಾತ್ಮಕ ಪ್ರಕ್ರಿಯೆಯಾಗಿರದೇ ತಕ್ಷಣಕ್ಕೆ ತೆಗೆದುಕೊಂಡ ನಿಲುವು ಆಗಿದೆ. ಯಾವುದೇ ಪ್ರಕರಣದಲ್ಲೂ ಹಾಗಾಗಬಾರದು. ಎಲ್ಲದಕ್ಕೂ ಒಂದು ಕಾನೂನು ಕಟ್ಟಳೆಗಳು ಇವೆ ಅದರಂತೇ ಸಾಗಬೇಕು. ಇದನ್ನು ಮಾಧ್ಯಮಗಳು ಅತಿಯಾಗಿ ವೈಭವೀಕರಿಸಿ ವಿಜೃಂಭಿಸಿದ್ದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

       ಮನುಷ್ಯ ಹುಟ್ಟಿನಿಂದ ಸಾಯುವವರೆಗೂ ಬೇರೊಬ್ಬರ ಹಕ್ಕಿಗೆ ಚ್ಯುತಿ ಉಂಟುಮಾಡದೇ ಗೌರವದಿಂದ ಬದುಕುವುದೇ ಮಾನವ ಹಕ್ಕು ಆಗಿದೆ. ಬೇರೊಬ್ಬರ ವೈಯಕ್ತಿಕ ಘನತೆಗೆ ಧಕ್ಕೆ ಮಾಡಿದರೆ ಅದು ಮಾನವ ಹಕ್ಕಿನ ಸ್ಪಷ್ಪ ಉಲ್ಲಂಘನೆ ಯಾಗಲಿದೆ ಎಂದು ವಿಶ್ಲೇಷಿಸಿದರು.2ನೇ ವಿಶ್ವ ಮಹಾಯುದ್ದದಲ್ಲಿ ಆದ ಅಧಿಕ ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ದ ಸೆಟೆದು ನಿಂತು ತಮ್ಮ ಹಕ್ಕುಗಳಿಗೆ ಹೋರಾಡಿದ ಪರಿಣಾಮ 1948ರ ಡಿಸೆಂಬರ್ 10 ರಂದು ಘೋಷಿಸಲಾದ ಮ್ಯಾಗ್ನಕಾರ್ಟ ಈ ಮಾನವ ಹಕ್ಕುಗಳ ದಿನವಾಗಿದೆ. ವಿಶ್ವ ಸಂಸ್ಥೆಯ ಎಲ್ಲಾ ಸದಸ್ಯ ರಾಷ್ಟ್ರಗಳು ಒಮ್ಮತದಿಂದ ಒಪ್ಪಿ ಸಹಿ ಹಾಕಿದ ದಿನ ಇದಾಗಿದೆ ಎಂದು ಸ್ಮರಿಸಿದರು.

      ಸಂವಿಧಾನ ಹಲವಾರು ಮೂಲಭೂತ ಹಕ್ಕು ಮತ್ತು ಕರ್ತವ್ಯಗಳನ್ನು ಒದಗಿಸಿದೆ. ಅಂತೆಯೇ ಮಾನವ ಹಕ್ಕುಗಳನ್ನು ಗೌರವಿಸುವುದು ಅಷ್ಟೇ ಪ್ರಮುಖವಾಗಿದೆ. ಬಡತನವೂ ಒಂದು ಸ್ಪಷ್ಟ ಮಾನವ ಹಕ್ಕು ಉಲ್ಲಂಘನೆಯಾಗಿದ್ದು, ಒಂದು ರಾಜ್ಯ ಪ್ರಜೆಗಳನ್ನು ಬಡತನದಿಂದ ಮುಕ್ತಿ ಕೊಡಿಸಲು ಶ್ರಮಿಸಬೇಕು. ಹಾಗಾದಾಗ ಮಾತ್ರ ಅದು ಕಲ್ಯಾಣ ರಾಜ್ಯವಾಗಲು ಸಾಧ್ಯವಾಗಲಿದೆ ಎಂದರು.

     ಬೇರೆಯವರನ್ನು ಕಂಡು ಹೊಟ್ಟೆಕಿಚ್ಚು ಪಡುವುದೂ ಮಾನವ ಹಕ್ಕು ಉಲ್ಲಂಘ£ ಆಗಲಿದೆ ಎಂದ ಅವರು, ವಕೀಲ ವೃತ್ತಿ ಒಂದು ರೀತಿ ಹೋರಾಟ. ಕಠಿಣ ತಪಸ್ಸು ಬೇಕು. ನಮ್ಮಲ್ಲಿರುವ ಕೀಳರಿಮೆ ಬಿಟ್ಟು ಸಮಾಜಮುಖಿಯಾದರೆ ಯಶಸ್ಸಿನತ್ತ ದಾಪುಗಲು ಹಾಕಲು ಸಾಧ್ಯವಾಗಲಿದೆ ಎಂದು ಹೇಳಿದರು.

      ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಜೆ.ಎಸ್.ಸದಾನಂದ ಮಾತನಾಡಿ, ಮಾನವ ಹಕ್ಕುಗಳಿಗೆ ಸುಧೀರ್ಘವಾದ ಇತಿಹಾಸವಿದೆ. ಕ್ರಿಸ್ತಪೂರ್ವದಿಂದಲೂ ಮಾನವ ಹಕ್ಕುಗಳಿಗಾಗಿ ಹೋರಾಟವನ್ನು ನಡೆಸಲಾಗಿದೆ. ಆಳುವವರ ಮತ್ತು ಆಳಿಸಿಕೊಳ್ಳುವವರ ನಡುವಿನ ಸಂಘರ್ಷದಿಂದ ಮಾನವ ಹಕ್ಕುಗಳು ಹುಟ್ಟಿಕೊಂಡಿವೆ. ಭಾರತದಲ್ಲಿ ವೇದಗಳ ಕಾಲದಿಂದಲೂ ವಸುದೈವ ಕುಟುಂಬಕಂ ಎಂಬ ಪರಿಕಲ್ಪನೆಯ ಮೂಲಕ ಮಾನವ ಹಕ್ಕುಗಳನ್ನು ಕಾಪಾಡಿಕೊಂಡು ಬರಲಾಗುತ್ತಿದೆ. ಆದರೆ, ಇಂದು ಮಾನವ ಹಕ್ಕುಗಳ ಉಲ್ಲಂಘನೆ ವಿವಿಧ ರೀತಿಯಲ್ಲಿ ಆಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

      ವಕೀಲ ದಾದಾಪೀರ್ ಮಾತನಾಡಿ, ಮಾನವ ಹಕ್ಕುಗಳು ಅನೇಕ ಉದ್ದೇಶಗಳನ್ನು ಹೊಂದಿದೆ. ಮಾನವ ಜೀವಿಗಳು ಈ ಪ್ರಪಂಚದಲ್ಲಿ ಮುಕ್ತರಾಗಿ ಜೀವಿಸುವ ಮತ್ತು ಬೇಧ-ಭಾವವಿಲ್ಲದೇ ಬದುಕುವ ಹಕ್ಕು ಹೊಂದಿದ್ದಾರೆ. ಯಾರ ಗುಲಾಮಗಿರಿಯಲ್ಲ್ಲೂ ಇರದೇ, ಸ್ವಂತತ್ರರಾಗಿ ಜೀವಿಸಬೇಕು. ಹಿಂಸೆ ಮತ್ತು ಅಮಾನವೀಯವಾಗಿ ಬೇರೊಬ್ಬರಿಂದ ಶಿಕ್ಷೆಗೆ ಒಳಗಾಗದಂತೆ ಜೀವಿಸುವ ಹಕ್ಕುಗಳು ಸೇರಿದಂತೆ ವಿವಿಧ ಉದ್ದೇಶವನ್ನು ಇದು ಹೊಂದಿದೆ ಎಂದು ತಿಳಿಸಿದರು.

      ಮಾನವ ಹಕ್ಕುಗಳ ವೇದಿಕೆಯ ಅಧ್ಯಕ್ಷ ಬಿ.ಎಂ ಹನುಮಂತಪ್ಪ ಮಾತನಾಡಿ, ಪ್ರಸ್ತುತ ನಮ್ಮಲ್ಲಿ ಬಡವರಿಗೆ, ಶ್ರೀಮಂತರಿಗೆ ಎಂಬಂತೆ ಪ್ರತ್ಯೇಕ ಹಕ್ಕುಗಳಿವೆ ಎಂಬಂತೆ ಕಾಣುತ್ತದೆ. ಮಾನವ ಹಕ್ಕುಗಳು ಎಲ್ಲರಿಗೂ ಒಂದೇ ರೀತಿಯಲ್ಲಿ ಸಿಗುತ್ತಿಲ್ಲ. ಇದು ಬದಲಾಗಬೇಕು. ಹೋರಾಟದ ಮನೋಭಾವವನ್ನು ಯುವಜನತೆ ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದರು.

      ಅಧ್ಯಕ್ಷತೆ ವಹಿಸಿದ್ದ ಆರ್.ಎಲ್ ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಸೋಮಶೇಖರಪ್ಪ ಮಾತನಾಡಿ, ನಮಗೆ ಹಕ್ಕುಗಳು ಇರುವಂತೆ ಬಾಧ್ಯತೆಗಳೂ ಇವೆ. ಇವುಗಳನ್ನು ನಾವು ಮೊದಲು ತಿಳಿಯಬೇಕು. ಮಾನವ ಮನುಷ್ಯನಾಗಿ ಬದುಕಿದಾಗ ಮಾತ್ರ ಮಾನವ ಹಕ್ಕುಗಳು ಸರಿಯಾಗುತ್ತವೆ. ಸಮಾಜದ ಹಿತದೃಷ್ಠಿಯಿಂದ ಎಲ್ಲರೂ ಕಾನೂನುಬದ್ಧವಾಗಿ ನಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಪ್ರಭು.ಎನ್.ಬಡಿಗೇರ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ಟಿ.ಮಂಜುನಾಥ್, ವಕೀಲ ಆಂಜನೇಯ ಗುರೂಜಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap