ದಾವಣಗೆರೆ:
ನಗರದ ರೋಟರಿ ಬಾಲ ಭವನದಲ್ಲಿ ಮೇ 20ರಂದು ಬೆಳಿಗ್ಗೆ 11 ಗಂಟೆಗೆ ಪ್ರಕೃತಿ ಪ್ರಕಾಶನ, ಕೊಡಗನೂರು ಹಾಗೂ ಗೆಳೆಯರ ಬಳಗ ಇವುಗಳ ಸಂಯುಕ್ತಾಶ್ರಯದಲ್ಲಿ ಕವಿ, ನಾಟಕಕಾರ ಪ್ರಕಾಶ್ ಕೊಡಗನೂರ್ ಅವರ ದ್ವಿತೀಯ ಕವನ ಸಂಕಲನ “ಏಟ್ಸ್ ಮತ್ತು ನಾನು” ಕೃತಿಯ ಬಿಡುಗಡೆ ಸಮಾರಂಭ ಏರ್ಪಡಿಸಲಾಗಿದೆ.
ಈ ಕುರಿತು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಳಗದ ಸಂಚಾಲಕ ಎಂ.ಟಿ.ಶರಣಪ್ಪ, ಪ್ರಸಿದ್ಧ ವಿಮರ್ಶಕ ಡಾ.ವಸಂತಕುಮಾರ್ ಪೆರ್ಲ ಕೃತಿ ಬಿಡುಗಡೆ ಮಾಡಲಿದ್ದಾರೆ. ಪ್ರಸಿದ್ಧ ಕವಿ ಸತೀಶ್ ಕುಲಕರ್ಣಿ ಕೃತಿ ಕುರಿತು ಮಾತನಾಡಲಿದ್ದಾರೆ. ಪ್ರಸಿದ್ಧ ಸಾಹಿತಿ ಬಿದರಹಳ್ಳಿ ನರಸಿಂಹಮೂರ್ತಿ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ದಾವಣಗೆರೆ ಉತ್ತರ ವಲಯ ಸಮನ್ವಯ ಅಧಿಕಾರಿ ಬಿ.ಸುರೇಂದ್ರ ನಾಯ್ಕ, ಪ್ರಗತಿಪರ ಸಂಘಟಕ ಎನ್.ಪಿ.ನಾಗರಾಜ್ ಭಾಗವಹಿಸಲಿದ್ದಾರೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕವನ ಸಂಕಲನದ ಆಯ್ದ ಕವಿತೆಗಳನ್ನು ಹೆಚ್.ಜೆ.ವಸಂತಕುಮಾರ್ ಅವರ ಸಂಗೀತ ಸಂಯೋಜನೆಯೊಂದಿಗೆ ಗಾಯಕರಾದ ಯು.ಅರುಣಾದೇವಿ ಹಾಗೂ ಭುವನ್ ಕೊಡಗನೂರ್ ಹಾಡಲಿದ್ದಾರೆ ಎಂದರು.
ಕವಿ, ನಾಟಕಕಾರ ಪ್ರಕಾಶ್ ಕೊಡಗನೂರ್ ಮಾತನಾಡಿ, ನನಗೆ ಜ್ಞಾನ ಬಂದಾಗಿನಿಂದಲೂ ಸಾಹಿತ್ಯೀಕ ಕೃತಿಗಳನ್ನು ಓದುತ್ತಾ ಬಂದಿದ್ದೇನೆ, ಮೊದಲು ನನ್ನಲ್ಲಿ ಗದ್ಯ ಪ್ರಕಾರದ ಆಸಕ್ತಿ ಇತ್ತು. ನಂತರದಲ್ಲಿ 2003ರಲ್ಲಿ ಎರಡು ಹಳ್ಳಿಗಳ ನಡುವೆ ಕವನ ಸಂಕಲನ ರಚಿಸಿದೆ.
ಬಳಿಕ ಕವನ ಬರೆಯುವ ಬಗ್ಗೆಯೂ ಆಸಕ್ತಿ ಹೆಚ್ಚಿತು. ಆದರೆ, ದ.ರಾ.ಬೇಂದ್ರೆಯವರು ನನ್ನಂತಹ ಯುವ ಸಾಹಿತಿಗೆ ಕಾರ್ಯಕ್ರಮ ವೊಂದರಲ್ಲಿ ಸಾವಿರದ ಪದ್ಯ ಬರೆಯುವಂತೆ ಸಲಹೆ ನೀಡಿದ್ದರಿಂದ ಹಾಗೂ ಬಸವಲಿಂಗಪ್ಪನವರ ಬೂಸಾ ಸಾಹಿತ್ಯ ಚಳವಳಿಯ ಪ್ರಭಾವ ನನ್ನ ಮೇಲೆ ಬೀರಿದ ಕಾರಣಕ್ಕೆ, ಸಾವು ಇರದ ಪದ್ಯ ಬರೆಯಬೇಕೆಂಬ ಉದ್ದೇಶದಿಂದ ಪದ್ಯ ರಚನೆಯಲ್ಲಿ ಹಾಗೂ ಕೃತಿ ಬಿಡುಗಡೆಗೆ ವಿಳಂಬವಾಯಿತು. ನಂತರ ನಾನು ಬರೆದ ಪದ್ಯಗಳಲ್ಲಿ ಸುಮಾರು 40 ಆಯ್ದ ಕವಿತೆಯನ್ನು ಆಯ್ಕೆ ಮಾಡಿಕೊಂಡು, ಈಗ ‘ಏಟ್ಸ್ ಮತ್ತು ನಾನು’ ಕವನ ಸಂಕಲನವನ್ನು ಹೊರತರುತ್ತಿದ್ದೇನೆಂದು ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ವಕೀಲ ಎಲ್.ಹೆಚ್.ಅರುಣಕುಮಾರ್, ಮಂಜು ರೇವಣ್ಕರ್ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ