ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ವೆಂಟಿಲೇಟರ್ ಸೌಲಭ್ಯ ಕಲ್ಪಿಸಿ: ಡಿ ಕೆ ಶಿವಕುಮಾರ್

ಬೆಂಗಳೂರು

     ಕೊರೋನಾ ಸೋಂಕು ಪ್ರಮಾಣ ಕ್ಷಿಪ್ರಗತಿಯಲ್ಲಿ ಪಸರಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ವೆಂಟಿಲೇಟರ್ ವ್ಯವಸ್ಥೆಯುಳ್ಳ ಪ್ರತ್ಯೇಕ ಚಿಕಿತ್ಸಾ ಘಟಕ ತೆರೆಯಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

     ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ರಾಜ್ಯ ಸರ್ಕಾರ ಈ ಸೋಂಕು ನಿವಾರಣೆಗೆ ಮತ್ತಷ್ಟು ಗಂಭೀರ ಕ್ರಮಗಳನ್ನು ಕೈಗೊಳ್ಳಬೇಕು. ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಸೋಂಕು ನಿಯಂತ್ರಣಕ್ಕೆ ಸಮರ್ಪಕ ವ್ಯವಸ್ಥೆ ಇಲ್ಲ. ಗ್ರಾಮೀಣ ಭಾಗಗಳಿಗೆ ಹಬ್ಬಿದರೆ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತದೆ. ಅಗತ್ಯ ಕ್ರಮ ಕೈಗೊಳ್ಳುವುದಾಗಿ ಮಾತಿನಲ್ಲಿ ಹೇಳಿದರೆ ಸಾಲದು. ಕೃತಿಯಲ್ಲಿ ಜಾರಿಗೆ ತರಬೇಕು ಎಂದಿದ್ದಾರೆ.

     ಕೊರೋನಾ ನಿಯಂತ್ರಣಕ್ಕೆ ಜಿಲ್ಲಾಡಳಿತವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಂಡು ಅವುಗಳಿಗೆ ಹೆಚ್ಚಿನ ಆರ್ಥಿಕ ನೆರವು ನೀಡಬೇಕು. ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಕೊರೋನಾ ಸೋಂಕು ಚಿಕಿತ್ಸೆಗೆ ಕನಿಷ್ಠ 60 ರಿಂದ 80 ಹಾಸಿಗೆ ಸಾಮರ್ಥ್ಯದ ವೆಂಟಿಲೇಟರ್ ಹೊಂದಿರುವ ಪ್ರತ್ಯೇಕ ಚಿಕಿತ್ಸಾ ಘಟಕವನ್ನು ಸನ್ನದ್ಧಸ್ಥಿತಿಯಲ್ಲಿಡಬೇಕು. ಜತೆಗೆ ಕೊರೋನಾ ರೋಗ ಪತ್ತೆ ಮತ್ತು ನಿಗಾ ಕೇಂದ್ರಗಳನ್ನೂ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲೂ ಸ್ಥಾಪಿಸಬೇಕು ಎಂದು ಶಿವಕುಮಾರ್ ಆಗ್ರಹಿಸಿದರು.

     ಮೊರಾರ್ಜಿ ದೇಸಾಯಿ ವಸತಿ ಶಾಲೆ, ವಿದ್ಯಾರ್ಥಿ ನಿಲಯಗಳು, ವಿಶ್ವವಿದ್ಯಾಲಯ ಕ್ಯಾಂಪಸ್ ಗಳು, ಹಾಸ್ಟೆಲ್ ಗಳು ಸೇರಿದಂತೆ ಇತರೆ ಸಾಮೂಹಿಕ ವಸತಿ ಕೇಂದ್ರಗಳಲ್ಲಿ ರೋಗ ಪತ್ತೆ, ನಿಗಾ ಘಟಕಗಳನ್ನು ತೆರೆಯಬೇಕು. ಸೋಂಕು ಹರಡದಂತೆ ಜನರು ತಮ್ಮನ್ನು ತಾವೇ ನಿರ್ಬಂಧಿಸಿಕೊಳ್ಳಬೇಕು. ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಸೂಚನೆಗಳನ್ನು ತಪ್ಪದೆ ಪಾಲಿಸಬೇಕು. ಸಾರ್ವಜನಿಕ ಅಂತರ ಕಾಯ್ದುಕೊಳ್ಳಬೇಕು. ಲಾಕ್ ಡೌನ್ ಹಿಂದಿನ ಉದ್ದೇಶವನ್ನು ಅರ್ಥ ಮಾಡಿಕೊಂಡು, ಅದನ್ನು ಚಾಚು ತಪ್ಪದೇ ಅನುಷ್ಠಾನಕ್ಕೆ ತರಬೇಕು. ಸಾರ್ವಜನಿಕ ಸಹಕಾರ ಇದ್ದರೆ ಮಾತ್ರ ಪರಿಣಾಮಕಾರಿಯಾಗಿ ಸೋಂಕು ತಡೆಯಲು ಸಾಧ್ಯ ಎಂದು ವಿನಂತಿ ಮಾಡಿದ್ದಾರೆ.

     ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರಿಗೆ ವಿಶೇಷ ಮನವಿ ಮಾಡಿರುವ ಡಿ.ಕೆ. ಶಿವಕುಮಾರ್ ಅವರು, ಸರ್ಕಾರಿ ಮತ್ತು ಖಾಸಗಿ ವೈದ್ಯರು ತಮ್ಮ ಕಾರ್ಯ ನಿಯೋಜಿತ ಪ್ರದೇಶಗಳಲ್ಲೇ ಉಳಿದುಕೊಂಡು, ಕಾರ್ಯನಿರ್ವಹಿಸಬೇಕು. ಗ್ರಾಮೀಣ ಭಾಗದಲ್ಲಿರುವ ಸರ್ಕಾರಿ ಹಾಗೂ ಖಾಸಗಿ ವೈದ್ಯರು ಬೇರೆ ಸ್ಥಳಗಳಿಗೆ ಹೋಗದೆ ನಿಯೋಜಿತ ಸ್ಥಳಗಳಲ್ಲೇ ಸೇವೆ ಸಲ್ಲಿಸಬೇಕು. ಈ ಸಂದರ್ಭದಲ್ಲಿ ನಿಮ್ಮ ಪಾತ್ರ ಹಾಗೂ ಬದ್ಧತೆ ಬಹುಮುಖ್ಯ. ಅಗತ್ಯ ಬಿದ್ದ ಜನರಿಗೆ ಸೂಕ್ತ ಚಿಕಿತ್ಸೆ ಒದಗಿಸಿ ಎಂದು ಅವರು ಕೋರಿದ್ದಾರೆ.

     ದೇಶದಲ್ಲಿ ಕೊರೋನಾ ಸೋಂಕು ಮೂರನೇ ಹಂತ ತಲುಪುತ್ತಿರುವ ಹೊತ್ತಿನಲ್ಲಿ ಎಲ್ಲರೂ ಮುಂಜಾಗ್ರತೆ ವಹಿಸಬೇಕು. ನಗರ ಪ್ರದೇಶಗಳಿಂದ ಹಳ್ಳಿಗಳತ್ತ ಜನರು ಹೆಚ್ಚಿನ ಸಂಖ್ಯೆಯಲ್ಲಿ ತೆರಳುತ್ತಿರುವುದು ಗೊತ್ತಾಗಿದೆ. ಇದರಿಂದ ಸೋಂಕು ಗ್ರಾಮೀಣ ಭಾಗಗಳಿಗೂ ಪಸರಿಸುವ ಸಾಧ್ಯತೆಗಳಿವೆ. ಆ ಭಾಗದಲ್ಲಿ ಸೂಕ್ತ ಚಿಕಿತ್ಸೆ ಸಿಗುವುದು ಕಷ್ಟವಾಗುತ್ತದೆ. ಹೀಗಾಗಿ ಜನ ಹೆದರುವುದು ಬೇಡ. ಚಿಂತೆ ಮಾಡುವುದೂ ಬೇಡ. ಕಟ್ಟುನಿಟ್ಟಾಗಿ ಮುನ್ನೆಚ್ಚರಿಕೆ ಕ್ರಮಗಳನ್ನುಕೈಗೊಳ್ಳಿ. ನಿಮ್ಮ ಜತೆ ನಾವಿದ್ದೇವೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap