ಚಿತ್ರದುರ್ಗ:
ನಿಮ್ಮ ಹಕ್ಕುಗಳನ್ನು ನೀವು ರಕ್ಷಿಸಿಕೊಳ್ಳಬೇಕಾದರೆ ಮೊದಲು ಮತ್ತೊಬ್ಬರ ಹಕ್ಕುಗಳನ್ನು ಗೌರವಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಬಿ.ವಸ್ತ್ರಮಠ ವಿದ್ಯಾರ್ಥಿಗಳಿಗೆ ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಭಾರತೀಯ ಮಾನವ ಹಕ್ಕುಗಳ ಸಮಿತಿ ನವದೆಹಲಿ ಇವುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ಸರ್ಕಾರಿ ಐ.ಟಿ.ಐ.ಕಾಲೇಜಿನಲ್ಲಿ ಗುರುವಾರ ನಡೆದ ಮಾನವ ಹಕ್ಕುಗಳ ಹಾಗೂ ಮೂಲ ಕಾನೂನುಗಳ ಬಗ್ಗೆ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಿಂದಿನ ಕಾಲದಲ್ಲಿ ಮಾನವ ಕಾಡಿನಲ್ಲಿ ವಾಸ ಮಾಡಿಕೊಂಡು ಹಸಿ ಮಾಂಸಗಳನ್ನು ತಿನ್ನುತ್ತ ಸೊಪ್ಪನ್ನು ಮೈಗೆ ಸುತ್ತಿಕೊಂಡು ಜೀವಿಸುತ್ತಿದ್ದ. ಕ್ರಮೇಣವಾಗಿ ಮನುಷ್ಯ ನಾಗರೀಕತೆಯಿಂದ ವಾಸಿಸಲು ಆರಂಭಿಸಿದಾಗಿನಿಂದಲೂ ಹಕ್ಕುಗಳನ್ನು ಕೇಳಲು ಆರಂಭಿಸಿದ. ಹನ್ನೆರಡನೆ ಶತಮಾನದಲ್ಲಿಯೇ ಬಸವಣ್ಣನವರು ಹಕ್ಕುಗಳನ್ನೇ ಪ್ರತಿಪಾದಿಸಿದ್ದಾರೆ. ಹುಟ್ಟಿದ ಪ್ರತಿಯೊಬ್ಬರಿಗೂ ಬದುಕುವ, ಶಿಕ್ಷಣದ ಹಕ್ಕಿದೆ ಎಂದು ಹೇಳಿದರು
ನಮ್ಮ ಹಕ್ಕುಗಳನ್ನು ಹೇಗೆ ಕೇಳುತ್ತೇವೆಯೋ ಅದೇ ರೀತಿ ಮತ್ತೊಬ್ಬರ ಹಕ್ಕುಗಳನ್ನು ಗೌರಿವಿಸುವ ಗುಣವನ್ನು ಎಲ್ಲರೂ ರೂಢಿಸಿಕೊಳ್ಳಬೇಕು. ಆಗ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ಹೇಳಿದರು.
ಯುದ್ದಗಳಲ್ಲಿ ಬಾಂಬ್ ಹಾಕುವುದು, ಒಬ್ಬರನ್ನು ಕೊಂದು ಮತ್ತೊಬ್ಬರು ಆನಂದಿಸುವುದು ಕೂಡ ಹಕ್ಕುಗಳ ಉಲ್ಲಂಘನೆಯಾದಂತೆ, ಪ್ರತಿಭಟನೆ ಮಾಡುವವರ ಮೇಲೆ ಕೆಲವೊಮ್ಮೆ ಪೊಲೀಸರು ಲಾಠಿ ಪ್ರಹಾರ ನಡೆಸಿ, ಜಲಫಿರಂಗಿ ಬಳಸಿ, ಗಾಳಿಯಲ್ಲಿ ಗುಂಡು ಹಾರಿಸಿ ನಂತರ ಗೋಲಿಬಾರ್ ನಡೆಸಿ ಪ್ರಾಣ ತೆಗೆಯುವುದು ಹಕ್ಕುಗಳ ಉಲ್ಲಂಘನೆ. ಆಗ ನ್ಯಾಯಾಲಯ ವಿಚಾರಣೆ ನಡೆಸಿ ಯಾರು ತಪ್ಪಿತಸ್ಥರೋ ಅವರಿಗೆ ಶಿಕ್ಷೆ ವಿಧಿಸುತ್ತದೆ. ಮತ್ತೊಬ್ಬರ ಹಕ್ಕುಗಳನ್ನು ಕಸಿದುಕೊಳ್ಳುವಂತಿಲ್ಲ. ಈಗಂತೂ ಸಣ್ಣ ಸಣ್ಣ ವಿಚಾರಗಳು ಮಾನ ಹಕ್ಕುಗಳ ಆಯೋಗದ ಮುಂದೆ ಬರುತ್ತಿವೆ. ಮೂಲಭೂತ ಸೌಕರ್ಯಗಳನ್ನು ಕೇಳಿ ಪಡೆಯುವುದು ಜನಸಾಮಾನ್ಯರ ಹಕ್ಕು. ಮೂಲಭೂತ ಹಕ್ಕುಗಳು ಏನೆಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಸಂವಿಧಾನದಡಿಯಲ್ಲಿ ಎಲ್ಲಾ ಹಕ್ಕುಗಳನ್ನು ನೀಡಿದೆ. ಅದನ್ನು ಉಪಯೋಗಿಸಿಕೊಂಡು ಜೀವನದಲ್ಲಿ ಉತ್ತಮ ಭವಿಷ್ಯ ಕಂಡುಕೊಳ್ಳಿ ಎಂದು ಐ.ಟಿ.ಐ.ವಿದ್ಯಾರ್ಥಿಗಳಿಗೆ ಎಸ್.ಬಿ.ವಸ್ತ್ರಮಠರವರು ಕರೆ ನೀಡಿದರು.
ಸಂವಿಧಾನದ ಚೌಕಟ್ಟಿನಲ್ಲಿಯೇ ಎಲ್ಲರೂ ಬದುಕಬೇಕು. ನಿಮಗೆ ಯಾರಾದರೂ ತೊಂದರೆ ಮಾಡಿದರೆ ಅವರ ಮೇಲೆ ಹಲ್ಲೆ ನಡೆಸುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಅದಕ್ಕೆ ಬದಲಾಗಿ ಪೊಲೀಸರಿಗೆ ದೂರು ಕೊಟ್ಠಾಗ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸುತ್ತಾರೆ. ಆಗ ತಪ್ಪಿತಸ್ಥರು ಯಾರು ಎಂಬುದನ್ನು ವಿಚಾರಿಸಿ ಕಾನೂನು ಪರಿಮಿತಿಯಲ್ಲಿ ಶಿಕ್ಷೆ ನೀಡಲಾಗುವುದು. ತಪ್ಪು ಮಾಡಿದ ವ್ಯಕ್ತಿಯನ್ನು ಪೊಲೀಸರು ಠಾಣೆಯಲ್ಲಿ ಕ್ರೂರವಾಗಿ ಹಿಂಸಿಸುವುದು ಕೂಡ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಅದಕ್ಕೆ ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದರು.
ಸರ್ಕಾರಿ ಐ.ಟಿ.ಯ.ಕಾಲೇಜಿನ ಪ್ರಭಾರೆ ಪ್ರಾಂಶುಪಾಲರಾದ ಎಸ್.ಲೀಲಾವತಿ ಅಧ್ಯಕ್ಷತೆ ವಹಿಸಿದ್ದರು.ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಸ್.ಆರ್.ದಿಂಡಲಕೊಪ್ಪ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಶಿವುಯಾದವ್, ಭಾರತೀಯ ಮಾನವ ಹಕ್ಕುಗಳ ಸಮಿತಿ ಅಧ್ಯಕ್ಷರಾದ ಎನ್.ವಿ.ವೆಂಕಟೇಶಮೂರ್ತಿ, ಕಾರ್ಯದರ್ಶಿ ಎಸ್.ಇ.ರವೀಶ್ವರ, ಉಪಾಧ್ಯಕ್ಷ ಬಿ.ಗುರಪ್ಪ, ನ್ಯಾಯವಾದಿ ಹೆಚ್.ಎಸ್.ಮಹೇಶ್ವರಪ್ಪ ವೇದಿಕೆಯಲ್ಲಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ