ಒಂದು ಸಾವಿರ ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ಆರಂಭ: ಕುಮಾರಸ್ವಾಮಿ

ಬೆಂಗಳೂರು

        ನಾಡಿನ ಸಾಹಿತ್ಯ ಮತ್ತು ರಾಜಕೀಯ ವಲಯದ ತೀವ್ರ ವಿರೋಧದ ನಡುವೆಯೂ ಸರ್ಕಾರ, ಒಂದು ಸಾವಿರ ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ಆರಂಭಿಸಲು ನಿರ್ಧರಿಸಿದೆ.ಇದು ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಮತ್ತು ,ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ನಡುವಿನ ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆಗಳು ಹೆಚ್ಚಾಗಿದೆ.

     ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಾರಂಭಿಕ ಹಂತದಲ್ಲಿ 276 ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸುವ ಗಟ್ಟಿ ನಿರ್ಧಾರ ತೆಗೆದುಕೊಂಡಿದೆ.ಇದು ರಾಜ್ಯದಲ್ಲಿ ಮತ್ತೊಂದು ಗೋಕಾಕ್ ಮಾದರಿಯ ಚಳುವಳಿಗೆ ಕಾರಣವಾಗಬಹುದು ಎಂಬ ಅಪಾಯವನ್ನೂ ಲೆಕ್ಕಿಸದೇ ಸರ್ಕಾರ ಈ ತೀರ್ಮಾನ ತೆಗೆದುಕೊಂಡಿದೆ. ಇದಕ್ಕಾಗಿ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಕಳೆದ ಅಕ್ಟೋಬರ್ ತಿಂಗಳಿನಲ್ಲಿಯೇ ಆದೇಶ ಹೊರಡಿಸಿದೆ.

       2017-18, 2018-19 ನೇ ಸಾಲಿನ ಆಯವ್ಯಯದಲ್ಲಿ ಘೋಷಣೆ ಮಾಡಿದಂತೆ ಕನ್ನಡ ಮಾಧ್ಯಮದ ಜೊತೆಗೆ 276 ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಕಡ್ಡಾಯವಾಗಿ 1ನೇ ತರಗತಿಯಿಂದ ಆಂಗ್ಲ ಮಾಧ್ಯಮ ಪ್ರಾರಂಭಿಸಿಲು ಅಗತ್ಯ ಕ್ರಮಕೈಗೊಳ್ಳುವಂತೆ ಆದೇಶ ಮಾಡಲಾಗಿದೆ.

       ಈಗಾಗಲೇ 6 ಮತ್ತು 7 ನೇ ತರಗತಿಗಳಲ್ಲಿ ಆಂಗ್ಲ ಮಾಧ್ಯಮದಲ್ಲಿ ಬೋಧಿಸುತ್ತಿರುವ ಶಾಲೆಗಳಲ್ಲೂ ಇನ್ನು ಮುಂದೆ 1 ನೇ ತರಗತಿಯಿಂದ ಪ್ರತ್ಯೇಕವಾಗಿ ಆಂಗ್ಲ ಮಾಧ್ಯಮ ಪ್ರಾರಂಭಿಸಲು ಆದ್ಯತೆ ನೀಡುವಂತೆ ಸರ್ಕಾರ ಸ್ಪಷ್ಟಪಡಿಸಿದೆ. ಹೆಚ್ಚಿನ ದಾಖಲಾತಿ ಹೊಂದಿರುವ ಗ್ರಾಮೀಣ ಪ್ರದೇಶಗಳ ಶಾಲೆಗಳಿಗೆ ಆದ್ಯತೆ ನೀಡಬೇಕು. ಈಗಾಗಲೇ ಇಂಗ್ಲಿಷ್ ಬೋಧನೆಯಲ್ಲಿ ಪರಿಣಿತಿ ಪಡೆದಿರುವ ಶಿಕ್ಷಕರಿಗೆ ಪರೀಕ್ಷೆ ನಡೆಸಿ, ಅರ್ಹರಾದವರಿಗೆ ಆಂಗ್ಲ ಮಾಧ್ಯಮದಲ್ಲಿ ಬೋಧನೆ ಮಾಡಲು ನಿಯೋಜನೆ ಮಾಡಬೇಕು. ಆಯ್ಕೆಗೊಂಡ ಶಿಕ್ಷಕರಿಗೆ ಪ್ರಾದೇಶಿಕ ಆಂಗ್ಲ ಭಾಷಾ ತರಬೇತಿ ಸಂಸ್ಥೆಯ ಮೂಲಕ 15 ದಿನಗಳ ತರಬೇತಿ ನೀಡಬೇಕು. ಪ್ರತಿ ತಿಂಗಳು ಸಂಸ್ಥೆಯೊಂದಿಗೆ ವಿಡೀಯೋ ಸಮ್ಮೇಳನ ನಡೆಸತಕ್ಕದ್ದು. ಇಂಗ್ಲಿಷ್ ಮಾಧ್ಯಮ ತರಗತಿ ಪ್ರಾರಂಭಿಸಲು ಅಗತ್ಯವಾದ ಪಠ್ಯವಸ್ತು, ಪಠ್ಯಪುಸ್ತಕಗಳು ಹಾಗೂ ಸ್ಮಾರ್ಟ್ ತರಗತಿಗಳಲ್ಲಿ ಬೋಧಿಸಲು ಅನುಕೂಲವಾಗುವಂತೆ ಧ್ವನಿ ಮತ್ತು ದೃಶ್ಯಗಳನ್ನು ಒಳಗೊಂಡ e-ಛಿoಟಿಣeಟಿಣ ನ್ನು ಸಿದ್ಧಪಡಿಸಿಕೊಳ್ಳುವಂತೆ ಸರ್ಕಾರ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದೆ.

      ಸರ್ಕಾರದ ಆದೇಶದ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ, ಮಾತನಾಡಿ, ಇದು ಕನ್ನಡದ ಮಕ್ಕಳಿಗೆ ಮಾಡುವ ದೊಡ್ಡ ದ್ರೋಹ. ಕೃಷಿ ಮತ್ತು ಪರಿಸರ ಭಾಷೆಯಲ್ಲಿ ಹೇಳುವುದಾದರೆ 1 ರಿಂದ 10 ನೇ ತರಗತಿಯವರೆಗೆ ಮಾಧ್ಯಮ ತಾಯಿಭಾಷೆಯಲ್ಲಿಯೇ ಇರಬೇಕು. ಇಂಗ್ಲಿಷ್ ಕಲಿಕೆಗೆ ನಮ್ಮ ವಿರೋಧವಿಲ್ಲ. ಆದರೆ ಇದು 1 ನೇ ತರಗತಿಯಿಂದಲೇ ಮಾಧ್ಯಮವಾಗಬಾರದು ಎಂದಿದ್ದಾರೆ.

      ಸರ್ಕಾರದ ಈ ನಡೆ ಮಕ್ಕಳಲ್ಲಿ ಕಲಿಕೆ ಮತ್ತು ಗ್ರಹಿಕೆ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಇದರ ಪರಿಣಾಮ, ಮುಂಬರುವ ದಿನಗಳಲ್ಲಿ ಶಾಲೆ ಬಿಡುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತದೆ. ಕನ್ನಡ ಭಾಷೆಯನ್ನು, ಶಿಕ್ಷಣವನ್ನು ಸರ್ಕಾರವೇ ಅಪಾಯದ ಪರಿಸ್ಥಿತಿಗೆ ನೂಕಿದಂತಾಗುತ್ತದೆ. ಆದೇಶ ಹೊರಡಿಸುವ ಮೊದಲು ಭಾಷೆ ಮತ್ತು ಮಾಧ್ಯಮ ವಿಚಾರದಲ್ಲಿ ಜ್ಞಾನಪೀಠ ಸಾಹಿತಿ, ರಾಷ್ಟ್ರಕವಿ ಕುವೆಂಪು ಅವರ ನೀತಿಯನ್ನು ಸರ್ಕಾರ, ಅಧಿಕಾರಿಗಳು ಆಲೋಚನೆ ಮಾಡಿದ್ದರೆ, ಇಂತಹ ಕನ್ನಡ ವಿರೋಧಿ, ದ್ರೋಹಿ ನಿರ್ಧಾರ ಪ್ರಕಟವಾಗುತ್ತಿರಲಿಲ್ಲ ಎಂದು ಪೆÇ್ರ|ಎಸ್.ಜಿ.ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

      ಇದು ದಕ್ಷಿಣ ಅಫ್ರಿಕದಲ್ಲಿನ ಗುಲಾಮಗಿರಿ ಪದ್ಧತಿಗೆ ಕನ್ನಡಿಗರನ್ನು ನೂಕುತ್ತದೆ ಎಂಬುದನ್ನು ಸರ್ಕಾರ ಈಗಲಾದರೂ ಅರ್ಥೈಸಿಕೊಳ್ಳಬೇಕು. ಇಂಗ್ಲಿಷನ್ನು ಒಂದು ಭಾಷೆಯನ್ನಾಗಿ ಕಲಿಸುವುದಕ್ಕೆ ಯಾರ ವಿರೋಧವೂ ಇಲ್ಲ. ಆದರೆ ಅದು 1ನೇ ತರಗತಿಯಿಂದಲೇ ಮಾಧ್ಯಮ ಆಗಬಾರದು ಎಂಬುದು ಕನ್ನಡಿಗರ ಸ್ಪಷ್ಟ ನಿಲುವು ಎಂದು ಅವರು ಹೇಳಿದ್ದಾರೆ.

     ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳಲ್ಲಿ ಹೊಸ ಚಿಂತನೆಗಳು, ಹೊಸ ಆವಿಷ್ಕಾರಗಳಿವೆ. ಹೀಗಾಗಿ ಇನ್ಫೋಸಿಸ್ ಸಂಸ್ಥೆ, ಸರ್ಕಾರಿ ಶಾಲೆಯಲ್ಲಿ ಕಲಿತ ಮಕ್ಕಳಿಗೆ ನೌಕರಿ ಕೊಡಲು ಮುಂದಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ, ಸಾಫ್ಟವೇರ್ ಉದ್ಯಮ ರಂಗದ ದಿಗ್ಗಜ ಎನ್.ಆರ್.ನಾರಾಯಣಮೂರ್ತಿ ಹೇಳಿರುವ ಮಾತುಗಳ ಬಗ್ಗೆ ಸರ್ಕಾರ ಇನ್ನೊಮ್ಮೆ ಆಲೋಚನೆ ಮಾಡಬೇಕು ಎಂದಿದ್ದಾರೆ.

     ಜ್ಞಾನಪೀಠ ಸಾಹಿತಿ, ಕೇಂದ್ರ ಸಾಹಿತಿ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ, ಈ ಕುರಿತು ವೈಯಕ್ತಿಕವಾಗಿ ಇದೊಂದು ಆಘಾತಕಾರಿ ನಿರ್ಧಾರ ಎಂಬುದರಲ್ಲಿ ಎರಡನೇ ಮಾತಿಲ್ಲ. ಆದರೂ ಸರ್ಕಾರ ಆದೇಶ ಮಾಡಿರುವ ಬಗ್ಗೆ ತಮಗೆ ಪೂರ್ಣ ಮಾಹಿತಿಯಿಲ್ಲ. ಈ ಕುರಿತು ನಾಡಿನ ಸಾಹಿತಿಗಳು ಸಾಧ್ಯವಾದರೆ ಸರ್ಕಾರಿ ಮಟ್ಟದಲ್ಲಿ ತಮ್ಮ ನಿಲುವನ್ನು ತಿಳಿಸುವುದಾಗಿ ಹೇಳಿದ್ದಾರೆ.

     ಈ ನಡುವೆ ಒಂದು ವಾರದ ಹಿಂದೆ ಸಮನ್ವಯ ಸಮಿತಿ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, 1ನೇ ತರಗತಿಯಿಂದ ಆಂಗ್ಲ ಮಾಧ್ಯಮ ಶಾಲೆ ಆರಂಭಿಸುವ ನಿರ್ಧಾರ ಸರಿಯಲ್ಲ. ಇದನ್ನು ಕೈಬಿಡಬೇಕು. ಈ ಕುರಿತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯೊಂದಿಗೆ ಮಾತುಕತೆ ನಡೆಸುವುದಾಗಿ ಹೇಳಿದ್ದರು.

     ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಪ್ರತಿಕ್ರಿಯೆ ನೀಡಿ, ಸಚಿವ ರೇವಣ್ಣನಂತಹ ದೊಡ್ಡವರ ಮಕ್ಕಳು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿಯಬಹುದಾದರೆ, ಬಡವರ ಮಕ್ಕಳು ಇಂಗ್ಲಿಷ್ ಮಾಧ್ಯಮ ಶಾಲೆಗೆ ಹೋಗಬಾರದೆ? ಈ ಕುರಿತು ಸಿದ್ದರಾಮಣ್ಣ, ಕುಮಾರಣ್ಣ ಇಬ್ಬರೂ ಸೇರಿ ಒಮ್ಮತದ ತೀರ್ಮಾನಕ್ಕೆ ಬರಬೇಕು ಎಂದಿದ್ದರು.

        ಈ ಹಿಂದೆ 1ನೇ ತರಗತಿಯಿಂದಲೇ ಇಂಗ್ಲಿಷನ್ನು ಕಲಿಸುವ ಸರ್ಕಾರದ ತೀರ್ಮಾನಕ್ಕೆ ಕನ್ನಡಿಗರು ಸಿಡಿದೆದ್ದಿದ್ದರು. ಆಗ ನಾಡಿನ ಉದ್ಧಾಮ ಸಾಹಿತ ವಿ.ಕೃ.ಗೋಕಾಕ್ ನೇತೃತ್ವದಲ್ಲಿ ನಾಡಿನ ಉದ್ದಗಲಕ್ಕೂ ಬೃಹತ್ ಚಳವಳಿ ನಡೆದಿತ್ತು. ಕನ್ನಡಿಗರು ಭಾಷೆಯ ವಿಚಾರದಲ್ಲಿ ಎಂದಿಗೂ ಒಂದೇ ಎಂಬ ಸಂದೇಶವನ್ನು ದೇಶಕ್ಕೆ ಮಾತ್ರವಲ್ಲ, ಇಡೀ ವಿಶ್ವಕ್ಕೆ ಸಾರುವಂತಹ ಐತಿಹಾಸಿಕ, ಮರೆಯಲಾದ ಚಳವಳಿಯಾಗಿತ್ತು.

       ಕನ್ನಡಕ್ಕೆ ಧಕ್ಕೆ ಬಂದಲ್ಲಿ, ಅಪಮಾನವಾಗುವುದಾದರೆ, ಹಿನ್ನಡೆಯಾಗುವುದಾರೆ ಅಂತಹ ನಿರ್ಧಾರದ ವಿರುದ್ಧ ಪ್ರತಿಯೊಬ್ಬ ಕನ್ನಡಿಗರು ಸೆಟೆದು ನಿಲ್ಲಬೇಕು, ಕೊನೆಯ ಉಸಿರಿನ ತನಕ ಹೋರಾಟ ಮಾಡಬೇಕು ಎಂದು ಕನ್ನಡ ಚಿತ್ರರಂಗದ ವರನಟ ದಿ. ಡಾ.ರಾಜ್ ಕುಮಾರ್ ಸಹ ಕರೆ ನೀಡಿದ್ದರು.

     ಗೋಕಾಕ್ ಚಳವಳಿ ಕನ್ನಡ ನಾಡಿನ ಇತಿಹಾಸದಲ್ಲಿ ಮರೆಯಲಾಗದ ಚಳವಳಿಯಾಗಿತ್ತು. ಕನ್ನಡಿಗರ ತೀವ್ರ ಆಕ್ರೋಶದ ನಂತರ ಅಂದಿನ ಸರ್ಕಾರ ಕೊನೆಗೂ ತನ್ನ ಆದೇಶವನ್ನು ಹಿಂಪಡೆದಿತ್ತು.

        ಆದರೆ ಈಗ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಮಿತ್ರಪಕ್ಷ ಕಾಂಗ್ರೆಸ್ ಬೆದರಿಕೆ, ಅಪಾಯದ ನಡುವೆಯೂ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ತೆರೆಯಲು ಆದೇಶ ಹೊರಡಿಸಿದೆ.ಇದು ಮತ್ತೊಂದು ಗೋಕಾಕ್ ಚಳವಳಿಗೆ ನಾಂದಿ ಹಾಡಬಹುದೇ ಎಂಬ ಆತಂಕ ಹುಟ್ಟುಹಾಕಿದೆ.

       ಕನ್ನಡ ಚಿತ್ರರಂಗ, ಕನ್ನಡಪರ ಸಂಘಟನೆಗಳು, ಕ್ರೀಡಾಭಿಮಾನಿಗಳು, ಸಾಹಿತಿಗಳು ಮುಂದೆ ಇದರ ಬಗ್ಗೆ ಯಾವ ರೀತಿಯ ಸಂಘಟನಾತ್ಮಕ ಹೋರಾಟವನ್ನು ಕೈಗೊಳ್ಳುತ್ತಾರೆ, ಮುಂದೆ ಇದು ಯಾವ ಸ್ವರೂಪ ಪಡೆಯಲಿದೆ ಎಂಬುದು ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap