ಎಲ್ಲರಲ್ಲೂ ಇರಲಿ ವಿಜ್ಞಾನದ ಅರಿವು

ದಾವಣಗೆರೆ :

     ಇಂದು ಎಲ್ಲಾ ಕ್ಷೇತ್ರಗಳಲ್ಲೂ ವಿಜ್ಞಾನದ ಅವಶ್ಯಕತೆ ಇರುವುದರಿಂದ ಪ್ರತಿಯೊಬ್ಬರೂ ವಿಜ್ಞಾನದ ಅರಿವು ಹೊಂದುವುದು ಅತ್ಯವಶ್ಯವಾಗಿದೆ ಎಂದು ಶಾಸಕ ಎಸ್.ಎ.ರವೀಂದ್ರನಾಥ್ ತಿಳಿಸಿದರು.ನಗರದ ಹೊರವಲಯದ ಶಾಮನೂರು ಬೈಪಾಸ್ ಬಳಿ ಇರುವ ಜೈನ್ ವಿದ್ಯಾಲಯದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಡಿಎಸ್‍ಇಆರ್‍ಟಿ-ಬೆಂಗಳೂರು ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಸಹಯೋಗದಲ್ಲಿ ನಡೆದ ಜಿಲ್ಲಾ ಮಟ್ಟದ ಇನ್‍ಸ್ಪೈರ್ ಅವಾರ್ಡ್-20 ವಿಜ್ಞಾನ ವಸ್ತುಪ್ರದರ್ಶನ ಮತ್ತು ಪ್ರಾಜೆಕ್ಟ್ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

      ಆಧುನಿಕ ಜಗತ್ತಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಮುಂದುವರೆದಿದ್ದು, ಎಲ್ಲಾ ಕ್ಷೇತ್ರಳಲ್ಲೂ ವಿಜ್ಞಾನದ ಅವಶ್ಯಕತೆ ಇದೆ. ಆದ್ದರಿಂದ ಪ್ರತಿಯೊಬ್ಬರೂ ವಿಜ್ಞಾನದ ಅರಿವು ಹೊಂದುವ ಅವಶ್ಯಕತೆ ಇದೆ. ಏಕೆಂದರೆ, ಯಾವ ಔಷಧದಲ್ಲಿ ಯಾವ ರಾಸಾಯನಿಕಗಳನ್ನು ಬಳಸಲಾಗಿದೆ. ಅವುಗಳು ಯಾವ ಕಾರ್ಯ ಮಾಡುತ್ತವೆ. ಯಾವ ಖಾಯಿಲೆಗೆ ಯಾವ ಔಷಧಿ ಬಳಕೆ ಮಾಡಬೇಕು ಎಂಬುದನ್ನು ತಿಳಿಯಲು ವಿಜ್ಞಾನದ ಜ್ಞಾನ ಬೇಕಾಗಿದೆ ಎಂದರು.

    ಯಾವ ಬೆಳೆಗೆ ಯಾವ ಗೊಬ್ಬರವನ್ನು ಹಾಕಿದರೆ ಸೂಕ್ತ ಎಂಬುದನ್ನು ತಿಳಿಯಲು ಸಹ ವಿಜ್ಞಾನ ಬೇಕಾಗಿದೆ. ಆದ್ದರಿಂದ ರೈತರು ವಿಜ್ಞಾನದ ಅರಿವು ಹೊಂದಿರಬೇಕಾಗುತ್ತದೆ ಎಂದು ಹೇಳಿದರು.ಮಕ್ಕಳು ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಕಾರ್ಯಕ್ರವಗಳು ಮತ್ತು ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಬೇಕು. ಸ್ವರ್ಧೆಯಲ್ಲಿ ಭಾಗವಹಿಸುವುದು ಮುಖ್ಯವೇ ಹೊರತು ಬಹುಮಾನ ಪಡೆಯುವುದಲ್ಲ ಎಂದ ಅವರು, ಸರಳವಾದ ವಿಜ್ಞಾನ ಸಂಶೋಧನೆಯಲ್ಲಿ ವಿದ್ಯಾರ್ಥಿಗಳು ಈಗಿನಿಂದಲೇ ತೊಡಗಿಸಿಕೊಳ್ಳುವ ಮೂಲಕ ಮುಂದೆ ಉತ್ತಮ ವಿಜ್ಞಾನಿಗಳಾಗಿ ಹೊರಹೊಮ್ಮುವತ್ತ ಗಮನ ಹರಿಸಬೇಕೆಂದು ಸಲಹೆ ನೀಡಿದರು.

    ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಯಶೋಧಮ್ಮ ಮರುಳಪ್ಪ, ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿಗಳು ತ್ರಿವೇಣಿ ಸಂಗಮದಂತೆ ಇರಬೇಕು. ವಿದ್ಯಾರ್ಥಿಗಳಲ್ಲಿರುವ ವಿಜ್ಞಾನದ ಆಸಕ್ತಿಯನ್ನು ಪೋಷಕರು ಮತ್ತು ಶಿಕ್ಷಕರು ಗುರುತಿಸಬೇಕು. ವಿಜ್ಞಾನ ಸದಾ ಮುಂದುವರೆಯುತ್ತಿರುತ್ತದೆ. ಆದ್ದರಿಂದ ಮಕ್ಕಳಲ್ಲಿರುವ ವಿಜ್ಞಾನದ ಆಸಕ್ತಿಯನ್ನು ಗುರುತಿಸಿ ಪ್ರೋತ್ಸಾಹಿಸುವುದರಿಂದ ಭವಿಷ್ಯದಲ್ಲಿ ಮಕ್ಕಳು ಉತ್ತಮ ವಿಜ್ಞಾನಿಗಳಾಗುತ್ತಾರೆ ಎಂದರು.

     ವಿದ್ಯಾರ್ಥಿಗಳಿಗೆ ಪ್ರತಿಯೊಂದು ವಿಷಯದ ಬಗ್ಗೆ ಉತ್ತಮವಾದ ಪರಿಕಲ್ಪನೆ ಇರಬೇಕು. ಹೈನುಗಾರಿಕೆ, ಕೃಷಿ, ಕೃಷಿಹೊಂಡ ನಿರ್ಮಾಣ, ಮತ್ತು ನೀರಿನ ಪಂಪ್‍ಸೆಟ್ ಬಳಕೆ ಎಲ್ಲವೂ ಸಹ ವಿಜ್ಞಾನವಾಗಿದೆ. ಇವುಗಳ ಬಗ್ಗೆ ಮಕ್ಕಳಿಗೆ ಪೋಷಕರು ತಿಳುವಳಿಕೆ ನೀಡಬೇಕು ಎಂದು ಸಲಹೆ ನೀಡಿದರು.

    ಜಿ.ಪಂ ಸದಸ್ಯೆ ಶೈಲಜಾ ಬಸವರಾಜ್ ಮಾತನಾಡಿ, ಜನಸಂಖ್ಯೆಯಲ್ಲಿ 2ನೇ ಸ್ಥಾನ ಪಡೆದಿರುವ ಭಾರತ ವೈಜ್ಞಾನಿಕ ಕ್ಷೇತ್ರದಲ್ಲಿ 66ನೇ ಸ್ಥಾನವನ್ನು ಪಡೆದಿದೆ. ಇದು ಬದಲಾಗಿ ಇನ್ನೂ ಉತ್ತಮ ಸ್ಥಾನಕ್ಕೇರಬೇಕು. ಶಾಲಾ ಮಟ್ಟದಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆಗಳನ್ನು ಕೈಗೊಳ್ಳಲು ಅಧಿಕ ಅನುದಾನವನ್ನು ಕೇಂದ್ರ ಸರ್ಕಾರ ನೀಡಬೇಕು. ಈ ಮೂಲಕ ಮಕ್ಕಳಲ್ಲಿ ವೈಜ್ಞಾನಿಕ ಆಸಕ್ತಿಯನ್ನು ಹೆಚ್ಚಿಸಬೇಕು ಎಂದು ತಿಳಿಸಿದರು.

   ಪ್ರಾಸ್ತಾವಿಕ ಮಾತನಾಡಿದ ಡಯಟ್‍ನ ಉಪನಿರ್ದೇಶಕರು (ಅಭಿವೃದ್ಧಿ) ಹಾಗೂ ಪ್ರಾಂಶುಪಾಲರು ಆದ ಲಿಂಗರಾಜು ಹೆಚ್.ಕೆ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮಕ್ಕಳನ್ನು ಪ್ರೋತ್ಸಾಹಿಸಲು ಇನ್‍ಸ್ಪೈಯರ್ ಅವಾರ್ಡ್ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದೆ ಎಂದರು.

    ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಿ.ಆರ್ ಪರಮೇಶ್ವರಪ್ಪ, ಡಯಟ್‍ನ ನೋಡಲ್ ಅಧಿಕಾರಿ ಉಮೇಶ್ ಬಾಂಭೋರೆ, ಎನ್‍ಐಎಫ್‍ನ ಚಂದನ್‍ಗೌತಮ್, ಜೈನ್ ವಿದ್ಯಾಲಯದ ಉಪಾಧ್ಯಾಕ್ಷ ರಮೇಶ್ ಮಲ್ಲ್, ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಸಂಘದ ಅಧ್ಯಕ್ಷ ಹಾಲಪ್ಪ, , ಬಿಐಇಟಿ ಕಾಲೇಜಿನ ಪ್ರಾಧ್ಯಾಪಕ ವಾಸುದೇವ್, ಡಯಟ್‍ನ ಉಪನ್ಯಾಸಕಿ ತ್ರಿವೇಣಿ ಎನ್.ವೈ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link