ಧಾರವಾಡ
ರಾಜ್ಯ ಸರ್ಕಾರ ಮುಂದಿನ ವರ್ಷದಿಂದ ಒಂದು ಸಾವಿರ ಆಂಗ್ಲ ಮಾಧ್ಯಮ ಶಾಲೆಗಳನ್ನು ಪ್ರಾರಂಭಿಸುವ ನಿರ್ಣಯ ಅನುಷ್ಠಾನ ಮಾಡಬಾರದು, ಕೇಂದ್ರ ಸರ್ಕಾರ ನಡೆಸುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲಿಯೂ ಬರೆಯಲು ಅವಕಾಶ ನೀಡಬೇಕೆಂಬುದು ಸೇರಿದಂತೆ ಐದು ಪ್ರಮುಖ ನಿರ್ಣಯಗಳನ್ನು 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾನುಮತದಿಂದ ಕೈಗೊಳ್ಳಲಾಗಿದೆ.
ಸಮ್ಮೇಳನದ ಸಮಾರೋಪ ಸಮಾರಂಭಕ್ಕೂ ಮುನ್ನ ನಡೆದ ಬಹಿರಂಗ ಅಧಿವೇಶನದಲ್ಲಿ ಕನ್ನಡ ಸಾಹಿತ್ಯ ಪರಿಷತ್‍ನ ಗೌರವ ಕಾರ್ಯದರ್ಶಿ ವ.ಚ.ಚನ್ನೇಗೌಡ ಅವರು ಪಂಚ ನಿರ್ಣಯಗಳನ್ನು ಮಂಡಿಸಿದರು. ಆಗ ಸಭಿಕರೆಲ್ಲರೂ ಕೈ ಎತ್ತಿ ಹಾಗೂ ಪರವಾಗಿ ಘೋಷಣೆ ಕೂಗಿ ಸರ್ವಾನುಮತದಿಂದ ನಿರ್ಣಯವನ್ನು ಬೆಂಬಲಿಸಿದರು.
ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆ ಹಾಡುವ ಅವಧಿಯನ್ನು ಗರಿಷ್ಠ 2 ನಿಮಿಷ 30 ಸೆಕೆಂಡ್‍ಗಳಿಗೆ ಸರ್ಕಾರ ನಿಗದಿಗೊಳಿಸಬೇಕು ಎಂಬ ನಿರ್ಣಯವನ್ನು ಅಂಗೀಕರಿಸಲಾಯಿತು. ಈ ಮೂಲಕ ಹಲವು ವರ್ಷಗಳಿಂದ ಚರ್ಚೆಯಾಗುತ್ತಿದ್ದ ಅವಧಿ ಕಡಿಮೆಗೊಳಿಸುವ ವಿಷಯಕ್ಕೆ ತಾರ್ತಿಕ ಅಂತ್ಯ ಕಾಣಿಸುವ ಪ್ರಯತ್ನ ಮಾಡಲಾಗಿದೆ. ಸರ್ಕಾರ ಈಗಾಗಲೇ ಈ ಬಗ್ಗೆ ಸಮಿತಿ ರಚಿಸಿ ವರದಿ ತರಿಸಿಕೊಂಡಿದೆ. ಇದೀಗ ಸಮ್ಮೇಳನ ಕೂಡ ಇದೇ ನಿರ್ಣಯ ಕೈಗೊಂಡಿರುವುದರಿಂದ ಅವಧಿ ಕಡಿತಗೊಳಿಸುವ ಸಾಧ್ಯತೆ ನಿಚ್ಛಳವಾಗಿದೆ. ಭಾರೀ ಚರ್ಚೆಗೆ ಕಾರಣವಾಗಿದ್ದ ಹಾಗೂ ಸಾಹಿತಿಗಳು, ರಾಜಕಾರಣಿಗಳ ನಡುವೆ ತಿಕ್ಕಾಟಕ್ಕೆ ಕಾರಣವಾಗಿರುವ 1 ಸಾವಿರ ಆಂಗ್ಲ ಮಾಧ್ಯಮ ಶಾಲೆಗಳನ್ನು ಪ್ರಾರಂಭಿಸುವುದಕ್ಕೆ ನಿರೀಕ್ಷೆಯಂತೆಯೇ ಸಮ್ಮೇಳನ ವಿರೋಧ ವ್ಯಕ್ತಪಡಿಸಿದೆ. ಯಾವುದೇ ಕಾರಣಕ್ಕೂ ಆಂಗ್ಲ ಮಾಧ್ಯಮ ಶಾಲೆ ಆರಂಭಿಸುವ ನಿರ್ಧಾರವನ್ನು ಹಿಂಪಡೆಯಬೇಕು ಎಂಬ ನಿರ್ಣಯ ಅಂಗೀಕರಿಸಿದೆ.
ಕೇಂದ್ರ ಸರ್ಕಾರ ನಡೆಸುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲಿಯೂ ಬರೆಯಲು ಅವಕಾಶ ಕಲ್ಪಿಸಬೇಕು ಎಂಬ ನಿರ್ಣಯವನ್ನು ಸಮ್ಮೇಳನದಲ್ಲಿ ತೆಗೆದುಕೊಳ್ಳಲಾಗಿದೆ. ಇದು ಜಾರಿಯಾದರೆ ರಾಜ್ಯದ ಲಕ್ಷಾಂತರ ಮಂದಿ ಯುವಕ-ಯುವತಿಯರಿಗೆ ಅನುಕೂಲವಾಗಲಿದೆ. ಕೇಂದ್ರ ಸರ್ಕಾರ ದೇಶಾದ್ಯಂತ ಹಿಂದಿ ಹೇರುವ ಪ್ರಯತ್ನ ನಡೆಸುತ್ತಿರುವ ಈ ಸಂದರ್ಭದಲ್ಲೇ ಈ ನಿರ್ಣಯ ಅತ್ಯಂತ ಮಹತ್ವ ಪಡೆದುಕೊಂಡಿದೆ. ಪ್ರಾಥಮಿಕ ಶಿಕ್ಷಣ, ಅಂದರೆ ಒಂದರಿಂದ 7ನೇ ತರಗತಿಯವರೆಗೆ ಶಿಕ್ಷಣವನ್ನು ರಾಷ್ಟ್ರೀಕರಣ ಮಾಡಬೇಕು ಎಂಬ ನಿರ್ಣಯವನ್ನೂ ಅಂಗೀಕರಿಸಲಾಗಿದೆ.
ಸಮ್ಮೇಳನಾಧ್ಯಕ್ಷರು ತಮ್ಮ ಭಾಷಣದಲ್ಲಿಯೂ ಇದನ್ನು ಪ್ರಸ್ತಾಪಿಸಿದ್ದರು.ಕನ್ನಡದ ಎಲ್ಲಾ ಸಮಸ್ಯೆಗಳಿಗೆ ಇದು ಪರಿಹಾರ ಒದಗಿಸುವ ನಿರೀಕ್ಷೆಯೊಂದಿಗೆ ಈ ನಿರ್ಣಯವನ್ನು ಡಾ.ಕಂಬಾರ ಅವರೇ ಸೂಚಕರಾಗಿ ಮಂಡಿಸಿದ್ದಾರೆ. ಹಿಂದಿನಿಂದಲೂ ಅವರು ಪ್ರಾಥಮಿಕ ಶಿಕ್ಷಣದ ರಾಷ್ಟ್ರೀಕರಣದ ಬಗ್ಗೆ ಒಲವು ಹೊಂದಿದ್ದರು. ಅದೇ ರೀತಿ ಸಾಹಿತ್ಯ ಸಮ್ಮೇಳನವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟ ಸ್ವಾಗತ ಸಮಿತಿಯ ಅಧ್ಯಕ್ಷರು, ಎಲ್ಲಾ ಪದಾಧಿಕಾರಿಗಳು, ಕಾರ್ಯಕರ್ತರಿಗೂ ಮತ್ತು ಆತಿಥ್ಯ ನೀಡಿ ಪ್ರೀತಿತೋರಿದ ಧಾರವಾಡದ ಸಮಸ್ತ ಜನತೆಗೂ ಈ ಮಹಾಸಭೆ ಧನ್ಯವಾದ ಹಾಗೂ ಕೃತಜ್ಞತೆ ಅರ್ಪಿಸುತ್ತದೆ ಎಂಬ ನಿರ್ಣಯವನ್ನು ಸಮ್ಮೇಳನ ಅಂಗೀಕರಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








