ಎತ್ತಿನ ಹೊಳೆ ವರದಿ ತಿರಸ್ಕರಿಸಲು ತಾಲ್ಲೂಕು ಸಂಘಟನೆಗಳಿಂದ ನಿರ್ಧಾರ.!

ತಿಪಟೂರು:

   ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಗೆ ತುಮಕೂರು ಜಿಲ್ಲೆ, ತಿಪಟೂರು ತಾಲ್ಲೂಕಿನ ಭೂಸ್ವಾಧೀನದ ಸಾಮಾಜಿಕ ಪರಿಣಾಮ ನಿರ್ಧರಣಾ ಕರಡು ವರದಿಯನ್ನು ವಿವಿಧೆಡೆ ನಡೆದ ಗ್ರಾಮಸಭೆಯಲ್ಲಿ ಮಂಡಿಸಿ ಮಂಗಳವಾರ ನಡೆದ ನಗರದಲ್ಲಿ ಸಭೆ ಸೇರಿ ಪಾರಾಮರ್ಶಿಸಲಾಯಿತು.

    ರಾಜ್ಯ ರೈತ ಸಂಘ, ಕೃಷಿ ಕಾರ್ಮಿಕರ ಸಂಘ, ಸ್ಥಳೀಯ ಸಂಸ್ಥೆಗಳು ಸೇರಿ ವಿವಿಧೆಡೆ ಸಭೆ ನಡೆಸಿದ್ದವು. ಈ ಸಭೆಗಳಲ್ಲಿ ಪ್ರಸ್ತಾಪಿಸಿದ ಸಾಮಾಜಿಕ ದುಷ್ಪರಿಣಾಮ ಕುರಿತು ಮಂಗಳವಾರದ ಸಭೆಯಲ್ಲಿ ಗಂಭೀರವಾಗಿ ಚರ್ಚಿಸಿ ಸರ್ಕಾರ ಮತ್ತು ಅಧಿಕಾರಿಗಳ ನಮನಕ್ಕೆ ತರಲು ತೀರ್ಮಾನಿಸಲಾಯಿತು. ಮೊದಲಿಗೆ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದ ಸಾಮಾಜಿಕ ಪರಿಣಾಮ ನಿರ್ಧಾರಣ ಕರಡು ವರದಿ ಅಪೂರ್ಣವಾಗಿದೆ ಮತ್ತು ಅವೈಜ್ಞಾನಿಕವಾಗಿದೆ. ಪರಿಶೀಲನೆ ಮತ್ತು ಅಧ್ಯಯನದ ವೇಳೆ ರೈತರನ್ನು ಸಂಪರ್ಕಿಸದಿರುವುದೇ ಇದಕ್ಕೆ ಪ್ರಮುಖ ಕಾರಣ ಎಂಬ ಟೀಕೆ ವ್ಯಕ್ತವಾಯಿತು.

    ವಾಸ್ತವದಲ್ಲಿ ಯೋಜನೆಯಿಂದ ಆಗುವು ಆರ್ಥಿಕ, ಪರಿಸರಾತ್ಮಕ ಮತ್ತು ಸಾಮಾಜಿಕ ಪರಿಣಾಮಗಳನ್ನು ದಾಖಲಿಸುವ ಯಾವ ಪ್ರಶ್ನೆಗಳನ್ನೂ ಕೇಳಿರುವುದಿಲ್ಲ. ಸದರಿ ಅಧ್ಯಯನದಲ್ಲಿ ವಸತಿರಹಿತರು, ನಿವೇಶನರಹಿತರು, ಭೂರಹಿತರ ಪಟ್ಟಿಯನ್ನು ನಿಖರವಾಗಿ ನಮೂದಿಸಿಲ್ಲ. ಸಾಗುವಳಿ ಜಮೀನಿಲ್ಲಿ ಇರುವ ಮರ, ಮತ್ತಿತರರ ಆಸ್ತಿಗಳ ಅಂಕಿಅಂಶಗಳನ್ನೂ ನಿಖರವಾಗಿ ನಮೂದಿಸಿಲ್ಲ.

    ಈ ಯೋಜನೆಯಿಂದ ಆರ್ಥಿಕವಾಗಿ ನಷ್ಟ ಹಾಗೂ ಭಮಿಕಳೆದುಕೊಳ್ಳುತ್ತಿರುವ ಬಹುತೇಕ ಕುಟುಂಬಗಳನ್ನು ಖುದ್ದು ಭೇಟಿಮಾಡಿ ಮಾಹಿತಿಗಳನ್ನು ಸಂಗ್ರಹಿಸಿಲ್ಲ. ಖುಷ್ಕಿ, ಭಾಗಾಯತು, ತರಿ ಭೂಮಿಗಳನ್ನು ಅವುಗಳ ಲಕ್ಷಣಕ್ಕೆ ಅನುಗುಣವಾಗಿ ಗುರುತಿಸದೆ ಇರುವುದರಿಂದ ಕುಟುಂಬಗಳು ಆರ್ಥಿಕ ನಷ್ಟ ಅನುಭವಿಸುವಂತಾಗಿದೆ. ಯೋಜನಾ ಸಂತ್ರಸ್ತರಿಗೆಸಾಮಾಜಿಕ ಭದ್ರತೆಯನ್ನ ಒದಗಿಸುವಂತಹ ಪೂರ್ಣ ಮಾಹಿತಿಗಳನ್ನು ಕರಡು ವರದಿ ಒಳಗೊಳ್ಳದೆ ಯೋಜನಾ ವಲಯದ ಕುಟುಂಬಗಳ ಬಗ್ಗೆ ಅಪೂರ್ಣ ಮಾಹಿತಿಗಳಿರುತ್ತವೆ.

    ಪಶುಪಾಲನೆ ಮತ್ತು ಹೈನುಗಾರಿಕೆಯನ್ನೇ ಬಹುತೇಕ ಕುಟುಂಬಗಳು ನಂಬಿ ಯೋಜನ ವಲಯದಲ್ಲಿ ಇರುತ್ತವೆ. ಅವುಗಳ ಸಾಕಾಣಿಕೆಗೆ ಸದರಿ ಪ್ರದೇಶದಲ್ಲಿನ ಅಮೃತಮಹಲ್ ಕಾವಲು, ಹುಲ್ಲುಗಾವಲು ಪ್ರದೇಶಗಳು, ಗೋಮಾಳ ಭೂಮಿಗಳು, ಕೆರೆ-ಕುಂಟೆ, ಮೇವು-ನೀರಿಗೆ ಆಸರೆಯಾಗಿರುತ್ತವೆ. ಅಲ್ಲಿ ಇರುವ ಸಸ್ಯಪ್ರಭೇದಗಳು ಮತ್ತು ಅವುಗಳನ್ನು ಅವಲಂಬಿಸಿರುವ ಜೀವಸಂಕುಲಗಳು ಹಾನಿಯಾಗಿ ಶಾಶ್ವತವಾಗಿ ಆಶ್ರಯ ಕಳೆದುಕೊಳ್ಳುತ್ತವೆ. ಇದು ಅಧಿಕಾರಿಗಳ ವರದಿಯಲ್ಲಿ ಪ್ರಸ್ತಾಪವಾಗಿಲ್ಲ. ಈ ಗೋಮಾಳಗಳನ್ನು ಅವಲಂಬಿಸಿದ ರಾಸುಗಳ ಸರಿಯಾದ ಅಂಕಿಅಂಶಗಳಿಲ್ಲ. ತಾಲ್ಲೂಕು 30 ವರ್ಷಗಳಿಂದ ಬರಪೀಡಿತವಾಗಿ ಅಂತರ್ಜಲ ಭಾರಿ ಮಟ್ಟದಲ್ಲಿ ಕಸಿದಿದೆ. ತಾಲ್ಲೂಕಿನ ಸಮಸ್ತ ಜನ-ಜಾನುವಾರು-ಜಮೀನು-ಜೀವಿಗಳು ಜಲದ ತೀವ್ರ ಅಭಾವ ಎದುರುಸುತ್ತಿವೆ. ಕರಡು ವರದಿಯಲ್ಲಿ ಇದು ಪ್ರಸ್ತಾಪವೇ ಆಗಿಲ್ಲ ಎಂದು ಸಭೆಯಲ್ಲಿ ಆರೋಪಿಸಲಾಯಿತು.

       ತಾಲ್ಲೂಕಿನ ಬಹುಮುಖ್ಯ ಜಲಾಯನ ಪ್ರದೇಶದ ಕೃಷ್ಣ ಮತ್ತು ಕಾವೇರಿ ಕೊಳದ ಮಧ್ಯದಲ್ಲಿ ಸಾಗುವುದಿದೆ. ಯೋಜನೆಯು ತಾಲ್ಲೂಕಿನ ಸಾಕಷ್ಟು ಗೋಮಾಳ, ಅಮೃತಮಹಲ್ ಕಾವಲು, ಅರಣ್ಯಗಳ ಸಮೀಪ, ತೆಂಗು-ಅಡಿಕೆ ತೋಟಗಳು ಮತ್ತು ಸಿರಿಧಾನ್ಯಗಳನ್ನು ಬೆಳೆಯುವ ಪ್ರದೇಶ ಮತ್ತು ಕೆರೆ-ಕಟ್ಟೆಗಳ ಜಲ ಮೂಲ ಹಳ್ಳ, ತೊರೆಗಳನ್ನು ನಾಶ ಮಾಡಿ ಹೋಗುತ್ತಿದೆ. ಇದರ ಬಗ್ಗೆ ಸದರಿ ವರದಿಯಲ್ಲಿ ಕಿಂಚಿತ್ತು ಅಂಶಗಳು ಪ್ರಸ್ತಾಪವಾಗಿಲ್ಲ.

    ತಾಲ್ಲೂಕು ಕರ್ನಾಟಕದಲ್ಲಿ ಅತೀ ಹೆಚ್ಚು ಬರಪೀಡಿತ ಪ್ರದೇಶವಾಗಿದೆ. ಈ ಬಗ್ಗೆ ಸದರಿ ವರದಿಯಲ್ಲಿ ಎಲ್ಲೂ ಪ್ರಸ್ತಾಪವಾಗಿಲ್ಲ. ಈ ಬರಪೀಡಿತ ವ್ಯಾಪ್ತಿಯ ಕೆರೆಕಟ್ಟೆಗಳು ಮತ್ತು ಜಲ ಸಂಗ್ರಹಗಳನ್ನು ತುಂಬಿಸುವ ಬಗ್ಗೆ ಎಲ್ಲಿಯೂ ಪ್ರಸ್ತಾಪವಾಗಿಲ್ಲ. ಮಹಿಳಾ ರೈತ ಕುಟುಂಬಗಳ ಕೃಷಿ ಭೂ ಸಂತ್ರಸ್ತತೆ ಬಗ್ಗೆ ಪ್ರಸ್ತಾಪವಿಲ್ಲ. ಅವರು ಕಳೆದುಕೊಳ್ಳುವ ಆಸ್ತಿಯಿಂದ ಕುಟುಂಬದ ಮೇಲೆ ಆಗುವು ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಪರಿಣಾಮಗಳ ಕುರಿತು ಪ್ರಸ್ತಾಪವಿಲ್ಲ ಎಂಬ ಆಕ್ರೋಶ ಕೇಳಿಬಂತು.

      ಕೃಷಿಕಾರ್ಮಿಕರ ನಿಖರವಾದ ಗಣತಿಯಾಗಿರುವುದಿಲ್ಲ. ಅವರಿಗೆ ಯಾವುದೇ ಪರಿಹಾರ ಸೂಚಿಸಿಲ್ಲ. ಇದರಿಂದ ನೂರಾರು ಕೃಷಿ ಕಾರ್ಮಿಕರು ಶಾಶ್ವತ ವಲಸೆ ಭೀತಿ ಎದುರಿಸುವಂತಾಗಿದೆ. ಕರುಡು ಪ್ರತಿಯು ತೋರಿಕೆಗೆ ಅಷ್ಟೇ ಸಿದ್ಧವಾದಂತಿದೆ. ಒಂದು ಬೇಸಾಯ ಕುಟುಂಬ ಹಾಗೂ ಬೇಸಾಯ ವಲಯವನ್ನೇ ಆಧರಿಸಿರುವ ಕೃಷಿ ಕಾರ್ಮಿಕ ಕುಟುಂಬಗಳು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಹಾನಿಗೀಡಾಗುವ ಕುರಿತು ಕರುಡು ವರದಿಯಲ್ಲಿ ಚರ್ಚೆಯಾಗಿಲ್ಲ.

       ಪ್ರಸ್ತಾಪಿತ ಹೆಚ್ಚುವರಿ ಭೂಸ್ವಾಧಿನದ ಜಮೀನನ್ನು ಯೊಜನೆಯ (ಸಾಮಾಜಿಕ) ವರದಿಯಿಂದ ಕೈಬಿಡಬೇಕು. ಕರಡು ವರದಿಯಲ್ಲಿ ಎಷ್ಟು ಸ್ಮಶಾನ, ಎಷ್ಟು ಕೈಗಾರಿಕ ಘಟಕಗಳು, ಸ್ವುಉದ್ಯೋಗ ಘಟಕಗಳು ಮತ್ತು ಅವುಗಳನ್ನುಅವಲಂಬಿಸಿರುವ ಕಾರ್ಮಿಕ ಕುಟುಂಬಗಳ ನಿರಾಶ್ರೀತವಾಗುತ್ತಿವೆ ಎಂದು ಅಂಶವಿಲ್ಲ. ದೇಶದ ಕೃಷಿ ಆರ್ಥಿಕತೆ ಮತ್ತು ಆಹಾರ ಭದ್ರತೆಯ ಸುರಕ್ಷತೆಗಾಗಿ ತಾಲ್ಲೂಕಿನ ಬಿದರೆಗುಡಿ ಅಮೃತಮಹಲ್ ಕಾವಲಿನಲ್ಲಿ ಸ್ಥಾಪಿಸಲಾಗಿರುವ ಜಾನುವಾರು ಕುರಿತ ಸಂಶೋಧನೆಯ ಸ್ಥಳದಲ್ಲೇ ಎತ್ತಿನಹೊಳೆ ಸಾಗುತ್ತಿದೆ. ಇದರಿಂದ ದುಷ್ಪರಿಣಾಮ ಖಚಿತ ಎಂಬ ಟೀಕೆ ವ್ಯಕ್ತವಾಯಿತು.

        ಕೃಷ್ಣಮೃಗಗಳ ಆವಾಸಸ್ಥಾನ, ಚಿರತೆ, ತೋಳ, ನರಿ, ಶಾರ್ಟ್ ಟೋಡ್ ಸ್ನೇಕ್ ಈಗಲ್ ಪಕ್ಷಿಗಳ ನೂರಾರು ವನ್ಯಜೀವಿಗಳ ಆವಾಸಸ್ಥಾನವಾಗಿರುವ ಅಮೃತಮಹಲ್ ಕಾವಲಿನಲ್ಲಿ ಹಾದು ಹೋಗುವ ನಾಲೆ. ಪರಿಸರವನ್ನು ದಿಕ್ಕು ತಪ್ಪಿಸುತ್ತದೆ. ಯೋಜನೆಯ ಸಾಮಾಜಿಕ ಪರಿಣಾಮ ನಿರ್ಧಾರಣಾ ಕರಡು ವರದಿಯನ್ನು ತಯಾರು ಮಾಡುವಲ್ಲಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ವರದಿಯಲ್ಲಿ ಪಾರರ್ದಶಕತೆ ಇಲ್ಲದೆ, ಅವೈಜ್ಞಾನಿಕವಾಗಿದೆ. ಆಹಾರ ಭದ್ರತೆ, ಜೀವನೋಪಾಯ ಭಧ್ರತೆ, ಆರೋಗ್ಯ, ಶಿಕ್ಷಣ, ಉದ್ಯೋಗಗಳ ಮೇಲೆ ಯೋಜನೆಯ ಪ್ರಭಾವಿಸುವ ಅಂಶಗಳನ್ನು ವರದಿಯಲ್ಲಿ ಪ್ರಸ್ತಾಪಿಸಿಲ್ಲ ಎಂಬ ಟೀಕೆ ವ್ಯಕ್ತವಾಯಿತು.

       ಈ ನ್ಯೂನತೆ ಕುರಿತು ಮುಖ್ಯ ರಾಜ್ಯ ಕಾರ್ಯದರ್ಶಿ ಸೇರಿದಂತೆ ಸಚಿವರು, ಶಾಸಕರು, ಸಂಸದರು ಸೇರಿದಂತೆ ಹಲವರಿಗೆ ಪತ್ರ ಬರೆದು ಯೋಜನೆಗೆ ಅಡ್ಡಿ ಪಡಿಸಲು ತೀರ್ಮಾನಿಸಲಾಯಿತು. ತಿಮ್ಮಲಾಪುರ ದೇವರಾಜು, ಜಯನಂದಪ್ಪ, ಮನೋಹರ್ ಪಟೇಲ್, ಶ್ರೀಕಾಂತ್ ಕೆಳಹಟ್ಟಿ, ಕರಾವೇ ವಿಜಯಕುಮಾರ್ ಮತ್ತಿತರರು ಇದ್ದರು. ಹೊನ್ನವಳ್ಳಿ, ಮತ್ತಿಹಳ್ಳಿ, ಗುಡಿಗೊಂಡನಹಳ್ಳಿ, ಹುಚ್ಚಗೊಂಡನಹಳ್ಳಿ, ಕರಡಿ, ಅರಳಗುಪ್ಪೆ, ಬಿಳಿಗೆರೆ, ಮತ್ತು ಹಿಂಡಿಸ್ಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap