ಬೆಂಗಳೂರು
ಹಾಡಹಗಲೇ ಎಂಜಿನಿಯರ್ ಒಬ್ಬರ ಮನೆಯಲ್ಲಿದ್ದ ಚಿನ್ನ, ಬೆಳ್ಳಿ ಹಾಗೂ ಬೆಲೆ ಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿರುವ ದುರ್ಘಟನೆ ಆನೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆನೇಕಲ್‍ನ ಹೊಂಪಲಘಟ್ಟ ಸಮೀಪದ ಎಂಡಿಎಸ್ ಮಿಲೆನಿಯಂ ವ್ಯಾಲಿ ಲೇಔಟ್‍ನ ನಿವಾಸಿ ಸೀತಾರಾಮ್ ಎಂಬವರ ಮನೆಗೆ ಬುಧವಾರ ಮಧ್ಯಾಹ್ನ ಕಳ್ಳರು ನುಗ್ಗಿ ಕೃತ್ಯ ಎಸಗಿದ್ದಾರೆ. ಸುಮಾರು 30 ಗ್ರಾಂ ಚಿನ್ನ, ಎರಡು ಬೆಳ್ಳಿಯ ವಿಗ್ರಹ, 35,000 ರೂ. ನಗದು ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ.
ಕೋಲಾರ ಮೂಲದ ಸೀತಾರಾಮ್ ಖಾಸಗಿ ಕಂಪನಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ನಿನ್ನೆ ಕೆಲಸಕ್ಕೆ ತೆರಳಿದಾಗ ಮನೆ ಕಳ್ಳತನವಾಗಿದೆ. ಲೇಔಟ್‍ನಲ್ಲಿ ಕಾಂಪೌಂಡ್ ಹಾಗೂ ಸೆಕ್ಯೂರಿಟಿ ವ್ಯವಸ್ಥೆ ಇಲ್ಲ. ಹೀಗಾಗಿ ಪದೇ ಪದೇ ಮನೆ ಕಳ್ಳತವಾಗುತ್ತಿವೆ.
ಕಳೆದ ಕೆಲವು ತಿಂಗಳಿನಲ್ಲಿ ನಡೆದ ಮೂರನೇ ಕಳ್ಳತನ ಪ್ರಕರಣ ಇದಾಗಿದೆ. ಇಷ್ಟಾದರೂ ಪೊಲೀಸರು ಹಾಗೂ ಲೇಔಟ್ ಮಾಲೀಕರು ಕ್ಯಾರೆ ಅನ್ನುತ್ತಿಲ್ಲ ಎಂದು ಲೇಔಟ್ ನಿವಾಸಿಗಳು ದೂರಿದ್ದಾರೆ. ಸೀತಾರಾಮ್ ಅವರು ಕಳ್ಳತನದ ಕುರಿತು ಆನೇಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಳ್ಳರ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ