ಅವ್ಯವಸ್ಥೆಯ ಆಗರವಾಗಿರುವ ಇಎಸ್‍ಐ ಆಸ್ಪತ್ರೆ

ದಾವಣಗೆರೆ:

         ನಗರದ ನಿಟುವಳ್ಳಿಯ ಕಾರ್ಮಿಕರ ರಾಜ್ಯ ವಿಮಾ ನಿಗಮದ ಆಸ್ಪತ್ರೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ವಿದ್ಯುತ್ ವ್ಯವಸ್ಥೆ ಇಲ್ಲದೆ, ಆಸ್ಪತ್ರೆಯ ಒಳರೋಗಿಗಳು ಕತ್ತಲಲ್ಲೇ ರಾತ್ರಿ ಕಳೆದದಿರುವ ಸಂಗತಿ ಬೆಳಕಿಗೆ ಬಂದಿದೆ.

          ಆಸ್ಪತ್ರೆಯಲ್ಲಿರುವ ಭಾಗದಲ್ಲಿ ಅಕಾಸ್ಮಾತ್ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾದರೆ, ಆಸ್ಪತ್ರೆಯಲ್ಲಿ ಪರ್ಯಾಯ ವ್ಯವಸ್ಥೆ ಇಲ್ಲದ ಕಾರಣ ಬಡ ರೋಗಿಗಳು ಕತ್ತಲೆಯಲ್ಲಿ ಕಾಲ ಕಳೆಯಬೇಕಾಗಿದೆ. ಆಸ್ಪತ್ರೆಯಲ್ಲಿ ನಾಮಕಾವಸ್ಥೆ ಜನರೇಟರ್, ಯುಪಿಎಸ್ ಇವೆ. ಆದರೆ, ಇವುಗಳನ್ನು ಪ್ರದರ್ಶನದ ಗೊಂಬೆಗಳಂತೆ ಇಟ್ಟಿರುವುದರಿಂದ ಯಾವುದೇ ಉಪಯೋಗಕ್ಕೆ ಬರುತ್ತಿಲ್ಲ.

          ಆಸ್ಪತ್ರೆಯಲ್ಲಿ ವಿದ್ಯುತ್ ಕೈಕೊಟ್ಟರೆ, ತುರ್ತು ನಿಗಾ ಘಟಕದ ರೋಗಿಗಳ ಸ್ಥಿತಿ ಹರೋಹರ. ಇಲ್ಲಿನ ದುರವಸ್ಥೆಯಿಂದ ಬೇಸತ್ತು ರೋಗಿಗಳೇ ಬೇರೆ ಆಸ್ಪತ್ರೆಗಳತ್ತ ಮುಖ ಮಾಡುತ್ತಿದ್ದಾರೆ. ಹೀಗಾಗಿ ಕೋಟ್ಯಂತರ ಹಣ ವೆಚ್ಚ ಮಾಡಿ ನಿರ್ಮಿಸಿರುವ ಇಎಸ್‍ಐ ಆಸ್ಪತ್ರೆಯು ವಿಮಾದಾರ ಕಾರ್ಮಿಕರ ಪಾಲಿಕೆ ಇದ್ದೂ ಇಲ್ಲವಾಗಿದೆ. 

         ಆಸ್ಪತ್ರೆಯಲ್ಲಿ ವೈದ್ಯ ಸಿಬ್ಬಂದಿ ಜೊತೆಗೆ ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಅಗತ್ಯ ಯಂತ್ರೋಪಕರಣ ಕೊರತೆಯೂ ಇದೆ. ಹಾಲಿ ಇರುವ ವೈದ್ಯರೂ ಕೂಡ ಅನಧಿಕೃತವಾಗಿ ಗೈರುಹಾಜರಾಗುವುದು ಮಾಮೂಲಿನ ಸಂಗತಿಯಾಗಿದೆ. ಆಸ್ಪತ್ರೆಗೆ ವೈದ್ಯರು ಯಾವಾಗ ದಯಮಾಡಿಸುತ್ತಾರೆ? ಎಂಬುದು ಇಲ್ಲಿನ ಸಿಬ್ಬಂದಿಗೇ ಗೊತ್ತಿರುವುದಿಲ್ಲ. ಜಿಲ್ಲೆಯ ವಿವಿಧ ದೂರ ಪ್ರದೇಶಗಳಿಂದ ಆಸ್ಪತ್ರೆಗೆ ಎಡತಾಕುವ ರೋಗಿಗಳು ವೈದ್ಯರಿಗಾಗಿ ಚಾತಕಪಕ್ಷಿಗಳಂತೆ ಕಾಯದೆ ವಿಧಿಯಿಲ್ಲ ಎಂಬಂತಾಗಿದೆ.

           ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಈಗಾಗಲೇ ಸುಮಾರು 30 ಕೋಟಿ ರೂ. ವೆಚ್ಚ ಮಾಡಲಾಗಿದೆ. ಆದರೂ, ಇಲ್ಲಿ ಕನಿಷ್ಟ ಸ್ಕ್ಯಾನಿಂಗ್ ವ್ಯವಸ್ಥೆಯೂ ಇಲ್ಲ. ರಕ್ತ, ಮೂತ್ರ ಪರೀಕ್ಷೆ ಇದ್ದರೂ ಫಲಿತಾಂಶ ನಿಖರವಾಗಿರುವುದಿಲ್ಲ. ಎಕ್ಸ್-ರೇ ಕೂಡ ಹೆಸರಿಗೆ ಮಾತ್ರವೇ ಇದ್ದು, ವಿದ್ಯುತ್ ವ್ಯತ್ಯಯದ ನೆಪ ಹೇಳಿ ರೋಗಿಗಳನ್ನು ಬೇರೆಡೆಗೆ ಸಾಗಹಾಕುತ್ತಾರೆ.

           ಚಿಕಿತ್ಸೆ ಪಡೆದರೂ, ಪಡೆಯದಿದ್ದರೂ ವಿಮಾದಾರ ಕಾರ್ಮಿಕರ ವೇತನದಲ್ಲಿ ಹಣ ಕಡಿತವಾಗುತ್ತದೆ. ಅದಕ್ಕೆ ತಕ್ಕಂತೆ ಆಸ್ಪತ್ರೆಗೆ ಮೂಲಭೂತ ಸೌಲಭ್ಯ ಒದಗಿಸಿ, ಬಡ ರೋಗಿಗಳಿಗೆ ಅನುಕೂಲ ಮಾಡಬೇಕೆಂಬ ಇಚ್ಛಾಶಕ್ತಿ ಮಾತ್ರ ಕಾಣುತ್ತಿಲ್ಲ.

          ಆಸ್ಪತ್ರೆಯ ಹೊರರೋಗಿ ವಿಭಾಗದಲ್ಲಿ ಬುಧವಾರ ಮಧ್ಯಾಹ್ನ 12 ಗಂಟೆಯಾದರೂ ವೈದ್ಯರ ಸುಳಿವೇ ಇರಲಿಲ್ಲ. ಹಿಂದಿನ ದಿನ ಕ್ರಿಸ್‍ಮಸ್ ರಜೆ ಇದ್ದು, ಮರುದಿನ ಗುರುವಾರ ಹೊರರೋಗಿಗಳ ವಿಭಾಗ ರಜೆ ಇರುತ್ತದೆ. ಹೀಗಾಗಿ ಜಿಲ್ಲೆಯ ನಾನಾ ಕಡೆಗಳಿಂದ ಬಂದಿದ್ದ ರೋಗಿಗಳು ವೈದ್ಯರ ದಾರಿ ಕಾಯುತ್ತಾ ಕುಳಿತಿದ್ದರು. ಸಿಬ್ಬಂದಿಯನ್ನು ವಿಚಾರಿಸಿದರೆ, ಯಾವಾಗ ಬರುತ್ತಾರೋ ಗೊತ್ತಿಲ್ಲ ಎಂಬ ಸಿದ್ಧ ಉತ್ತರ ನೀಡುತ್ತಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link