ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಪೊಲೀಸ್ ಸೈಬರ್ ಸೆಲ್ ಸ್ಥಾಪನೆ : ಯಡಿಯೂರಪ್ಪ

ಬೆಂಗಳೂರು

     ರಾಜ್ಯದಲ್ಲಿ ಹೆಚ್ಚುತ್ತಿರುವ ಆರ್ಥಿಕ ಸೈಬರ್ ಹಾಗೂ ಮಾದಕ ವಸ್ತು ಜಾಲದ ಮೇಲೆ ನಿಗಾವಹಿಸಿ ಪತ್ತೆಮಾಡಲು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸೈಬರ್ ಸೆಲ್ (ಸಿಇಎನ್)ಗಳನ್ನು ಆರಂಭಿಸಿ ಪೊಲೀಸ್ ಇಲಾಖೆಗೆ ಅಂತರಾಷ್ರೀಯ ಗುಣಮಟ್ಟದ ಉಪಕರಣಗಳು ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಿಳಿಸಿದ್ದಾರೆ.

      ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಸೈಬರ್ ಸೆಲ್‌ಗಳನ್ನು ಸ್ಥಾಪಿಸಿ, ಆರ್ಥಿಕ ಅಪರಾಧಗಳು, ಆನ್ ಲೈನ್‌ನಲ್ಲಿ ನಡೆಸುವ ವಂಚನೆ, ಅಕ್ರಮಗಳು, ಗಾಂಜಾ, ಕೊಕೇನ್ ಇನ್ನಿತರ ಮಾದಕ ವಸ್ತುಗಳ ಮೇಲೆ ನಿಗಾ ಹಾಗೂ ಪತ್ತೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

     ನಗರದ ಮೈಸೂರು ರಸ್ತೆಯ ನಗರ ಸಶಸ್ತ್ರ ಮೀಸಲು ಪಡೆಯ ಆವರಣದಲ್ಲಿ ಪೊಲೀಸ್ ಸಂಸ್ಮರಣಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಹುತಾತ್ಮರಿಗೆ ಗೌರವ ವಂದನೆ ಸಲ್ಲಿಸಿ ಮಾತನಾಡಿದ ಮುಖ್ಯಮಂತ್ರಿಗಳು, ನಗರದ ೮ ಡಿಸಿಪಿ ಕಚೇರಿಗಳಲ್ಲಿ ಸೈಬರ್ ಸೆಲ್‌ಗಳ ಸ್ಥಾಪನೆಗೆ ಅನುಮೋದನೆ ನೀಡಲಾಗಿದೆ ಎಂದರು.

ಸಿಬ್ಬಂದಿ ನೇಮಕ

     ಪೊಲೀಸ್ ಇಲಾಖೆಗೆ ಸಿಬ್ಬಂದಿ, ಅಧಿಕಾರಿಗಳು ಸೇರಿ ಒಟ್ಟು ೧೬ ಸಾವಿರ ಮಂದಿಯನ್ನು ನೇಮಕ ಮಾಡಿಕೊಳ್ಳಲಾಗಿದ್ದು, ನೇಮಕಾತಿಯು ಹಂತಹಂತವಾಗಿ ಮುಂದುವರೆಯಲಿದೆ. ಪೊಲೀಸ್ ಇಲಾಖೆಯನ್ನು ಆಧುನೀಕರಣಗೊಳಿಸಲು ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

     ನಿರ್ಭಯಾ ಯೋಜನೆ ಜಾರಿಗೊಳಿಸಿ, ಪೊಲೀಸ್ ಇಲಾಖೆಗೆ ಅಂತಾರಾಷ್ಟ್ರೀಯ ಗುಣಮಟ್ಟದ ಉಪಕರಣಗಳು, ಸೌಲಭ್ಯಗಳನ್ನು ಒದಗಿಸಲಾಗುವುದು. ಈಗಾಗಲೇ ಔರಾದ್‌ಕರ್ ವರದಿ ಜಾರಿಗೊಳಿಸಲಾಗಿದೆ. ಕಷ್ಟ ಪರಿಹಾರ ಭತ್ಯೆಯನ್ನು ಹೆಚ್ಚಿಸಲಾಗಿದೆ ಎಂದು ಹೇಳಿದರು.ಪೊಲೀಸರಿಗೆ ಸಮವಸ್ತ್ರ, ಉಪಕರಣಗಳನ್ನು ಒಳಗೊಂಡ ಆಧುನಿಕ ಕಿಟ್ ಅನ್ನು ನೀಡಲಾಗುವುದು. ಇದನ್ನು ವೈಜ್ಞಾನಿಕವಾಗಿ ಪ್ರಮಾಣೀಕರಿಸಲಾಗುವುದು ಎಂದರು.

ಪೊಲೀಸ್ ವಸತಿ

      ರಾಜ್ಯದಲ್ಲಿ ಈಗಾಗಲೇ ಪೊಲೀಸರಿಗೆ ವಸತಿ ಸೌಲಭ್ಯ ಕಲ್ಪಿಸಲು ೮,೨೫೮ ಮನೆಗಳನ್ನು ನಿರ್ಮಾಣ ಮಾಡಲಾಗಿದ್ದು, ಮುಂದಿನ ವರ್ಷದಲ್ಲಿ ಎಲ್ಲಾ ಪೊಲೀಸರಿಗೆ ವಸತಿ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಹೆದ್ದಾರಿಗಳು, ಇನ್ನಿತರ ರಸ್ತೆಗಳಲ್ಲಿ ಸಂಭವಿಸುವ ಅಪಘಾತಗಳಲ್ಲಿ ಗಾಯಗೊಂಡಿರುವವರಿಗೆ ಕೂಡಲೇ ಚಿಕಿತ್ಸಾ ವ್ಯವಸ್ಥೆ ಕಲ್ಪಿಸಲು ೨೩೩ ಗಸ್ತು ವಾಹನಗಳನ್ನು ನೀಡಲಾಗುವುದು ಎಂದು ತಿಳಿಸಿದರು.

ಒನ್ ಸ್ಟಾಪ್ ಸೇವಾ ಕೇಂದ್ರ

      ಬೆಂಗಳೂರು, ಮೈಸೂರು, ಮಂಗಳೂರು, ಬೆಳಗಾವಿ ಹಾಗೂ ಹುಬ್ಬಳ್ಳಿ – ಧಾರವಾಡಗಳಲ್ಲಿ ಮಹಿಳಾ ಪೊಲೀಸ್ ಠಾಣೆಗಳನ್ನು ಒನ್ ಸ್ಟಾಪ್ ಸೇವಾ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಲಾಗುವುದು. ಪೊಲೀಸ್ ಠಾಣೆಗಳಲ್ಲಿ ಮಹಿಳೆಯರಿಗೆ ಅಗತ್ಯ ಇರುವ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.ಎಸ್ಪಿಗಳು, ಡಿವೈಎಸ್ಪಿಗಳಿಗೆ ಪ್ರತ್ಯೇಕ ಮೊಬೈಲ್ ಆಪ್ ವ್ಯವಸ್ಥೆ ಕಲ್ಪಿಸಿ, ಸಾರ್ವಜನಿಕರು ಸಮಸ್ಯೆ ಹಾಗೂ ಅಹವಾಲುಗಳಿಗೆ ಪರಿಹಾರ ಒದಗಿಸಲಾಗುವುದು, ಪೊಲೀಸರನ್ನು ಜನಸ್ನೇಹಿಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ತರಬೇತಿ

      ಪೊಲೀಸ್ ಸಿಬ್ಬಂದಿಗೆ ಆಧುನಿಕ ರೀತಿಯಲ್ಲಿ ತರಬೇತಿ ನೀಡಲಾಗುವುದು. ಎಲ್ಲಾ ಹಂತದ ಸಿಬ್ಬಂದಿಗಳಿಗೂ ಹಿರಿಯ ಅಧಿಕಾರಿಗಳು ಹಾಗೂ ನುರಿತ ತಜ್ಞರಿಂದ ತರಬೇತಿ ನೀಡಿ ಸಜ್ಜುಗೊಳಿಸಲಾಗುವುದು ಎಂದು ತಿಳಿಸಿದರು.ಕರ್ತವ್ಯನಿರತ ಸಂದರ್ಭದಲ್ಲಿ ಹುತಾತ್ಮರಾದ ಪೊಲೀಸ್ ಸಿಬ್ಬಂದಿಗಳನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.

      ಪೊಲೀಸರು ಆಂತರಿಕ ಸ್ವಾಸ್ಥ್ಯ ಕಾಪಾಡುತ್ತ ಜನರಲ್ಲಿ ನೆಮ್ಮದಿಯ ಭಾವ ಮೂಡಿಸಲಿದ್ದು, ರಾಜ್ಯದ ಪೊಲೀಸರು ದೇಶಕ್ಕೆ ಮಾದರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಗೃಹ ಕಾರ್ಯದರ್ಶಿ ರಜನೀಶ್ ಗೋಯಲ್, ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್. ರಾಜು, ಡಿಜಿಪಿಗಳಾದ ಎಂ.ಎನ್. ರೆಡ್ಡಿ, ಔರಾದ್‌ಕರ್, ಪ್ರವೀಣ್ ಸೂದ್, ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸೇರಿದಂತೆ, ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap