ಸುಖ-ದುಃಖ ಸಮಾನವಾಗಿ ಸ್ವೀಕರಿಸಬೇಕು: ಶಿಮೂಶ

ಚಿತ್ರದುರ್ಗ :

      ಗಂಡ ಹೆಂಡತಿ ಜೀವನದಲ್ಲಿ ಬರುವ ಸುಖ-ದುಃಖಗಳನ್ನು ಇಬ್ಬರೂ ಸಮನಾಗಿ ಸ್ವೀಕರಿಸಬೇಕು ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ನುಡಿದರು.ಬಸವಕೇಂದ್ರ ಶ್ರೀ ಮುರುಘರಾಜೇಂದ್ರ ಬೃಹನ್ಮಠ ಹಾಗು ಎಸ್.ಜೆ.ಎಂ. ಶಾಂತಿ ಮತ್ತು ಪ್ರಗತಿ ಫೌಂಡೇಶನ್ ವತಿಯಿಂದ ಅನುಭವ ಮಂಟಪದಲ್ಲಿ ಆಯೋಜಿಸಲಾಗಿದ್ದ ಇಪ್ಪತ್ತೊಂಬತ್ತನೇ ವರ್ಷದ ಹನ್ನೊಂದನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ಅಧ್ಯಕ್ಷತೆ ವಹಿಸಿ ಶ್ರೀಗಳು ಮಾತನಾಡಿದರು.

     ಜಗತ್ತಿನ ಇತಿಹಾಸದಲ್ಲಿ ಹೆಂಡತಿ, ಮಕ್ಕಳಿಗಾಗಿ, ಇನ್ನಾವುದೋ ಕ್ಷುಲ್ಲಕ ಕಾರಣಕ್ಕಾಗಿ ಸಂಸಾರ ತೊರೆದವರಿದ್ದಾರೆ. ಇಂದು ಹಣಕ್ಕಾಗಿ, ಆಸ್ತಿಗಾಗಿ ಹಪಹಪಿಸುತ್ತಾರೆ. ಇಂತಹ ಭೌತಿಕ ಶ್ರೀಮಂತಿಕೆಯನ್ನು ತೊರೆದು ಬಸವಣ್ಣ, ಅಲ್ಲಮಪ್ರಭು, ಅಕ್ಕಮಹದೇವಿ ಮುಂತಾದ ಶರಣರು ಅನುಭಾವದ ಬದುಕಿಗಾಗಿ ಮನೆಯನ್ನು ತೊರೆದರು. ಅಂತಹ ಅಲ್ಲಮಪ್ರಭುಗಳ ಪರಂಪರೆಯ ಪೀಠವಿದು. ಲೋಕಾನುಭವ, ಜೀವನಾನುಭವ ಹಾರ್ದಿಕವಾದ ಜೀವನ ವಿಧಾನವನ್ನು ಕಟ್ಟಿ ಕೊಡುತ್ತದೆ ಎಂದರು

      ಯಾರು ಅನುಭವದ ಜೊತೆಗೆ ಹೋಗುತ್ತಾರೆ ಅವರು ಇತಿಹಾಸದಲ್ಲಿ ಉಳಿಯುತ್ತಾರೆ. ನೀವು ಅನುಭವದ ಮಹತ್ವ ಅರಿತು ಜೀವನ ನಡೆಸಬೇಕು. ಈ ಸರಳ ಸಾಮೂಹಿಕ ವಿವಾಹದಲ್ಲಿ ಈ ಹಿಂದೆ ಮದುವೆಯಾದ ಜೋಡಿಗಳು ಇದೇ ವೇದಿಕೆÀಯಲ್ಲಿ ತಮ್ಮ ಮಕ್ಕಳ ಮದುವೆಯನ್ನೂ ಮಾಡಿರುವ ಉದಾಹರಣೆಗಳಿವೆ. ಇಂದು ಅವರೆಲ್ಲರೂ ಸಂತಪ್ತ ಜೀವನ ಸಾಗಿಸುತ್ತಿದ್ದಾರೆ. ಕ್ಷುಲ್ಲಕ ಕಾರಣಗಳಿಗೆ ಜೀವನ ತೊರೆಯದಿರಿ. ಸಂತಸ ನೆಮ್ಮದಿಯಿಂದ ಬಾಳಿರಿ ಎಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಧುವರರಿಗೆ ಕಿವಿಮಾತು ಹೇಳಿದರು.

      ಗೌರವ ಉಪಸ್ಥಿತಿ ವಹಿಸಿದ್ದ ಚಿತ್ರದುರ್ಗ ವನಶ್ರೀಮಠದ ಡಾ. ಬಸವಕುಮಾರ ಸ್ವಾಮಿಗಳು ಮಾತನಾಡಿ, ಸಮಾಜದ ಸಾಮಾನ್ಯ ವ್ಯಕ್ತಿಯೂ ಆಸ್ವಾದಿಸುವ ರೀತಿಯಲ್ಲಿ ಕಾರ್ಯಕ್ರಮಗಳನ್ನು ಮುರುಘಾ ಶರಣರು ರೂಪಿಸುತ್ತಾರೆ. ಶ್ರೀಗಳವರ ದೂರದೃಷ್ಟಿಯಿಂದ ಜನಸಾಮಾನ್ಯರ ಏಳ್ಗೆಗೆ ಕೈಗೊಂಡಿರುವ ಧಾರ್ಮಿಕ ಸಾಮಾಜಿಕ ಕರ‍್ಯಗಳು ನಾಡಿನಲ್ಲೇ ಪ್ರಸಿದ್ಧಿ ಪಡೆದಿವೆ. ಭಾರತದಲ್ಲಿ ಚಿತ್ರದುರ್ಗದ ಹೆಸರನ್ನು ಪ್ರಜ್ವಲಿಸುವ ಹಾಗೆ ಬಸವ ಪುತ್ಥಳಿಯನ್ನು ನಿರ್ಮಿಸುತ್ತಿದ್ದು, ಹಾಗೆಯೇ ಮುಂಬರುವ ಫೆಬ್ರವರಿ ತಿಂಗಳಲ್ಲಿ ಬೆಂಗಳೂರಿನಲ್ಲಿ ಐತಿಹಾಸಿಕವಾದ ಅಸಂಖ್ಯ ಪ್ರಮಥ ಗಣಮೇಳವನ್ನು ಆಯೋಜಿಸಿದ್ದು ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಆಗಮಿಸುತ್ತಿದ್ದು ತಾವೆಲ್ಲ ಭಾಗವಹಿಸಬೇಕೆಂದರು.

      ಮುಖ್ಯಅತಿಥಿ ಚಿತ್ರದುರ್ಗ ಉಪವಿಭಾಗಾಧಿಕಾರಿ ಪ್ರಸನ್ನ ಮಾತನಾಡಿ, ಶ್ರೀಮಠವು ಜಾತಿ ಮತಗಳೆನ್ನದೆ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದೆ. ಚಿತ್ರದುರ್ಗ ಎಂದಾಕ್ಷಣ ಮುನ್ನೆಲೆಗೆ ಬರುವುದು ಶ್ರೀಮಠ. ಮುರುಘಾ ಶರಣರು ನಿರಂತರವಾಗಿ ಸಮಾಜದೊಂದಿಗೆ ಬೆರೆಯುತ್ತ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಮದುವೆ ಒಂದು ಪವಿತ್ರ ಬಂಧನ. 29 ವರ್ಷಗಳಿಂದ ನಡೆಸಿಕೊಂಡು ಬಂದಿರುವುದು ಶ್ಲಾಘನೀಯ ಎಂದರು.

      ಇದೇ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಕೆ.ಪಿ.ನಾಗರಾಜ್, ನನ್ನ ಊರಿನಿಂದಲೇ ನನಗೆ ಸನ್ಮಾನ ದೊರೆತಿರುವುದು ಅಮಿತಾನಂದವನ್ನು ನೀಡಿದೆ. ಚಿಕ್ಕಂದಿನಿಂದಲೂ ಶ್ರೀಮಠವನ್ನು ನೋಡಿ ಇಲ್ಲಿಯೂ ಆಡಿ ಬೆಳೆದಿದ್ದೇನೆ. ಸಮಾಜಮುಖಿ ಕಾರ್ಯಗಳಿಗೆ ಶ್ರೀಮಠ ಹೆಸರುವಾಸಿ. ಇದಕ್ಕೆ ಉದಾಹರಣೆ ಈ ಸರಳ ಸಾಮೂಹಿಕ ಕಲ್ಯಾಣ ಮಹೋತ್ಸವ. ಇದು ವಿಶ್ವಮನ್ನಣೆ ಗಳಿಸಿರುವ ಕಾರ್ಯಕ್ರಮ. ಬಸವಣ್ಣನ ವಿಚಾರಧಾರೆಗಳ ಕ್ರಾಂತಿಯನ್ನು ಮುರುಘಾ ಶರಣರು ಮಾಡಿದ್ದಾರೆ. ಪ್ರತಿ ತಳ ಸಮುದಾಯಕ್ಕೂ ಧ್ವನಿಯಾಗಿದ್ದಾರೆ ಎಂದರು ಕಾರ್ಯಕ್ರಮದಲ್ಲಿ 2 ಅಂತರ್ಜಾತಿ ವಿವಾಹ ಸೇರಿದಂತೆ 15 ಜೋಡಿಗಳ ವಿವಾಹ ನೆರವೇರಿತು. ಇದೇ ಸಂದರ್ಭದಲ್ಲಿ ನೂತನ ವಧುವರರಿಗೆ ವಸ್ತ, ತಾಳಿಯನ್ನು ವಿತರಿಸಲಾಯಿತು.

     ದಿಗ್ವಿಜಯ ಟಿವಿ ದೆಹಲಿ ಪ್ರತಿನಿಧಿ ಕರಿಬಸವೇಶ, ದಾಸೋಹ ಸೇವಾರ್ಥಿಗಳಾದ ಸುರೇಶ್‌ಬಾಬು ವೇದಿಕೆಯಲ್ಲಿದ್ದರು. ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಎನ್. ತಿಪ್ಪಣ್ಣ, ಕೆಇಬಿ ಷಣ್ಮುಖಪ್ಪ, ಪೆಲ್ವಾನ್ ತಿಪ್ಪೇಸ್ವಾಮಿ ಮುಂತಾದವರಿದ್ದರು.ಪ್ರೊ.ಸಿ.ಎಂ. ಚಂದ್ರಪ್ಪ ಸ್ವಾಗತಿಸಿದರು. ಟಿ.ಪಿ. ಜ್ಞಾನಮೂರ್ತಿ ವಂದಿಸಿದರು. ಬಸವರಾಜೇಂದ್ರ ಶಾಸ್ತಿçಗಳು ನಿರೂಪಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap