ಶಾಲೆಗಳನ್ನು ದತ್ತು ಪಡೆಯಿರಿ: ಎ ನಾರಾಯಣಸ್ವಾಮಿ

ಚಿತ್ರದುರ್ಗ,:
     ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗಾಳಿ ವಿದ್ಯುತ್ ಯಂತ್ರ ಉದ್ಯಮ, ಸೋಲಾರ್ ಪವರ್, ಮೈನಿಂಗ್ ಸೇರಿದಂತೆ ವಿವಿಧ ವಾಣಿಜ್ಯ ಉದ್ಯಮ ನಡೆಸುತ್ತಿರುವ ಕೈಗಾರಿಕೆ ಹಾಗೂ ಕಂಪನಿಗಳು ಸಾಮಾಜಿಕ ಹೊಣೆಗಾರಿಕೆ ಅನುದಾನದಡಿ ಜಿಲ್ಲೆಯ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು, ಶೈಕ್ಷಣಿಕ ಪ್ರಗತಿಗೆ ಸಹಕರಿಸಬೇಕು ಎಂದು ಸಂಸದ ಎ. ನಾರಾಯಣಸ್ವಾಮಿ ಅವರು ಹೇಳಿದರು.
 
     ಕೈಗಾರಿಕೆ ಹಾಗೂ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ (ಸಿಎಸ್‍ಆರ್) ಅನುದಾನದಡಿ ಕೈಗೊಳ್ಳುತ್ತಿರುವ ಕಾರ್ಯ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
 
    ಜಿಲ್ಲೆಯಲ್ಲಿ ಸ್ಥಾಪನೆ ಮಾಡಿರುವ ಕೈಗಾರಿಕೆಗಳು ಹಾಗೂ ಕಂಪನಿಗಳು ಆಯಾ ವ್ಯಾಪ್ತಿಯ ಗ್ರಾಮ ಪಂಚಾಯತ್‍ನಲ್ಲಿ ಅನುಮತಿ ಹಾಗೂ ಪರವಾನಿಗೆ ಪಡೆದಿರುವುದು ಕಡ್ಡಾಯವಾಗಿದ್ದು, ಅಲ್ಲದೆ ನಿಯಮಾನುಸಾರ ತೆರಿಗೆಯನ್ನು ಪಾವತಿಸಿರಬೇಕು.  ಸಂಬಂಧಪಟ್ಟ ತಹಸಿಲ್ದಾರರು, ಜಿಲ್ಲಾ ಪಂಚಾಯತ್ ಅಧಿಕಾರಿಗಳು ಇದನ್ನು ಪರಿಶೀಲಿಸಿ, ನಿಯಮಗಳ ಉಲ್ಲಂಘನೆ ಕಂಡುಬಂದಲ್ಲಿ ಅಂತಹ ಕೈಗಾರಿಕೆ ಹಾಗೂ ಕಂಪನಿಯವರಿಂದ, ಅವರು ಉದ್ದಿಮೆ ಪ್ರಾರಂಭವಾದಾಗಿನಿಂದ ಈವರೆಗೆ ಪಾವತಿಸಬೇಕಾದ ತೆರಿಗೆ ಮೊತ್ತ ಪಾವತಿಸುವಂತೆ ನೋಟಿಸ್ ನೀಡಬೇಕು.  ಅಲ್ಲದೆ ಅನುಮತಿ ಪಡೆಯದೆ ಕಂಪನಿ ಪ್ರಾರಂಭಿಸಿದ್ದಲ್ಲಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು
 
    ಜಿಲ್ಲೆಯಲ್ಲಿರುವ ಕೈಗಾರಿಕೆಗಳು, ಮೈನಿಂಗ್ ಕಂಪನಿ, ವಿಂಡ್ ಪವರ್ ಕಂಪನಿಗಳು ತಾವು ಪಾವತಿಸುವ ಆದಾಯ ತೆರಿಗೆಯಲ್ಲಿ ಶೇ. 2 ರಷ್ಟು  ಮೊತ್ತವನ್ನು  ಸಾಮಾಜಿಕ  ಹೊಣೆಗಾರಿಕೆ ಚಟುವಟಿಕೆಗಳಿಗೆ ಮೀಸಲಿಡುವುದು (ಸಿಎಸ್‍ಆರ್) ಕಡ್ಡಾಯವಾಗಿದೆ.  ಹೀಗಾಗಿ ನಾವು ಕಂಪನಿಯವರಿಗೆ ಅಭಿವೃದ್ಧಿ ಕಾರ್ಯಗಳಿಗೆ ಭಿಕ್ಷೆ ಬೇಡುತ್ತಿಲ್ಲ.  ಅವರು ನಿಯಮಾನುಸಾರ ಕೈಗೊಳ್ಳಬೇಕಿರುವ ಜವಾಬ್ದಾರಿಯನ್ನು ತಿಳಿಸುತ್ತಿದ್ದೇವೆ ಎಂದರು
 
    ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದ 20 ವರ್ಷಗಳಿಂದ ಮಳೆಯ ಕೊರತೆ ಎದುರಿಸುತ್ತಿದ್ದು, ಬರ ಪರಿಸ್ಥಿತಿ ಇದೆ.  ಹೀಗಾಗಿ ಎಲ್ಲ ಕ್ಷೇತ್ರಗಳಲ್ಲಿ ಜಿಲ್ಲೆ ಹಿಂದುಳಿದಿದೆ.  ಬಡಜನರಿಗೆ, ಮತದಾರರಿಗೆ ಬದ್ಧತೆಯನ್ನು ತೋರುವುದು ನಮ್ಮ ಜವಾಬ್ದಾರಿಯಾಗಿದೆ.  ಜಿಲ್ಲೆಯಲ್ಲಿರುವ ಕೈಗಾರಿಕೆಗಳು ಹಾಗೂ ಕಂಪನಿಗಳು ಸಿಎಸ್‍ಆರ್ ಅನುದಾನದಲ್ಲಿ ಸಾಕಷ್ಟು ಕೆಲಸಗಳನ್ನು ಮಾಡುತ್ತಿದ್ದರೂ, ಯಾವುದೇ ಇಲಾಖೆಗಳಲ್ಲಿ ಇದರ ವಿವರಗಳನ್ನು ದಾಖಲಿಸುವ ಕಾರ್ಯ ಆಗುತ್ತಿಲ್ಲ.  ಹೀಗಾಗಿ ಯಾವ ಕಂಪನಿಗಳು ಎಷ್ಟು ತೆರಿಗೆ ಪಾವತಿಸುತ್ತಿವೆ, ಸಿಎಸ್‍ಆರ್ ನಡಿ ಎಷ್ಟು ಹಣ ವೆಚ್ಚ ಮಾಡುತ್ತಿದ್ದಾರೆ ಎಂಬ ವಿವರಗಳು ದೊರೆಯದಂತಾಗಿದೆ. 
 
      ಕೆಲವು ಕೈಗಾರಿಕೆ ಹಾಗೂ ಕಂಪನಿಗಳು ಬೇರೆಯವರಿಗೆ ಗುತ್ತಿಗೆ ನೀಡಿ, ಅದರ ಲಾಭವನ್ನು ಮಾತ್ರ ತಾವು ಪಡೆಯುತ್ತಿದ್ದು, ಕಂಪನಿ ನಷ್ಟದಲ್ಲಿದೆ ಎಂದು ನೆಪ ಹೇಳುತ್ತಿದ್ದಾರೆ.  ಸಿಎಸ್‍ಆರ್ ಅನುದಾನವನ್ನು ನಿಯಮಾನುಸಾರ ಖರ್ಚು ಮಾಡದಿರುವ ಕಂಪನಿಗಳ ವಿರುದ್ಧ ಕೇಸ್ ದಾಖಲಿಸಿ, ಕಾನೂನು ರೀತ್ಯ ಕ್ರಮ ಕೈಗೊಳ್ಳುವುದು ಅಗತ್ಯವಿದೆ.  ಈ ದಿಸೆಯಲ್ಲಿ ಸಂಬಂಧಪಟ್ಟ ತಹಸಿಲ್ದಾರರು ಹಾಗೂ ಜಿ.ಪಂ. ಅಧಿಕಾರಿಗಳು ವಿವರ ಪಡೆದು ಸಲ್ಲಿಸುವಂತೆ ಸಂಸದ ಎ. ನಾರಾಯಣಸ್ವಾಮಿ ಸೂಚನೆ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap