ನಾಡಲ್ಲಿರುವವರೆಲ್ಲರೂ ತಪ್ಪದೆ ಕನ್ನಡ ಕಲಿಯಬೇಕು : ಜಿಲ್ಲಾಧಿಕಾರಿ

ಚಿತ್ರದುರ್ಗ:
      ಯಾವುದೇ ನಾಡು ಅಥವಾ ಭಾಷಿಕರಾಗಿರಲಿ, ಕರ್ನಾಟಕದಲ್ಲಿರುವವರೆಲ್ಲರೂ ತಪ್ಪದೆ ಕನ್ನಡ ಕಲಿಯಬೇಕು, ಕನ್ನಡವನ್ನು ಅಭಿವೃದ್ಧಿ ಪಥದಲ್ಲಿ ನಡೆಸಲು ಬದ್ಧರಾಗಿರಬೇಕು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಮನವಿ ಮಾಡಿದರು.ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ 64 ನೇ ಕನ್ನಡ ರಾಜ್ಯೋತ್ಸವ ದಿನಾಚರಣೆ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಬಳಿಕ ನೀಡಿದ ಸಂದೇಶದಲ್ಲಿ ಅವರು ಈ ರೀತಿ ಮನವಿ ಮಾಡಿದರು.
    ಕನ್ನಡ ಭಾಷೆ, ಸಾಹಿತ್ಯ ಪರಂಪರೆ ಶ್ರೀಮಂತವಾಗಿದೆ.  ರಾಜ್ಯದ ಶ್ರೇಷ್ಠ ಸಾಹಿತ್ಯ ಪರಂಪರೆಗೆ ವಿಶ್ವ ಮನ್ನಣೆ ಇದೆ.  ಕನ್ನಡ ಸಾಹಿತ್ಯ ವಿಶ್ವದ ಯಾವುದೇ ಭಾಷೆಯ ಸಾಹಿತ್ಯದ ಮೌಲ್ಯವನ್ನು ಸರಿಗಟ್ಟುವಂತಹದ್ಧಾಗಿದೆ. ಇಂತಹ ಹಿರಿಮೆಗೆ ಕುಂದು ಬಾರದಂತೆ ನಾವೆಲ್ಲರೂ ನೋಡಿಕೊಳ್ಳಬೇಕಾಗಿದೆ ಎಂದರು
  ಕರ್ನಾಟಕವೆಂದರೆ ಕೇವಲ ಗಡಿ ರೇಖೆಯ ಒಳಗೆ ಸೀಮಿತವಾದ ಒಂದು ಭೌಗೋಳಿಕ ಪ್ರದೇಶವಲ್ಲ.  ಅದು ಒಟ್ಟಾರೆ ರಾಷ್ಟ್ರೀಯ ಸಂಸ್ಕøತಿಯನ್ನು, ಕನ್ನಡದ ಸ್ವಂತ ವ್ಯಕ್ತಿತ್ವದ ಹಿನ್ನೆಲೆಯಲ್ಲಿ ಪ್ರತಿಪಾದಿಸುವ ಅತ್ಯುನ್ನತ ಭಾವ.  ಯಾವುದೇ ರಾಜ್ಯ, ನಾಡು, ಭಾಷಿಕರಾಗಿರಲಿ, ಕರ್ನಾಟಕದಲ್ಲಿ ಇರುವವರೆಲ್ಲರೂ ತಪ್ಪದೆ ಕನ್ನಡ ಕಲಿಯಬೇಕು.  ಪ್ರಾಚೀನ ಭಾಷೆಯಾಗಿರುವ ಕನ್ನಡಕ್ಕೆ ಅಗ್ರಸ್ಥಾನ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಪ್ರತಿಪಾದಿಸಿದರು
   ವಿದ್ಯಾರ್ಥಿಗಳು ಕನ್ನಡ ಸಾಹಿತ್ಯ ವಾಚನ, ಕನ್ನಡ ಗೀತಗಾಯನ, ಕನ್ನಡ ಚರ್ಚಾಕೂಟಗಳಲ್ಲಿ ಭಾಗವಹಿಸುವುದರ ಮೂಲಕ ಕನ್ನಡಾಭಿಮಾನವನ್ನು ಪ್ರೋತ್ಸಾಹಿಸಬೇಕು.  ಕನ್ನಡವನ್ನು ಸುಂದರ ಭಾಷೆಯನ್ನಾಗಿಸುವಲ್ಲಿ ರಾಜಕೀಯ ಇಚ್ಛಾಶಕ್ತಿ ಹಾಗೂ ಜನರು ತಮ್ಮ ಮನೋಬಲವನ್ನು ಪ್ರದರ್ಶಿಸಿ, ಕನ್ನಡವನ್ನು ಅಭಿವೃದ್ಧಿ ಪಥದಲ್ಲಿ ನಡೆಸಲು ಬದ್ಧರಾಗಿರಬೇಕು ಎಂದು ಯುವಜನತೆಗೆ ಕರೆ ನೀಡಿದರು.
 
    ಕರ್ನಾಟಕ ಸ್ಥಾನ ಇಂದು ಭಾರತದ ಅಭಿವೃದ್ಧಿ ನಕ್ಷೆಯಲ್ಲಿ ಅಗ್ರಸ್ಥಾನದಲ್ಲಿದೆ.  ದೇಶದ ಒಟ್ಟು ಆರ್ಥಿಕ ವರಮಾನದಲ್ಲಿ ಕರ್ನಾಟಕದ್ದು ಸಿಂಹಪಾಲು, ವಿಜ್ಞಾನಿಗಳ ಕರ್ಮಭೂಮಿ ಕರ್ನಾಟಕ, ಇಲ್ಲಿನ ವೈಜ್ಞಾನಿಕ ಸಂಸ್ಥೆಗಳಿಗೆ ವಿಶ್ವಮಾನ್ಯತೆ ಇದ್ದು, ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದ ಹೆಮ್ಮೆ ನಮ್ಮ ರಾಜ್ಯಕ್ಕಿದೆ.  ಚೆನ್ನಬಸಪ್ಪ, ವೆಂಕಟ ರಂಗೋಕಟ್ಟಿ, ರಾ.ಹ.ದೇಶಪಾಂಡೆ, ಗಂಗಾಧರ ಮಡಿವಾಳೇಶ್ವರ ತುರುಮುರಿ, ನರಸಿಂಹಚಾರ್ಯ, ಬಸಪ್ಪ ಶಾಸ್ತ್ರಿ, ಆಲೂರು ವೆಂಕಟರಾಯರು ಹೀಗೆ ಹಲವಾರು ಮಹನೀಯರ ಹೋರಾಟದ ಫಲವಾಗಿ ಕರ್ನಾಟಕ ಏಕೀಕರಣಗೊಳ್ಳಲು ಸಾಧ್ಯವಾಯಿತು  ಕರ್ನಾಟಕವನ್ನು ಕಟ್ಟಲು ಶ್ರಮಿಸಿದ ಇಂತಹ ಮಹಾಚೇತನಗಳನ್ನು ಸ್ಮರಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು
ಸಾಧಕರಿಗೆ ಸನ್ಮಾನ :
   ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಜಿಲ್ಲೆಯ ಸಾಧಕರಿಗೆ ಜಿಲ್ಲಾಡಳಿತದ ವತಿಯಿಂದ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.ನೇಕಾರಿಕೆ ಹಾಗೂ ಕೃಷಿ ಕ್ಷೇತ್ರದಲ್ಲಿ ಮೊಳಕಾಲ್ಮೂರಿನ ರೇಷ್ಮೆ ಸೀರೆ ನೇಕಾರರಾದ ಎಸ್.ಎಲ್. ಮಲ್ಲಿಕಾರ್ಜುನ. ವೈದ್ಯಕೀಯ ಸೇವೆ ಕ್ಷೇತ್ರದಲ್ಲಿ ಹೊಳಲ್ಕೆರೆಯ ಸಜ್ಜನ್ ಆಸ್ಪತ್ರೆಯ ಡಾ. ಎನ್.ಬಿ. ಸಜ್ಜನ್. ಜಾನಪದ ಕ್ಷೇತ್ರದಲ್ಲಿ ಕಿಂದರಜೋಗಿ ಪ್ರಕಾರದಲ್ಲಿನ ಸೇವೆಗಾಗಿ ಚಳ್ಳಕೆರೆ ತಾಲ್ಲೂಕು ದೇವರಹಳ್ಳಿಯ ದೊಡ್ಡಯಲ್ಲಪ್ಪ. ರಂಗಭೂಮಿ, ಬೀದಿನಾಟಕ, ಸಂಗೀತ ಕ್ಷೇತ್ರದಲ್ಲಿ ಹಿರಿಯೂರಿನ ಮಲ್ಲಪ್ಪನಹಳ್ಳಿ ಮಹಾಲಿಂಗಯ್ಯ ಅವರಿಗೆ ಗೌರವಿಸಲಾಯಿತು
   ಅದೇ ರೀತಿ ಕೃಷಿ ಕ್ಷೇತ್ರದಲ್ಲಿ ಮೊಳಕಾಲ್ಮೂರು ತಾಲ್ಲೂಕು ಬಿ.ಜಿ. ಕೆರೆಯ ವೀರಭದ್ರಪ್ಪ.  ಕ್ರೀಡಾ ಕ್ಷೇತ್ರದಲ್ಲಿ ಚಿತ್ರದುರ್ಗದ ಕುಸ್ತಿಪಟು ಸದ್ದಾಂ ಹುಸೇನ್.  ಸೋಬಾನೆ ಪದಗಳ ಮೂಲಕ ಖ್ಯಾತಿ ಪಡೆದಿರುವ ಚಿತ್ರದುರ್ಗ ತಾಲ್ಲೂಕು ಕುಂಚಿಗನಾಳಿನ ಕರಿಯಮ್ಮ.  ಬೀದಿನಾಟಕ (ಜಾನಪದ ಕ್ಷೇತ್ರ) ಹೊಸದುರ್ಗ ತಾಲ್ಲೂಕು ಕಲ್ಕೆರೆಯ ಎ.ಕೆ. ಹನುಮಂತಪ್ಪ. ಕಂಬಳಿ ನೇಕಾರಿಕೆಯಲ್ಲಿ ಸಾಧನೆ ತೋರಿರುವ ಚಳ್ಳಕೆರೆ ತಾಲ್ಲೂಕು ಗೊರ್ಲತ್ತಿನ ಗಂಗಮ್ಮ ಅವರಿಗೆ ಸನ್ಮಾನಿಸಲಾಯಿತು
     ಸಮಾರಂಭದಲ್ಲಿ ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ, ವಿಧಾನಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್, ಜಿ.ಪಂ. ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ. ಸತ್ಯಭಾಮ, ಅಪರ ಜಿಲ್ಲಾಧಿಕಾರಿ ಸಂಗಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್, ಉಪವಿಭಾಗಾದಿಕಾರಿ ವಿ. ಪ್ರಸನ್ನ, ತಹಸಿಲ್ದಾರ್ ವೆಂಕಟೇಶಯ್ಯ ಸೇರಿದಂತೆ ವಿವಿಧ ಅಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link