ತುಮಕೂರು
ಉಪ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್-ಜೆಡಿಎಸ್‍ನ ಮೈತ್ರಿ ಸರಕಾರ ಬರುತ್ತದೆ ಎಂಬ ಭಾವನೆಯಲ್ಲಿ ಫಲಿತಾಂಶ ಬರುವುದಕ್ಕೂ ಮುಂಚೆ ಮತ್ತೆ ನಮ್ಮದೇ ಸರಕಾರ ಬರುತ್ತದೆ ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಓಡಾಡುತ್ತಿದ್ದರು. ಆದರೆ ಫಲಿತಾಂಶದ ಬಳಿಕ ಎಲ್ಲರೂ ತಣ್ಣಗಾಗಿದ್ದಾರೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ವ್ಯಂಗ್ಯ ಮಾಡಿದರು.
ಶ್ರೀ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದ ಅವರು, ಲಿಂ.ಶ್ರೀಗಳ ಗದ್ದುಗೆ ದರ್ಶನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಜನ ಬಿಜೆಪಿಗೆ ಹೆಚ್ಚಿನ ಸ್ಥಾನ ನೀಡಿ ಯಡಿಯೂರಪ್ಪನವರನ್ನು ಮುಖ್ಯಮಂತ್ರಿಯನ್ನಾಗಿಸುವ ಆದೇಶ ನೀಡಿದ್ದರು. ಕಾಂಗ್ರೆಸ್ ಪಕ್ಷ ಅಧಿಕಾರವನ್ನು ತೊರೆಯಬೇಕು ಎಂದಿದ್ದರು. ಈ ನಿಟ್ಟಿನಲ್ಲಿ ಮೈಸೂರಿನಲ್ಲಿ ಜಿ.ಟಿ.ದೇವೇಗೌಡರು, ಸಿದ್ದರಾಮಯ್ಯರನ್ನು ಸೋಲಿಸಿದರು. ಯಾವ ಕೇತ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತೋ ಅಂತಹ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆದ್ದರು.
ಇಲ್ಲಿಯೇ ಮತದಾರರ ಆಶಯ, ಆದೇಶ ಏನೆಂಬುದು ತಿಳಿಯಿತು. ಆ ವೇಳೆ ಜೆಡಿಎಸ್ ನ್ಯಾಯವಾಗಿ ಬಿಜೆಪಿಗೆ ಬೆಂಬಲ ಕೊಡಬೇಕಿತ್ತು. ಆದರೆ ಕೊಡಲಿಲ್ಲ. ಹಾಗಾಗಿ ಎರಡೂ ಪಕ್ಷದ ಶಾಸಕರು ಪಕ್ಷ ತೊರೆದು ರಾಜಿನಾಮೆ ಕೊಟ್ಟರು. ಅವರನ್ನು ಅಂದಿನ ಸ್ಪೀಕರ್ ಅನರ್ಹರನ್ನಾಗಿಸಿದರೆ ಉಪಚುನಾವಣೆಯಲ್ಲಿ ಮತದಾರರು ಅರ್ಹರನ್ನಾಗಿಸಿ ಅಧಿಕಾರ ಕೊಟ್ಟಿದ್ದಾರೆ ಎಂದರು.
ಉಪ ಚುನಾವಣೆ ಫಲಿತಾಂಶ ಬಂದ ನಂತರ ಕಾಂಗ್ರೆಸ್‍ನಲ್ಲಿ ರಾಜಿನಾಮೆ ಪರ್ವ ಪ್ರಾರಂಭವಾಗಿದೆ. ಇತ್ತೀಚೆಗೆ ಅನಾರೋಗ್ಯದಲ್ಲಿದ್ದ ಸಿದ್ದರಾಮಯ್ಯರನ್ನು ಭೇಟಿ ಮಾಡಿದಾಗ ಅವರು, ನಾನು ವಿಪಕ್ಷಕ್ಕೆ ರಾಜಿನಾಮೆ ನೀಡಿದ್ದೇನೆ. ನಿಮಗೆ ಸುಲಭವಾಯಿತು ಅಲ್ಲವೇ ಎಂದರು. ನಾನು, ನೀವು ವಿಪಕ್ಷದಲ್ಲಿದ್ದರೆ ನಿಮ್ಮನ್ನು ಎದುರಿಸುವುದು ಸುಲಭ ಎಂದೆ. ಅವರಿಂದಲೇ ರಾಜಿನಾಮೆ ಪರ್ವ ಪ್ರಾರಂಭವಾಗಿದೆ ಎಂದರು.
ಸಚಿವ ಸ್ಥಾನ ವಿಚಾರವಾಗಿ ಮಾತನಾಡಿದ ಅವರು, ನಾನು ಪಕ್ಷದ ನಿರ್ದೇಶನ ಪಾಲಿಸುತ್ತೇನೆ. ಈ ಮುಂಚೆ ಸಚಿವ ಸ್ಥಾನ ಕೇಳಿರಲಿಲ್ಲ. ಪಕ್ಷ ಜವಾಬ್ದಾರಿ ಕೊಟ್ಟಿದೆ. ಆ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇನೆ. ನಾಳೆ ಪಕ್ಷ ಅಧಿಕಾರ ಬಿಡು ಎಂದರೆ ಬಿಟ್ಟು ಶಾಸಕನಾಗಿ ಜನಸೇವೆ ಮಾಡುತ್ತೇನೆ. ನನಗೆ ಪಕ್ಷಕ್ಕಿಂತ ದೊಡ್ಡ ಸಂಗತಿ ಮತ್ತೊಂದಿಲ್ಲ. ಪಕ್ಷದ ಆಜ್ಞೆ ಎಲ್ಲರೂ ಪಾಲಿಸಲೇಬೇಕು ಎಂದರು.
ಬಾಂಗ್ಲಾ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಿಂದ ಬಂದ ಅಕ್ರಮ ನುಸುಳುಕಾರರಿಗೆ ಪೌರತ್ವ ಕೊಡಬೇಕು ಎಂದು ಕಾಂಗ್ರೆಸ್‍ನವರು ಹೇಳುತ್ತಿದ್ದಾರೆ. ಯಾವುದೇ ಕಾರಣಕ್ಕೂ ನುಸುಳುಕಾರರಿಗೆ ಮಣೆ ಹಾಕಲ್ಲ. ನಿರಾಶ್ರಿತರು ಇಂದಿಗೂ ಕ್ಯಾಂಪ್‍ಗಳಲ್ಲಿ ವಾಸಿಸುತ್ತಿದ್ದಾರೆ. ಅವರಿಗೆ ಪೌರತ್ವ ಸಿಕ್ಕಿಲ್ಲ. ವೋಟ್ ಬ್ಯಾಂಕ್‍ಗಾಗಿ ಅಕ್ರಮ ನುಸುಳುಕೋರರಿಗೆ ಆಧಾರ್ ಕಾರ್ಡ್ ಮತ್ತು ಮತದಾರರ ಪಟ್ಟಿಗೂ ಸೇರಿಸಿ ಪಡಿತರ ಕಾರ್ಡ್ ನೀಡಿದ್ದಾರೆ. ಆ ಮೂಲಕ ದೇಶದಲ್ಲಿ ಮೇಯಲು ಅವಕಾಶ ನೀಡಿದ್ದಾರೆ ಎಂದು ದೂರಿದರು.
ನಿರಾಶ್ರಿತರು ಮತ್ತು ನುಸುಳುಕಾರರನ್ನೂ ಒಂದೇ ದೃಷ್ಠಿಯಲ್ಲಿ ನೋಡಲು ಸಾಧ್ಯವೇ? ಇದು ದೇಶದ ಭದ್ರತೆ ವಿಷಯ. ಶತ್ರು ಶತ್ರುವೇ, ಮಿತ್ರ ಮಿತ್ರನೇ. ದೇಶ ಭಕ್ತರಿಗೆ ಕಾಂಗ್ರೆಸ್ ಸೂಕ್ತ ವೇದಿಕೆಯಲ್ಲ. ಏಕೆಂದರೆ, ಕಾಂಗ್ರೆಸ್ ತಾಲಿಬಾನ್‍ಗೆ ಸಹಕಾರ ನೀಡಿ, ದೇಶ ದ್ರೋಹಿಗಳಿಗೆ ಬೆಂಬಲವಾಗಿ ನಿಂತಿದೆ. ಹೀಗಾಗಿ ದೇಶ ಭಕ್ತರು ಕಾಂಗ್ರೆಸ್ ತೊರೆದು ದೇಶವನ್ನು ರಕ್ಷಿಸಿಕೊಳ್ಳಿ ಎಂದು ತಿಳಿಸಿದರು.
ಡಿಸಿಎಂ ಹುದ್ದೆ ವಿಚಾರ ಮಾತನಾಡಿದ ಅವರು, ಡಿಸಿಎಂ ಸ್ಥಾನಗಳು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು. ಈ ಬಗ್ಗೆ ಪಕ್ಷದ ವರಿಷ್ಠರ ಜೊತೆಗೆ ಸಮಾಲೋಚನೆ ಮಾಡಿ ನಿರ್ಣಯ ತೆಗೆದುಕೊಳ್ಳುತ್ತಾರೆ. ಅನರ್ಹ ಶಾಸಕರಿಗೆ ಸಚಿವ ಸ್ಥಾನದ ಬಗ್ಗೆ ಯಾರಿಗೆ ಮಾತು ನೀಡಲಾಗಿತ್ತೋ ಅದನ್ನು ಈಡೇರಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಮಸಾಲೆ ಜಯರಾಮ್, ಬಿಜೆಪಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಶಿವಪ್ರಸಾದ್ ಸೇರಿದಂತೆ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ