ರಾಗಿ ಮಾರುವುದಿರಲಿ ನೋಂದಣಿಯೇ ಆಗ್ತಿಲ್ಲ ಗೊತ್ತೇನ್ರಿ?

ಹುಳಿಯಾರು:

    ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿ ರಾಗಿ ಖರೀದಿಸುವ ಪ್ರಕ್ರಿಯೆ ಹುಳಿಯಾರಿನಲ್ಲಿ ಕಳೆದ 1 ವಾರದಿಂದ ಆರಂಭಗೊಂಡರೂ, ಸರ್ಕಾರದ ಕೆಲ ನಿಬಂಧನೆಗಳು ರಾಗಿ ಮಾರುವುದಿರಲಿ ನೋಂದಣಿ ಸಹ ಮಾಡಿಸಲಾಗದಂತಹ ಪರಿಸ್ಥಿತಿ ನಿರ್ಮಿಸಿದೆ. ಪರಿಣಾಮ ಸಾವಿರಾರು ಕನಿಷ್ಠ ಬೆಂಬಲ ಬೆಲೆ ಯೋಜನೆಯ ಪ್ರಯೋಜನದಿಂದ ವಂಚಿತರಾಗುವ ಸ್ಥಿತಿ ತಲೆದೋರಿದೆ.

    ಹೌದು, ರಾಗಿ ಖರೀಧಿಸುವ ದಿನಾಂಕ ನಿಗದಿಯಾಗದಿದ್ದರೂ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು ಮಾರುಕಟ್ಟೆಗಿಂತಲೂ ಖರೀದಿ ಕೇಂದ್ರದಲ್ಲಿ ಉತ್ತಮ ಬೆಲೆ ಸಿಗುತ್ತಿರುವ ಕಾರಣಕ್ಕೆ ರೈತರು ಹೆಸರು ನೋಂದಣಿಗೆ ಮುಗಿಬೀಳುತ್ತಿದ್ದಾರೆ. ಆದರೆ ಸರ್ಕಾರದ ನಿಯಮಗಳು ರೈತರಿಗೆ ಕಂಟಕವಾಗಿ ಪರಿಣಮಿಸುತ್ತಿದ್ದು ಖರೀಧಿ ಕೇಂದ್ರಕ್ಕೆ ಹೋಗುವಾಗ ಇದ್ದ ಉತ್ಸಾಹ ಸಂಭ್ರಮ ನಂತರದಲ್ಲಿ ಕಾಣದಾಗುತ್ತಿದೆ.

      ಈ ಹಿಂದೆ ರಾಗಿ ಖರೀದಿಗೆ ನೊಂದಣಿ ಮಾಡಿಸಲು ಪಹಣಿ, ಬೆಳೆ ದೃಢೀಕರಣಪತ್ರ, ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಪ್ರತಿ ಕೊಡಬೇಕಿತ್ತು. ಆದರೆ ಈಗ ಇವಾವುದೇ ದಾಖಲಾತಿ ಕೊಡದೆ ಕೇವಲ ಕೃಷಿ ಇಲಾಖೆಯಿಂದ ಫ್ರೂಟ್ಸ್ ಗುರುತಿನ ಸಂಖ್ಯೆ ಮಾತ್ರ ಕೊಟ್ಟು ನೋಂದಣಿ ಮಾಡಿಸಬೇಕಿದೆ. ಇದು ಈಗ ರೈತರಿಗೆ ಹೊಸ ತಲೆಬೇನೆ ತಂದೊಡ್ಡಿದ್ದು ಕಚೇರಿಯಿಂದ ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

     ಏಕೆಂದರೆ ಫ್ರೋಟ್ ತಂತ್ರಾಂಶದಲ್ಲಿ ರಾಗಿ ಬದಲು ಬೇರೆಬೇರೆ ಬೆಳೆಯೂ, ಕೆಲವರಿಗೆ ‘ನೋ ಕ್ರಾಪ್’ ಎಂದು ನಮೂದಾಗಿರುವ ಕಾರಣ ತಂತ್ರಾಂಶ ನೋಂದಣಿಯನ್ನು ತಿರಸ್ಕರಿಸುತ್ತಿದೆ. ತಂತ್ರಾಂಶದಲ್ಲಿ ಬೆಳೆ ಬದಲಾಯಿಸಿ ರಾಗಿ ಬೆಳೆ ಸೇರಿಸುವುದು ಯಾರು ಮತ್ತು ಎಲ್ಲಿ ಎನ್ನುವುದು ತಿಳಿಯದೆ ಬೇಸತ್ತು ರೋಸಿ ಹೋಗಿ ಖರೀದಿ ಕೇಂದ್ರದಲ್ಲಿ ಧಾನ್ಯಗಳನ್ನು ಮಾರುವ ಆಸೆಯನ್ನೇ ಕೈಬಿಡುತ್ತಿದ್ದಾರೆ. ಅಲ್ಲದೆ ತಂತ್ರಾಂಶದಲ್ಲಿ ಸರಿಯಿದ್ದರೂ ಸರ್ವರ್ ಸಮಸ್ಯೆಯಿಂದ ನೋಂದಣಿ ಮಾಡಿಸಲು ಮೂರ್ನಲ್ಕು ಬಾರಿ ಅಲೆಯುವ ಅನಿವಾರ್ಯತೆ ಸೃಷ್ಠಿಯಾಗಿದೆ.

    ಸರ್ಕಾರ ಮಾಡಿರುವ ಮತ್ತೊಂದು ಎಡವಟ್ಟೇನೆಂದರೆ ಸಣ್ಣ ಹಿಡುವಳಿದಾರರು ಮತ್ತು ದೊಡ್ಡ ಹಿಡುವಳಿದಾರರು ಎಂಬ ವಿಂಗಡಣೆ ಮಾಡಿರುವುದಾಗಿದೆ. 5 ಎಕರೆಗಿಂತ ಹೆಚ್ಚು ಜಮೀನಿದ್ದು ರಾಗಿ ಬೆಳೆದಿದ್ದರೂ ಆತನ ನೋಂದಣಿ ಮಾಡಿಕೊಳ್ಳದೆ ಹಿಂದಿರುಗಿಸುತ್ತಿದ್ದಾರೆ. ಇದರಿಂದ ಸರ್ಕಾರದ ಬೆಂಬಲ ಬೆಲೆ ಎಲ್ಲಾ ರೈತರಿಗೂ ಸಿಗದಂತ್ತಾಗಿದ್ದು ರೈತರಲ್ಲಿ ತಾರತಮ್ಯ ಮಾಡುತ್ತಿರುವ ಈ ಧೋರಣೆಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.

    ಒಟ್ಟಾರೆ ರಾಗಿ ಖರೀದಿಗೆ ಸರ್ಕಾರ ಮಾಡಿರುವ ನಿಬಂದೆಗಳಿಂದ ನೋಂದಣಿ ಇಳಿಮುಖವಾಗುತ್ತಿದ್ದು ನೋಂದಣಿ ಮಾಡಿಸಿದವರಿಗಿಂತ ಮಾಡಿಸದೆ ಹಿಂದಿರುಗಿರುವ ರೈತರೇ ಹತ್ತು ಪಟ್ಟು ಹೆಚ್ಚಾಗಿದೆ. ತಂತ್ರಾಂಶದಲ್ಲಿ ಬೆಳೆ ನಮೂದಿಸುವವರು ಮಾಡಿರುವ ಎಡವಟ್ಟಿನಿಂದ ಅಮಾಯಕ ರೈತರು ಖರೀದಿ ಕೇಂದ್ರದಲ್ಲಿ ರಾಗಿ ಮಾರಲಾಗದೆ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನಾದರೂ ಎಚ್ಚೆತ್ತು ಈ ಹಿಂದೆ ಇದ್ದ ಮಾನದಂಡದ ಆಧಾರದ ಮೇಲೆ ರಾಗಿ ಖರೀದಿಸಿದಾಗ ಮಾತ್ರ ರೈತರ ನೆರವಿಗೆ ಸರ್ಕಾರ ಬಂದಂತ್ತಾಗುತ್ತದೆ. ಇಲ್ಲವಾದಲ್ಲಿ ರೈತರ ಕೆಂಗಟ್ಟಿಗೆ ಸರ್ಕಾರ ಒಳಗಾಗಬೇಕಾಗುತ್ತದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap