ತುಮಕೂರು
ತುಮಕೂರು ನಗರದಲ್ಲಿ ಈಸಿ ಮೈಂಡ್ ಮಾರ್ಕೆಟಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಚನಾಸ್ ಈಸಿ ಮಾರ್ಕೆಟ್ ಪ್ರೈವೇಟ್ ಲಿಮಿಟೆಡ್ ಎಂಬ ಹೆಸರಿನ ಕಂಪನಿಗಳಿಂದ ವಂಚನೆಗೊಳಗಾದವರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದ್ದು, ಮಂಗಳವಾರ ಮಧ್ಯಾಹ್ನದ ಹೊತ್ತಿಗೆ ಪೊಲೀಸರಿಗೆ ದೂರಿತ್ತವರ ಸಂಖ್ಯೆ 45 ದಾಟಿತು. ಈವರೆಗಿನ ದೂರುಗಳ ಪ್ರಕಾರ ಸುಮಾರು 1 ಕೋಟಿ 60 ಲಕ್ಷ ರೂ.ಗಳಷ್ಟು ವಂಚನೆ ಆಗಿದೆ ಎಂದು ಅಂದಾಜಿಸಲಾಗಿದೆ.
ದೂರನ್ನು ಹೊತ್ತು ಬರುವವರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದು, ಮಹಿಳೆಯರೇ ಅತ್ಯಧಿಕ ಸಂಖ್ಯೆಯಲ್ಲಿದ್ದಾರೆ. ದೂರುದಾರರಲ್ಲಿ ಬಹುತೇಕ ಜನರು ತುಮಕೂರಿನವರೇ ಆಗಿದ್ದಾರೆ. ಕನಿಷ್ಟ 50,000 ರೂ.ಗಳಿಂದ ಆರಂಭಿಸಿ ಎರಡು- ಮೂರು ಲಕ್ಷ ರೂ.ಗಳವರೆಗೆ ಜನರು ಹೂಡಿಕೆ ಮಾಡಿ, ಈಗ ಸಂಕಷ್ಟಕ್ಕೀಡಾಗಿದ್ದಾರೆ.
ಒಂದು ಮಾಹಿತಿಯ ಪ್ರಕಾರ ಸುಮಾರು 1,500 ಜನರು ಇಲ್ಲಿ ಹೂಡಿಕೆ ಮಾಡಿರಬಹುದು. ಒಟ್ಟು ಸುಮಾರು 35 ಕೋಟಿ ರೂ.ಗಳಿಗೂ ಹೆಚ್ಚು ಹಣ ವಂಚನೆ ಆಗಿರಬಹುದು ಎಂದು ಲೆಕ್ಕಾಚಾರ ಹಾಕಲಾಗುತ್ತಿದೆ.
ಈ ಪ್ರಕರಣದ ಬಗ್ಗೆ ತುಮಕೂರು ನಗರದ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ದೂರನ್ನು ಸ್ವೀಕರಿಸುವುದರ ಜೊತೆಯಲ್ಲೇ ವಿವಿಧ ರೀತಿಯ ಮಾಹಿತಿಗಳನ್ನೂ ಸಂಗ್ರಹಿಸುತ್ತಿದ್ದಾರೆ. ನಾಪತ್ತೆಯಾಗಿರುವ ಆರೋಪಿಯ ಪತ್ತೆಗೆ ಕ್ರಮ ಆರಂಭಿಸಿದ್ದಾರೆ. ಆರೋಪಿಯ ಕುಟುಂಬ ವರ್ಗ, ಸಂಬಂಧಿಗಳನ್ನೂ ವಿಚಾರಣೆ ಮಾಡುತ್ತಿದ್ದಾರೆ. ಈ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಯನ್ನೂ ವಿಚಾರಣೆ ಮಾಡಿ ಮಾಹಿತಿ ಕಲೆಹಾಕುತ್ತಿದ್ದಾರೆ.
ರಿಜಿಸ್ಟರ್ ಆಗಿಲ್ಲ!
ಇದೀಗ ಲಭಿಸಿರುವ ಖಚಿತ ಮಾಹಿತಿ ಪ್ರಕಾರ, ಜನರಿಗೆ ವಂಚಿಸಿರುವ ಈ ಕಂಪನಿಗಳು ಸರ್ಕಾರದ ನಿಯಮಾವಳಿಗಳ ಪ್ರಕಾರ ರಿಜಿಸ್ಟರ್ ಆಗಿಯೇ ಇಲ್ಲ! ಯಾವುದೇ ನೋಂದಣಿ ಮಾಡದೆ ಇಲ್ಲಿ ವ್ಯವಹಾರ ನಡೆಸಲಾಗಿದೆ. ಹೂಡಿಕೆದಾರರೂ ಹಣವನ್ನು ಹೂಡುವಾಗ ಈ ಬಗ್ಗೆ ಗಮನಹರಿಸುವ ಗೊಡವೆಗೇ ಹೋಗಿಲ್ಲವೆಂದು ಹೇಳಲಾಗುತ್ತಿದೆ.
ಖಾತೆಯಲ್ಲಿ 6 ಲಕ್ಷ!
2018 ರ ಏಪ್ರಿಲ್ 18 ರಂದು ಆರಂಭವಾಗಿದ್ದ ಈ ಕಂಪನಿಗಳು ಇದೀಗ ಬಾಗಿಲು ಹಾಕಲ್ಪಟ್ಟಿದೆ. ಈ ಅವಧಿಯಲ್ಲಿ ವಿವಿಧ ಬ್ಯಾಂಕ್‍ಗಳಲ್ಲಿ ಖಾತೆಗಳನ್ನು ಹೊಂದಿದ್ದು, ಕೋಟ್ಯಂತರ ರೂ.ಗಳ ವಹಿವಾಟು ನಡೆಸಿವೆ. ಆದರೆ ಇದೀಗ ಸದರಿ ಕಂಪನಿಯ ಹೆಸರಿನಲ್ಲಿರುವ ಬ್ಯಾಂಕ್ ಖಾತೆಗಳನ್ನು ತನಿಖೆಯ ಉದ್ದೇಶದಿಂದ ಪೊಲೀಸರು ಪರಿಶೀಲನೆ ಮಾಡಿದಾಗ ಒಟ್ಟಾರೆ ಸುಮಾರು ಆರು ಲಕ್ಷ ರೂ.ಗಳು ಮಾತ್ರ ಖಾತೆಯಲ್ಲಿರುವುದು ಕಂಡುಬಂದಿದೆಯೆಂದು ಮೂಲಗಳಿಂದ ತಿಳಿದುಬಂದಿದೆ.