ದಾವಣಗೆರೆ:
ವಿಮಾದಾರ ಕಾರ್ಮಿಕರಿಗೆ ಗುಣಮಟ್ಟದ ಆರೋಗ್ಯ ಸೇವೆ ದೊರೆಯಲೆಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಕೋಟ್ಯಾಂತರ ರೂ. ವೆಚ್ಚದಲ್ಲಿ ದಾವಣಗೆರೆಯ ನಿಟ್ಟುವಳ್ಳಿಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗಿದೆ. ಆದರೆ, ಸೌಲಭ್ಯಗಳ ಹಾಗೂ ನುರಿತ ವೈದ್ಯರು, ಸಿಬ್ಬಂದಿಗಳ ಕೊರತೆಯಿಂದ ಯೋಗ್ಯ ಚಿಕಿತ್ಸೆ ಸಿಗದೇ ಬಡ ರೋಗಿಗಳು ಕಂಗಾಲಾಗಿದ್ದಾರೆ.
ಇಲ್ಲಿನ ನಿಟುವಳ್ಳಿಯಲ್ಲಿರುವ ಇಎಸ್‍ಐ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ, ಹೊಸ ಕಟ್ಟಡ ನಿರ್ಮಾಣ ಸೇರಿದಂತೆ ಆಸ್ಪತ್ರೆ ಅಭಿವೃದ್ಧಿಗೆ ಹಿಂದಿನ ಯುಪಿಎ ಸರ್ಕಾರ 24 ಕೋಟಿ ರೂ. ಮಂಜೂರಾಗಿತ್ತು. ಅಲ್ಲದೆ, ಪ್ರಸ್ತುತ ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ 6.5 ಕೋಟಿ ರೂ. ಬಿಡುಗಡೆ ಮಾಡಿತ್ತು. ಹೀಗೆ ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಆಸ್ಪತ್ರೆಯು ಮೇಲ್ನೋಟಕ್ಕೆ ಸುಸಜ್ಜಿತವಾಗಿದ್ದರೂ ವಿವಿಧ ಕಾರಣಗಳಿಂದ ರೋಗಗ್ರಸ್ಥವಾಗಿ ಬಳಲುತ್ತಿದೆ.
ಜಿಲ್ಲೆಯಲ್ಲಿ ದಾವಣಗೆರೆಯ ಹಳೇ ಕೋರ್ಟ್ ರಸ್ತೆಯ ಜನತಾ ಬಜಾರ್‍ನಲ್ಲಿ, ದೇವರಾಜ ಅರಸು ಬಡಾವಣೆ ಹಾಗೂ ಹರಿಹರದ ಗಾಂಧಿ ನಗರ ಹೀಗೆ 3 ಚಿಕಿತ್ಸಾಲಯಗಳು ಕಾರ್ಯ ನಿರ್ವಹಿಸುತ್ತಿವೆ. ನಿಟುವಳ್ಳಿಯಲ್ಲಿರುವ ಮುಖ್ಯ ಆಸ್ಪತ್ರೆಯಲ್ಲಿ ಹೊರರೋಗಿ ವಿಭಾಗವಿದ್ದರೂ, ಚಿಕಿತ್ಸಾಲಯಗಳಿಂದ ವೈದ್ಯರ ಶಿಫಾರಸ್ಸು ಚೀಟಿ ತರುವುದು ಕಡ್ಡಾಯವಾಗಿದೆ. ಆದ್ದರಿಂದ ಚಿಕಿತ್ಸಾಲಯಗಳಲ್ಲಿ ಸಹಜವಾಗಿಯೇ ಜನದಟ್ಟಣೆ ಹೆಚ್ಚಾಗಿರುತ್ತದೆ. ಇರುವ ಒಂದೇ ಕೌಂಟರ್‍ನಲ್ಲಿ ಗರ್ಭಿಣಿ-ಬಾಣಂತಿಯರು, ವೃದ್ಧರು, ಅಶಕ್ತರು ಹೊರರೋಗಿಗಳು ಚೀಟಿಗಾಗಿ ಗಂಟೆಗಟ್ಟಲೇ ಸರತಿ ಸಾಲಿನಲ್ಲಿ ನಿಂತು ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ನಿಟುವಳ್ಳಿಯ ಇಎಸ್‍ಐ ಆಸ್ಪತ್ರೆಯಲ್ಲಿ ವೈದ್ಯ ಸಿಬ್ಬಂದಿ ಜೊತೆಗೆ ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಅಗತ್ಯ ಯಂತ್ರೋಪಕರಣ ಕೊರತೆ ಇದೆ. ಆಪರೇಷನ್ ಥಿಯೇಟರ್ ಇದ್ದರೂ ಸಹ ನುರಿತ ತಜ್ಞರಿಲ್ಲದೇ ಸೌಲಭ್ಯ ಮರಿಚೀಕೆ ಇದೆ. ಇಷ್ಟು ದೊಡ್ಡ ಆಸ್ಪತ್ರೆಯಲ್ಲಿ ಸೂಪರ್ ಸ್ಪೆಷಾಲಿಟಿ ಸೌಲಭ್ಯಗಳಿರಲಿ, ಕನಿಷ್ಟ ಸ್ಕ್ಯಾನಿಂಗ್ ವ್ಯವಸ್ಥೆಯೂ ಇಲ್ಲ. ತುರ್ತು ಪರಿಸ್ಥಿತಿಯಲ್ಲಿ ರೋಗಿಗಳನ್ನು ಖಾಸಗಿ ಆಸ್ಪತ್ರೆಗೆ ಕಳಿಸಿಕೊಡುವ ಸನ್ನಿವೇಶವಿದೆ. ಆಸ್ಪತ್ರೆಯಲ್ಲಿನ ಸ್ವಚ್ಛತೆಯೂ ಹೇಳಿಕೊಳ್ಳುವಂತಿಲ್ಲ. ಅಲ್ಲದೆ, ಆಸ್ಪತ್ರೆ ಆವರಣದಲ್ಲೇ ಹಂದಿ, ನಾಯಿಗಳು ಓಡಾಡಿಕೊಂಡಿರುತ್ತವೆ.
ಸಕಾಲಕ್ಕೆ ವೈದ್ಯರು, ಸಿಬ್ಬಂದಿಗಳು ಬಾರದ ಕಾರಣ ಬಡ ರೋಗಿಗಳು ವೈದ್ಯರಿಗಾಗಿ ಚಾತಕಪಕ್ಷಿಗಳಂತೆ ಕಾಯುತ್ತಾ ಕೂರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಗೊತ್ತಿಲ್ಲದವರಿಗೆ ಸರಿಯಾದ ಮಾಹಿತಿ ಕೊಡುವ ವ್ಯವಧಾನವೂ ಇಲ್ಲಿನ ಸಿಬ್ಬಂದಿಗೆ ಇಲ್ಲ. ಹೀಗಾಗಿ ಅನಕ್ಷರಸ್ಥರು, ಬಡವರೇ ಹೆಚ್ಚಾಗಿರುವ ಕಾರ್ಮಿಕರೊಂದಿಗೆ ಸಿಬ್ಬಂದಿಗಳು ಸೌಜನ್ಯ ಮೀರಿ ವರ್ತಿಸುತ್ತಿದ್ದಾರೆಂದು ಹೆಸರು ಹೇಳಲಿಚ್ಚಿಸದ ರೋಗಿಯೊಬ್ಬರು ತಿಳಿಸಿದ್ದಾರೆ. ‘
ಆಸ್ಪತ್ರೆಯಲ್ಲಿ ಲಭ್ಯವಿಲ್ಲದ ಚಿಕಿತ್ಸೆ, ತಪಾಸಣೆಗಾಗಿ ನಿರ್ಧಿಷ್ಟ ಖಾಸಗಿ ಲ್ಯಾಬ್, ಆಸ್ಪತ್ರೆಗೆ ಶಿಫಾರಸ್ಸು ಚೀಟಿ ಬರೆದುಕೊಡಲಾಗುತ್ತದೆ. ತಾವು ಹೇಳಿದ ಕಡೆಯೇ ತಪಾಸಣೆಗೆ ಹೋಗುವಂತೆ ವೈದ್ಯರು ಒತ್ತಡ ಹೇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಆಸ್ಪತ್ರೆಯಲ್ಲಿ ರಕ್ತ, ಮೂತ್ರ ಪರೀಕ್ಷೆ ಲಭ್ಯವಿದ್ದರೂ, ಇಲ್ಲಿನ ಫಲಿತಾಂಶ ನಂಬಲರ್ಹವಲ್ಲವೆಂದು ಸಿಬ್ಬಂದಿಯೇ ಹೇಳುತ್ತಾರೆ. ಹೀಗಾಗಿ ಎಲ್ಲದಕ್ಕೂ ಹೊರಗಡೆ ಚೀಟಿ ಬರೆದುಕೊಡುವುದು ಇಲ್ಲಿ ಮಾಮೂಲಾಗಿದೆ. ಹೊರಗಡೆ ಮಾಡಿಸಿದ ಚಿಕಿತ್ಸೆ, ತಪಾಸಣೆ ವೆಚ್ಚದ ಮರುಪಾವತಿ ಪಡೆಯುವವರ ಕಷ್ಟ ಹೇಳತೀರದಾಗಿದೆ. ಆಸ್ಪತ್ರೆ ಹಾಗೂ ಚಿಕಿತ್ಸಾಲಯ ಸಿಬ್ಬಂದಿಯ ಸಮನ್ವಯತೆ ಕೊರತೆಯಿಂದಾಗಿ ರೋಗಿಗಳು ಅಗತ್ಯ ದಾಖಲೆಗಳಿಗಾಗಿ ಕೆಲಸ ಬಿಟ್ಟು ವಾರಗಟ್ಟಲೆ ಅಲೆಯುವಂತಾಗಿದೆ. ಹೀಗಾಗಿ ಬಡ ರೋಗಿಗಳು ವೈದ್ಯರಿಗೆ ಹಾಗೂ ಸಿಬ್ಬಂದಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ