ದಾವಣಗೆರೆ:
ಯಾವುದೇ ಜಾತಿ ಬೇಧವಿಲ್ಲದೇ, ಎಲ್ಲರನ್ನೂ ಸಮಾನತೆಯಿಂದ ಕಾಣುವುದೇ ಶಿರಡಿ ಸಾಯಿಬಾಬಾರ ಆಶಯವಾಗಿದೆ ಎಂದು ಕೆಂಗಾಪುರದ ಹರನಹಳ್ಳಿಯ ಶ್ರೀರಾಮಲಿಂಗೇಶ್ವರ ಸ್ವಾಮೀಜಿ ತಿಳಿಸಿದರು.ನಗರದ ಕೊಂಡಜ್ಜಿ ರಸ್ತೆಯ ವಿಜಯ ನಗರ ಬಡಾವಣೆಯಲ್ಲಿರುವ ಸಾಯಿಬಾಬಾ ಮಂದಿರದಲ್ಲಿ ಶ್ರೀ ಶಿರಡಿ ಸಾಯಿಬಾಬಾರ 100ನೇ ಪುಣ್ಯಸ್ಮರಣೆ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಮಾತನಾಡಿದ ಅವರು, ಜಾತಿಯಲ್ಲಿ ಎರಡೇ ವಿಧ ಒಂದು ಗಂಡು, ಒಂದು ಹೆಣ್ಣು. ಯಾವುದೇ ಜಾತಿ-ಬೇಧಗಳಿಲ್ಲದೇ ಎಲ್ಲರಲ್ಲಿ ಸಮಾನತೆಯನ್ನು ಕಾಣುವುದೇ ಸಾಯಿಬಾಬ ಆಶಯವಾಗಿದೆ ಎಂದರು.
ಮಾನವ ಜನ್ಮ ಬಲು ದೊಡ್ಡದು, ಅದರ ಸಾರ್ಥಕತೆಯನ್ನು ನಾವು ದೇವಾಲಯಗಳ ನಿರ್ಮಾಣದಲ್ಲಿ ಕಾಣಬಹುದಾಗಿದೆ. ಸಾಯಿಬಾಬ ಮಂದಿರದ ಪ್ರತಿವರ್ಷ ನಡೆಯುವ ಈ ಪುಣ್ಯ ಸ್ಮರಣೆಯ ಕಾರ್ಯಕ್ರಮದ ದಾಸೋಹಕ್ಕೆ 3 ಕ್ವಿಂಟಾಲ್ ಅಕ್ಕಿಯನ್ನು ಪ್ರತಿವರ್ಷ ಸಾಯಿಬಾಬರ ಆರಾಧನೆಗೆ ನೀಡುವುದಾಗಿ ಇದೇ ವೇಳೆ ಶ್ರೀಗಳು ಘೋಷಿಸಿದರು.
ಶ್ರೀ ಸಾಯಿಬಾಬ ದೇವಸ್ಥಾನದ ಸಂಸ್ಥಾಪಕ ಶ್ರೀಗುರುದೇವ ಸ್ವಾಮೀಜಿ ಸಾನಿಧ್ಯವಹಿಸಿದ್ದರು. ಕಾರ್ಯಕ್ರಮದಲ್ಲಿ ಶಾಸಕ ಡಾ| ಶಾಮನೂರು ಶಿವಶಂಕರಪ್ಪ, ಕರ್ನಾಟಕ ಏಕತಾ ವೇದಿಕೆ ರಾಜ್ಯಾಧ್ಯಕ್ಷ ಎನ್.ಹೆಚ್. ಹಾಲೇಶ್, ತೆಲಿಗಿ ಮಲ್ಲೇಶಪ್ಪ, ಗೋಪಾಲ್ ಶೆಟಿ ಮತ್ತಿತರರು ಉಪಸ್ಥಿತರಿದ್ದರು.
ಬಸವೇಶ್ವರ ಪಿಯು ಕಾಲೇಜಿನ ಪ್ರಾಂಶುಪಾಲ ಮಲ್ಲಿಕಾರ್ಜುನ ಸಿ.ಪಿ. ಸ್ವಾಗತಿಸಿದರು. ಗೀತಾ ಚಂದ್ರಶೇಖರ್ ನಿರೂಪಿಸಿದರು. ಕವಿತ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








