ಮಂತ್ರಿ ಈಶ್ವರಪ್ಪನ ಹುಡುಕಿ ಕೊಡಿ: ಅಣಕು ಪ್ರದರ್ಶನ

ದಾವಣಗೆರೆ:

   ಕೊರೊನಾ ಭೀತಿಯಿಂದ ಜನರು ತತ್ತರಿಸಿದ್ದರೂ ಜಿಲ್ಲೆಯ ಕಡೆಗೆ ತಲೆ ಹಾಕದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ನವರನ್ನು ಹುಡುಕಿಕೊಡುವಂತೆ ಜಿಲ್ಲಾ ಕಾಂಗ್ರೆಸ್ ಮುಖಂಡರು ಸೋಮವಾರ ನಗರದಲ್ಲಿ ಈಶ್ವರಪ್ಪ ಎಲ್ಲಿದಿಯಪ್ಪಾ? ಅಣಕು ಪ್ರದರ್ಶನ ನಡೆಸುವ ಮೂಲಕ ಪ್ರತಿಭಟನೆ ನಡೆಸಿದರು.

    ಇಲ್ಲಿನ ಮಹಾನಗರ ಪಾಲಿಕೆ ಎದುರು ಜಮಾಯಿಸಿದ ಜಿಲ್ಲಾ ಕಾಂಗ್ರೆಸ್ ಮುಖಂಡರು, ಪಾಲಿಕೆ ಸದಸ್ಯರು, ಪಕ್ಷದ ಕಾರ್ಯಕರ್ತರು ಈಶ್ವರಪ್ಪನವರ ಭಾವಚಿತ್ರಗಳನ್ನು ಹಿಡಿದು ‘ಎಲ್ಲಿದಿಯಪ್ಪ, ಎಲ್ಲಿದಿಯಪ್ಪ ಈಶ್ವರಪ್ಪ ಎಲ್ಲಿದಿಯಪ್ಪ’, ‘ಹುಡುಕಿ ಕೊಡಿ ಹುಡುಕಿ ಕೊಡಿ ಈಶ್ವರಪ್ಪನ ಹುಡುಕಿ ಕೊಡಿ’, ‘ಉಸ್ತುವಾರಿ ಉಸ್ತುವಾರಿ ಯಾವ ಜಿಲ್ಲೆ ಉಸ್ತುವಾರಿ’ ಎಂಬ ಘೋಷಣೆಗಳನ್ನು ಕೂಗುವ ಮೂಲಕ ಅಣಕು ಪ್ರದರ್ಶನ ನಡೆಸಿದರು.

      ಈ ಸಂದರ್ಭದಲ್ಲಿ ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ.ಬಸವರಾಜ ಮಾತನಾಡಿ, ಮಹಾನಗರ ಪಾಲಿಕೆಯ ಚುನಾವಣೆ ಸಂದರ್ಭದಲ್ಲಿ ಬೀದಿ, ಬೀದಿಯಲ್ಲಿ ತಿರುಗುತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಆ ಬಳಿಕ ನಾಪತ್ತೆಯಾಗಿದ್ದು, ಉಸ್ತುವರಿ ಸಚಿವರನ್ನು ದಯವಿಟ್ಟು ಹುಡುಕಿಕೊಡಿ ಎಂದು ಮನವಿ ಮಾಡಿದರು.

    ದೇಶದಲ್ಲಿ ಕಾಡುತ್ತಿರುವ ಕೊರೊನಾ ವೈರಸ್‍ನಿಂದ ಜಿಲ್ಲೆಯ ಜನರು ದಿಗ್ಬ್ರಂತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ವಿಶ್ವಾಸಕ್ಕೆ ಪಡೆದು ಜಿಲ್ಲೆಯಲ್ಲಿ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳುವುದು ಒಬ್ಬ ಜಿಲ್ಲಾ ಉಸ್ತುವಾರಿ ಸಚಿವರ ಜವಾಬ್ದಾರಿಯಾಗಿದೆ. ಆದರೆ, ಈಶ್ವರಪ್ಪ ತಮಗೂ ಇದಕ್ಕೂ ಸಂಬಂಧ ಇಲ್ಲ ಎಂಬ್ಬಂತೆ ಜಿಲ್ಲೆಯ ಕಡೆಗೆ ತಲೆಯೇ ಹಾಕದಿರುವುದು ಅತ್ಯಂತ ಖಂಡನೀಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

   ಜಿಲ್ಲೆಯಲ್ಲಿ ಆರು ಜನ ಬಿಜೆಪಿ ಶಾಸಕರು ಗೆದ್ದಿದ್ದರೂ ಅವರನ್ನು ಮುಕ್ತವಾಗಿ ಕೆಲಸ ಮಾಡಲು ಬಿಡದೆ ಸಂಸದ ಜಿ.ಎಂ.ಸಿದ್ದೇಶ್ವರ ಅವರೇ ಜಿಲ್ಲಾ ಮಂತ್ರಿಗಳಂತೆ ವರ್ತಿಸುತ್ತಿದ್ದಾರೆ. ಹೀಗಾಗಿ ಇವರಿಗೆ ಹೆದರಿ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಜಿಲ್ಲೆಗೆ ಬರುತ್ತಿಲ್ಲವೇ? ಎಂದು ಪ್ರಶ್ನಿಸಿದ ಅವರು, ತಕ್ಷಣವೇ ಜಿಲ್ಲಾ ಮಂತ್ರಿ ದಾವಣಗೆರೆಗೆ ಬಂದು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಇಲ್ಲದಿದ್ದರೆ, ಜಿಲ್ಲೆ ಬಿಟ್ಟು ತೊಲಗಲಿ ಎಂದು ಆಗ್ರಹಿಸಿದರು.

   ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರಾಗಿ ಈಶ್ವರಪ್ಪ ನವರು ಜಿಲ್ಲೆಯ ಅಭಿವೃದ್ಧಿ ಪಡಿಸುವ ಪ್ರಯತ್ನ ಮಾಡದೆ ನಾಪತ್ತೆಯಾಗಿದ್ದಾರೆ. ಕೊರೊನಾ ವೈರಸ್ ಹಿನ್ನಲೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಒಂದೂ ಸಭೆ ನಡೆಸದಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ ಎಂದರು.

    ಪ್ರತಿಭಟನೆಯಲ್ಲಿ ಪಾಲಿಕೆ ಸದಸ್ಯರಾದ ಎ.ನಾಗರಾಜ, ದೇವರಮನೆ ಶಿವಕುಮಾರ, ಗಡಿಗುಡಾಳ್ ಮಂಜುನಾಥ, ಸೈಯದ್ ಚಾರ್ಲಿ, ವಿನಾಯಕ ಪೈಲ್ವಾನ್, ಜಿ.ಡಿ.ಪ್ರಕಾಶ್, ಅಬ್ದುಲ್ ಲತೀಫ್, ಪಾಮೇನಹಳ್ಳಿ ನಾಗರಾಜ, ಬಿ.ಹೆಚ್.ಉದಯಕುಮಾರ, ಕೆ.ಚಮನ್ ಸಾಬ್, ಜಿಲ್ಲಾ ಪಂಚಾಯತ್ ಸದಸ್ಯ ಕೆ.ಎಸ್.ಬಸವಂತಪ್ಪ, ಮುಖಂಡರಾದ ಗಣೇಶ ಹುಲ್ಮನಿ, ಸೋಮ್ಲಾಪುರ ಹನುಮಂತಪ್ಪ, ಕೆ.ಜಿ.ಶಿವಕುಮಾರ, ನಂಜಾ ನಾಯ್ಕ, ಅಲ್ಲಾವಲೀ ಘಾಜಿಖಾನ್, ಎಲ್.ಎಚ್.ಸಾಗರ್, ಹದಡಿ ವೆಂಕಟೇಶ, ಹೆಚ್.ಎಲ್.ಹರೀಶ, ರಾಘು ದೊಡ್ಡಮನಿ ಎಸ್‍ಓಜಿ ಕಾಲೋನಿ ಕಲ್ಲೇಶಪ್ಪ, ದಾದಾಪೀರ್, ಮುಮ್ತಾಜ್ ಬೇಗಂ ಮತ್ತಿತರರು ಭಾಗವಹಿಸಿದ್ದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link